Thursday, November 10, 2022

ಭಾರತೀಯ ವಿದ್ಯೆಗಳ ವಿಶೇಷತೆ ಏನು? (Bharatiya Vidyegala Visesate Enu?)

ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)ಇಂದು 'ವಿದ್ಯೆ' ಎನ್ನುವ ಪದವು ಬಹಳ ಹಗುರ ಅರ್ಥದಲ್ಲಿ ಬಳಕೆಯಲ್ಲಿದೆ. ಆರ್ಷ ವಿದ್ಯೆ, ಕಲೆಗಳಾದ, ಸಂಗೀತ, ನಾಟ್ಯ, ಯೋಗ ಮುಂತಾದವುಗಳಿಗೂ ವಿದ್ಯೆ ಎನ್ನುತ್ತೇವೆ ಮತ್ತು ಆಧುನಿಕ ವಿಜ್ಞಾನಕ್ಕೆ ಸಂಬಂಧಪಟ್ಟ ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ, ಕಂಪ್ಯೂಟರ್ ಸೈನ್ಸ್  ಮೊದಲಾದವು, ಹಾಗೆಯೇ ಆಧುನಿಕ ಸಂಗೀತ, ಆಧುನಿಕ ಚಿತ್ರಕಲೆ, ಸಿನಿಮಾ ಕಲೆ ಎಲ್ಲಕ್ಕೂ ವಿದ್ಯೆ, ಕಲೆ ಎನ್ನುವ ಪದ ಉಪಯೋಗಿಸುತ್ತೇವೆ. ಒಟ್ಟಿನಲ್ಲಿ, ಕಲಿಯಬೇಕಾದ ಪರಿಣತಿ ಪಡೆಯಬೇಕಾದ ಯಾವುದಾದರೂ ವಿಷಯವನ್ನು ಇಂದು ವಿದ್ಯೆ, ಕಲೆ ಎನ್ನುವ ಅರ್ಥದಲ್ಲಿ ಬಳಸುತ್ತಿದ್ದೇವೆ. 

ಆದರೆ ಮಹರ್ಷಿಗಳ ಅಭಿಪ್ರಾಯ ವಿದ್ಯೆಯ ಬಗ್ಗೆ ಇಷ್ಟೇ ಇತ್ತೆ ಎಂದರೆ, ಹಾಗೇನಿಲ್ಲ! ಆರ್ಷ ಸಾಹಿತ್ಯದಲ್ಲಿ ವಿದ್ಯೆಗೆ "ಸಾ ವಿದ್ಯಾ ಯಾ ವಿಮುಕ್ತಯೇ"-- ಅಂದರೆ ಯಾವುದು ಮುಕ್ತಿಯನ್ನು ಕೊಡುತ್ತದೆಯೋ ಅದು ವಿದ್ಯೆ ಎಂದು ವಿದ್ಯೆಯ ಬಗ್ಗೆ ವ್ಯಾಖ್ಯಾನವಿದೆ. ಜನನ ಮರಣ ಚಕ್ರದಿಂದ ಮುಕ್ತಿ ದೊರೆಯುವುದು ಆತ್ಮ ಜ್ಞಾನದಿಂದ. ಅಂದರೆ ಯಾವುದು ಆತ್ಮ ಜ್ಞಾನವನ್ನು ಉಂಟು ಮಾಡುತ್ತದೆಯೋ ಅದೇ ವಿದ್ಯೆಯೆನ್ನಿಸಿಕೊಳ್ಳುತ್ತದೆ. ಈ ನೇರದಲ್ಲಿ ವಿದ್ಯೆಗಳ ಬಗ್ಗೆ ಆಮೂಲಾಗ್ರ ನೋಟವನ್ನು ನೀಡಿರುವ ಶ್ರೀರಂಗ ಮಹಾಗುರುಗಳು ವಿದ್ಯೆಯೆಂಬ ಪದಕ್ಕೆ ಇನ್ನೊಂದು ವ್ಯುತ್ಪತ್ತಿಯನ್ನು ಕೊಟ್ಟಿದ್ದಾರೆ: ವಿದ - ಜ್ಞಾನೇ, ಯಾ - ಪ್ರಾಪಣೇ, ಅಂದರೆ ಯಾವುದು ನಮ್ಮನ್ನು ಆತ್ಮಜ್ಞಾನದತ್ತ ಕರೆದೊಯ್ಯುತ್ತದೆಯೋ ಅದು ವಿದ್ಯೆ.

ಇಂದು ನಾವು ವಿದ್ಯೆಯೆಂದು ಕರೆಯುತ್ತಿರುವ ಎಲ್ಲ ವಿಷಯಗಳೂ ನಮಗೆ ಜ್ಯೋತಿರ್ದರ್ಶನ ಮಾಡಿಸಬಲ್ಲುದೇ ಎಂದರೆ, ಹಾಗೇನಿಲ್ಲ; ಏಕೆ ಹೀಗೆ?  ಶ್ರೀರಂಗಮಹಾಗುರುಗಳು ಕೊಟ್ಟಿರುವ ಒಂದು ಮಾರ್ಮಿಕ ನೋಟದಿಂದ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬಹುದು. ಯಾವುದೇ ವಿಷಯವು ಯಾವ ನೆಲೆಯಿಂದ (ಮನಸ್ಸು ಬುದ್ಧಿಗಳು ಯಾವ ಆಳವನ್ನು ತಲುಪಿತೋ ಆ ಆಳದಿಂದ) ಹೊರಟಿತೋ ಅದು ಅನುಸಂಧಾನ ಮಾಡುವವರನ್ನು ಆ ನೆಲೆಯ ತನಕ ಮಾತ್ರ ತಲುಪಿಸಬಲ್ಲುದು ಆಧುನಿಕ ವಿಷಯಗಳು ಪ್ರಾಪಂಚಿಕ ಭಾವದಿಂದ ವಿಕಾಸವಾಗಿರುವುದರಿಂದ ಅದು ಅನುಸಂಧಾನ ಮಾಡುವವರನ್ನು ಪ್ರಾಪಂಚಿಕ ಭಾವದ ಒಂದು ಮಟ್ಟದವರೆವಿಗೂ ಕರೆದೊಯ್ಯಬಹುದೇ ಹೊರತು, ಆತ್ಮಸಾಕ್ಷಾತ್ಕಾರದವರೆವಿಗೂ ಕರೆದೊಯ್ಯುವುದಿಲ್ಲ.  ಉದಾಹರಣೆಯ ಮೂಲಕ ಈ ಪ್ರಕ್ರಿಯೆಯನ್ನು ಗಮನಿಸಬಹುದು.

ನಾವು ಒಂದು ಕಥೆಯನ್ನು ತನ್ಮಯರಾಗಿ ಓದುತ್ತೇವೆಂದುಕೊಳ್ಳೋಣ. ಆ ಕಥೆಯ ಲೇಖಕರು ತಮ್ಮೊಳಗೇ ಮುಳುಗಿ ಕಥೆಯ ಪರಿಕಲ್ಪನೆ, ಚೌಕಟ್ಟುಗಳನ್ನು ರೂಪಿಸಿಕೊಳ್ಳುತ್ತಾರೆ. ಹೀಗೆ ರೂಪಿಸಿಕೊಳ್ಳಬೇಕಾದರೆ ಅವರ ಮನಸ್ಸು ಯಾವ ಭಾವವನ್ನು ಹೊಂದಿತ್ತೋ, ಯಾವ ಆಳವನ್ನು ತಲುಪಿತ್ತೋ ಅದಕ್ಕೆ ಅನುಗುಣವಾಗಿ ಕಥೆಯು ಬೆಳವಣಿಗೆ ಹೊಂದುತ್ತಾ ಹೋಗುತ್ತದೆ.  ಓದುಗರು ಆ ಕಥೆಯನ್ನು ಓದುತ್ತಾ ಹೋದರೆ, ಲೇಖಕರ ಯಾವ ಭಾವ, ಕಥೆಯ ಹರಿವಿಗೆ ಮೂಲವಾಗಿತ್ತೋ ಆ ಭಾವದೆಡೆಗೆ ಸಾಗುತ್ತಾರೆ ಮತ್ತು ಅವರಲ್ಲಿ ಕೆಲವರು ಲೇಖಕರಿಗಿದ್ದ ಭಾವವನ್ನೇ ತಲುಪಬಹುದು. ಲೇಖಕರ ಮನಸ್ಸಿನಲ್ಲಿ ಸಾಹಸ ಪ್ರಧಾನವಾದ ಭಾವವಿದ್ದರೆ, ಓದುಗರು ರೋಚಕತೆಯನ್ನು ಅನುಭವಿಸುತ್ತಾರೆ, ದುಃಖ ಪ್ರಧಾನವಾದ ಕಥೆಯಾದರೆ ದುಃಖವನ್ನನುಭವಿಸುತ್ತಾರೆ, ಒಟ್ಟಿನಲ್ಲಿ ಕಥಾಮೂಲವಾದ ಲೇಖಕರ ಭಾವವನ್ನೇ ಹೊಂದುತ್ತಾರೆ. ಇಂದಿನ ಬಹುತೇಕ ಕಥೆಗಳು, ಯಾವುದಾದರೂ ಪ್ರಾಪಂಚಿಕ ಅಥವಾ ಸಾಮಾಜಿಕ ಭಾವಕ್ಕೆ ಸಂಬಂಧ ಪಟ್ಟಿದ್ದಾಗಿರುತ್ತದೆ, ಮತ್ತು ಓದುಗರ ಮನಸ್ಸು ಆ ಪ್ರಾಪಂಚಿಕ ಅಥವಾ ಸಾಮಾಜಿಕ ಭಾವವನ್ನು ತಾಳುತ್ತದೆ. ಲೇಖಕರು ಆತ್ಮಭಾವದಲ್ಲಿ ನೆಲೆಸಿಲ್ಲದಿದ್ದರೆ, ಓದುಗರೂ ಸಹ ಆ ಆತ್ಮಭಾವವನ್ನು ಹೊಂದಲಾರರು. ಆದುದರಿಂದ ಲೌಕಿಕ ಸಾಹಿತ್ಯವನ್ನು ಪರಿಪೂರ್ಣವಾದ ಅರ್ಥದಲ್ಲಿ ವಿದ್ಯೆಯೆಂದು ಪರಿಗಣಿಸಲಿಕ್ಕಾಗುವುದಿಲ್ಲ. ಇದೇ ರೀತಿ, ಭೌತಿಕ ಪ್ರಪಂಚಕ್ಕೆ ಮಾತ್ರ ಸಂಬಂಧಿಸಿದ ಯಾವುದೇ ವಿಷಯವಾದರೂ ಅದು ಪ್ರಾಪಂಚಿಕ ಭಾವದ ಮೂಲದಿಂದ ಹೊರಟಿದ್ದಾದುದರಿಂದ ಆತ್ಮ ಜ್ಞಾನದವರೆವಿಗೂ ಕರೆದುಕೊಂಡು ಹೋಗುವುದಿಲ್ಲ.

ಆದರೆ ಭಾರತೀಯ ವಿದ್ಯೆಗಳ ವಿಷಯವು ಹಾಗಿಲ್ಲ. ಅವು ಆತ್ಮಮೂಲದಿಂದ ವಿಕಾಸವಾದ ವಿದ್ಯೆಗಳು. ಮಹರ್ಷಿಗಳು ತಮ್ಮ ಸತ್ಯಾನ್ವೇಷಣೆಯ ಪ್ರಯತ್ನದಲ್ಲಿ ಮನಸ್ಸನ್ನು ಅಂತರ್ಮುಖವಾಗಿ ತಿರುಗಿಸಿ ತಮ್ಮ ಮೂಲವನ್ನು ಕಂಡುಕೊಂಡರು. ನಮ್ಮೆಲ್ಲರ ಹಾಗೂ ವಿಶ್ವದ ಮೂಲದಲ್ಲಿ ಒಂದು ಅಖಂಡ ಜ್ಯೋತಿಯು ಬೆಳಗುತ್ತಿದೆ, ಇದನ್ನೇ ಪರಬ್ರಹ್ಮ, ಪರಮಾತ್ಮ ಎನ್ನುವುದು ಮತ್ತು ಈ ಜ್ಯೋತಿಗೆ ನಾದಬ್ರಹ್ಮವೆಂದು ಕರೆಯಲ್ಪಡುವ ಒಂದು ನಾದರೂಪವೂ ಇದೆ ಎನ್ನುವುದೇ ಮಹರ್ಷಿಗಳು ಸಾರಿರುವ ಸತ್ಯ.  ಈ ನಾದವನ್ನು ಪ್ರಣವ ಅಥವಾ ಓಂಕಾರ ಎಂದೂ ಕರೆಯುತ್ತಾರೆ. ಈ ನಾದವು ಅನಾಹತವಾಗಿದೆ; ಅಂದರೆ, ಯಾವುದೇ ಆಹತ ಅಥವಾ ಘಾತ, ಘರ್ಷಣಗಳಿಲ್ಲದೇ ತಾನಾಗಿಯೇ ಸೃಷ್ಟಿಯಲ್ಲಿ ಸಹಜವಾಗಿ ಮೊಳಗುತ್ತಿರುವ ನಾದವಿದಾಗಿದೆ. ಯೋಗಿಗಳು ತಮ್ಮ ಅಂತಃಶ್ರವಣದಿಂದ ತಮ್ಮೊಳಗೆ ಕೇಳಬಹುದಾದ ನಾದವಾಗಿದೆ ಓಂಕಾರ. ಈ ಓಂಕಾರವು ಬಿಂದು, ನಾದ, ಮಕಾರ, ಉಕಾರ,ಅಕಾರಗಳಿಂದ ಕೂಡಿದ್ದು, ಸೃಷ್ಟಿಯೆಲ್ಲಕ್ಕೂ ಬೀಜರೂಪದಲ್ಲಿದೆ. ಇದನ್ನೇ ಆರೋಹಣ ಕ್ರಮದಲ್ಲಿ ಹೇಳುವುದಾದರೆ, ಓಂಕಾರವು ಅಕಾರ, ಉಕಾರ, ಮಕಾರ, ನಾದ, ಬಿಂದುಗಳಿಂದ ಕೂಡಿದ್ದು ಎಲ್ಲ ಭಾರತೀಯ ವಿದ್ಯೆಗಳೂ ಈ ಪ್ರಣವ ಮೂಲದಿಂದಲೇ ವಿಕಾಸವಾಗಿವೆ.

ಭಾರತೀಯ ವಿದ್ಯೆಗಳು ಪ್ರಣವಮೂಲದಿಂದ ವಿಕಾಸವಾಗುವುದು ಎಂದರೇನು? ಇದನ್ನು ಕೆಲವು ವಿದ್ಯೆಗಳ ವಿಶ್ಲೇಷಣೆಯಿಂದ ಅರ್ಥ ಮಾಡಿಕೊಳ್ಳಬಹುದು.  ಮಾನವದೇಹದಲ್ಲಿ, ನಾಡಿಗಳು ಸಂಧಿಸುವ ಸ್ಥಾನಗಳನ್ನು ಚಕ್ರಗಳೆನ್ನುತ್ತಾರೆ ಮತ್ತು ಇವು ಮೂಲಾಧಾರದಿಂದ ಆಜ್ಞಾಚಕ್ರದವರೆವಿಗೆ ಷಟ್ಚಕ್ರಗಳೆಂದೂ, ಅದಕ್ಕೂ ಮೇಲಿರುವ ಸಹಸ್ರಾರ ಚಕ್ರವನ್ನೂ ಸೇರಿಸಿದರೆ ಸಪ್ತ ಚಕ್ರಗಳೆಂದು ತಂತ್ರಶಾಸ್ತ್ರಗಳಲ್ಲಿ ಪ್ರಸಿದ್ಧವಾಗಿವೆ. ಈ ಚಕ್ರಗಳನ್ನು ಪದ್ಮಗಳೆಂದೂ ಕರೆಯುತ್ತಾರೆ ಮತ್ತು ಷಟ್ಚಕ್ರಗಳಲ್ಲಿ ಬೇರೆ ಬೇರೆ ಸಂಖ್ಯೆಯ ದಳಗಳಿದ್ದು ಒಟ್ಟಾರೆ ಐವತ್ತು ದಳಗಳಿರುತ್ತವೆ. ಮೂಲದಲ್ಲಿರುವ ಓಂಕಾರವು ಈ ದಳಗಳ ಮೂಲಕ ಹೊರಹೊಮ್ಮಬೇಕಾದರೆ, 50 ಅಕ್ಷರಗಳಾಗಿ ವಿಭಜನೆ ಹೊಂದುತ್ತದೆ. ಈ ಅಕ್ಷರಗಳ ಸಮ್ಮಿಳನದಿಂದ ಪದಗಳೂ, ಪದಗಳು ಸೇರಿ ವಾಕ್ಯಗಳು, ವಾಕ್ಯಗಳು ಸೇರಿ ಸಾಹಿತ್ಯರಾಶಿಯು ಉಂಟಾಗುತ್ತದೆ. ಹೀಗಾಗಿ ಸಂಸ್ಕೃತ ಭಾಷೆಯು ಪ್ರಣವಮೂಲದಿಂದ ವಿಕಾಸವಾಗಿದ್ದು ಇದನ್ನು ದೇವಭಾಷೆ ಎಂದೂ ಕರೆಯುತ್ತಾರೆ. ಶಬ್ದ ಪ್ರಪಂಚದ ಸಹಜ ವಿಕಾಸ ಕ್ರಮದಲ್ಲಿ ಯಾವ ರೀತಿ ಅಕ್ಷರಗಳು ಸೇರಿ ಪದಗಳಾಗುತ್ತವೆ, ಪದಗಳು ವಾಕ್ಯಗಳಾಗುತ್ತವೆ ಎನ್ನುವ ನಿಯಮಗಳನ್ನು ತಿಳಿಸುವ ಸಂಸ್ಕೃತ ವ್ಯಾಕರಣವು ಪ್ರಣವದಿಂದ ವಿಕಾಸವಾಗಿರುವ ವಿದ್ಯೆಯಾಗಿದೆ. ಈ ವಿದ್ಯೆಯನ್ನು ಅನುಸಂಧಾನ ಮಾಡಿದರೆ ಅದು ತನ್ನ ಮೂಲದಲ್ಲಿರುವ ಪ್ರಣವದ ಸಾಕ್ಷಾತ್ಕಾರದವರೆವಿಗೂ ತಲುಪಿಸಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತದೆ.

ಇದೇ ರೀತಿ, ಪ್ರಣವವು ಸಪ್ತ ಚಕ್ರಗಳಿಂದ ಹೊರಹೊಮ್ಮಬೇಕಾದರೆ ಸಪ್ತಸ್ವರಗಳಾಗಿಯೂ ರೂಪಾಂತರ ಹೊಂದುತ್ತದೆ. ಸರಿಗಮಪಧನಿ ಎಂಬ ಸಪ್ತಸ್ವರಗಳ ವಿಕಾಸವೇ ಭಾರತೀಯ ಸಂಗೀತ ವಿದ್ಯೆಯಾಗಿದೆ. ಭಾರತೀಯ ಸಂಗೀತವನ್ನು ಯೌಗಿಕ ರೀತಿಯಲ್ಲಿ ಅನುಸಂಧಾನ ಮಾಡಿದರೆ (ನಾದ ಯೋಗದ ರೂಪದಲ್ಲಿ), ಅದು ತಲ್ಲೀನತೆಯುಂಟು ಮಾಡಿ, ನಂತರ ಸಮಾಧಿ ಸ್ಥಿತಿಯನ್ನುಂಟು ಮಾಡಿ ನಾದಬ್ರಹ್ಮದ ಸಾಕ್ಷಾತ್ಕಾರವನ್ನೇ ಉಂಟು ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತದೆ.

ಹೀಗೆಯೇ ಬೇರೆ ಭಾರತೀಯ ವಿದ್ಯೆಗಳೂ ಪ್ರಣವದಿಂದಲೇ ವಿಕಾಸವಾದುವಾಗಿವೆ. ಇಂತಹ ವಿದ್ಯೆಗಳ ಪಟ್ಟಿಯನ್ನು ಗಮನಿಸುವುದಾದರೆ, ವಿದ್ಯೆಗಳನ್ನು 14, 18, 64, ಅನಂತ- ಹೀಗೆ ವಿಂಗಡಣೆ ಮಾಡುತ್ತಾರೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿರುವ 64 ವಿದ್ಯೆ, ಕಲೆಗಳ ಪಟ್ಟಿಯನ್ನು ಗಮನಿಸಿದರೆ, ಅವು ಆತ್ಮ ಸಮೃದ್ಧಿಯನ್ನುಂಟು ಮಾಡುವುದಲ್ಲದೇ ಲೋಕಜೀವನವನ್ನು ಸಮೃದ್ಧವಾಗಿ ನಡೆಸಲು ಬೇಕಾದ ವಿಷಯಗಳನ್ನೊಳಗೊಂಡಿವೆಯೆಂಬುದು ಕಂಡು ಬರುತ್ತದೆ. ಕೃಷಿ, ಗೋರಕ್ಷೆ, ವಾಣಿಜ್ಯ, ಲೋಹ ವಿದ್ಯೆ, ಶಿಲ್ಪ ವಿದ್ಯೆ, ನೇಯ್ಗೆ, ಆಯುರ್ವೇದ, ಪಾಕ ಶಾಸ್ತ್ರ (ಆಯುರ್ವೇದದ ಅಂಗ), ಸಸ್ಯ ಶಾಸ್ತ್ರ (ವೃಕ್ಷಾಯುರ್ವೇದ), ವಾಸ್ತು ಶಾಸ್ತ್ರ (  ಭೂಮಿಯ ಗುಣ ವಿಶ್ಲೇಷಣೆ, ಕಟ್ಟಡ ಪದಾರ್ಥಗಳು, ಗೃಹರಚನೆ, ದೇವಾಲಯ ರಚನೆ, ನಗರರಚನೆ, ಅರಮನೆಯ ರಚನೆ) ಮುಂತಾದ್ದಾಗಿ ಅನೇಕ ವಿದ್ಯೆಗಳಿದ್ದು ಮೂರು-ನಾಲ್ಕು ಶತಮಾನಗಳ ಹಿಂದಿನವರೆವಿಗೂ ಎಷ್ಟೋ ಮಟ್ಟಿಗೆ ಪ್ರಯೋಗದಲ್ಲಿಯೂ ಇದ್ದವು.

ದೆಹಲಿಯ ಕುತುಬ್ ಮಿನಾರ್ ನಲ್ಲಿರುವ ೧೬೦೦ ವರ್ಷಗಳ ಹಳೆಯ ಕಬ್ಬಿಣದ ಕಂಭವೊಂದು ಎಷ್ಟೇ ಮಳೆಗಾಳಿಗೆ ಒಡ್ಡಲ್ಪಟ್ಟಿದ್ದರೂ ತುಕ್ಕು ಹಿಡಿದಿಲ್ಲ. ಇಂತಹ ಅನೇಕ ವಿಸ್ಮಯಗಳು ಭಾರತೀಯರ ಲೋಹಶಾಸ್ತ್ರದ ಪರಿಣತಿಯನ್ನು ಹೇಳುತ್ತವೆ. ಬೇಲೂರು ಹಳೇಬೀಡು ದೇವಾಲಯಗಳು ಶಿಲ್ಪಕಲೆಯ ಅತ್ಯಂತ ಸೂಕ್ಷ್ಮಸ್ತರದ ನಿಪುಣತೆಗೂ, ತಂಜಾವೂರಿನ ದೇವಾಲಯಗಳು, ಇಂದಿನ ಕ್ರೇನ್ ಗಳಿಗೂ ಹೊರಲಾಗದಷ್ಟು ಭಾರವಾದ ಕಲ್ಲುಗಳನ್ನು ಮೇಲೆ ಸಾಗಿಸಲು ಇರಬೇಕಾದ ತಂತ್ರಜ್ಞಾನದ ಪರಿಣತಿಯನ್ನೂ ಎತ್ತಿ ತೋರಿಸುತ್ತವೆ. ಭಾರತೀಯರ ನೇಯ್ಗೆಗಳು ಇಂದಿಗೂ ಅತ್ಯಂತ ವೈವಿಧ್ಯಮಯ ಎಂಬುದು ಜಗತ್ಪ್ರಸಿದ್ಧವಾಗಿವೆ. ಇಂದಿಗೂ ಭಾರತೀಯರ ಆಹಾರ ವೈವಿಧ್ಯ ಮತ್ತು ಅದರಲ್ಲಿ ಅಡಕವಾಗಿರುವ ಔಷಧ ಗುಣಗಳೂ ಸಹ ವಿಶ್ವ ಮಾನ್ಯ.

ಹೀಗೆ ವೈಭವದಿಂದ ಕಂಗೊಳಿಸುತ್ತಿದ್ದ ವಿದ್ಯೆ, ಕಲೆಗಳು ಭವ್ಯವಾದ ಭಾರತೀಯ ಸಂಸ್ಕೃತಿ-ನಾಗರಿಕತೆಯನ್ನು ರೂಪಿಸಿದ್ದವು. ಆದರೆ ಬ್ರಿಟಿಷರ ಆಳ್ವಿಕೆಯಲ್ಲಿ ಶಿಕ್ಷಣ ಪದ್ಧತಿಯ ಮಾರ್ಪಾಡಿನಿಂದ ಈ ವಿದ್ಯೆಗಳೂ, ಮತ್ತು ಈ ವಿದ್ಯೆಗಳನ್ನನುಸರಿಸಿ ಚಾಲ್ತಿಯಲ್ಲಿದ್ದ ವೃತ್ತಿಗಳು ಹಾಗೂ ಜೀವನ ಶೈಲಿಯು ಬಹುತೇಕ ನಾಶವಾಗಿದ್ದು ಭಾರತೀಯ ವಿದ್ಯೆಗಳು ಇಂದು ಕುಟುಕು ಜೀವದಿಂದಿವೆ. ಇಷ್ಟಾದರೂ ಉಳಿದಿರುವ ವಿದ್ಯೆಗಳನ್ನು ಉಳಿಸಿ, ಬೆಳೆಸಿ ಮತ್ತೆ ಭಾರತೀಯ ಸಂಸ್ಕೃತಿ ನಾಗರಿಕತೆಯನ್ನು ಭವ್ಯವಾಗಿ ಮಾಡಬೇಕಾಗಿದೆ. ಈ ಕರ್ತವ್ಯವನ್ನೂ ಮತ್ತು ಈ ವಿದ್ಯೆಗಳನ್ನು ಬೆಳೆಸಿದ ಮಹರ್ಷಿಗಳನ್ನೂ, ಈ ವಿದ್ಯೆಗಳ ಬಗ್ಗೆ ನೋಟವನ್ನು ಕೊಟ್ಟಿರುವ ಶ್ರೀರಂಗಮಹಾಗುರುಗಳನ್ನೂ ಕೃತಜ್ಞತೆಯಿಂದ ಸ್ಮರಿಸಿ ಎಲ್ಲರಿಗೂ ಸನ್ಮಂಗಳವಾಗಲೆಂದು ಆಶಿಸೋಣ.


ಸೂಚನೆ: 10/11/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.