ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ನಾವೆಲ್ಲರೂ ಸದಾ ಒಂದಿಲ್ಲೊಂದು ಕರ್ಮಗಳನ್ನು ಮಾಡುತ್ತಲೇ ಇರುತ್ತೇವೆ. ಏನೂ ಕೆಲಸವನ್ನೇ ಮಾಡದೆ ಯಾರೊಬ್ಬರೂ ಕ್ಷಣಮಾತ್ರವೂ ಇರಲಾರರು - ಎಂಬುದಾಗಿ ಶ್ರೀಕೃಷ್ಣನೇ ಗೀತೆಯಲ್ಲಿ ಹೇಳುತ್ತಾನೆ: "ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್."
ಕರ್ಮಗಳನ್ನು ಮಾಡುವುದೆಂದರೆ ಕೈಕಾಲಾಡಿಸುವುದಲ್ಲವೇ? ಇದು ಸ್ಥೂಲವಾದ ನೋಟಕ್ಕೆ ಗೊತ್ತಾಗುವ ವಿಷಯ: ಮಕ್ಕಳಿಗೆ ಸಹ ಗೋಚರವಾಗುವಂತಹುದೇ. ಪಾಣಿ-ಪಾದಗಳು ಕರ್ಮೇಂದ್ರಿಯಗಳೆಂಬುದು ಸುವಿದಿತವಾಗಿದ್ದರೂ, ಇನ್ನೂ ಮೂರು ಕರ್ಮೇಂದ್ರಿಯಗಳುಂಟು - ಪಾಯೂಪಸ್ಥಗಳು (ಪಾಯುವೆಂದರೆ ಗುದದ್ವಾರ, ಉಪಸ್ಥವೆಂದರೆ ಜನನೇಂದ್ರಿಯ), ಹಾಗೂ ನಾಲಿಗೆ. ಮಾತಾಡುವುದೂ ಕೆಲಸವೇ!
ಈ ಪಂಚಕರ್ಮೇಂದ್ರಿಯಗಳ ಮೂಲಕ ಮಾತ್ರವೇ ಕೆಲಸಮಾಡುವುದಲ್ಲ. ನಮ್ಮ ಕಣ್ಣು-ಕಿವಿಗಳು ಕೆಲಸಮಾಡವೇ? ಮೂಸುವುದು, ಸವಿಯುವುದು - ಎಂಬ ಕೆಲಸಗಳನ್ನು ಮೂಗು-ನಾಲಿಗೆಗಳು ಮಾಡವೇ? ಸ್ಪರ್ಶಿಸುವುದೂ ಕೆಲಸವಲ್ಲವೇ? ಹೀಗಾಗಿ ಕರ್ಮೇಂದ್ರಿಯಗಳ ದ್ವಾರಾ ಕೆಲಸವೆಂಬುದಷ್ಟೇ ಅಲ್ಲದೆ, ಜ್ಞಾನೇಂದ್ರಿಯಗಳ ಮೂಲಕವೂ ಕೆಲಸವು ಸದಾ ನಡೆಯುತ್ತಲೇ ಇರುತ್ತದೆ.
ಇವೆಲ್ಲಕ್ಕಿಂತಲೂ ಮಿಗಿಲಾದದ್ದು ಮನಸ್ಸಿನ ಚಟುವಟಿಕೆ. ಇದಂತೂ ಅನವರತವಾದದ್ದು. (ಅವರತವೆಂದರೆ ಮುಗಿದದ್ದು. ಅದಲ್ಲದ್ದು - ಎಂದರೆ ಇನ್ನೂ ನಡೆಯುತ್ತಲೇ ಇರುವಂತಹುದು - ಅನವರತ.). ನಾವು ಎಚ್ಚರವಾಗಿರುವಾಗಂತೂ ಮನಸ್ಸು ಕೆಲಸಮಾಡಿಯೇ ಮಾಡುವುದು. "ಮನಸ್ಸಿಲ್ಲದೆ" ಕೆಲಸ ಮಾಡುವಾಗಲೂ! ಕನಸಿನಲ್ಲಿ ಸಹ ಮನೋವ್ಯಾಪಾರವು ಉಂಟೇ ಉಂಟು. (ಇಲ್ಲಿ ವ್ಯಾಪಾರವೆಂದರೆ ಕ್ರಿಯೆಯೆಂದೇ). ನಿದ್ರಾವಸ್ಥೆಯಲ್ಲೂ ಮನಸ್ಸಿಗೆ ಕೆಲಸವುಂಟೆನ್ನುವರು. ಏಕೆ? ಹೇಗೆ? ಅಲ್ಲಿ ಸಹ ಉಸಿರಾಟವುಂಟಷ್ಟೆ? ಉಸಿರಾಟವನ್ನೂ ಮಾನಸಕ್ರಿಯೆಯೆಂದೇ ಪರಿಗಣಿಸಿದೆ. ಹೀಗಾಗಿ ಜಾಗ್ರತ್-ಸ್ವಪ್ನ-ಸುಷುಪ್ತಿಗಳೆಂಬ ಅವಸ್ಥಾತ್ರಯದಲ್ಲೂ ಮನಸ್ಸಿನ ಚಟುವಟಿಕೆ ನಡೆದೇ ಇರುತ್ತದೆ. ಹೀಗೆ ಬಿಡುವೇ ಇಲ್ಲದೆ ಕೆಲಸ ಮಾಡುವುದೆಂದರೆ ನಮ್ಮ ಮನಸ್ಸೇ ಸರಿ!
ಹೀಗೆ ಅವಿಶ್ರಾಂತವಾಗಿಯೂ ಕರ್ಮಗಳನ್ನು ಮಾಡುತ್ತಲೇ ಇರುವ ನಾವು ಎಂತಹ ಕರ್ಮಗಳಲ್ಲಿ ತೊಡಗಿದರೊಳ್ಳೆಯದು? - ಎಂಬ ಜಿಜ್ಞಾಸೆಯು ಬರಬೇಕಾದದ್ದು ಸಹಜವೇ.
ಚಿತ್ತವೆಂಬುದೊಂದು ನದಿ - ಎಂಬ ರೂಪಕವಿದೆ, ಯೋಗಶಾಸ್ತ್ರದಲ್ಲಿ. ಚಿತ್ತನದಿಯು ಶುಭವಾದ ದಾರಿಯಲ್ಲಿಯೂ ಹರಿಯಬಹುದು; ಅಶುಭವಾದ ಹಾದಿಯಲ್ಲಿಯೂ ಹೋಗಬಹುದು. ಹೀಗದು "ಉಭಯತೋ-ವಾಹಿನಿ": ವಿವೇಕದಿಂದ ಹೋದಲ್ಲಿ ಅದು ಕಲ್ಯಾಣವಹ (ಶುಭಕಾರಿ); ಅವಿವೇಕದಿಂದ ಸಾಗಿದಲ್ಲಿ ಪಾಪವಹ (ಅಶುಭಕಾರಿ). ಯೋಗವು "ಚಿತ್ತ-ವೃತ್ತಿ-ನಿರೋಧ"ವೆಂದಾಗ, ಚಿತ್ತಕ್ಕೆ ಸಂಬಂಧಿಸಿದ ಈ ವಿಷಯಗಳೆಲ್ಲ ಪ್ರಸ್ತುತವಾಗುವುವು.
ನಾವು ಮಾಡುವ ಕರ್ಮಗಳು ನಮ್ಮ ಬುದ್ಧಿಯ ಮೇಲೂ ಕೆಲಸಮಾಡುತ್ತವೆ. ಇದನ್ನೇ "ಬುದ್ಧಿಃ ಕರ್ಮಾನುಸಾರಿಣೀ" – ಎಂದಿರುವುದು. ಇದನ್ನೇ ಸಾರುವ ಸೊಗಸಾದ ಸುಭಾಷಿತವೊಂದಿದೆ ಸಂಸ್ಕೃತದಲ್ಲಿ: ಮನೆಯಿಂದ ಮನೆಗೆ ಹೋಗಿ ಬೇಡುವ ಭಿಕ್ಷುಕನು ಬರೀ ಭಿಕ್ಷೆ ಕೇಳುತ್ತಿದ್ದಾನೆಂದು ಭಾವಿಸಬೇಡಿ. ವಾಸ್ತವವಾಗಿ ಅವನು ಒಂದು ಜೀವನಪಾಠವನ್ನೇ ಬೋಧಿಸುತ್ತಿದ್ದಾನೆ! ಏನದು? "ದಾನ ಕೊಡದೆ ಕೊಡದೆ ನನ್ನ ಹಾಗಾಗಬೇಡ. ದಾನ ಕೊಟ್ಟು ಕೊಟ್ಟು ನಿನ್ನ ಹಾಗಿರು!" ಎಂಬುದು. ಅರ್ಥಾತ್ ಧನವೀಯುವವನಿಗೆ ಮುಂದಿನ ಜನ್ಮದಲ್ಲಾದರೂ ತಾನಾಗಿಯೇ ಧನವೊದಗಿಬರುವುದು. ಕೈಹಿಡಿತ ಮಾಡುವವನಿಗೆ, ಮುಂದೆ ಅವಶ್ಯಬಿದ್ದಾಗಲೂ ಧನಸಹಾಯ ಮಾಡುವವರಿಲ್ಲದೆ ಕಡುಕಷ್ಟವಾಗಬಹುದು.
ಇವೆಲ್ಲದರ ಸಾರವನ್ನು ಮಹಾಭಾರತದಲ್ಲಿಯ ವಿದುರನೀತಿಯು ಸುಭಗವಾಗಿ ಸಂಕ್ಷಿಪ್ತವಾಗಿ ರೂಪಿಸುತ್ತದೆ. ಪುಣ್ಯಕಾರ್ಯವನ್ನು ಮತ್ತೆ ಮತ್ತೆ ಮಾಡುತ್ತಿದ್ದರೆ, ಆ ಪುಣ್ಯವೇ ಪ್ರಜ್ಞೆಯನ್ನು ಹೆಚ್ಚಿಸುತ್ತದೆ; ಯಾವನ ಪ್ರಜ್ಞೆಯು ವೃದ್ಧಿಹೊಂದಿರುತ್ತದೋ ಆತನು ಮತ್ತೂ ಹೆಚ್ಚಾಗಿ ಪುಣ್ಯಕಾರ್ಯವನ್ನೇ ಮಾಡುವಂತಾಗುವುದು! ಹೀಗಿವು ಪರಸ್ಪರ-ಕಾರ್ಯಕಾರಣಗಳು! ಇದರ ಪ್ರತೀಪವೂ ಸತ್ಯವೇ. (ಪ್ರತೀಪವೆಂದರೆ ವಿರುದ್ಧವಾದದ್ದು). ಪಾಪಕಾರ್ಯದಲ್ಲಿ ತೊಡಗುವ ಮನಸ್ಸು ಪ್ರಜ್ಞಾನಾಶಕ್ಕೆ ದಾರಿಮಾಡಿಕೊಳ್ಳುತ್ತದೆ. ಪ್ರಜ್ಞೆಯು ನಷ್ಟವಾದವನು ಪಾಪಕಾರ್ಯದಲ್ಲೇ ಮತ್ತೆ ಮತ್ತೆ ತೊಡಗುವಂತಾಗುತ್ತದೆ. ಹೀಗೆ ಪಾಪಕಾರ್ಯರತನಿಗೆ ಪ್ರಜ್ಞಾನಾಶವೂ, ಪುಣ್ಯಕಾರ್ಯರತನಿಗೆ ಪ್ರಜ್ಞಾವೃದ್ಧಿಯೂ ಆಗು(ತ್ತಿರು)ತ್ತವೆ. ಪುಣ್ಯದಿಂದ ಪ್ರಜ್ಞಾವೃದ್ಧಿ; ಅದರಿಂದ ಮತ್ತೆ ಪುಣ್ಯವೃದ್ಧಿ - ಎಂಬಿದೊಂದು ಚಕ್ರ. ಹಾಗೆಯೇ ಪಾಪವೃದ್ಧಿ-ಪ್ರಜ್ಞಾನಾಶಗಳೆಂಬ ಮತ್ತೊಂದು ಚಕ್ರ.
ಪುಣ್ಯವು ಪುರುಷಾರ್ಥಪ್ರದವಾದದ್ದು. ತದ್ವಿರುದ್ಧವಾದದ್ದು ಪಾಪ. ಜೀವನದಲ್ಲಿ ಹಿತಾಹಿತಗಳನ್ನು ಗುರುತಿಸಿಕೊಳ್ಳಲು ಸೂತ್ರವೊಂದನ್ನು ಶ್ರೀರಂಗಮಹಾಗುರುಗಳು ನೀಡಿರುವರು: "ಪುರುಷಾರ್ಥಕ್ಕೆ ವಿರೋಧವಲ್ಲದ ರೀತಿಯಲ್ಲಿ ಯಾವುದು ಕೆಲಸಕ್ಕೆ ಬರುತ್ತದೆಯೋ ಅದೇ ಹಿತ; ಇಲ್ಲದಿದ್ದರೆ ಹತ"!
ಹೀಗಿರಲು, ಸ್ವಹಿತ-ಪರಹಿತಗಳ ಪ್ರಜ್ಞೆಯೇ ನಮ್ಮ ಜೀವನದ ಪ್ರಥಮಲಕ್ಷ್ಯವಾಗಬೇಕಲ್ಲವೇ? ಕಾರ್ಯಾಕಾರ್ಯವ್ಯವಸ್ಥೆಗಿದುವೇ ದಿಕ್ಕು, ಸಜ್ಜು.
ಸೂಚನೆ: 6/11/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.