Sunday, November 13, 2022

ಯಕ್ಷಪ್ರಶ್ನೆ - 12 (Yaksha Prashne - 12)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)



ಪ್ರಶ್ನೆ – ೧೧ ಯಾವುದು ಮಾನುಷಭಾವ ?
ಉತ್ತರ - ಮರಣ.

ಮರಣವನ್ನು ಹೊಂದುವುದು ಮನುಷ್ಯನ ಸ್ವಭಾವವಾಗಿದೆ ಎಂಬುದು ಈ ಪ್ರಶ್ನೋತ್ತರದಲ್ಲಿರುವ ಅಭಿಪ್ರಾಯವಾಗಿದೆ. ಹುಟ್ಟಿದರವೆಲ್ಲರೂ ಸಾಯಲೇಬೇಕು; ಮೃತನಾದವನು ಮತ್ತೆ ಹುಟ್ಟಲೇಬೇಕು ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳುತ್ತಾನೆ. ಜನನ ಮತ್ತು ಮರಣ ಇವು ಪ್ರತಿಯೊಂದು ಜೀವಿಯ ಲಕ್ಷಣವಲ್ಲವೇ? ಯಾವುದೂ ಶಾಶ್ವತವಲ್ಲ. ಒಂದಲ್ಲ ಒಂದು ದಿನ ಈ ಶರೀರಕ್ಕೆ ಕೊನೆ ಇದ್ದೇಇದೆ. ಜೀರ್ಣವಾಗುವ-ಕ್ಷಯಿಸುವ ಸ್ವಭಾವವಿರುವುದರಿಂದಲೇ ಶರೀರವೆಂದು ಕರೆದದ್ದು! ಹೀಗಿದ್ದು, ಮರಣ ಹೊಂದುವುದು ಮನುಷ್ಯನ ಸ್ವಭಾವ ಮಾತ್ರ ಹೇಗೆ ಆಗುತ್ತದೆ? ಎಂಬ ಪ್ರಶ್ನೆಯು ಉಳಿಯುತ್ತದೆ. ಎಂಭತ್ತ ನಾಲ್ಕು ಲಕ್ಷ ಜೀವ ಪ್ರಭೇದಗಳಿವೆ. ಅವುಗಳಲ್ಲಿ ಮನುಷ್ಯ ಒಂದು ಬಗೆಯ ಜಾತಿ. ಹೀಗಿರಲು ಈ ಮರಣಸ್ವಭಾವ ಮನುಷ್ಯನಿಗೆ ಮಾತ್ರ ಎಂಬುದರ ಭಾವಾರ್ಥವೇನು? 'ಜನನ ಆಕಸ್ಮಿಕ ಮರಣ ನಿಶ್ಚಿತ' ಎಂದೂ ಕೆಲವರು ಮರಣದ ಬಗ್ಗೆ ವ್ಯಾಖ್ಯಾನ ಮಾಡುತ್ತಾರೆ. 'ಮರಣಂ ಪ್ರಕೃತಿಃ ಶರೀರಿಣಾಂ ವಿಕೃತಿಃ ಜೀವನಮುಚ್ಯತೇ ಬುಧೈಃ' ಎಂದು ಕಾಳಿದಾಸ ಮಹಾಕವಿ ಮರಣದ ಬಗೆಗೆ ಈ ರೀತಿ ವಿವರಿಸುತ್ತಾನೆ. ಈ ಯಕ್ಷನ ಪ್ರಶ್ನೆಗೆ ಧರ್ಮರಾಜನು ಮರಣವನ್ನು ಕೇವಲ ಮನುಷ್ಯನಿಗೆ ಮಾತ್ರ ಸೀಮಿತವಾಗಿಸಿದ್ದು ಏಕೆ? ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ. ಆದ್ದರಿಂದ ಮರಣವು ಮಾನುಷಭಾವದ ಲಕ್ಷಣವಾಗುವುದಾದರೂ ಹೇಗೆ? 

ಮಾನವನಿಗೆ ಮರಣದ ಮೇಲೆ ಪ್ರಭುತ್ವವಿದೆ ಎಂದರ್ಥ. ಉಳಿದ ಜೀವಿಗಳಿಗೆ ಮರಣವನ್ನು ನಿಯಂತ್ರಿಸಿಕೊಳ್ಳುವ ಸಾಮರ್ಥ್ಯವಿಲ್ಲ ಎಂಬುದು ಈ ಉತ್ತರದ ಸ್ವಾರಸ್ಯ. ಜನನವು ಮರಣದಿಂದ ನಿರ್ಧಾರವಾಗುತ್ತದೆ. ಮರಣವು ಅವನವನ ಜೀವನಾಧಾರಿತವಾಗಿ ನಿರ್ಧಾರಿತವಾಗುತ್ತದೆ. ಜನನ ಮತ್ತು ಮರಣವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ನಡೆ ಮನುಷ್ಯನಲ್ಲಿ ಮಾತ್ರವೇ ಇದೆ. ಸನಾತನ ಭಾರತೀಯ ಸಂಸ್ಕೃತಿಯು ಪುನರ್ಜನ್ಮವನ್ನು ಒಪ್ಪಿ ಬೆಳೆದಿದೆ. ಈ ಸಿದ್ಧಾಂತದ ಅಡಿಪಾಯದಲ್ಲೇ ಈ ಸಂಸ್ಕೃತಿಯು ಇಷ್ಟು ಭದ್ರವಾಗಿ ನಿಂತಿದೆ. ಅದಿಲ್ಲದಿದ್ದರೆ ಭಾರತೀಯ ಸಂಸ್ಕೃತಿ ಮತ್ತು ಆಚರಣೆಗಳಿಗೆ ಯಾವ ಅರ್ಥವೂ ಇರುವುದಿಲ್ಲ. ಯಾವ ರೀತಿಯಲ್ಲಿ ಮರಣ ಸಂಭವಿಸುತ್ತದೆ ಎನ್ನುವುದರ ಮೇಲೆ ಮುಂದಿನ ಜನ್ಮದ ನಿರ್ಧಾರವಾಗುತ್ತದೆ. ಅಷ್ಟೇ ಅಲ್ಲ ಅವನ ಪೂರ್ವಜನ್ಮದ ಪುಣ್ಯಾಪುಣ್ಯದ ಆಧಾರದ ಮೇಲೆಯೇ ಈ ಜನ್ಮವನ್ನು ಪಡೆಯುತ್ತಾನೆ. ಬಹುಪುಣ್ಯದ ಫಲವಾಗಿಯೇ ಈ ಮಾನವ ಜನ್ಮವನ್ನು ಪಡೆದದ್ದು ಎಂಬ ಮಾತು ನಮ್ಮಲ್ಲಿ ಪ್ರಚಲಿತವಾಗಿದೆ. ಅದಕ್ಕಾಗಿ ಮಾನವನ ಜೀವಿತಕ್ಕೆ ಅಷ್ಟು ಬೆಲೆ ಬಂದಿದೆ. ಮನುಜನಿಗೆ ಮಾತ್ರವೇ ಇದೇ ಜನ್ಮವನ್ನು ಕೊನೆಯನ್ನಾಗಿಸಿಕೊಳ್ಳಲು ಸಾಧ್ಯ. ಪುನರ್ಜನ್ಮವಿಲ್ಲದ ರೀತಿಯಲ್ಲಿ ಬಾಳಾಟ ಮಾಡಬೇಕು. ಸಿಕ್ಕ ಮಾನವನ ಜನ್ಮದಿಂದ ಮಾತ್ರವೇ ಮೋಕ್ಷವನ್ನು ಪಡೆಯಲು ಸಾಧ್ಯ. ಇಂತಹ ಸೌಲಭ್ಯ ಮನುಷ್ಯನಿಗೆ ಇದೆ. ಉಳಿದ ಪ್ರಾಣಿಜನ್ಮಕ್ಕೆ ಮೋಕ್ಷವನ್ನು ಪಡೆಯಲು ಸಾಧ್ಯವಿಲ್ಲ. "ಮಾನವಜನ್ಮ ದೊಡ್ಡದು; ಇದನು ಹಾನಿ ಮಾಡಲು ಬೇಡ ಹುಚ್ಚಪ್ಪಗಳಿರಾ!" ಎಂದು ದಾಸರ ಮಾತು ಇದಕ್ಕೆ ಸಾಕ್ಷಿ. "ಜಂತೂನಾಂ ನರಜನ್ಮದುಲರ್ಭಂ" ಎಂಬ ಶಂಕರಭಗವತ್ಪಾದರ ಮಾತೂ ಇದನ್ನೇ ಪುಷ್ಟೀಕರಿಸುತ್ತದೆ. ಆದ್ದರಿಂದ ಮತ್ತೆ ಜನ್ಮ ಬಾರದ ರೀತಿಯಲ್ಲಿ ಪಡೆದ ಜನ್ಮಭಾವವನ್ನು ಕೊನೆಗಾಣಿಸುವುದೇ ಮಾನುಷ ಮರಣ. ಇಂತಹ ಮರಣವನ್ನು ಸರ್ವರೂ ಅಪೇಕ್ಷೆಪಡುವಂತಹದ್ದು.  

ಸೂಚನೆ : 13/11/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.