Thursday, November 24, 2022

ವ್ಯಾಸ ವೀಕ್ಷಿತ - 13 ಏಕಚಕ್ರನಗರ – ಬ್ರಾಹ್ಮಣನ ಬಾಧೆ (Vyaasa Vikshita 13 Ekachakranagara - Brahmanana Badhe)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


 

ಪಾಂಡವರಿಗೆ ವ್ಯಾಸರು ಹೇಳಿದರು. "ನಿಮಗೆ ಹಿತವಾದುದನ್ನು ಸ್ನೇಹಪೂರ್ವಕವಾಗಿ ಹೇಳುತ್ತಿದ್ದೇನೆ, ಕೇಳಿ. ಬಳಿಯಿರುವ ನಗರವು ಸುಂದರವಾಗಿದೆ, ಅಲ್ಲಿ ರೋಗರುಜಿನಗಳಿಲ್ಲ. ಅಲ್ಲಿ ನೀವು ಮರೆಮಾಚಿಕೊಂಡಿರಬಹುದು. ಕುಂತಿಯೇ, ನಿನ್ನ ಮಗ ಯುಧಿಷ್ಠಿರನು ಧರ್ಮಿಷ್ಠ: ಮುಂದೆ ಭೂಮಿಯನ್ನಾಳುವನು; ಎಲ್ಲ ರಾಜರನ್ನೂ ಆಳುವನು ಕೂಡ. ಆತನಿಗೆ ಭೀಮಾರ್ಜುನರ ಬಲವು ಒದಗಿಬರುತ್ತದೆ. ನಿನ್ನ ಮಕ್ಕಳೂ ಮಾದ್ರಿಯ ಮಕ್ಕಳೂ ಸ್ವರಾಷ್ಟ್ರದಲ್ಲಿ ಮೆರೆಯುವರು, ರಾಜಸೂಯ-ಅಶ್ವಮೇಧಗಳನ್ನು ಮಾಡುವರು!"

 

ಇಷ್ಟು ಹೇಳಿ, ಈ ಏಕಚಕ್ರನಗರಿಯಲ್ಲಿ ಬ್ರಾಹ್ಮಣನೊಬ್ಬನ ಮನೆಯಲ್ಲಿರಲು ಪಾಂಡವರಿಗೆ ಹೇಳಿದರು. "ಇಲ್ಲೊಂದು ತಿಂಗಳನ್ನು ಕಳೆಯಿರಿ, ಅಷ್ಟರಲ್ಲಿ ಹಿಂದಿರುಗಿಬರುವೆ", ಎಂದರು.

 

ಬ್ರಾಹ್ಮಣಕುಟುಂಬದೊಂದಿಗೆ ಪಾಂಡವರ ವಾಸ ಆರಂಭವಾಯಿತು. ಭಿಕ್ಷಾಟನೆಯನ್ನೂ ಮಾಡಿದರು. ತಮ್ಮ ಗುಣಗಳಿಂದಾಗಿ ಸುತ್ತಮುತ್ತಲಿನ ಮಂದಿಗೆ ಅಚ್ಚುಮೆಚ್ಚಾದರು. ಅವರು ಬೇಡಿತಂದ ಭಿಕ್ಷೆಯನ್ನು ಕುಂತಿಯು ಎಲ್ಲರಿಗೂ ಹಂಚುವಳು: ಮಹಾಬಲನಾದ ಭೀಮನಿಗರ್ಧ, ಉಳಿದೆಲ್ಲವರಿಗಿನ್ನರ್ಧ (ಅರ್ಧಂ ಸರ್ವಸ್ಯ ಭಿಕ್ಷಸ್ಯ ಭೀಮೋ ಭುಂಕ್ತೇ ಮಹಾಬಲಃ!).

 

ಸಾಕಷ್ಟು ಕಾಲ ಕಳೆಯಿತು. ಒಮ್ಮೆ ಎಲ್ಲರೂ ಭಿಕ್ಷೆಗೆಂದು ಹೋಗಿದ್ದರು. ಕುಂತಿಯೊಂದಿಗೆ ಭೀಮನು ಏನೋ ಕೆಲಸದ ನಿಮಿತ್ತ ಉಳಿದುಕೊಂಡಿದ್ದ. ಆಗ ಬ್ರಾಹ್ಮಣನ ಮನೆಯಲ್ಲಿ ಅದೇನೋ ಘೋರವಾದ ಆರ್ತನಾದವನ್ನು ಕುಂತಿಯು ಕೇಳಿಸಿಕೊಂಡಳು. ಅವರ ಅಳು-ಗೋಳಾಟಗಳನ್ನು ಕೇಳಲಾಗಲಿಲ್ಲ, ಕುಂತಿಗೆ. ಹೃದಯದಲ್ಲಿ ಮಥನವಾಗುತ್ತಿದ್ದ ಆ ದುಃಖದಿಂದಾಗಿ, ಶುಭಮನಸ್ಕಳಾದ ಕುಂತಿ ಭೀಮನಿಗೆ ಹೇಳಿದಳು, "ಮಗನೇ, ನಾವೀ ಬ್ರಾಹ್ಮಣನ ಮನೆಯಲ್ಲಿ ಸುಖವಾಗಿದ್ದೇವಪ್ಪಾ: ದುರ್ಯೋಧನನ ಕಡೆಯವರಿಗೆ ಅರಿವಾಗದಂತೆ ಉಳಿದುಕೊಂಡಿದ್ದೇವೆ. ಎಂದೇ ನನಗೊಂದು ಚಿಂತೆ: ಈ ಬ್ರಾಹ್ಮಣನಿಗೆ ಹೇಗಾದರೂ ಉಪಕರಿಸಬೇಕು. ಮತ್ತೊಬ್ಬರ ಮನೆಯಲ್ಲಿ ಸುಖವಾಗಿರುವವರು, ಆ ಮನೆಯ ಯಜಮಾನನಿಗೆ ಪ್ರಿಯವಾಗುವಂತೆ ಏನು ಮಾಡುವರೋ ಅದನ್ನು ಮಾಡಬೇಕು. ಮಾಡಿದ ಉಪಕಾರ ಯಾರಲ್ಲಿ ನಾಶಹೊಂದದೋ ಆತನೇ ನಿಜವಾದ ಮನುಷ್ಯ. (ಏತಾವಾನ್ ಪುರುಷಃ ತಾತ! ಕೃತಂ ಯಸ್ಮಿನ್ ನ ನಶ್ಯತಿ). ನಮಗೆ ಯಾರಾದರೂ ಏನಾದರೂ ಉಪಕಾರವನ್ನು ಮಾಡಿದರೆಂದುಕೋ. ಅದಕ್ಕಿಂತಲೂ ಹೆಚ್ಚಾಗಿ ನಾವು ಪ್ರತ್ಯುಪಕಾರವನ್ನು ಮಾಡಬೇಕು (ಯಾವಚ್ಚ ಕುರ್ಯಾದ್ ಅನ್ಯೋಽಸ್ಯ ಕುರ್ಯಾದ್ ಅಭ್ಯಧಿಕಂ ತತಃ). ಇದೋ ಈ ಬ್ರಾಹ್ಮಣನಿಗೆ ಅದೇನೋ ದುಃಖವು ಬಂದೊದಗಿದೆ. ಈತನಿಗೇನಾದರೂ ನಾನು ಸಹಾಯವನ್ನು ಮಾಡಲಾಗುವುದಾದರೆ ಒಂದುಪಕಾರಮಾಡಿದಂತಾಗುತ್ತದೆ" - ಎಂದಳು.

 

ಅದಕ್ಕೆ ಭೀಮಸೇನನು, "ಸರಿ, ಈತನ ದುಃಖವಾವುದು? ಉಂಟಾದುದು ಹೇಗೆ? ಇದನ್ನರಿತು ಯತ್ನಿಸುತ್ತೇನೆ. ಅದು ಸುದುಷ್ಕರವಾದರೂ (ಎಂದರೆ ಬಹುಕಷ್ಟಸಾಧ್ಯವಾದದ್ದಾದರೂ) ಪರವಾಗಿಲ್ಲ" ಎಂದನು.

 

ಆ ಬ್ರಾಹ್ಮಣನ ಹಾಗೂ ಆತನ ಪತ್ನಿಯ ಅಳುವಿನ ಧ್ವನಿಯನ್ನು ಇಬ್ಬರೂ ಆಗ ಕೇಳಿಸಿಕೊಂಡರು. ಆಗಲಾ ಕುಂತಿಯು ಆ ಬ್ರಾಹ್ಮಣನ ಮನೆಯೊಳಗೆ ತ್ವರೆಯಿಂದ ಪ್ರವೇಶ ಮಾಡಿದಳು- ಕರುವನ್ನು ಕಟ್ಟಿಹಾಕಿಬಿಟ್ಟಿದ್ದಾಗ ಹಸುವು ಅದರತ್ತ ಓಡುವಂತೆ! ಹೆಂಡತಿ-ಮಗ-ಮಗಳು ಇವರುಗಳೊಂದಿಗೆ ತಲೆತಗ್ಗಿಸಿ ನಿಂತಿದ್ದ ಬ್ರಾಹ್ಮಣನನ್ನು ಕಂಡರು.

 

ಬ್ರಾಹ್ಮಣನು ಗೋಳಾಡುತ್ತಿದ್ದನು. "ಈ ಲೋಕದಲ್ಲಿದೇನು ಜೀವಿತವಪ್ಪಾ! ಪರಾಧೀನವೆಂಬುದು ದುಃಖಕ್ಕೆ ಮೂಲ, ಅತ್ಯಂತ ಅಪ್ರಿಯವಾದದ್ದು. ಬದುಕಿರುವುದೇ ಬಲು ದುಃಖ (ಜೀವಿತೇ ಪರಮಂ ದುಃಖಂ). ಯಾರು ಬದುಕಿರುತ್ತಾರೋ ಅವರಿಗೆ ದುಃಖವೆಂಬುದು ಖಚಿತವಾದದ್ದು!" 


ಸೂಚನೆ : 20/11/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.