Sunday, November 27, 2022

ಮನಸ್ಸೇ ಮನುಷ್ಯನ ಮೂರನೆಯ ಕಣ್ಣು (Manasse Manusyana Muraneya kannu)

ಶ್ರೀಮತಿ ಪದ್ಮಿನಿ ಶ್ರೀನಿವಾಸನ್ 

(ಪ್ರತಿಕ್ರಿಯಿಸಿರಿ lekhana@ayvm.in)ರಾಜನೊಬ್ಬ ಋಷಿಗಳನ್ನು ಸಂದರ್ಶಿಸಲು  ಹೊರಟ. ತಮ್ಮ ಆಶ್ರಮಕ್ಕೆ ಆಗಮಿಸಿದ ರಾಜನನ್ನು ಋಷಿಗಳು ಸ್ವಾಗತಿಸಿ ಒಳಿತನ್ನು ಹಾರೈಸಿ ಆಶೀರ್ವದಿಸಿದರು.  ರಾಜನು, "ನನಗೆ ಒಂದು ವರದ ಅಪೇಕ್ಷೆಯಿದೆ" ಎಂದು ಪ್ರಾರ್ಥಿಸಿದನು. ಭಗವಂತನ ಪ್ರತಿನಿಧಿಯಾಗಿ ರಾಜ್ಯವನ್ನಾಳಬೇಕಾದ ರಾಜನ ಮನಸ್ಸು ಧರ್ಮದಿಂದ ವಿಚಲಿತವಾಗಿ ಜಾರಿರಬಹುದು, ಅವನನ್ನು ಉದ್ಧರಿಸೋಣವೆಂದು "ಏನು ವರವನ್ನು ಅಪೇಕ್ಷಿ ಸುವೆ?"  ಎಂದರು ಋಷಿಗಳು. "ನನ್ನ ಮನಸ್ಸಿನಲ್ಲಾಡಿದ ಎಲ್ಲ ಕೆಲಸಗಳೂ ನಡೆಯಬೇಕು" ಎಂದ ರಾಜ. "ಅಂತಹ ವರವನ್ನು ಕೊಡಬಲ್ಲೆ, ಆದರೆ ಅದರಿಂದ ನೀನು ಸಂತುಷ್ಟನಾಗಲಾರೆ. ಒಂದು ಷರತ್ತಿಗೆ ಒಪ್ಪಿದರೆ, ನಿನಗೆ ಒಬ್ಬ ಸೇವಕನನ್ನು ಕಳುಹಿಸಿಕೊಡುವೆ. ಆದರೆ ನಿರಂತರ ಕೆಲಸ ಕೊಡುವುದು ನಿನ್ನ ಜವಾಬ್ದಾರಿ, ಅದಿಲ್ಲವಾದರೆ ಅವನು ನಿನ್ನನ್ನು ನುಂಗಿಬಿಡುವನು" ಎಂದರು ಋಷಿಗಳು. ರಾಜನು,"ಕೆಲಸ ಮಾಡುವುದು ಕಷ್ಟ. ಹೇಳುವುದು ಅಷ್ಟೇನು ಕಷ್ಟವಿಲ್ಲಎಂದು ಆಲೋಚಿಸಿ ಷರತ್ತಿಗೆ ಒಪ್ಪಿದ.

ಋಷಿಗಳು ಅವರ ಸಿದ್ಧಿಗಳಿಂದ ಭೂತಾಕಾರವಾದ ಜೀವಿಯೊಂದನ್ನು ಸೃಷ್ಟಿಸಿದರು. ಅದು ರಾಜನೆದುರಿಗೆ ನಿಂತು "ಕೆಲಸ ಕೊಡಿ ರಾಜರೆ" ಎಂದಿತು. "ಅರಮನೆಗೆ ಬಾ" ಎಂದನು ರಾಜ. ರಾಜನು ತಲಪುವ ಮುನ್ನವೇ ಆ ಭೂತ ಅರಮನೆಯಲ್ಲಿ ಹಾಜರಾಗಿತ್ತು. ಶತ್ರುಗಳನ್ನು ನಾಶಮಾಡಿ, ಮರುಭೂಮಿಗೆ ನೀರೆರೆದು, ಉತ್ತು ಬಿತ್ತು ಇತ್ಯಾದಿ ಎಲ್ಲ ಕೆಲಸವನ್ನೂ ಕೆಲವೇ ಸಮಯದಲ್ಲಿ ಮಾಡಿ ಮುಗಿಸಿತು. ಇನ್ನು ಕೆಲಸ ಹೇಳಲು ತೋಚದೆ ರಾಜ ಸುಸ್ತಾಗಿ ಕುಳಿತ. "ನೀನು ಕೆಲಸ ಕೊಡುತ್ತಿಲ್ಲ. ನಿನ್ನನ್ನು ನುಂಗಿಬಿಡುತ್ತೇನೆ" ಎಂದಿತು ಭೂತ.

ದಿಕ್ಕುತೋಚದ ರಾಜ, ಋಷಿಗಳ ಬಳಿಗೆ ಹೋಗಿ, ಪಾದಗಳಿಗೆ ಬಿದ್ದು, "ತಪ್ಪಾಯಿತು ಕ್ಷಮಿಸಿ. ಕೇಳಬಾರದ್ದನ್ನು ಕೇಳಿಬಿಟ್ಟೆ. ಈ ಭೂತದಿಂದ ನನ್ನನ್ನು ರಕ್ಷಿಸಿ" ಎಂದು ಬೇಡಿದನು. ಋಷಿಗಳು ಭೂತವನ್ನು ಉದ್ದೇಶಿಸಿ, ಒಂದು ಕಂಬವನ್ನು ಗಟ್ಟಿಯಾಗಿ ನೆಡುವಂತೆ ಹೇಳಿ, ಅದರ ಮೇಲೆ ನಿರಂತರವಾಗಿ  ಹತ್ತಿ ಇಳಿದು ಮಾಡುವಂತೆ ಹೇಳಿದರು. ಹಾಗೆಯೇ ಮಾಡುತ್ತಾ ಅದರ ಜೀವಾವಧಿ ಕಳೆದು ಭೂತ ಮಾಯವಾಯಿತು.

ಈ ಕಥೆಯು ಮಕ್ಕಳ ಕಥೆಯಂತೆ ಕಂಡರೂ, ಇದರಲ್ಲೊಂದು ಗಹನವಾದ ತತ್ತ್ವಾರ್ಥ ಅಡಗಿದೆ. ನಮ್ಮಮನಸ್ಸನ್ನು ಹೇಗೆ ಇಟ್ಟುಕೊಳ್ಳಬೇಕೆಂಬ ಸತ್ಯಾರ್ಥ ಇಲ್ಲಿದೆ. ಆ  ಕಂಬವು ಬೆನ್ನು ಮೂಳೆಯ ಪ್ರತೀಕ. ಅದರಲ್ಲಿ ಗುಪ್ತವಾಗಿ ಅಡಗಿರುವ ಸುಷುಮ್ನಾ ನಾಡಿಯು ಭಗವಂತನನ್ನು ತೋರುವ ಮಾರ್ಗ. ಋಷಿಗಳು ಸಾಧನೆ ಮಾಡಿ, ಆ ಪಥದಲ್ಲಿ ಹತ್ತಿ ಇಳಿದು, ಪರಮಾತ್ಮನನ್ನು ನಿತ್ಯವೂ ಅಂತರಂಗದಲ್ಲಿ ಕಾಣುವವರು. ಇಂದ್ರಿಯಗಳ ರಾಜನಾದ ನಮ್ಮಗಳ ಮನಸ್ಸು ಆ ಭೂತವಿದ್ದಂತೆ. ದುಷ್ಟಸಂಸ್ಕಾರಗಳಿಂದ ಹುಟ್ಟುವ ಚಾಪಲ್ಯಗಳಿಂದ ಕೂಡಿದ್ದು, ಚಂಚಲವಾಗಿ ಇತ್ತ ಅತ್ತ ಎಡೆಬಿಡದೇ ಭ್ರಮಣ ಮಾಡುವಂತಹದು.  ಆ ಮನಸ್ಸನ್ನು  ಭಗವಂತನ  ಮೂರ್ತಿಯ ಅಡಿಯಿಂದ ಮುಡಿಯವರೆಗೆ ಹತ್ತಿ ಇಳಿಯುವಂತೆ ಮಾಡುವುದೇ ಕಂಬ ಹತ್ತಿ ಇಳಿಯುವ ಕೆಲಸ. ಹಾಗೆ ಮಾಡಿದಾಗ, ಒಂದು ಘಟ್ಟದಲ್ಲಿ ಅದು ತನ್ನ ಸ್ವಧಾಮದಲ್ಲಿರುವ ಮನಸಸ್ಪತಿಯಲ್ಲಿ ಲಯವಾಗುವುದು ನಿಶ್ಚಿತ. ಆತ್ಮರಾಜ್ಯದ ರಾಜರಾಗಿ, ಮನಸ್ಸಿನ ಸಾರ್ಥಕತೆಯನ್ನು ಜ್ಞಾನ ಚಕ್ಷುವಿನಿಂದ ಅರಿತವರಾಗಿ, ಲೋಕಕ್ಕೆ ಉತ್ತಮ ವ್ಯವಹಾರ ಹಾಗೂ ಚಿಂತನೆಗಳನ್ನು ಪ್ರಕಾಶಗೊಳಿಸಿದವರು ಮಹರ್ಷಿಗಳು. ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು " ವೇಸ್ಟ್ ಪೇಪರ್ ಬ್ಯಾಸ್ಕೆಟ್ ಗೆ  ಹಾಕಲ್ಪಡಬೇಕಾಗಿದ್ದ ವಿಷಯಗಳೆಲ್ಲಾ ಮನಸ್ಸಿನಲ್ಲಿ ತುಂಬಿಸಿರುವಾಗ ಜ್ಞಾನದ ಮಾತುಗಳು ಅದಕ್ಕೆ ಹೇಗೆ ತಾನೇ ಹಿಡಿಸಿಯಾವು!?

ಇಂದು ನಮ್ಮ ಪುರುಸತ್ತಿಲ್ಲದ ಜೀವನ ಶೈಲಿಯಲ್ಲಿ ನಮ್ಮ ಮನಸ್ಸೂ ಆ ರಾಜನ ಮನಸ್ಸಿನಂತೆಯೇ ಆಗಿದೆ. ಮಹರ್ಷಿಗಳ ಅನುಭವ ವೇದ್ಯವಾದ ಸತ್ಯದ ವಿಷಯ  ಬೋಧವಾಗುತ್ತಿಲ್ಲ. ಈ ಕಥೆಯಲ್ಲಿ ಬರುವ ರಾಜನಂತೆ ಒಬ್ಬ ಸದ್ಗುರುವಿನಲ್ಲಿ ನಾವೂ ಶರಣಾದರೆ, ಅವರ ಮನಸ್ಸೆಂಬ ಮೂರನೆಯ ಕಣ್ಣಿನಿಂದ(ಜ್ಞಾನ ಚಕ್ಷುವಿನಿಂದಾ)ದ ಪರಮಾತ್ಮನ ದರುಶನಗಳ ಫಲ ರೂಪವಾದ ಆಶೀರ್ವಾದಗಳನ್ನು,  ಸದ್ವಿಷಯಗಳನ್ನು ನಮ್ಮ ಮನಸ್ಸಿಗೆ ಹರಿಸಬಹುದು. ನಾವು ಇಹ-ಪರ ಜೀವನದ ಹೊಂದಾಣಿಕೆಯೊಂದಿಗೆ ಶಾಶ್ವತ ನೆಮ್ಮದಿಯತ್ತ ಸಾಗಬಹುದು. ನಮ್ಮೆಲ್ಲರ ಮನಸ್ಸು ಅಂತಹ ಸಂಸ್ಕಾರದಿಂದ ಶುದ್ಧವಾಗಿ,  ಆ ಮನಸಸ್ಪತಿಯತ್ತ ಸಾಗುವಂತಾಗಲೆಂದು ಪ್ರಾರ್ಥಿಸೋಣ.

ಸೂಚನೆ : 26/11/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.