Sunday, November 13, 2022

ಸತ್ಸಹವಾಸದ ಮಧುರ ಫಲ (Satsahavasada Madhura Phala)

ಲೇಖಕರುಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)



ಜೀವನದಲ್ಲಿ ಸಹವಾಸದ ಪಾತ್ರ:

ಸಹವಾಸ ನಮ್ಮೆಲ್ಲರ ಜೀವನದಲ್ಲಿ ಬಹಳ ಪ್ರಮುಖವಾದ ಪಾತ್ರ ವಹಿಸುತ್ತದೆ. ಉದಾಹರಣೆಗೆ ನಮಗೆ ಸಂಗೀತ ಜ್ಞಾನವಿಲ್ಲದಿದ್ದರೂ ಒಂದು ಸಂಗೀತ ಕಚೇರಿಗೆ ಹೋಗಿ ಕುಳಿತುಕೊಂಡಾಗ ಆ ಸಂಗೀತಗಾರರು ತಾಳ ಹಾಕುವಂತೆಯೇ ನಾವೂ ಹಾಕುತ್ತೇವೆ. ಮನೆಗೆ ಬಂದಮೇಲೆ ಮತ್ತೆ ಹಾಗೆ ತಾಳಹಾಕಲು ಬರುವುದಿಲ್ಲ. ಅಷ್ಟು ಹೊತ್ತು ಸಂಗೀತಗಾರರ ಸಹವಾಸದಲ್ಲಿದ್ದುದರ ಪ್ರಭಾವ ಅದು. ಒಂದು ಆಸ್ಪತ್ರೆಯಲ್ಲಿ ರೋಗಿಯಾಗಿ ಮಂಚದ ಮೇಲೆ ಮಲಗಿರುತ್ತಾನೆ. ಪಕ್ಕದ ಮಂಚದವರೆಲ್ಲ ಸೇರಿ ಸಂತೋಷವಾಗಿ ಮಾತನಾಡಲು ಪ್ರಾರಂಭಿಸಿದಾಗ ಇವನೂ ಸಹ ಅಷ್ಟುಕಾಲ ತನ್ನ ರೋಗವನ್ನು ಮರೆತು ಅವರೊಡನೆ ಸಂತೋಷವಾಗಿ ಕಾಲ ಕಳೆಯುತ್ತಾನೆ. ಇವೆಲ್ಲವನ್ನೂ ನಮ್ಮ ನಿತ್ಯಜೀವನದಲ್ಲಿ ನಾವು ನೋಡಿರುವ ಸಹವಾಸದ ಫಲವೇ ಆಗಿದೆ.

ಸತ್ಪುರುಷರ ಸಹವಾಸ:

ಹೀಗೆ ಒಳ್ಳೆಯ ವಸ್ತುಗಳ, ವ್ಯಕ್ತಿಗಳ ಸಹವಾಸ ನಮಗೆ ಒಳಿತನ್ನುಂಟುಮಾಡಿದರೆ ಕೆಟ್ಟದ್ದರ ಸಹವಾಸ ಕೆಡುಕನ್ನುಂಟುಮಾಡುತ್ತದೆ. ಹಾಗೆಂದಮೇಲೆ ಸತ್ಪುರುಷರ ಸಹವಾಸ ಮಾಡಬೇಕೆಂಬುದು ನಿರ್ವಿವಾದವಾದ ಮಾತು. ಇನ್ನು ಈ ಸತ್ಪುರುಷರು ಅಂದರೆ ಯಾರು? ಪ್ರಪಂಚದ ಅನೇಕ ಸಾಹಿತ್ಯಗಳಲ್ಲಿ ಈ ಸತ್ಪುರುಷರ ಲಕ್ಷಣ ಅವರ ಸಹವಾಸದಿಂದ ಆಗುವ ಲಾಭಗಳ ಬಗ್ಗೆ ಸಾರಿದ್ದಾರೆ.

ಸತ್ಪುರುಷರು ಯಾರು?

'ಸ್ವಾರ್ಥವನ್ನು ತೊರೆದು ಪರಾರ್ಥಕ್ಕಾಗಿ ದುಡಿಯುವವರು ಸತ್ಪುರುಷರು'  'ಮಾತು ಮನಸ್ಸು ಮತ್ತು ಕ್ರಿಯೆಗಳಲ್ಲಿ ಏಕರೂಪತೆ ಸಜ್ಜನರಲ್ಲಿ ಕಂಡುಬರುತ್ತದೆ' ಇತ್ಯಾದಿ ಮಾತುಗಳು ನಮ್ಮ ಸುಭಾಷಿತಗಳಲ್ಲಿ ಕಂಡುಬರುತ್ತವೆ. 

ಸತ್ಪುರುಷರ ಬಗ್ಗೆ ಹೇಳಿದಂತೆಯೇ ಅವರ ಸಹವಾಸದ ಬಗೆಗೂ ನಮ್ಮ ಸಾಹಿತ್ಯಗಳಲ್ಲಿ ಬಹಳವಾಗಿ ಹೇಳಿದ್ದಾರೆ.'ಸತ್ಸಂಗವು ಸ್ವರ್ಗವಾಸ','ಸಜ್ಜನರ ಸಂಗವದು ಹೆಜ್ಜೇನ ಸವಿದಂತೆ' 'ಬಲ್ಲವರ ಒಡನಾಟ ಬೆಲ್ಲವನು ಮೆದ್ದಂತೆ' ಇತ್ಯಾದಿ.

ಮೇಲೆ ಹೇಳಿದ ಗುಣಗಳಲ್ಲಿ ಕೆಲವನ್ನೋ ಅಥವಾ ಎಲ್ಲವನ್ನೋ ಒಳಗೊಂಡು ಬಾಳುವ ಜನರು ವಿಶ್ವದ ಎಲ್ಲಾ ದೇಶಗಳಲ್ಲೂ ವಿರಳವಾಗಿಯಾದರೂ ಕಂಡುಬರುತ್ತಾರೆ. ಯಾವ ಗಲಭೆಗೂ ಹೋಗದವನು, ಒಂದು ಕೆನ್ನೆಗೆ ಹೊಡೆದರೆ ಇನ್ನೊಂದನ್ನು ಒಡ್ಡುವವನು, ಮೂರಕ್ಕೆ ಬರುವುದಿಲ್ಲ ಆರಕ್ಕೆ ಹೋಗುವುದಿಲ್ಲ ಎಂದು ಪ್ರಶಂಸಿಸುವುದೂ ಉಂಟು. ಅಣಕಿಸುವುದೂ ಉಂಟು. ಹೀಗೆ ಬಾಳಿಗೆ ಒಳಿತನ್ನು ತರುವ ಗುಣಗಳನ್ನಿಟ್ಟುಕೊಂಡವರಿಗೆ ಸತ್ಪುರುಷರು ಎಂದೂ, ಅವರೊಡನೆ ಸಹವಾಸ ಮಾಡಿದರೆ ಅದು ಸತ್ಸಹವಾಸ ಎಂದೂ ವ್ಯವಹಾರದಲ್ಲಿ ಬಂದಿದೆ.

ಸತ್ಪುರುಷರು-ಋಷಿ ದೃಷ್ಟಿ:

ಇದರ ಬಗ್ಗೆ ನಮ್ಮ ಋಷಿ ಮಹರ್ಷಿಗಳು ಏನು ಹೇಳಿದ್ದಾರೆ ಎಂದು ನೋಡೋಣ. "ಸತ್" ಎಂದರೆ ಎಂದೆಂದಿಗೂ ಇರುವಂತಹದು. ಶಾಶ್ವತವಾದುದು. ಪ್ರಪಂಚದಲ್ಲಿ ಎಲ್ಲವೂ ಇಂದಿದ್ದು ನಾಳೆ ಅಳಿಯುವಂತಹದೇ. ಐನೂರು ವರ್ಷಗಳ ಹಿಂದಿದ್ದವರು ಇಂದಿಲ್ಲ. ಅಂದಿನ ಜೀವನ ಕ್ರಮವೂ ಇಂದಿಲ್ಲ. ಇಂದಿನದು ನಾಳೆ ಇರುವುದಿಲ್ಲ. ಹೀಗೆ ಶಾಶ್ವತವಾಗಿರುವುದು ಯಾವುದೂ ಇಲ್ಲ. ಎಂದಮೇಲೆ ಈ ಸತ್ ಅಥವಾ ಸತ್ಯ ಎನ್ನುವ ಪದದ ಅಭಿಪ್ರಾಯವೇನು? ಋಷಿಗಳೂ ಸಹ ಈ ಜಗತ್ತಿನಲ್ಲಿ ಬಾಳಿಬದುಕಿದವರೇ.  ಎಲ್ಲವೂ ಎಂದಿಗೂ ಇರುವಂತಹದಲ್ಲ ಎನ್ನುವ ವಿಷಯ ಅವರಿಗೆ ತಿಳಿಯದ್ದೇನೂ ಅಲ್ಲ. ಆದರೆ ಅವರು ನಮ್ಮಂತೆ ಮುಂದೆ ಕಾಣುವುದಷ್ಟನ್ನೇ ನೋಡಿ ಬದುಕದೇ ಇವೆಲ್ಲದರ ಹಿಂದೆ ಏನಿದೆ? ಯಾವ ಶಕ್ತಿಯಿಂದ ಇದೆಲ್ಲವೂ ಬಂದು ಹೋಗುತ್ತಿದೆ ಎಂಬುದರ ಅನ್ವೇಷಣೆ ನಡೆಸಿದರು. ಅದಕ್ಕಾಗಿ ತಪಸ್ಯೆಯನ್ನು ಕೈಗೊಂಡು ಜೀವನದ ಹಿಂಬದಿಯಲ್ಲಿ ಬೆಳಗುತ್ತಿರುವ ಸತ್ಯವಾದ ನಿತ್ಯವಾದ ವಸ್ತುವನ್ನು ಕಂಡುಕೊಂಡರು. ಮಾತ್ರವಲ್ಲ; ಅದರಿಂದಲೇ ಎಲ್ಲವೂ ಅರಳಿದೆ; ಇವೆಲ್ಲಕ್ಕೂ ನಾಶವಿದ್ದರೆ, ಅದು ಮಾತ್ರ ಅವಿನಾಶಿ ಎಂಬ ಸತ್ಯವನ್ನು ಕಂಡುಕೊಂಡರು. ಅದರ ಅರಿವು ಅವರಿಗೆ ಇಲ್ಲಿಯವರೆಗೆ ಅನುಭವಿಸಿರದ ಅಮಿತವಾದ ಆನಂದವನ್ನೂ ನೆಮ್ಮದಿಯನ್ನೂ ತಂದು ಕೊಟ್ಟಿತು. ಅಂತಹ ವಸ್ತುವನ್ನೇ ಅವರು "ಸತ್ಯ" ಎಂದು ಕರೆದುದು. ಅದರ ಸಹವಾಸವೇ ವಾಸ್ತವವಾಗಿ ಸತ್ಸಹವಾಸ. ಅದನ್ನು ತಮ್ಮಲ್ಲಿ ತುಂಬಿಕೊಂಡು ತಮ್ಮ ಪರಿಸರದಲ್ಲೆಲ್ಲಾ ಅದರ ಪ್ರಭಾವವನ್ನು ಬೀರುವವರೇ  ಸತ್ಪುರುಷರು. ಅವರ ಸಹವಾಸವನ್ನೇ ಸತ್ಸಹವಾಸ ಎಂದು ಅವರು ಕೊಂಡಾಡಿದುದು.  ಋಷಿ-ಕವಿಗಳಾದ ವ್ಯಾಸ, ವಾಲ್ಮೀಕಿಗಳು ಚಿತ್ರಿಸಿರುವ ರಾಮ, ಕೃಷ್ಣ, ಭೀಷ್ಮ ಮೊದಲಾದ ಮಹಾಪುರುಷರು ಆ ಸದ್ವಸ್ತುವನ್ನು ಅರಿತ ಮಹಾನುಭಾವರು. ಅಂತಹವರ ಸಹವಾಸವು ಇತರರ ಒಳಗತ್ತಲೆಯನ್ನು ಕಳೆದು ದೀಪದಿಂದ ದೀಪವನ್ನು ಬೆಳಗುವಂತೆ ಇತರರನ್ನೂ ಪ್ರಕಾಶರೂಪರನ್ನಾಗಿ ಮಾಡುತ್ತದೆ.

ಹೊರಗಿನ ತಂಗಾಳಿಯು ಹೊರಬೇಗೆಯನ್ನು ಕಳೆದು ತಂಪು ನೀಡುತ್ತದೆ. ಹಾಗೆಯೇ ನಾವು ಹಿಂದೆ ಗಮನಿಸಿದ ಲೌಕಿಕ ಗುಣಗಳು ಮನಸ್ಸಿಗೆ ಮುದ ನೀಡುತ್ತವೆ, ನಿಜ. ಆದರೆ ಜ್ಞಾನಿಗಳು ಹೇಳುವ ಸತ್ಸಹವಾಸವು ನಮ್ಮೊಳಗಿನ ಸದ್ವಸ್ತುವಿನ ಅರಿವನ್ನು ನಮಗೆ ಕೊಟ್ಟು ಜೀವನದ ಎಲ್ಲ ಬಗೆಯ ತಾಪವನ್ನೂ ಕಳೆಯುತ್ತದೆ. ಹೊರಗೆ, ಒಳಗೆ- ಎಲ್ಲೆಲ್ಲಿಯೂ ತಂಪನ್ನು ನೀಡುವ ಗುಣ, ಸದ್ವಸ್ತುವಿನ ಸಹವಾಸದ್ದು. ಅದನ್ನು ಪಡೆದ ಸತ್ಪುರುಷರ ಸಹವಾಸದ ಫಲವೂ ಅದೇ.

ಮೂರಕ್ಕೆ ಬರುವುದಿಲ್ಲ, ಆರಕ್ಕೆ ಹೋಗುವುದಿಲ್ಲ?

ಮೂರಕ್ಕೆ ಬರುವುದಿಲ್ಲ, ಆರಕ್ಕೆ ಹೋಗುವುದಿಲ್ಲ ಎಂಬ ಸಜ್ಜನರನ್ನು ಕುರಿತ ಮಾತಿನ ಅರ್ಥವನ್ನು ಶ್ರೀರಂಗ ಮಹಾಗುರುಗಳು ಈ ಬಗೆಯಲ್ಲಿ ವಿವರಿಸಿದ್ದರು- ಇಲ್ಲಿ ಮೂರು ಎಂದರೆ ಸತ್ತ್ವ, ರಜಸ್, ತಮಸ್ ಎಂಬ ಮೂರು ಗುಣಗಳು. ಈ ತ್ರಿಗುಣಗಳನ್ನು ಮೀರಿ ಬೆಳಗುವ ಸತ್ಯವಸ್ತುವಿನಲ್ಲೇ ಎಂದರೆ ಭಗವಂತನಲ್ಲೇ ರಮಿಸುವ ಸತ್ಪುರುಷರು 'ಮೂರಕ್ಕೆ ಬರುವುದಿಲ್ಲ' ಎಂದರೆ ತ್ರಿಗುಣಗಳಿಂದಾಗುವ ವಿಕಾರಕ್ಕೆ ಒಳಗಾಗುವುದಿಲ್ಲ, ಮತ್ತೆ ತ್ರಿಗುಣಗಳಿಂದಾಗುವ ಸೃಷ್ಟಿಯ ಪ್ರಭಾವಕ್ಕೂ  ಒಳಗಾಗುವುದಿಲ್ಲ ಎಂದರ್ಥ. 'ಆರಕ್ಕೆ ಹೋಗುವುದಿಲ್ಲ' ಎಂದರೆ ಒಳ ಶತ್ರುಗಳಾದ ಕಾಮ, ಕ್ರೋಧ ಲೋಭ,ಮೋಹ, ಮದ, ಮಾತ್ಸರ್ಯ ಎನ್ನುವ ಅರಿಷಡ್ವರ್ಗಗಳಿಗೆ ಗುರಿಯಾಗುವುದಿಲ್ಲ. ಅವುಗಳನ್ನು ಗೆದ್ದು ತ್ರಿಗುಣಗಳನ್ನೂ ಮೀರಿದ ಸದ್ವಸ್ತುವಿನಲ್ಲಿ ಒಂದಾಗಿರುವ ಸ್ವಭಾವ ಸತ್ಪುರುಷರದು ಎಂಬ ಅರ್ಥವನ್ನು ಈ ಮಾತು ಒಳಗೊಂಡಿದೆ.

ಸತ್ಸಂಗತ್ವೇ ನಿಸ್ಸಂಗತ್ವಂ:

ಜ್ಞಾನಿಗಳಲ್ಲಿ ಅಗ್ರಗಣ್ಯರಾದ ಶಂಕರ ಭಗವತ್ಪಾದರು ಸತ್ಸಹವಾಸದ ಬಗ್ಗೆ ತಮ್ಮ ಭಜಗೋವಿಂದ ಸ್ತೋತ್ರದಲ್ಲಿ ಹೀಗೆ ಅಪ್ಪಣೆ ಕೊಡಿಸಿದ್ದಾರೆ:

ಸತ್ಸಂಗತ್ವೇ ನಿಸ್ಸಂಗತ್ವಂ, ನಿಸ್ಸಂಗತ್ವೇ ನಿರ್ಮೋಹತ್ವಂ ನಿರ್ಮೋಹತ್ವೇ ನಿಶ್ಚಲತತ್ತ್ವಂ ನಿಶ್ಚಲತತ್ತ್ವೇ ಜೀವನ್ಮುಕ್ತಿಃ|| 

ಸತ್ಪುರುಷರು ತಮ್ಮೊಳಗೆ ಬೆಳಗುವ ಸದ್ವಸ್ತುವಿನ ಜೊತೆಗೂಡಿರುವುದರಿಂದ ಲೋಕದ ವಸ್ತುಗಳಿಗೆ ಅಂಟರು. ಕಮಲದೆಲೆಯು ನೀರನ್ನು ಅಂಟಿಸಿಕೊಳ್ಳದಂತೆ ಲೋಕದೊಳಗಿದ್ದರೂ ಅವರಿಗೆ ಲೋಕವು ಅಂಟದು. ಇಂತಹವರ ಸಹವಾಸವು, ಲೌಕಿಕ ವಸ್ತುಗಳೇ ಜೀವನದ ಸಾರ ಸರ್ವಸ್ವವಲ್ಲವೆಂದೂ ಅದಕ್ಕಿಂತಲೂ ಮಿಗಿಲಾದುದೂ ಉಂಟು ಎಂಬ ಅರಿವನ್ನು ಮೂಡಿಸಿ ಲೋಕಾಸಕ್ತಿಯನ್ನು ಕ್ರಮವಾಗಿ ತಗ್ಗಿಸುವುದು. ಹೀಗೆ ಸತ್ಸಂಗದಿಂದ ನಿಸ್ಸಂಗ ಭಾವ ಅಂದರೆ ಲೋಕಕ್ಕೆ ಅಂಟಿಕೊಳ್ಳದಿರುವಿಕೆ ಬೆಳೆಯುವುದು. ಇದು ಮೊದಲ ಹೆಜ್ಜೆ. ನಿಸ್ಸಂಗ ಭಾವವು ಮೂಡಿದಾಗ ಲೋಕದ ವಸ್ತುಗಳ ನಶ್ವರತೆ ಮನಸ್ಸಿಗೆ ಬಂದು ಅವುಗಳ ಸೆಳೆತ ತಗ್ಗುವುದು. ಇದೇ ನಿರ್ಮೋಹತ್ವ. ಈ ಸೆಳೆತಗಳಿಲ್ಲದಿದ್ದಾಗ ಸ್ಥಿರಮನಸ್ಸುಂಟಾಗುವುದು. ಮನಸ್ಸು ತಿಳಿಯಾದಾಗ ಶಾಶ್ವತವಾದ ತತ್ತ್ವವು ಒಳಗೆ ಗೋಚರವಾಗುವುದು. ಈ ತತ್ತ್ವವು ಹಿಂದೆ ಹೇಳಿದ ಸತ್ ವಸ್ತುವೇ. ಅದರೊಡನೆ ಬೆರೆತಾಗ ನಿಶ್ಚಲ ಸ್ವಭಾವವೇರ್ಪಡುವುದು. ಹಾಗಾದಾಗ ತತ್ತ್ವ ದರ್ಶನವಾಗಿ ಜೀವನ, ಶಾಂತಿಸಮೃದ್ಧವೂ ಮತ್ತು  ಅಮೃತಮಯವೂ ಆಗುವುದು. ಅದೇ ಜೀವನದ ಕಟ್ಟೆಲ್ಲವೂ ಕಳೆದ  ಜೀವನ್ಮುಕ್ತಿ. ಇದೇ ಸತ್ಸಹವಾಸದ ಫಲವಾಗಿದೆ.

ಇಂತಹ ಸತ್ಸಹವಾಸದಿಂದಲೇ ಪೀಳಿಗೆ ಪೀಳಿಗೆಗಳವರೆಗೆ ಭಾರತೀಯ ಸಂಸ್ಕೃತಿಯು ಬೆಳೆದು ಬೆಳಗಿದೆ. ನಮ್ಮ ಈ ಅದ್ವಿತೀಯವಾದ ಸಂಸ್ಕೃತಿಯನ್ನು ಅಂತಹ ಸತ್ಸಹವಾಸದಿಂದ ನಾವೆಲ್ಲರೂ ಉಳಿಸಿ ಬೆಳೆಸೋಣ. ಇಂತಹ ಸತ್ಪುರುಷರಾಗಿ ಬಾಳಿ ಅವರ ಹತ್ತಿರ ಬಂದವರೆಲ್ಲರಿಗೂ ಈ ಋಷಿ ಸಂಸ್ಕೃತಿಯ ಮಹಿಮೆಯು ಅರಿವಿಗೆ ಬರುವಂತೆ ಮಾಡಿದ ಶ್ರೀರಂಗ ಮಹಾಗುರುಗಳೇ ಈ ಬರಹದ ಸ್ಫೂರ್ತಿ. ಅಂತಹ ಸತ್ಪುರುಷರ ಸಹವಾಸ ನಮ್ಮೆಲ್ಲರಿಗೂ ಲಭಿಸುವಂತಾಗಲಿ.

ಸೂಚನೆ : 13/11/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.