Sunday, November 6, 2022

ವ್ಯಾಸ ವೀಕ್ಷಿತ -11 ಭೀಮ-ಹಿಡಿಂಬೆಯರ ವಿವಾಹ (Vyaasa Vikshita 11 Bhima-Hidimbeyara Vivaha)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಭೀಮಸೇನನಂತೂ ಹಿಡಿಂಬೆಯ ಬಗ್ಗೆ ಮೃದುವಾಗೇನೂ ಇರಲಿಲ್ಲ; ಹಿಡಿಂಬೆಗೇ ನೇರವಾಗಿ ಹೇಳಿದ: "ರಾಕ್ಷಸರೆಂದರೆ ಮೋಹಕಮಾಯೆಯನ್ನು ಬಳಸುವವರು; ವೈರವನ್ನು ಮರೆಯದವರು ("ಸ್ಮರಂತಿ ವೈರಂ ರಕ್ಷಾಂಸಿ!"); ನಿನ್ನಣ್ಣನ ಹಾದಿಯೇ ನಿನಗೆ ಗಟ್ಟಿ (ಎಂದರೆ ನಿನಗೂ ಸಾವು ಸಿದ್ಧ)!"


ಆಗ ಯುಧಿಷ್ಠಿರನೆಂದ: "ಭೀಮ, ನಿನಗೆ ಕೋಪವಿರಬಹುದು; ಆದರೂ ಸ್ತ್ರೀವಧೆ ಬೇಡ. ಶರೀರವನ್ನು ಕಾಪಾಡಿಕೊಳ್ಳಬೇಕು, ಸರಿಯೇ; ಆದರೂ ಅದಕ್ಕಿಂತಲೂ ಹೆಚ್ಚಾಗಿ ಧರ್ಮವನ್ನು ಕಾಪಾಡತಕ್ಕದ್ದು (ಧರ್ಮಂ ಗೋಪಾಯ). ಹಿಡಿಂಬನೇನೋ ನಿನ್ನನ್ನು ಕೊಲ್ಲಲೆಂದೇ ಬಂದವನು; ಆತನನ್ನು ನೀನು ಸಾಯಿಸಿದುದು ತಪ್ಪಲ್ಲ. ಆದರಿವಳು ಕೋಪಗೊಂಡೂ ನಮಗೇನು ತಾನೆ ಮಾಡಿಯಾಳು?"


ಕುಂತಿಗೂ ಯುಧಿಷ್ಠಿರನಿಗೂ ಆಗವಳು ಅಭಿವಂದಿಸಿ, ಅಂಜಲಿಬಂಧದೊಂದಿಗೆ ಅರುಹಿದಳು: "ಆರ್ಯೇ ಕುಂತಿ, ಸ್ತ್ರೀಯರಿಗೆ ಪ್ರೇಮಬಂಧದ ನೋವೆಂತಹುದೆಂಬುದನ್ನು ತಾವು ಬಲ್ಲಿರಿ. ಭೀಮನಲ್ಲಿ ಅನುರಕ್ತಳಾದ ನಾನು ಸ್ವಜನ-ಸ್ವಧರ್ಮಗಳನ್ನೂ ಮಿತ್ರರನ್ನೂ ತೊರೆದು ನಿಮ್ಮ ಪುತ್ರನನ್ನು ವರಿಸಿದ್ದೇನೆ. ನೀವೂ ಆತನೂ ನನ್ನನ್ನು ತೊರೆದಿರಾದರೆ ನಾ ಜೀವಿಸೆ. ಇದು ಸತ್ಯ. ನನ್ನ ಮೇಲೆ ದಯೆಮಾಡಿ. ನನ್ನನ್ನು ಮೂಢೆಯೆಂದಾದರೂ ಅಂದುಕೊಳ್ಳಿ, ಭಕ್ತೆಯೆಂದಾದರೂ ಭಾವಿಸಿ. ನಿಮ್ಮ ಪುತ್ರನೊಂದಿಗೆ ಸೇರಿಸಿ. ದೇವರೂಪಿಯಾದ ಈತನನ್ನು ನನಗಿಷ್ಟ ಬಂದೆಡೆಗೆ ಒಯ್ದು, ಮತ್ತೆ ಹಿಂದಕ್ಕೆ ಕರೆತರುವೆ. ನನ್ನನ್ನು ನಂಬಿ, ಶುಭಸ್ವರೂಪರೇ! ನೀವು ನನ್ನನ್ನು ಸ್ಮರಿಸಿದರೆ ಸಾಕು, ತಮಗಿಷ್ಟವಾದೆಡೆಗೆ ಒಯ್ಯಬಲ್ಲೆ. ತಮ್ಮನ್ನು ಕಷ್ಟದಿಂದ ಪಾರುಮಾಡಬಲ್ಲೆ. ತ್ವರಿತವಾಗಿ ಹೋಗಬೇಕೆಂದರೆ ಬೆನ್ನಿನ ಮೇಲೆ ಒಯ್ಯಬಲ್ಲೆ. ಭೀಮಸೇನನು ನನ್ನನ್ನು ಸ್ವೀಕರಿಸುವಂತೆ ಮಾಡಿರಿ. ಆಪತ್ತನ್ನು ದಾಟುವಾಗ ಪ್ರಾಣವನ್ನು ಕಾಪಾಡಿಕೊಳ್ಳಲು ಅದೇನು ಮಾರ್ಗವಿದ್ದರೂ ಅದನ್ನು ಸ್ವೀಕರಿಸತಕ್ಕದ್ದು, ಅಲ್ಲವೇ? ಆಪತ್ತುಗಳಲ್ಲೂ ಯಾವನು ಧರ್ಮವನ್ನು ಕಾಪಾಡಿಕೊಳ್ಳುತ್ತಾನೋ, ಆತನೇ ಉತ್ತಮನಾದ ಧರ್ಮಜ್ಞ (ಆಪತ್ಸು ಯೋ ಧಾರಯತಿ ಧರ್ಮಂ ಧರ್ಮವಿದ್ ಉತ್ತಮಃ). ಅಷ್ಟೇ ಅಲ್ಲ. ಧರ್ಮಪಾಲನಕ್ಕೇ ಧಕ್ಕೆಯೇನಾದರೂ ಒದಗಿಬಂದಲ್ಲಿ ಅದನ್ನೇ ಆಪತ್ತೆನ್ನುವುದು (ವ್ಯಸನಂ ಹ್ಯೇವ ಧರ್ಮಸ್ಯ ಧರ್ಮಿಣಾಮ್ ಆಪದ್ ಉಚ್ಯತೇ)! ಎಷ್ಟಾದರೂ ಪುಣ್ಯವೇ ಪ್ರಾಣವನ್ನು ಧರಿಸುವಂತಹುದು. ಹೀಗಾಗಿ ಯಾವ ಯಾವ ಉಪಾಯದಿಂದ ಧರ್ಮವನ್ನು ಆಚರಿಸಲು ಆಗುವುದೋ, ಅದದನ್ನು ಆಚರಿಸುವುದನ್ನು ನಿಂದಿಸಲಾಗದು."


ಆಗ ಯುಧಿಷ್ಠಿರನು ಅವಳಿಗೆ ಹೇಳಿದನು: "ಹಿಡಿಂಬೆ, ನೀನು ಹೇಳುವುದು ಯುಕ್ತವಾಗಿದೆ. ನಾನು ಹೇಳುವಂತೆ ನೀನೀ ಸತ್ಯದಲ್ಲಿ ನೆಲೆನಿಲ್ಲಬೇಕು: ಸ್ನಾನಾಹ್ನಿಕಗಳನ್ನು ಭೀಮನು ಮುಗಿಸಿಕೊಂಡು, ಮಂಗಲಮಯವಾದ ವೇಷಭೂಷೆಗಳನ್ನು ಧರಿಸಿಬಂದಿರಲು, ಆಗಾತನ ಸೇವೆಯನ್ನು ನೀನು ಮಾಡತಕ್ಕದ್ದು – ಅದೂ ಸೂರ್ಯಾಸ್ತ-ಪರ್ಯಂತ. ನೀನು ಮನೋಜವೆ (ಎಂದರೆ, ಮನಸ್ಸಿನ ವೇಗದಂತೆ ಸಂಚರಿಸಬಲ್ಲವಳು); ಹಗಲಿನಲ್ಲಿ ಈತನೊಂದಿಗೆ ಇಷ್ಟಬಂದಷ್ಟು ವಿಹರಿಸು; ಆದರೆ ರಾತ್ರಿಯ ಹೊತ್ತಿಗೆ ಈತನನ್ನಿಲ್ಲಿಗೆ ಕರೆತಂದಿರಬೇಕು."


 ಭೀಮಸೇನನೂ ಆಕೆಗೆ ಹೇಳಿದನು: "ಈ ಶರತ್ತನ್ನು ತಿಳಿದುಕೋ. ಮಗನು ಜನಿಸುವ ಪರ್ಯಂತಮಾತ್ರ ನಾನು ನಿನ್ನೊಂದಿಗೆ ವಿಹರಿಸುವೆ."


ಹಿಡಿಂಬೆಯೆಲ್ಲಕ್ಕೂ ಸಮ್ಮತಿಯಿತ್ತಳು. ಭೀಮಸೇನನನ್ನು ಒಯ್ದು ಆಕಾಶಕ್ಕೆ ಹಾರಿದಳು. ಪರ್ವತಾಗ್ರಗಳಲ್ಲಿ ಅವರು ವಿಹರಿಸಿದರು. ದೇವಾಲಯಗಳು, ವನದುರ್ಗಗಳು, ರಮಣೀಯ ಸರೋವರಗಳು, ತೀರ್ಥಗಳು, ಕಾನನಗಳು, ಗುಹೆಗಳು, ಸಾಗರಗಳು - ಮುಂತಾದೆಡೆಗಳಲ್ಲೆಲ್ಲಾ ಯಥೇಷ್ಟವಾಗಿ ವಿಹರಿಸಿದರು.

ಸೂಚನೆ : 06/11/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.