ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)ನಮ್ಮ ರಾಷ್ಟ್ರ ಕವಿ ಕಾಳಿದಾಸನು ರಘುವಂಶದ ರಾಜರ ಜೀವನಕ್ರಮವನ್ನು ವರ್ಣಿಸುತ್ತಾನೆ. ಅವರು ಬಾಲ್ಯದಲ್ಲಿ ಸಮಸ್ತ ವಿದ್ಯೆಗಳ ಅಭ್ಯಾಸ ಮಾಡಿ, ಯೌವನದಲ್ಲಿ ವಿಷಯ ಸುಖಗಳನ್ನು ಅನುಭವಿಸುತ್ತಿದ್ದರು; ವೃದ್ಧಾಪ್ಯದಲ್ಲಿ ಮುನಿವೃತ್ತಿ-ಬ್ರಹ್ಮಚಿಂತನೆ; ಕಡೆಯಲ್ಲಿ ಯೋಗದಿಂದ ತಮ್ಮ ದೇಹವನ್ನು ತ್ಯಜಿಸುತ್ತಿದ್ದರು -ಎಂಬುದು ಸಾರಾಂಶ. ಶ್ರೀರಂಗ ಮಹಾಗುರುಗಳು ಈ ಮಾತು ಕೇವಲ ರಘುವಂಶದ ರಾಜರಿಗೆ ಮಾತ್ರವಲ್ಲದೇ ಇಡೀ ಮನುಜಕುಲಕ್ಕೆ ಆದರ್ಶವಾಗಿದೆ ಎನ್ನುತ್ತಿದ್ದರು. ರಘುವಂಶದ ಅರಸರು ಶೈಶವದಲ್ಲಿಯೇ ಜೀವನಕ್ಕೆ ಸಂಬಂಧಿಸಿದ ಸಮಸ್ತ ವಿದ್ಯೆಗಳನ್ನೂ ಅಭ್ಯಾಸ ಮಾಡುತ್ತಿದ್ದರು. ವಿದ್ಯೆ ಎಂದರೆ ಯಾವುದು ನಮ್ಮನ್ನು ಬಂಧನಗಳಿಂದ ಬಿಡಿಸುತ್ತದೆಯೋ ಅದೇ ಎಂಬ ವ್ಯಾಖ್ಯೆ ಇದೆ(ಯಾ ವಿದ್ಯಾ ಸಾ ವಿಮುಕ್ತಯೇ). ಭಾರತೀಯವಾದ ಎಲ್ಲಾ ವಿದ್ಯೆಗಳ ಮೂಲವೂ ಒಳ ಬೆಳಗುವ ಪರಂಜ್ಯೋತಿಯೇ ಆಗಿದೆ. ಅಲ್ಲಿಂದಲೇ ವಿದ್ಯೆಗಳೆಲ್ಲ ಅರಳಿವೆ. ಆ ವಿದ್ಯೆಗಳನ್ನು ಅಭ್ಯಾಸ ಮಾಡುತ್ತಾ ಹೋದಾಗ ಅದು ತನ್ನ ವಿಕಾಸದ ಹೆಜ್ಜೆಗಳಲ್ಲೆಲ್ಲಾ ಪರಮ ಆನಂದದ ಪರಿಮಳವನ್ನು ನೀಡಿ ಕೊನೆಯಲ್ಲಿ ಮತ್ತೆ ನಮ್ಮನ್ನು ನಮ್ಮ ಮೂಲ ನೆಲೆಯಾದ ಪರಮ ಶಾಂತಿಯಲ್ಲೇ ನಿಲ್ಲಿಸುತ್ತವೆ ಎಂಬುದು ಜ್ಞಾನಿಗಳ ಅನುಭವದ ಮಾತು. ಇಂತಹ ವಿದ್ಯಾಭ್ಯಾಸವೇ ನಮ್ಮ ಪ್ರಾಚೀನ ಗುರುಕುಲಗಳಲ್ಲಿ ನಡೆಯುತ್ತಿದ್ದುದು. ಅಂತಹ ವಿದ್ಯೆಗಳ ಪ್ರಯೋಜನವು ಜೀವನದ ಎಲ್ಲಾ ಹಂತಗಳಲ್ಲೂ ಆದಾಗ ಜೀವನ ಸರ್ವಾಂಗ ಸುಂದರ. ಆ ವಿದ್ಯೆಯ ಬಲದ ಮೇಲೆಯೇ ರಘುವಂಶದ ರಾಜರು ಯೌವನದಲ್ಲಿ ವಿಷಯ ಸುಖಗಳನ್ನು ಅನುಭವಿಸುತ್ತಿದ್ದರು. ವಿದ್ಯೆಯಿಲ್ಲದೇ ವಿಷಯ ಸುಖಗಳನ್ನು ಅನುಭವಿಸುವುದಾದರೆ ಅವುಗಳಿಂದ ದುಃಖವೇ ಹೆಚ್ಚಾಗುವ ಸಂಭವವಿರುತ್ತದೆ. ಹೊಟ್ಟೆ ಹಸಿವಾಯಿತೆಂದು ಕಂಡದ್ದೆಲ್ಲಾ ತಿಂದರೆ ಹಸಿವೇ ಹುಟ್ಟದ ಅಜೀರ್ಣ ಸ್ಥಿತಿ ಬರಬಹುದು. ಇಂದ್ರಿಯ ಸುಖಗಳೆಲ್ಲವೂ ಹೀಗೆಯೇ. ಅದು ಎಲ್ಲಿಂದ ಆರಂಭಿಸಿ ಎಲ್ಲಿ ಮುಗಿಸಬೇಕೆಂದು ತಿಳಿಯದಿದ್ದಾಗ ದುಃಖ, ರೋಗ ರುಜಿನಗಳಲ್ಲಿ ಪರ್ಯವಸಾನವಾಗುತ್ತದೆ. ಒಳಗಿನ ಆತ್ಮ ಸುಖಕ್ಕೆ ಅವಿರೋಧವಾಗಿ ಇಂದ್ರಿಯ ಸುಖವನ್ನು ಅನುಭವಿಸಲು ವಿದ್ಯೆಯ ಸಹಾಯ ಬೇಕು. ಅದನ್ನು ಜೀವನದ ಆರಂಭದಲ್ಲೇ ಅಭ್ಯಾಸ ಮಾಡುವುದೂ ಅತ್ಯಂತ ಮುಖ್ಯ. ಇಂತಹ ವಿದ್ಯೆಯು ನಮಗೆ ಜೀವನದಲ್ಲಿ ಸಾರ-ಅಸಾರಗಳ ವಿವೇಕವನ್ನು ಕೊಡುತ್ತದೆ. ಅಂತಹ ವಿವೇಕದಿಂದಲೇ ವಾರ್ಧಕ್ಯದಲ್ಲಿ, ಕ್ಷಣಿಕವಾದ ಇಂದ್ರಿಯ ಸುಖಗಳ ಹಿಂದೆ ಓಡದೇ, ಸಾರಭೂತವಾದ, ಆತ್ಯಂತಿಕವಾದ ಒಳಸುಖದೆಡೆಗೆ ಮನಸ್ಸನ್ನು ಹರಿಸಲು ಸಾಧ್ಯವಾಗುತ್ತದೆ. ಇಂತಹ ಸಾರ್ಥಕವಾದ ಜೀವನವನ್ನು ಸರ್ವಾಂಗ ಸುಂದರವಾಗಿ ನಡೆಸಿದ ನಂತರ ಯೋಗದ ಸಹಾಯದಿಂದ ರಘುವಂಶದ ದೊರೆಗಳು ಶರೀರವನ್ನು ತ್ಯಾಗಮಾಡುತ್ತಿದ್ದರು. ಮಾಗಿದ ಹಣ್ಣೊಂದು ತಾನಾಗಿ ತೊಟ್ಟನ್ನು ಕಳಚಿ ಬೀಳುವಂತೆ.
ಈಗಿನ ನಮ್ಮ ತಥಾಕಥಿತ ವಿದ್ಯಾಭ್ಯಾಸವೆಲ್ಲವೂ ಧನ ಸಂಪಾದನೆಗಷ್ಟೇ ಸೀಮಿತ. ಸಂಪಾದಿಸಿದ ಹಣದಲ್ಲಿ ಇಂದ್ರಿಯ ಸುಖಗಳ ಹಿಂದೆ ಕೊನೆ ಮೊದಲಿಲ್ಲದ ಓಟ. ಜೀವನದ ನೆಮ್ಮದಿಯ ವಿಷಯ ಇಲ್ಲವಾಗಿದೆ. ಭಾರತೀಯ ವಿದ್ಯೆಗಳ ಅಭ್ಯಾಸವನ್ನು ಬಾಲಕನೊಬ್ಬ ಮಾಡಲು ತೊಡಗಿದರೆ ದೊಡ್ದವರೇ –ಈಗ ಅದೆಲ್ಲಾ ಏಕಪ್ಪಾ, ಅದೆಲ್ಲ ಕಣ್ಣು ಮಂಜಾದಾಗ, ಕೈಕಾಲುಗಳು ಶಕ್ತಿಹೀನವಾದಾಗ, ಕಡೆಗಾಲದಲ್ಲಿ ಮಾಡಬೇಕಾದವು ಎನ್ನುವ ಪರಿಸ್ಥಿತಿ ಇದೆ. ಭಾರತೀಯ ವಿದ್ಯೆಗಳ ಅರಿವಿನ ನ್ಯೂನತೆಯೇ ಇದಕ್ಕೆ ಕಾರಣ. ರಘುವಂಶದ ರಾಜರ ಉದಾತ್ತ, ನೆಮ್ಮದಿಯ ಜೀವನವನ್ನು ನಮ್ಮ ಜೀವನಾದರ್ಶವಾಗಿ ಇಟ್ಟುಕೊಳ್ಳುವ ಸದ್ಬುದ್ಧಿಯನ್ನು ಭಗವಂತ ನಮಗೆಲ್ಲ ಕರುಣಿಸಲಿ.
ಸೂಚನೆ:21/10/2022 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.