Thursday, November 17, 2022

ಜೀವನವೆಲ್ಲವೂ ನಿನ್ನ ಆರಾಧನೆಯಾಗಲಿ. (Jivanavellavu Ninna Aaraadhaneyaagali)

ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)

ಮಾನಸ ಪೂಜಾ:

"ನನ್ನ ಆತ್ಮವೇ ನೀನು,ಬುದ್ಧಿಯೇ ಪಾರ್ವತಿ ,ಪ್ರಾಣಗಳೇ ಸಹಚರರು, ಶರೀರವೇ ಮನೆ, ನಾನು ವಿಷಯ ಸುಖಗಳನ್ನು ಅನುಭವಿಸಲು ಮಾಡಿಕೊಂಡ ವ್ಯವಸ್ಥೆಯೆಲ್ಲವೂ ನಿನ್ನ ಪೂಜೆ, ನನ್ನ ನಿದ್ರೆಯೇ ಸಮಾಧಿಸ್ಥಿತಿ, ನನ್ನ ಕಾಲುಗಳ ಓಡಾಟವೆಲ್ಲವೂ ನಿನ್ನ ಪ್ರದಕ್ಷಿಣೆ, ನನ್ನ ಮಾತುಗಳೆಲ್ಲವೂ ನಿನ್ನ ಸ್ತೋತ್ರ, ಹೀಗೆ ಯಾವ ಯಾವ ಕೆಲಸಗಳನ್ನು ನಾನು ಮಾಡುತ್ತೇನೋ, ಹೇ ಪರಮೇಶ್ವರನೇ  ಅದೆಲ್ಲವೂ ನಿನ್ನ ಆರಾಧನೆಯೇ ಆಗಿದೆ." ಇದು ಪೂಜ್ಯ ಶಂಕರ ಭಗವತ್ಪಾದರ ಶಿವಮಾನಸ ಪೂಜಾ ಸ್ತೋತ್ರದ ಒಂದು ಪ್ರಸಿದ್ಧವಾದ ಶ್ಲೋಕದ ಭಾವಾರ್ಥ. 

ನಮ್ಮೆಲ್ಲರ ಹಿಂಬದಿ ಬೆಳಗುತ್ತಿರುವ ಚೈತನ್ಯವೇ ಶಿವ. ಆ ಚೈತನ್ಯ, ಶರೀರವನ್ನು ಬಿಟ್ಟರೆ, ಅದೇ ಮೃತ್ಯು. ನಮಗೆಲ್ಲ ಅದರ ಅರಿವಾದರೆ ಜೀವನ ಧನ್ಯ. ಅರಿವಿಲ್ಲವಾದರೂ ವಸ್ತುಸ್ಥಿತಿ ಅದೇ ಆಗಿದೆ. ಶಂಕರಾರ್ಧ ಶರೀರಿಣಿಯಾಗಿ ಪರಾ ಪ್ರಕೃತಿ ಸ್ವರೂಪಿಣಿಯಾಗಿ ನಮ್ಮೆಲ್ಲರ ಬುದ್ಧಿಯ ಸ್ಥಾನದಲ್ಲಿ ಇದ್ದು ನಮ್ಮನ್ನು ಈ ಲೋಕಜೀವನದಲ್ಲಿ ನಡೆಸುವವಳೇ ಪಾರ್ವತಿ. ಪರ್ವ ಪರ್ವವಾಗಿ ಷಟ್ಚಕ್ರಗಳಲ್ಲಿ ವ್ಯಾಪಿಸಿರುವವಳು ಮಹಾಮಾತೆ ಪಾರ್ವತಿ. ಪೂರ್ವ ಸುಕೃತದಿಂದಲೋ ಅಥವಾ ಇದೇ ಜನ್ಮದ ತೀವ್ರವಾದ ಸಾಧನೆಯಿಂದಲೋ ಜೀವನದ ಹಿಂಬದಿಯ ಬೆಳಕಿನೆಡೆಗೆ ಸಾಗಬಯಸಿದಾಗ ನಮ್ಮನ್ನು ಈ ಪ್ರಕೃತಿಚಕ್ರದಿಂದ ದಾಟಿಸುವವಳೂ ಅವಳೇ. ನಮ್ಮನ್ನು ಪ್ರವೃತ್ತಿ-ನಿವೃತ್ತಿ , ಇಹ-ಪರ ಜೀವನದೆಡೆಗೆ ಮೇಲಕ್ಕೆ ಕೆಳಕ್ಕೆ ಓಡಾಡಿಸುವ ಸ್ನೇಹಿತರೇ ನಮ್ಮೊಳಗೇ ಇರುವ ಪ್ರಾಣಶಕ್ತಿ. ಈ ಎಲ್ಲಾ ಚಟುವಟಿಕೆಗಳಿಗೆ ನೆಲೆಮನೆಯಾಗಿ ಇರುವುದೇ ನಮ್ಮ ಶರೀರ. ಇಲ್ಲಿ ಭಗವಂತನ ಆಶಯದಂತೆ ಒಳ ಜೀವನಕ್ಕೆ ಅವಿರೋಧವಾಗಿ ಹೊರಜೀವನದ ಸೌಖ್ಯವನ್ನೂ ಅವನ ಮಧುರ ಸ್ಮರಣೆಯೊಂದಿಗೆ ಅನುಭವಿಸಲು ಮಾಡಿಕೊಂಡ ವ್ಯವಸ್ಥೆಯೆಲ್ಲವೂ ಅವನ ಪೂಜೆ ಎನ್ನುತ್ತಾರೆ ಆಚಾರ್ಯರು. ಬೆಳಗಿನಿಂದ ಸಂಜೆಯವರೆಗೆ ಈ ಬಗೆಯ ಶುದ್ಧವಾದ ಜೀವನವನ್ನು ನಡೆಸಿದಾಗ ರಾತ್ರಿ ಸುಖನಿದ್ರೆ ಸಹಜವಾಗಿದೆ. ಅವನ ಮಡಿಲಲ್ಲಿ ವಿಶ್ರಮಿಸುತ್ತೇನೆ ಎಂಬ ಭಾವ ಆವರಿಸಿದಾಗ ಅದೇ ಸಮಾಧಿ-ಸಮಾಧಾನದ ಸ್ಥಿತಿಯಲ್ಲದೆ ಮತ್ತೇನು? ಇಂತಹ ಸಮಾಧಿ ಸ್ಥಿತಿಯಿಂದ ಮೇಲೆದ್ದು, ಅದರ ಸವಿನೆನಪಿನಲ್ಲಿ ಲೋಕಜೀವನದಲ್ಲೂ ನಡೆದಾಡುವುದು ಸಹಜವಾಗಿಯೇ ಆ ಮಹಾ ಚೈತನ್ಯದ ಪ್ರದಕ್ಷಿಣೆಯೇ ಆಗಿದೆ. ಆತ್ಮಮೂಲವಾಗಿದ್ದು ಅದೇ ಕಂಪಿನಿಂದ, ತಂಪಿನಿಂದ ಹೊರಬರುವ ಮಾತುಗಳೆಲ್ಲವೂ ಅವನ ಸ್ತೋತ್ರರೂಪವೇ ಆಗಿದೆ. ಜೀವನದ ಸರ್ವಕರ್ಮಗಳೂ ಅವನ ಆರಾಧನೆಯೇ.  ಹೀಗೆ ತಮ್ಮ ಜೀವನವನ್ನು ಸಮೃದ್ಧವಾಗಿ ನಡೆಸಿ, ಲೋಕಕ್ಕೆಲ್ಲಾ ಇಂತಹ ಜೀವನಾದರ್ಶವನ್ನು ಸಾರುತ್ತಿದ್ದಾರೆ ಜ್ಞಾನಿಗಳಲ್ಲಿ ಅಗ್ರಗಣ್ಯರಾದ ಶಂಕರಭಗವತ್ಪಾದರು.

ಈ ದೇಶದ ಜೀವನಾದರ್ಶ

ಇದೊಂದು ಈ ದೇಶದ ಮಹರ್ಷಿಗಳ ಜೀವನದ ಮಾದರಿ. ಇಂತಹ ಹಿರಿದಾದ ಜೀವನ ಧ್ಯೇಯವನ್ನು ನಮ್ಮ ಕಣ್ಮುಂದೆ ಇಟ್ಟಾಗ ದಿನ ದಿನವೂ ಅದಕ್ಕೆ ಹತ್ತಿರವಾಗುವಂತೆ ನಮ್ಮ ಪ್ರಯತ್ನವಿರಲಿ ಎಂಬುದು ಅವರ ಆಶಯ. ಭವದ ಬೆಂಗಾಡು ನಮಗೆ ನಮ್ಮೊಳಗೇ ಬೆಳಗುವ ಪರಶಿವನನ್ನು, ಪಾರ್ವತಿಯನ್ನು ಮರೆಯಿಸುತ್ತದೆ. ಅವರ ಭಿಕ್ಷೆಯಿಂದಲೇ ಈ ಭೌತಿಕ ಜೀವನವನ್ನು ಅನುಭವಿಸುತ್ತಿದ್ದರೂ ಅವರೆಡೆಗೆ ಎಂದೂ ನಮ್ಮ ಮುಖ ತಿರುಗದು. ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು-"ನಾವೆಲ್ಲರೂ ಜೀವನದಲ್ಲಿ ಮುನ್ನಡೆಯಲು ಸಹಕಾರಿಯಾಗುವಂತೆ ಒಬ್ಬನು ಟಾರ್ಚ್ ಹಿಡಿದು ಬೆಳಕಿನ ವ್ಯವಸ್ಥೆ ಮಾಡಿದ್ದಾನಪ್ಪಾ. ನಾವು ಆ ಬೆಳಕಿನಲ್ಲೇ ಮುಂದುವರೆಯುತ್ತಿದ್ದರೂ ಟಾರ್ಚ್ ಹಿಡಿದವನನ್ನು ನೋಡುತ್ತಿಲ್ಲ" ಎಂದು. ಭಗವಂತನನ್ನು ಮರೆಯುವುದಕ್ಕೆ ನಾವು ಜನ್ಮಾಂತರಗಳಲ್ಲಿ ಸಾಧನೆ ಮಾಡುತ್ತಾ ಬಂದಿದ್ದೇವೆ ಎಂದು ಅವರು ಮಾರ್ಮಿಕವಾಗಿ ಹೇಳುತ್ತಿದ್ದರು. ಶತಶತಮಾನಗಳಲ್ಲಿ ನಾವು ನಿರಂತರ ಇಂದ್ರಿಯಜೀವನವನ್ನಷ್ಟೇ ನಡೆಸುತ್ತಾ ಬಂದು, ಋಷಿಗಳು ಕಂಡರುಹಿದ ಪರಮಾನಂದದ ಒಳಜೀವನವನ್ನು ಮರೆತಿದ್ದೇವೆ.  ಅವರು ಹಾಕಿಕೊಟ್ಟ ಜೀವನ ಕ್ರಮವನ್ನು ಅಷ್ಟಿಷ್ಟು, ಅಲ್ಲಲ್ಲಿ ಹೊರಗಿನಿಂದ ಆಚರಿಸುತ್ತಿರಬಹುದು. ಆದರೆ  ಋಷಿಗಳ ಆಶಯವನ್ನು ಮರೆತು ಮಾಡುವ ನಮ್ಮ ಆಚರಣೆಗಳು ನಿರ್ವೀರ್ಯವಾದ, ಶುಷ್ಕವಾದ ಆಚರಣೆಗಳಾಗಿವೆ. ಭಯದಿಂದಲೋ, ಪರಂಪರೆಯನ್ನು ಉಳಿಸಬೇಕು ಎಂಬ ಕಾರಣದಿಂದಲೋ ಆಚರಿಸುತ್ತಿರುವುದೇ ಹೆಚ್ಚು. ನಮ್ಮೆಲ್ಲ ಕರ್ಮಗಳೂ ಭಗವಂತನಿಗೆ ಪ್ರಿಯವಾಗಿರಬೇಕು, ಅವನ ಅನುಗ್ರಹಪಾತ್ರತೆ ಅವಕ್ಕೆಲ್ಲಾ ಇದ್ದು ನಮ್ಮನ್ನು ಅವನೆಡೆಗೆ ಒಯ್ಯಬೇಕು ಎಂಬ ಮನೋಧರ್ಮದಿಂದ ಇವನ್ನೆಲ್ಲಾ ಮಾಡುತ್ತಿದ್ದೇವೆಯೇ ಎಂಬ ಪ್ರಶ್ನೆಗೆ ನಾವೇ ಉತ್ತರ ಕಂಡುಕೊಳ್ಳಬೇಕು. ನಮ್ಮ ಜೀವನ ಕ್ರಮವನ್ನು ಈ ದೇಶದ ಜ್ಞಾನಿಗಳ ಚಿಂತನೆಯ ಮೂಸೆಯಲ್ಲಿ ತರಬಲ್ಲೆವಾದರೆ ಐಹಿಕ-ಪಾರಮಾರ್ಥಿಕ ಸಮೃದ್ಧವಾದ ಜೀವನ ನಿಶ್ಚಿತ. ಅಂತಹ ಜೀವನ ನಿರಂತರ ಭಗವದಾರಾಧನೆಯೇ ಆಗುತ್ತದೆ. ಶಂಕರರ ಈ ಸ್ತೋತ್ರರತ್ನವು ಜೀವಲೋಕದ ಪರಮಾದರ್ಶವಾಗಿದೆ. ನಾವೆಲ್ಲರೂ ಅತ್ತ ನಮ್ಮ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುವ ಪ್ರಯತ್ನ ಮಾಡೋಣ.

ಸೂಚನೆ: 17/11/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.