Thursday, November 24, 2022

ಕಳ್ಳತನವೂ ಒಂದು ಕಲೆಯಾಗಬಹುದೇ?(Kallatanavu Ondu Kaleyagabahude?)

ಶ್ರೀಮತಿ ಮೈಥಿಲಿ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)

 

 

'ಕಲೆ' - ಸಾಮಾನ್ಯ ಅರ್ಥ 

ಯಾವುದೇ ಕೆಲಸವನ್ನೂ ಅಚ್ಚುಕಟ್ಟಾಗಿ-ಸಮರ್ಪಕವಾಗಿ ಮಾಡಿದರೆ, ಅದೊಂದು ಕಲೆಯಾಗುವುದೆಂಬುದು ಸಾಮಾನ್ಯವಾದ ಅಭಿಪ್ರಾಯ. ಹಾಗೆಂದರೆ ಕಳ್ಳತನವು  ಕಲೆಯಾಗುವುದು ಎಂದರೇನರ್ಥ? ಎಂದಿಗೂ ಯಾರಿಂದಲೂ ಪತ್ತೆಹಚ್ಚಲಾಗದಂತೆ ಅತ್ಯಮೂಲ್ಯವಸ್ತುವನ್ನು ಕದ್ದರೆ ಆ ಕಳ್ಳನನ್ನು ಕಲಾವಂತನೆನ್ನಬೇಕಾಗುವುದಲ್ಲವೇ? ಇದು ಕಳ್ಳರಿಗೆ, ಕಳ್ಳತನಕ್ಕೆ ಪ್ರೋತ್ಸಾಹವನ್ನು ನೀಡಿ ಸಮಾಜದ ವ್ಯವಸ್ಥೆಯನ್ನು ಹಾಳುಮಾಡುವ ಕಾರ್ಯವಾಗುವುದು! ಅಂದಮೇಲೆ ಕಳ್ಳತನವನ್ನು  'ಕಲೆ'ಯೆಂದು ಶ್ಲಾಘಿಸುವುದು ಯೋಗ್ಯವಲ್ಲ ಎಂಬುದು ಸಿದ್ಧ. ಆದರೆ ಜ್ಞಾನಿಗಳು ಕಳ್ಳತನವನ್ನೂ  ಕಲೆಯಾಗಿ ಭಾವಿಸಿರುವ ಸನ್ನಿವೇಶವುಂಟು ಎಂದರೆ ಅದೊಂದು ಒಗಟೇ ಸರಿ.    

 

ಲೋಕವ್ಯವಹಾರವನ್ನು ಗಮನಿಸಿದರೂ ಸಹ ಕಳ್ಳನನ್ನೂ, ಆತನು ಕದ್ದ  ಮಾಲನ್ನೂ ಹುಡುಕಹೊರಡುವ ಪೋಲೀಸನಿಗೆ  ಕಳ್ಳನ ಹೆಜ್ಜೆಗಳ ಅರಿವು ಅತ್ಯಾವಶ್ಯಕ. ಕಳ್ಳರು ತಮ್ಮ ಕಾರ್ಯಕ್ಕೆ ಎಂತೆಂತಹ ಉಪಾಯಗಳನ್ನು ಕೈಗೊಳ್ಳಬಹುದು, ನಂತರ  ತಪ್ಪಿಸಿಕೊಳ್ಳಲು  ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬೆಲ್ಲವುಗಳ ಅರಿವು ಆತನಿಗೆ ಇರಲೇಬೇಕು. ಅಂದರೆ ಕಳ್ಳನಂತೆಯೇ ಈತನೂ ಯೋಚಿಸಿ ಕಳ್ಳತನದ ಸೂಕ್ಷ್ಮ-ಮರ್ಮ  ವಿಧಾನಗಳನ್ನು ಗುರುತಿಸಿಕೊಂಡಿರಬೇಕಾಗುವುದು ಅನಿವಾರ್ಯ. ಅಂದರೆ ಪೋಲೀಸನೂ ಸಹ ಕಳ್ಳತನದ 'ಕಲೆ'ಯನ್ನು(art) ಕಲಿಯಲೇಬೇಕಾಗುತ್ತದೆ. ಅತ್ಯಮೂಲ್ಯವಾದ ಪದಾರ್ಥವನ್ನು ಯಾರಿಗೂ ತಿಳಿಯದಂತೆ ಕದಿಯುವವ ಹಾಗೂ ಆತನನ್ನು ಹಿಡಿಯುವವ ಇಬ್ಬರೂ ಕಳ್ಳತನದ ಕಲೆಯನ್ನು ಬಲ್ಲವರು ಎನ್ನಬೇಕಾಗುವುದು.   


ಜ್ಞಾನಿಗಳ ಮತದಲ್ಲಿ 'ಕಲೆ'

'ಕಲೆ'ಯೆಂದರೆ ಅಂಶ, ಭಾಗ ಎಂದರ್ಥ. ಅಂಶವು ತನ್ನ ಅಂಶಿಯೊಡನೆ ಸಂಬಂಧವನ್ನು ಉಳಿಸಿಕೊಂಡರೆ ಮಾತ್ರ ಅದಕ್ಕೆ ಉಳಿವು, "ಅಂಶ" ಎಂಬ ಹೆಸರು. ಅಂಶವಾದ ಕೈಯನ್ನು ಹಿಡಿದರೆ ಅಂಶಿಯಾದ ದೇಹವನ್ನೇ ತಲುಪಿದಂತೆ.  ದೇಹದ ಭಾಗವಾದ(ಅಂಶವಾದ) ಕೈ ಏನಾದರೂ ತನ್ನ ಅಂಶಿಯಾದ ದೇಹದ ಸಂಬಂಧವನ್ನು ಕಳೆದುಕೊಂಡುಬಿಟ್ಟರೆ ಆ ಕೈ ನಮ್ಮನ್ನು ದೇಹದೆಡೆ ಒಯ್ಯುವುದಿಲ್ಲವಷ್ಟೇ. ಜ್ಞಾನಿಸಮ್ಮತವಾದ ಕಲೆಗಳೆಲ್ಲವೂ ಭಗವಂತನಿಂದಲೇ ಅರಳಿ ಬಂದಿವೆಯೆಂಬುದು  ಅವರ ದಿವ್ಯದೃಷ್ಟಿ ಗೋಚರವಾದ ಸತ್ಯ. ಆದ್ದರಿಂದ ಅವುಗಳು ಆ ಮಹಾಪುರುಷನ ಅಂಶಗಳೇ ಎಂಬುದು ಅವರ ಸಿದ್ಧಾಂತ. ಆದ ಕಾರಣದಿಂದ  ನಮ್ಮನ್ನು ಭಗವಂತನೆಡೆಗೆ(ಅಂಶಿಯೆಡೆಗೆ) ಒಯ್ಯುವ ವಿಧಾನಗಳೆಲ್ಲವನ್ನೂ 'ಕಲೆಗಳು' ಎಂದೇ ಹೆಸರಿಸಿದ್ದಾರೆ.  ಅವರು ಹೊರಗೆಡಹಿದ ಕಲೆಗಳೆಲ್ಲವೂ ನಮ್ಮನ್ನು ತಮ್ಮ ಅಂಶಿಯಾದ ಭಗವಂತನೆಡೆಗೇ ಒಯ್ಯಬಲ್ಲವು ಎಂಬುದು ಅವರ ಅನುಭವವೇದ್ಯ ಸತ್ಯ. ಹೀಗಲ್ಲದೆ, ಕೇವಲ  ಅಚ್ಚುಕಟ್ಟಾಗಿ, ಸಮರ್ಪಕವಾಗಿ ಮಾಡಿದ ಮಾತ್ರಕ್ಕೇ ಯಾವ ಕಾರ್ಯವೂ 'ಕಲೆ'ಯೆಂಬ ಹೆಸರಿಗೆ ಜ್ಞಾನಿಗಳ ಮತದಲ್ಲಿ ಪಾತ್ರವಾಗಲಾರದು.  



ಕಳ್ಳತನವೆಂಬ 'ಕಲೆ'

"ಭಗವಂತನ ಸಾಕ್ಷಾತ್ಕಾರವು ಮನುಷ್ಯಮಾತ್ರರ ಜನ್ಮಸಿದ್ಧ ಹಕ್ಕು" ಎಂಬ ಶ್ರೀರಂಗಮಹಾಗುರುಗಳ ವಾಣಿಯನ್ನು ಇಲ್ಲಿ ಸ್ಮರಿಸುವುದು ಉಚಿತ. ಇಂತಹ ಜನ್ಮಸಿದ್ಧವಾದ ಹಕ್ಕನ್ನು ಕೈಬಿಟ್ಟು, ಇಂದ್ರಿಯಗಳ ಸೆಳೆತಕ್ಕೆ ಸಿಕ್ಕಿ, ವಿವೇಕವನ್ನು ಕಳೆದುಕೊಂಡ ನಾವು ಭಗವಂತನನ್ನು ಮರೆತು, ಲೌಕಿಕದಲ್ಲಿ ಮಾತ್ರವೇ ಮುಳುಗಿ, ಆನಂದಘನನಾದ ಪರಮಪುರುಷನನ್ನು ತಲುಪಬೇಕೆನ್ನುವುದನ್ನೂ ಮರೆತಿರುವೆವು. ಶಂಕರಭಗವತ್ಪಾದರ ಶ್ಲೋಕವೊಂದು  ಇಲ್ಲಿ ಉಲ್ಲೇಖಾರ್ಹವಾಗಿದೆ. 

ಅಂಧಸ್ಯ ಮೇ  ಹೃತ ವಿವೇಕಮಹಾಧನಸ್ಯ 

 ಚೋರೈ: ಮಹಾಬಲಿಭಿರಿಂದ್ರಿಯ ನಾಮಧೇಯೈ: |

ಮೋಹಾಂಧಕಾರ ಕುಹರೇ ವಿನಿಪಾತಿತಸ್ಯ  

ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ ||


ಇಂದ್ರಿಯಗಳೆಂಬ ಮಹಾಬಲಿಷ್ಠರಾದ ಕಳ್ಳರು ನಮ್ಮಲ್ಲಿಯ ವಿವೇಕವೆಂಬ ಮಹಾಧನವನ್ನು ಕದ್ದುಬಿಟ್ಟಿದ್ದಾರೆ. ವಿವೇಕಹೀನನನ್ನು ಮೋಹವು ಪೂರ್ಣವಾಗಿ ಆವರಿಸಿಕೊಳ್ಳುತ್ತದೆ. ಅದೊಂದು ಹಾಳು ಬಾವಿಯೇ ಸರಿ. ಅದರೊಳಗೆ ಬಿದ್ದವನು ಮೇಲೇರುವುದಾದರೂ ಹೇಗೆ? ಆದ್ದರಿಂದ ' ಸ್ವಾಮೀ ಲಕ್ಷ್ಮೀನೃಸಿಂಹನೇ, ಕರಾವಲಂಬನ ನೀಡಿ ಕಾಯಪ್ಪ' ಎಂದು ಪ್ರಾರ್ಥಿಸಲು ಆದೇಶವನ್ನು ನೀಡುತ್ತಾರೆ ಆಚಾರ್ಯರು. 


ಲೌಕಿಕದ ವ್ಯವಹಾರದಲ್ಲಿ, ಕಳ್ಳನನ್ನು ಹಿಡಿಯಲು, ಕಳ್ಳನ ಹೆಜ್ಜೆಗಳನ್ನು ಅರಿಯಬೇಕು ಎನ್ನುವಂತೆ ಜೀವನದಲ್ಲಿಯೂ ಇಂದ್ರಿಯರೂಪರಾದ ಕಳ್ಳರ ಹೆಜ್ಜೆಗಳನ್ನರಿಯಬೇಕು. ಆ ಕಳ್ಳರಿಗೇ ಅರಿವಾಗದೆ  ಅವರು ನಮ್ಮಿಂದ ಕದ್ದ  ವಿವೇಕಧನವನ್ನು ಮತ್ತೆ ಕದ್ದು ಪಡೆದಾಗ ನಮ್ಮ ಜೀವನದ ಮೂಲ ಸ್ರೋತಸ್ಸಾದ ಭಗವಂತನನ್ನು ತಲುಪಬಹುದಾಗಿದೆ. ಆದ್ದರಿಂದ, ಅವುಗಳನ್ನು ಕಟ್ಟಿಹಾಕಿ, ವಿವೇಕಧನವನ್ನು ಮತ್ತೆ ಅವರಿಂದ ಕದಿಯುವ ಕಳ್ಳತನವೇ  ಜ್ಞಾನಿಗಳ ದೃಷ್ಟಿಯಲ್ಲಿ 'ಕಲೆ'ಯಾಗಿದೆ ಎಂಬ ಶ್ರೀರಂಗಮಹಾಗುರುಗಳ ವಿವರಣೆಯು ಇಲ್ಲಿ ಸ್ಮರಣೀಯ. ಈ  ಅರ್ಥದಲ್ಲಷ್ಟೇ 'ಕಳ್ಳತನ'ವನ್ನು ಕಲೆಗಳ ಗುಂಪಿಗೆ ಸೇರಿಸಲಾಗಿದೆಯೇ ಹೊರತು, ಲೌಕಿಕವಾದ ಧನ-ಸಂಪತ್ತುಗಳನ್ನು ದರೋಡೆ ಮಾಡಿ, ಕದಿಯುವುದನ್ನು ಕಲೆಯಾಗಿ ಸರ್ವಥಾ ಪರಿಗಣಿಸಿಲ್ಲ ಎಂಬುದನ್ನು ಮನಗಾಣಬೇಕಾಗಿದೆ.     


ವಿವೇಕಮಹಾಧನವೇ ನಮ್ಮನ್ನು ಭಗವಂತನೆಡೆಗೊಯ್ಯುವ ಮಹಾಸಾಧನವಾಗುತ್ತದೆ. ಅದನ್ನು ಇಂದ್ರಿಯರೂಪರಾದ ಕಳ್ಳರಿಂದ ಮತ್ತೆ ಕದಿಯುವ 'ಕಲಾ'ವಂತರಾಗಲು ಭಗವಂತನಲ್ಲಿ ಭಕ್ತಿಯಿಂದ ಮೊರೆಯಿಡುವುದೊಂದೇ ಸುಲಭೋಪಾಯ. ಅದಕ್ಕಾಗಿ ನೃಸಿಂಹನಲ್ಲಿ ಪ್ರಾರ್ಥಿಸೋಣ.


ಸೂಚನೆ: 24/11/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.