ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್
(ಪ್ರತಿಕ್ರಿಯಿಸಿರಿ lekhana@ayvm.in)
ಒಮ್ಮೆ ಭಕ್ತ ಶ್ರೇಷ್ಠರಾದ ಕನಕದಾಸರ ಗುರುಗಳಾದಂತಹ ವ್ಯಾಸರಾಜರು ಇತರ ಶಿಷ್ಯರಿಗೆ ಕನಕದಾಸರ ನಿಜ ಭಕ್ತಿಯ ಬಗ್ಗೆ ಅರಿವನ್ನು ಮೂಡಿಸಲು ಒಂದು ಪರೀಕ್ಷೆಯನ್ನು ಮಾಡಿದರು. ಎಲ್ಲಾ ಶಿಷ್ಯರಿಗೂ ಒಂದೊಂದು ಬಾಳೆಹಣ್ಣನ್ನು ಕೊಟ್ಟು ಯಾರೂ ಕಾಣದಂತೆ ತಿನ್ನಿ ಎಂದರು. ಎಲ್ಲರೂ ತಿಂದು ಬಂದು ವರದಿ ಮಾಡಿದರು. ಆದರೆ ಕನಕರು ತಿಂದಿರಲಿಲ್ಲ. ಗುರುಗಳು ಕಾರಣ ಕೇಳಿದಾಗ, ಅವರು, ಯಾರೂ ಕಾಣದ ಜಾಗ ನಾನೆಲ್ಲಿ ಹುಡುಕಲಿ ಗುರುಗಳೇ, ದೇವರು ಎಲ್ಲೆಲ್ಲೂ ನೋಡುತ್ತಿದ್ದಾನೆ, ಎಂದರು. ಎಲ್ಲೆಡೆಯಲ್ಲಿ, ಎಲ್ಲಾ ಚರಾಚರಗಳಲ್ಲಿ ದೇವರನ್ನು ಕಾಣುವ ಪರಮ ಜ್ಞಾನಿ ಕನಕದಾಸರು ಎಂಬುದು ಎಲ್ಲರಿಗೂ ತಿಳಿದಂತಾಯಿತು.
ಕನಕದಾಸರಂತಹ ಅನೇಕ ಭಕ್ತರು, ಭಾಗವತೋತ್ತಮರು ಎಲ್ಲೆಲ್ಲಿಯೂ ತುಂಬಿರುವ ಭಗವದ್ಭಾವವನ್ನು ಅನುಭವಿಸಿ ಕೊಂಡಾಡಿರುವುದನ್ನು, ಕೊಂಡಾಡುತ್ತಿರುವುದನ್ನು ನೋಡುತ್ತೇವೆ, ಕೇಳುತ್ತೇವೆ. ಭಗವಂತನ ಶಕ್ತಿಯು ಅವನ ವಿಭೂತಿ (ಐಶ್ವರ್ಯ)ಯು ಎಲ್ಲೆಡೆಯೂ ತುಂಬಿದ್ದರೂ, ಎಲ್ಲರೂ ಭಗವಂತನ ಮಕ್ಕಳೇ ಆಗಿದ್ದರೂ ಕೂಡ ಅವನ ಅಸ್ತಿತ್ವ ಏಕೆ ಎಲ್ಲರ ಅರಿವಿಗೂ ಬರುವುದಿಲ್ಲ? ಭಗವದ್ರಸವನ್ನು ಎಲ್ಲರೂ ಏಕೆ ಅನುಭವಿಸಲು ಸಾಧ್ಯವಾಗುತ್ತಿಲ್ಲ? ಎಂಬ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಮೂಡುವುದು ಸಹಜ.
ಇದಕ್ಕೆ ಉತ್ತರವನ್ನು ಶ್ರೀರಂಗ ಮಹಾಗುರುಗಳು ಒಂದು ಸರಳವಾದ ಉದಾಹರಣೆಯ ಮೂಲಕ ನೀಡುತ್ತಿದ್ದರು. ಒಂದು ಚಿಕ್ಕ ಮಗುವಿಗೆ ಅತ್ಯಂತ ಸುಂದರಿಯ ವರ್ಣನೆ ಯಾವ ಬೋಧವನ್ನೂ ಕೊಡೋದಿಲ್ಲ. ಅದೇ ಒಬ್ಬ ತರುಣನ ಮುಂದೆ ಸುಂದರಿಯ ವರ್ಣನೆಯನ್ನು ಮಾಡಿದಾಗ, ಅವನ ಯೌವನಧರ್ಮವು ಜಾಗೃತವಾಗಿ ಆ ವರ್ಣನೆಗಳನ್ನು ಅತ್ಯಂತ ರುಚಿಯಿಂದ ಆಸ್ವಾದಿಸುವಂತೆ ಆಗುತ್ತದೆ. ಹಾಗೆಯೇ ಭಗವತ್ ತಾರುಣ್ಯ ಎಂಬುದು ಉಂಟಾದಾಗ ಭಗವದ್ವಿಷಯಕವಾದ ರುಚಿ ಹುಟ್ಟುತ್ತದೆ; ಭಗವತ್ ಧರ್ಮಗಳೆಲ್ಲವೂ ಜಾಗೃತವಾಗಿ ಭಗವದ್ಭಾವವನ್ನು ಅನುಭವಿಸುವ ಹಾಗೆ, ಎಲ್ಲೆಲ್ಲಿಯೂ ಭಗವಂತನ ಆಸ್ತಿತ್ವವನ್ನು ಅರಿಯುವ ಹಾಗೆ ಆಗುತ್ತದೆ.
ಭಗವಂತನಿಂದ ಹೊರಟ ಪ್ರತಿ ಜೀವಿಯೂ ಪ್ರಕೃತಿಗೆ ಇಳಿದು ಮಾಯೆಯಿಂದ ಆವೃತವಾಗಿ, ಕರ್ಮ ಬಂಧನಕ್ಕೆ ಒಳಗಾಗಿರುವುದರಿಂದ ನಮ್ಮಲ್ಲಿ ಭಗವದ್ಧರ್ಮವೆಂಬುದು ಸುಪ್ತವಾಗಿರುತ್ತದೆ. ಅದು ಜಾಗೃತವಾಗಲು ಪೂರ್ವ ಜನ್ಮದ ಸಂಸ್ಕಾರದ ಜೊತೆಗೆ ಮನೋಬುದ್ಧಿಗಳಿಗೆ ಸದ್ವಿಚಾರಗಳನ್ನು ನಿರಂತರವಾಗಿ ಕೊಟ್ಟು ಭಗವದ್ವಿಷಯಕವಾದ ವಿಚಾರಗಳನ್ನೂ ಹಾಗೂ ಭಾಗವತೋತ್ತಮರ ಕಥೆಗಳನ್ನು ಭಗವದ್ರಸವನ್ನು ತಮ್ಮಲ್ಲಿ ತುಂಬಿಕೊಂಡು ಅಂತೆಯೇ ಹೇಳುವವರಿಂದ ಶ್ರವಣಮಾಡಿದಾಗ ಕೇಳುಗರಲ್ಲಿಯೂ ಆ ರಸವು ಹರಿದು, ಭಕ್ತಿಯ ಉತ್ಕಟತೆ ಹೆಚ್ಚಾಗಿ ಭಗವಂತನ ಅಸ್ತಿತ್ವವನ್ನು ಎಲ್ಲೆಡೆಯೂ ಅನುಭವಿಸಿ ಆಸ್ವಾದಿಸಬಹುದು ಎಂಬುದು ಅನುಭವಿಗಳ ನೋಟ.
ಭಕ್ತಿಗೆ ಮನಸ್ಸು, ಬುದ್ಧಿ, ಇತ್ಯಾದಿ ಎಲ್ಲವನ್ನೂ ಹಂತ ಹಂತವಾಗಿ ಭಗವಂತನಲ್ಲಿ ಲಯಗೊಳಿಸಿ ಅಂತಿಮವಾಗಿ ಆತ್ಮವನ್ನೂ ಪರಮಾತ್ಮನಲ್ಲಿ ಒಂದುಗೂಡಿಸುವ ಶಕ್ತಿ ಇರುವುದರಿಂದ ಅದನ್ನು ಯೋಗವೆಂದೇ ಮಹಾತ್ಮರು ಪರಿಗಣಿಸಿದ್ದಾರೆ.
"ಭಗವದ್ರಸವು ರಕ್ತಗತ, ಧಾತುಗತ ಅಂತೆಯೇ ಆತ್ಮಗತವೂ ಆಗಬೇಕು" ಎಂಬ ಶ್ರೀರಂಗ ಮಹಾಗುರುಗಳ ವಾಣಿಯಂತೆ ಭಗವದ್ರಸವನ್ನು ನಮ್ಮಲ್ಲಿ ಸಂಪೂರ್ಣವಾಗಿ ತುಂಬಿಕೊಂಡು ಜಗದ್ವ್ಯಾಪಿಯಾದ ಭಗವಂತನ ಅಸ್ತಿತ್ವವನ್ನು ಅರಿತು ಅನುಭವಿಸಬೇಕಾಗಿದೆ.
ಸೂಚನೆ: 24/11/2022 ರಂದು ಈ ಲೇಖನವು ವಿಜಯ ವಾಣಿ ಯಲ್ಲಿ ಪ್ರಕಟವಾಗಿದೆ.