Sunday, November 13, 2022

ವ್ಯಾಸ ವೀಕ್ಷಿತ-12 ಘಟೋತ್ಕಚನ ಜನನ - ವ್ಯಾಸರ ದರ್ಶನ (Vyaasa Vikshita 12 Ghatotkachana Janana-Vyasara Darshana)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)ಪರಮಸುಂದರವಾದ ರೂಪವನ್ನು ಧರಿಸಿ, ಭೀಮನಿಗೆ ಬಗೆಬಗೆಯಾದ ಸಂತೋಷವನ್ನುಂಟುಮಾಡಿದಳು, ಹಿಡಿಂಬೆ. ಕಾಲಕ್ರಮದಲ್ಲಿ ಜನಿಸಿದನು ಘಟೋತ್ಕಚ. ವಿರೂಪವಾದ ಕಣ್ಣುಗಳು, ದೊಡ್ಡ ಬಾಯಿ, ಚೂಪು ಕಿವಿ, ಕೆಂಪು ತುಟಿ, ತೀಕ್ಷ್ಣವಾದ ಹಲ್ಲುಗಳು, ಉದ್ದ ಮೂಗು, ಮಹಾಭುಜಗಳು, ಮಹಾಕಾಯ, ಮಹಾಮಾಯೆ - ಇತ್ಯಾದಿಗಳಿಂದಾಗಿ, ಮನುಷ್ಯಪುತ್ರನಾದರೂ ಅಮಾನುಷನಾಗಿದ್ದ ಆತ; ಅನ್ಯಪಿಶಾಚಗಳನ್ನೂ ರಾಕ್ಷಸರನ್ನೂ ಮೀರಿಸಿದವನಾಗಿದ್ದ. ಎಳಸಿನಲ್ಲಿಯೇ ಯೌವನಕ್ಕೆ ಬಂದ! ಅಸ್ತ್ರಜ್ಞಾನದಲ್ಲೂ ಅಸಾಮಾನ್ಯನಾದ. ರಾಕ್ಷಸಿಯರೇ ಹೀಗೆ. ಸದ್ಯೋಗರ್ಭ, ಸದ್ಯಃಪ್ರಸವ: ಥಟ್ಟನೆ ಗರ್ಭವನ್ನು ಧರಿಸುವರು, ಒಡನೆಯೇ ಪ್ರಸವಿಸುವರು ಕೂಡ. ಜೊತೆಗೆ ಇಷ್ಟ ಬಂದ ರೂಪವನ್ನೂ ಧರಿಸಬಲ್ಲರು!

ತಲೆಗೂದಲೇ ಇಲ್ಲದವನಾಗಿ (ವಿಕಚಃ) ಹುಟ್ಟುತ್ತಲೇ ಅಪ್ಪ-ಅಮ್ಮಂದಿರ ಕಾಲು ಹಿಡಿದ. "ಈತನ ಘಟವು (ಎಂದರೆ ತಲೆಯು) ಕೇಶರಹಿತವಾಗಿದೆ (=ಉತ್-ಕಚವಾಗಿದೆ)!" ಎಂಬುದಾಗಿ ಆತನ ತಾಯಿ ಉದ್ಗರಿಸಿದಳು. ಹೀಗಾಗಿ ಅವನ ಹೆಸರೇ "ಘಟೋತ್ಕಚ"ವಾಯಿತು! ಆತನಿಗೆ ಪಾಂಡವರಲ್ಲಿ ಭಕ್ತಿ; ಅವರಿಗೂ ಅವನು ಮೆಚ್ಚೇ.

ನಮ್ಮ ಸಂವಾಸದ (ಜೊತೆಯಿರುವಿಕೆಯ) ಸಮಯವು ಕಳೆಯಿತೆಂದು ಹೇಳಿ, ಪತಿ-ಪುತ್ರರನ್ನು ಬೀಳ್ಕೊಟ್ಟಳು ಹಿಡಿಂಬೆ. ಘಟೋತ್ಕಚನು ಪಾಂಡವರಿಗೂ ಕುಂತಿಗೂ ವಂದಿಸಿ, "ನನ್ನಿಂದೇನಾಗಬೇಕು ಹೇಳಿ" ಎಂದ. ಹಾಗೆ ಹೇಳಿದ ಭೈಮಸೇನಿಗೆ (=ಘಟೋತ್ಕಚನಿಗೆ) ಕುಂತಿಯೆಂದಳು: "ನೀನು ಕುರುಕುಲದಲ್ಲಿ ಜನಿಸಿದವನು. ಭೀಮನಿಗೇ ಸಮನಾದವನು. ಇವರೈವರಿಗೂ ಜ್ಯೇಷ್ಠಪುತ್ರ. ನಮಗೆ ಸಹಾಯಮಾಡಬೇಕು, ಮರಿ". ಅದಕ್ಕವನು, "ರಾವಣನೂ ಇಂದ್ರಜಿತ್ತೂ ಮಹಾಬಲಶಾಲಿಗಳೆಂದು ಪ್ರಥಿತರು; ನಾನವರನ್ನೂ ಮೀರಿಸಿದವನು. ನಿಮಗೇನಾದರೂ ಕೆಲಸವಿದ್ದಾಗ ನಾನೇ ನಿಮ್ಮೆದುರು ತೋರಿಕೊಳ್ಳುವೆ" - ಎಂದು ಹೇಳಿ ಉತ್ತರದಿಕ್ಕಿಗೆ ಹೊರಟನು.

ವಾಸ್ತವವಾಗಿ ಘಟೋತ್ಕಚನನ್ನು ಸೃಷ್ಟಿ ಮಾಡಿದುದು ಇಂದ್ರ. ಏತಕ್ಕಾಗಿ? ಸಾಟಿಯಿಲ್ಲದ ಪರಾಕ್ರಮದಿಂದ ಕೂಡಿದ ಕರ್ಣನು ಮುಂದೆ ಯುದ್ಧಕ್ಕೆ ಬರುವನು; ಆತನ ಶಕ್ತ್ಯಾಯುಧವನ್ನು ಎದುರಿಸಲು ಘಟೋತ್ಕಚನನ್ನು ಬಿಟ್ಟು ಮತ್ತಾರೂ ಸಮರ್ಥರಿರರು.

ಆಯಿತು, ಕಾಡಿನಿಂದ ಕಾಡಿಗೆ ಸಾಗುತ್ತಾ ಮಧ್ಯದಲ್ಲಿ ಮತ್ಸ್ಯದೇಶ, ತ್ರಿಗರ್ತದೇಶ, ಪಂಚಾಲ, ಕೀಚಕಗಳೆಂಬ ಜನಪದಗಳ ಮೂಲಕ ಹಾದುಹೋದರು, ಪಾಂಡವರು. ಮಧ್ಯದಲ್ಲಿ ಅಲ್ಲಲ್ಲಿ ರಮಣೀಯವಾದ ಕಾಡುಮೇಡುಗಳನ್ನೂ ವರ-ಸರಸ್ಸುಗಳನ್ನೂ ನೋಡುತ್ತಾ ಸಾಗಿದರು. ಜಟಾ-ವಲ್ಕಲಧಾರಿಗಳಾಗಿದ್ದರಿಂದ ತಾಪಸರಂತೆ ಕಂಡರು. ಕೆಲವೆಡೆ ಕುಂತಿಯನ್ನು ಹೊತ್ತುಕೊಂಡು ದ್ರುತಗತಿಯ ನಡೆ, ಕೆಲವೆಡೆ ಖುಷಿಬಂದಂತೆ ಮಂದಗತಿಯ ನಡೆ - ಇವುಗಳು ಸಾಗಿದವು. ಇದರ ಜೊತೆಗೇ ಅವರ ವೇದ-ವೇದಾಂಗ-ನೀತಿಶಾಸ್ತ್ರಗಳ ಅಧ್ಯಯನವೂ ಸಾಗುತ್ತಿತ್ತು. ಮಹಾತ್ಮರಾದ ವ್ಯಾಸರನ್ನು ಕಂಡರು. ಅವರಿಗೆ ಅಭಿವಾದಿಸಿದರು. ಅವರೆದುರಿಗೆ ಕೈಜೋಡಿಸಿ ನಿಂತರು.

ವ್ಯಾಸರು ಹೇಳಿದರು: "ನಿಮಗಿರುವ ಈ ಆಪತ್ತು ನನಗೆ ಮೊದಲು ತಿಳಿದಿದ್ದುದೇ. ಧಾರ್ತರಾಷ್ಟ್ರರು (ಎಂದರೆ ಧೃತರಾಷ್ಟ್ರನ ಮಕ್ಕಳು) ಅಧರ್ಮದಿಂದ ನಿಮ್ಮನ್ನು ರಾಜ್ಯದಿಂದ ಅಟ್ಟಿದ್ದಾರೆ. ಅದನ್ನರಿತೇ ನಿಮಗೆ ಪರಮಹಿತವನ್ನು ಮಾಡಲು ಬಂದಿರುವೆ. ಖೇದಿಸಬೇಡಿ. ಇದೆಲ್ಲ ನಿಮಗೆ ಸುಖವಾಗಲಿಕ್ಕಾಗಿಯೇ ಆಗಿರುವಂತಹುದು. ಆ ಧೃತರಾಷ್ಟ್ರಪುತ್ರರೂ ನೀವೂ ನನಗೆ ಸಮವೇ, ಅದರಲ್ಲಿ ಸಂಶಯವಿಲ್ಲ. ಆದರೂ ದೀನರೆಂಬ ಕಾರಣದಿಂದಲೂ ಎಳೆಯರೆಂಬ ಕಾರಣದಿಂದಲೂ ಸ್ನೇಹವನ್ನು ಮನುಷ್ಯರು ಮಾಡುವರಲ್ಲವೇ? ಆ ಕಾರಣಕ್ಕಾಗಿಯೇ ನಿಮ್ಮ ವಿಷಯದಲ್ಲಿ ನನಗೆ ಸ್ನೇಹಭಾವವು ಅಧಿಕವಾಗಿ ಉಂಟಾಗಿರುವುದು." 

ಸೂಚನೆ : 13/11/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.