Sunday, November 6, 2022

ಯಕ್ಷಪ್ರಶ್ನೆ - 11 (Yaksha Prashne - 11)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)



ಪ್ರಶ್ನೆ – ೧೦ ಸಜ್ಜನರ ಧರ್ಮವು ಯಾವುದು ?

ಉತ್ತರ -  ತಪಸ್ಸು

ಸಜ್ಜನರು ಯಾರು? ಸಜ್ಜನರ ಧರ್ಮ ಯಾವುದು? ಎಂಬುದು ಈ ಪ್ರಶ್ನೆಯ ಮೂಲ ಆಶಯ. ತಪಸ್ಸು ಸಜ್ಜನಿಕೆಯನ್ನು ಉಳಿಸುವ ಧರ್ಮವಾಗಿದೆ. ಹಾಗಾದರೆ ತಪಸ್ಸು ಹೇಗೆ ಧರ್ಮವಾಗುವುದು? ಅದು ಸಜ್ಜನರಾಗಲು ಹೇಗೆ ಸಹಕರಿಸುವುದು? ಎಂಬುದು ಇಲ್ಲಿ ತಿಳಿಯಬೇಕಾದ ವಿಷಯ.

ಸಜ್ಜನರು ಯಾರು ಎಂಬುದಕ್ಕೆ ಪದ್ಮಪುರಾಣದಲ್ಲಿ ಒಂದು ಮಾತಿದೆ. ವೇದಸಮ್ಮತವಾದ ಕರ್ಮವನ್ನು ಮಾಡುತ್ತಾ ತಮ್ಮ ತಮ್ಮ ಕುಲಾಗತವಾದ ಆಚಾರವನ್ನು ಮಾಡುತ್ತಾ, ಪಾಪಫಲವನ್ನು ನೀಡುವಂತಹ ಕಾರ್ಯಗಳಲ್ಲಿ ಆಸಕ್ತರಾಗದವರನ್ನು ಸಜ್ಜನರು ಎಂದಿದ್ದಾರೆ. ತಮ್ಮ ತಮ್ಮ ಕರ್ತವ್ಯವನ್ನು ಮಾತ್ರ ಮಾಡುತ್ತಾ, ಕೇವಲ ಭಗವಂತನ ಪ್ರೀತಿಯನ್ನು ಗಳಿಸುವ ಸಲುವ ಮಾತ್ರವೇ ಯಾರು ಕರ್ಮವನ್ನು ಮಾಡುತ್ತಾರೋ, ಅಥವಾ ನೀರಿನಲ್ಲಿರುವ ಕಮಲವು ನೀರಿನಲ್ಲಿ ಇದ್ದೂ ನೀರನ್ನು ತಾಗಿಸಿಕೊಳ್ಳದಂತೆ ಇರುವಂತೆ; ಸಂಸಾರದಲ್ಲೇ ಇದ್ದು ಸಂಸಾರದ ಜಂಜಾಟಕ್ಕೆ ಸಿಲುಕದೇ ಇರುವಂತೆ ಕರ್ಮವನ್ನು ಮಾಡುವವನೇ 'ಸಜ್ಜನ' ಎಂಬುದಾಗಿ ನಮ್ಮ ಹಿರಿಯರು ಸಜ್ಜನರ ಲಕ್ಷಣವನ್ನು ಹೇಳಿದ್ದಾರೆ. ಇದೇ ಸಜ್ಜನರ ಧರ್ಮ. ಇದನ್ನು ಉಳಿಸಿಕೊಂಡು ಹೋಗಲು ಬೇಕಾದುದು ತಪಸ್ಸು. ತಪಸ್ಸು ಎಂದರೇನು? ಎಂಬ ಬಗ್ಗೆ ಈ ಹಿಂದಿನ ಲೇಖನದಲ್ಲಿ ವಿವರಿಸಿದ್ದಾಗಿದೆ, ಆದರೂ ಪ್ರಕೃತದಲ್ಲಿ ಪ್ರಾಸಂಗಿಕವಾಗಿ  ಸಂಕ್ಷಿಪ್ತವಾಗಿ ಹೇಳಲು ಬಯಸುತ್ತೇನೆ.

ಯೋಗಶಾಸ್ತ್ರವು ತಪಸ್ಸಿನ ಲಕ್ಷಣವನ್ನು ಈ ರೀತಿಯಾಗಿ ಹೇಳುತ್ತದೆ. ಶಾಸ್ತ್ರದಲ್ಲಿ ಹೇಳಿರುವ ಕೃಚ್ಛ್ರಚಾಂದ್ರಯಣಾದಿ ಅನುಷ್ಠಾನವನ್ನೇ ತಪಸ್ಸು ಎಂದಿದ್ದಾರೆ. ತಪ ಆಲೋಚನೇ ಎಂಬಂತೆ ಪರಮ ಸತ್ಯದ ನಿರಂತರ ಚಿಂತನೆ,ಆಲೋಚನೆಯೇ ತಪಸ್ಸು. ಇದು ಅಶುದ್ಧಿಯನ್ನು ಹೋಗಲಾಡಿಸಿ ಶುದ್ಧಿಯನ್ನುಂಟುಮಾಡುತ್ತದೆ.  ಅಶುದ್ಧಿಯಿಂದ ಮಾಡಿದ ಕರ್ಮವು ಪಾಪಫಲವನ್ನು ಕೊಡುತ್ತವೆ. ಶುದ್ಧಿಯನ್ನು ಉಂಟುಮಾಡುವ ಕರ್ಮವು ಪಾಪವನ್ನು ಕಳೆದು ಪುಣ್ಯವನ್ನು ಸಂಪಾದನೆ ಮಾಡುವಂತೆ ಮಾಡುತ್ತದೆ. ಪಾಪಕ್ಷಯವಾದಂತೆ ಅವನಲ್ಲಿ ಸಾತ್ತ್ವಿಕತೆ ಹೆಚ್ಚಾಗುತ್ತದೆ. ಸಾತ್ತ್ವಿಕತೆಯ ಚರಮತೆಯನ್ನು ಸಜ್ಜನಿಕೆ ಎನ್ನಬಹುದು.

ಧರ್ಮವೆಂಬುದು ಅದರದರ ಸ್ವರೂಪ ಮತ್ತು ಆ ಸ್ವರೂಪವನ್ನು ಕಾಯುವಂತೆ ಮಾಡುವ ಸಾಧನ ಎಂದು ಎರಡು ಬಗೆ. ಅಂದರೆ ಒಂದು ಸಾಧ್ಯಧರ್ಮ, ಇನ್ನೊಂದು ಸಾಧನಧರ್ಮ. ಸಾಧನಧರ್ಮವು ಆ ಪದಾರ್ಥದ ಸ್ವರೂಪವನ್ನು ಹಾಗೆಯೇ ಉಳಿಸಲು ಮಾಡುವ ಕಾರ್ಯವಾಗಿದೆ. ತಪಸ್ಸು, ಅದರಿಂದುಂಟಾದ ಜ್ಞಾನ, ಅದರಿಂದ ಲಭಿಸಿದ ಬಲಗಳಿಂದ ಮನುಷ್ಯನು ರಜಸ್ಸು ತಮಸ್ಸುಗಳಿಂದ ನಿರ್ಮುಕ್ತನಾಗುವನು, ಪರಿಶುದ್ಧವಾದ ಜ್ಞಾನಸಂಪನ್ನನಾಗುವನು. ಇದೇ ಸಜ್ಜನರ ಸ್ವರೂಪ. ಇದೇ ಅವರ ಧರ್ಮ. ಇದು ಅವರ ಶುದ್ಧವಾದ ರೂಪ. ಇದನ್ನು ಉಳಿಸಲು ಆಚರಿಸುವ ಸಾಧನಧರ್ಮವೇ ತಪಸ್ಸು. ಜಪ, ಅನುಷ್ಠಾನ, ಪೂಜೆ ಪುರಸ್ಕಾರ, ಗುರುಜನರು, ತಂದೆ-ತಾಯಿ, ವೃದ್ಧರ ಸೇವೆ, ಪರೋಪಕಾರ ಇವೆಲ್ಲವೂ ಸಜ್ಜನರ ಶುದ್ಧಿಯನ್ನು ಅವರ ನೈಜಸ್ವರೂಪವನ್ನು ಉಳಿಸುವಂತಹ ಸಾಧನಧರ್ಮಗಳು. ಹಾಗಾಗಿ ಇವುಗಳಿಂದ ಸಜ್ಜನರು ಸಜ್ಜನರಾಗಿಯೇ ಉಳಿಯುವರು. ಇದೇ ಯಕ್ಷನು ಕೇಳಿದ ಪ್ರಶ್ನೆಯ ಆಶಯ. ಅದಕ್ಕೆ ಧರ್ಮಜನ ಉತ್ತರ ತಪಸ್ಸು. ಸತ್ ಎಂದರೆ ಪರಮಾತ್ಮ. ಅವನನ್ನು ಸದಾ ತಮ್ಮ ಪ್ರಾಣ, ಬುದ್ಧಿ, ಇಂದ್ರಿಯ, ಶರೀರ ಎಲ್ಲದರಲ್ಲೂ ಭಾವಿಸುವವರು ಸಜ್ಜನರು. ಅವರlನ್ನು ಜ್ಞಾನಿಗಳು, ಮಹರ್ಷಿಗಳು, ಮಹಾತ್ಮರು ಅಂತ ಕರೆಯುತ್ತೇವೆ. ಅವರ ಲಕ್ಷಣ ತಪಸ್ಸು ತಾನೆ. 

ಸೂಚನೆ : 06/11/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.