Sunday, November 13, 2022

ತ್ರಿಗುಣಗಳ ಸಾಮರಸ್ಯವೇ ತ್ರಿಮೂರ್ತಿರಹಸ್ಯ (Trigunagala Samarasyave Trimurtirahasya)

ಲೇಖಕರು : ಶ್ರೀ ಭಾಷ್ಯಂ ರಾಮಚನ್ದ್ರಾಚಾರ್

(ಪ್ರತಿಕ್ರಿಯಿಸಿರಿ lekhana@ayvm.in) 

 


ನಮ್ಮ ಪುರಾಣಗಳಲ್ಲಿ, ಬ್ರಹ್ಮ ವಿಷ್ಣು ಮಹೇಶ್ವರರಲ್ಲಿ ಜಗಳ ಆಗಾಗ್ಗೆ ಕಾಣಿಸಿಕೊಳ್ಳುವ ಪ್ರಸಂಗಗಳಿವೆ.  ದೇವಾಧಿದೇವರಾದ ಇವರಲ್ಲೇ ಜಗಳವಾದರೆ ನಮ್ಮ ಗತಿಯೇನು? ಈ ಜಗಳಗಳಿಗೆ ಏನಾದರೂ ವಿಶೇಷ ಅರ್ಥ ಉಂಟೇ  ಎಂಬ ಪ್ರಶ್ನೆ  ನಮ್ಮಲ್ಲಿ ಕೆಲವರನ್ನಾದರೂ ಕಾಡಬಹುದು.  


ಒಮ್ಮೆ ಕೃಷ್ಣ ಮತ್ತು ಅವನ ಸ್ನೇಹಿತರಾದ ಗೋವಳರು ಆಕಳುಗಳನ್ನು ಮೇಯಿಸಲು ಹೋದಾಗ, ಕೃಷ್ಣ  ಏನು  ಮಾಡುತ್ತಾನೆ ನೋಡೋಣ  ಎಂದು ಬ್ರಹ್ಮ,  ಗೋಪಾಲರು ಮತ್ತು ಗೋವುಗಳನ್ನೆಲ್ಲಾ  ತನ್ನ ಯೋಗಮಾಯೆಯಿಂದ  ಒಂದು ಗುಹೆಯಲ್ಲಿ ಮುಚ್ಚಿಟ್ಟ. ಕೃಷ್ಣ , ತನ್ನ ಯೋಗಮಾಯೆಯಿಂದ ಎಲ್ಲವೂ ತಾನಾಗಿ ಏನೂ ವ್ಯತ್ಯಾಸವಿಲ್ಲದ ಸ್ಥಿತಿಯನ್ನು ಕಲ್ಪಿಸಿದ. ಸಂಜೆ ಎಂದಿನಂತೆ, ಗೋಪಾಲರು- ಆಕಳುಗಳು ಮನೆಗಳಿಗೆ ಹಾಜರ್!  ಗುಹೆಯೊಳಗಿನ  ಆಕಳುಗಳು ಮತ್ತು ಗೋವಳರಿಗೆ ಕೃಷ್ಣನ ಸಾನ್ನಿಧ್ಯದಿಂದ ಎಲ್ಲಿಲ್ಲದ ಆನಂದ. ಹಾಗೆಯೇ ಹಳ್ಳಿಯ ಮನೆಗಳಲ್ಲಿ  ಕೃಷ್ಣ ಗೋವುಗಳಾಗಿ  -ಗೋಪಾಲರಾಗಿ ಇದ್ದುದರಿಂದ ಅಲ್ಲಿಯೂ ಊಹಿಸಲಸಾಧ್ಯವಾದ ಸಂತೋಷ. ಒಂದು ಸಂವತ್ಸರ  ಕಳೆದ ಮೇಲೆ ಬ್ರಹ್ಮನಿಗೆ  ಗೋವುಗಳ ಮೇಲೂ ಗೋಪಾಲಕರ ಮೇಲೂ ಕರುಣೆ ಉಕ್ಕಿ ಏನಾಗಿದೆಯೋ ಎಂದು ನೋಡಲುದ್ಯುಕ್ತನಾದ. ಆದರೆ, ಎಲ್ಲರೂ ಆನಂದವಾಗಿದ್ದಾರೆ. ಕೌತುಕವೇನೆಂದರೆ, ಆತನಿಗೆ ನಿಜವಾದ ಗೋಪಾಲರು ಯಾರು ಹಾಗೂ ನಿಜವಾದ  ಗೋವುಗಳು ಯಾವುವು  ಮತ್ತು ಮಾಯಾನಿರ್ಮಿತವಾದುವು ಯಾವುವು  ಎಂದು ಗುರುತಿಸಲಾಗಲಿಲ್ಲ. ಮಾಯೆಯನ್ನು ಕಲ್ಪಿಸಲು ಹೋಗಿ  ಮಾಯಾತೀತ ಭಗವಂತನ ಮಾಯೆಗೆ ತಾನೇ ಸಿಕ್ಕಿಬಿದ್ದ ಅರಿವು ಬಂದೊಡನೆ  ಆತನಲ್ಲಿ  ಕ್ಷಮೆ ಯಾಚಿಸಿದ. ಇದರಂತೆಯೇ ಮತ್ತೊಂದು ಪ್ರಸಂಗ- ದಕ್ಷಯಜ್ಞದಲ್ಲಿ ಈಶ್ವರನ ಸೃಷ್ಟಿಯಾದ  ವೀರಭದ್ರ, ಯಜ್ಞವನ್ನು ಧ್ವಂಸ  ಮಾಡುತ್ತಾನೆ. ಜೀವಭಯದಿಂದ ಜಿಂಕೆಯ ರೂಪವನ್ನು ತಳೆದು ಓಡಿದ ಯಜ್ಞದೇವ, ನಾರಾಯಣನನ್ನು  ಶರಣು ಹೊಂದುತ್ತಾನೆ. ಆಗ ನಾರಾಯಣನಿಗೂ ಪರಶಿವನಿಗೂ ಕಾಳಗ. ಆ ಕಾಳಗದಲ್ಲಿ ಪರಶಿವ ತನ್ನ ಪರಶುವನ್ನು ಪ್ರಯೋಗಿಸುತ್ತಾನೆ. ಅದು ನಾರಾಯಣನ ವಕ್ಷಸ್ಥಲದಲ್ಲಿ ಗುರುತು ಮಾಡುತ್ತದೆ. ಪ್ರತಿಯಾಗಿ ನಾರಾಯಣ ಪ್ರಯೋಗಿಸಿದ ಋಷೀಕ ಅಸ್ತ್ರ, ಈಶ್ವರನ ಕೊರಳಲ್ಲಿ ಗುರುತು ಮಾಡುತ್ತದೆ. ಇಬ್ಬರೂ ನಕ್ಕು ರಾಜಿ ಮಾಡಿಕೊಳ್ಳುತ್ತಾರೆ. 

 

ಬ್ರಹ್ಮ ವಿಷ್ಣು ಮಹೇಶ್ವರರಾರು? ರಜಸ್ಸು -ಸತ್ತ್ವ  - ತಮಸ್ಸುಗಳ  ಅಧಿದೇವತೆಗಳು. ಇವರುಗಳ ಕೆಲಸದಲ್ಲಿ ಯಾರದಾದರೂ ಪ್ರಭಾವ ಹೆಚ್ಚಿರಬೇಕಾದರೆ ಉಳಿದವರ ಚಟುವಟಿಕೆಯ ಪ್ರಮಾಣ ಕಿರಿಯದಾಗಿರಬೇಕು. ಕೆಲಸ ಮಾಡಬೇಕಾದರೆ ನಿದ್ರೆ  ಹಿಂದಕ್ಕಿರಬೇಕು.  ಹಾಗೆಯೇ ಒಂದೆಡೆ  ಕುಳಿತು ಸಮಾಧಾನವಾಗಿ ಯೋಚಿಸಬೇಕಾದರೆ, ಕ್ರಿಯೆ ಮತ್ತು ನಿದ್ರೆ ಹಿಂಬದಿಗೆ ಹೋಗಬೇಕು. ನಿದ್ರೆ ಚೆನ್ನಾಗಿ ಹತ್ತಬೇಕಾದರೆ ಚಟುವಟಿಕೆ ಮತ್ತು ಚಿಂತೆ ಇರಬಾರದು. ಒಂದು ಗುಣ ವಿಶೇಷವಾಗಿ ಕೆಲಸ ಮಾಡಬೇಕಾದಾಗ, ಉಳಿದ ಗುಣಗಳನ್ನು ಹಿಂದಕ್ಕೆ ಸರಿಸುವ ಪ್ರಕ್ರಿಯೆಯನ್ನೇ  ಪುರಾಣ ಕಥೆಗಳು,' ತ್ರಿಮೂರ್ತಿಗಳ ಜಗಳ' ಎಂದು ನಿರೂಪಿಸುತ್ತವೆ. 

 

ಇವುಗಳನ್ನು ಶ್ರೀರಂಗಮಹಾಗುರುಗಳು -ಹಾಲು  ಮೊಸರು-ಬೆಣ್ಣೆ-ತುಪ್ಪ -ಈ ಸುಂದರ ಉದಾಹರಣೆಗಳ ಮೂಲಕ ವಿಶದೀಕರಿಸುತ್ತಿದ್ದರು.  ಹಾಲು ಮೊಸರಾಗಬೇಕಾದರೆ, ಸ್ವಲ್ಪ ಮೊಸರು ಸೇರಿಸಬೇಕು. ಆಗ ರಾತ್ರಿಯೆಲ್ಲಾ ಹಾಲಿಗೂ ಮೊಸರಿಗೂ ಜಗಳ.  ಕೊನೆಗೆ ಹಾಲು ಸೋತು ಮೊಸರಾಗುತ್ತದೆ. ಮೊಸರು ಬೆಣ್ಣೆಯಾಗಬೇಕಾದರೆ ಕಡೆಗೋಲಿನಿಂದ ಕಡೆಯಬೇಕಾಗುತ್ತದೆ. ಮೊಸರು ಸೋತು, ಬೆಣ್ಣೆ ಬೇರೆಯಾಗುತ್ತದೆ. ಕಾಯಿಸಿದರೆ ಬೆಣ್ಣೆ, ತುಪ್ಪವಾಗುತ್ತದೆ.  ತುಪ್ಪವನ್ನು ಹಾಲಿಗೆ ಸೇರಿಸಿದರೆ ಹಾಲು ಕೆಡುತ್ತದೆ. ಮೊಸರು, ಬೆಣ್ಣೆ, ತುಪ್ಪ ಹಾಲಿನ ಬೇರೆ ರೂಪಗಳಾದರೂ, ಒಂದನ್ನೊಂದಕ್ಕೆ  ಬೆರೆಸಿದರೆ ತಮ್ಮ ರೂಪವನ್ನು ಕೆಡಿಸಿಕೊಳ್ಳುತ್ತವೆ. ಹೀಗೆಯೇ ಸತ್ತ್ವ-ರಜಸ್ಸು- ತಮಸ್ಸುಗಳೂ. ಇವುಗಳ ಜಗಳವಿಲ್ಲದ ಸ್ಥಿತಿಯೆಂದರೆ, ಅದು ಸಮಾಧಿಸ್ಥಿತಿಯಷ್ಟೇ. ಅಲ್ಲಿ ಎಲ್ಲವೂ ಸಾಮ್ಯಾವಸ್ಥೆಯಲ್ಲಿರುತ್ತದೆ. ಬ್ರಹ್ಮ -ವಿಷ್ಣು- ಮಹೇಶ್ವರರು ಒಪ್ಪಂದ ಮಾಡಿಕೊಂಡು ಅವಿನಾಭಾವವಾಗಿರುವ ಪರಂಜ್ಯೋತಿಯ ಶಾಂತಿಯ ತಾಣ.


ಸೂಚನೆ : 13/11/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.