Thursday, November 17, 2022

ಸತ್ಯಧೃತಿ ನಚಿಕೇತನ ಆದರ್ಶ(Satyadhrti Naciketana Adarsa)

ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)



ಅದೊಂದು ಯಾಗಶಾಲೆ. ವಾಜಶ್ರವಸ ಮುನಿಯು ಆ ಮಹಾ ಯಾಗದ ಯಜಮಾನನಾಗಿ ಗೋವುಗಳನ್ನು ದಾನ ಮಾಡುತ್ತಿದ್ದಾನೆ. ಅವನ ಮಗ ನಚಿಕೇತನು ತಂದೆ ದಾನಮಾಡುತ್ತಿರುವ ಗೋವುಗಳನ್ನು ಗಮನಿಸುತ್ತಾನೆ. ಮುದಿ ಗೋವುಗಳು- ಎಂದಿಗೂ ಕರುವನ್ನು ಹೆರಲಾಗದ, ಹುಲ್ಲನ್ನೂ ತಿನ್ನಲಾಗದ ಬಲಹೀನವಾದ ಗೋವುಗಳನ್ನು ಶ್ರೇಷ್ಠರಾದ ಬ್ರಾಹ್ಮಣರಿಗೆ ದಾನಮಾಡುತ್ತಿದ್ದಾನೆ. ಬಾಲಕ ನಚಿಕೇತನು ಚಿಂತಾಕ್ರಾಂತನಾಗುತ್ತಾನೆ. ಇದು ನಮ್ಮ ಕಾಲದಲ್ಲೂ ಕಾಣಬಹುದಲ್ಲವೇ? ನಾವು ತಿನ್ನುವ ತುಪ್ಪ ಒಳ್ಳೆಯ ಗುಣಮಟ್ಟದ್ದು, ಕಡಿಮೆ ಗುಣ ಮಟ್ಟದ ತುಪ್ಪವನ್ನು ಹೋಮದ ತುಪ್ಪ ಎಂದೇ ಮಾರುತ್ತಾರೆ. ದೇವರ ಪೂಜೆಗೆಂದು ಮಾರುವ ತೆಂಗಿನಕಾಯಿ ಚಿಕ್ಕದು, ಮನೆ ಅಡಿಗೆಗೆ ದೊಡ್ಡದು ಹೀಗೆಲ್ಲಾ ಮಾಡುವುದನ್ನು ನೋಡುತ್ತೇವೆ. ಹೋಮ,ಪೂಜೆ ಇತ್ಯಾದಿ ಕರ್ಮಗಳ ಹಿಂದಿನ ಮರ್ಮ ತಿಳಿಯದೇ ಕೇವಲ ಔಪಚಾರಿಕವಾಗಿ ಆಚರಿಸುತ್ತಿರುವುದೇ ಇದಕ್ಕೆಲ್ಲ ಕಾರಣ. ಹಾಗೆಯೇ ನಮ್ಮ ಕಥಾ ನಾಯಕ ನಚಿಕೇತನ ಮನೆಯಲ್ಲೂ ಆಯಿತು. ಶ್ರೇಷ್ಠವಾದ ವಸ್ತುಗಳನ್ನು ದಾನಮಾಡಿದರೆ ಮಾತ್ರವೇ ಯಜ್ಞದ ಫಲ. ನಿರುಪಯುಕ್ತವಾದುದನ್ನು ದಾನ ಮಾಡುವುದೇ ಅಧರ್ಮ. ತಂದೆಯಿಂದಾಗುತ್ತಿರುವ ಈ ಅಧರ್ಮದ ಕೆಲಸ ಅವನಿಂದ ಸಹಿಸಲಾಗಲಿಲ್ಲ. ಅಲ್ಲದೇ ಅಂತಹ ನಿರುಪಯುಕ್ತವಾದ ಗೋವುಗಳನ್ನು ದಾನ ಮಾಡುವ ಬದಲಿಗೆ ತನ್ನನ್ನೇ ದಾನ ಮಾಡಿದರೂ ಮಹಾತ್ಮರ ಸೇವೆ ಮಾಡಿಕೊಂಡಿರಬಹುದು ಎಂದೆಲ್ಲಾ ಯೋಚಿಸಿ ತಂದೆಯನ್ನು ಕುರಿತು ಕೇಳಿದ- ಅಪ್ಪಾ ನನ್ನನ್ನು ಯಾರಿಗೆ ದಾನ ಮಾಡುತ್ತೀ? ತಂದೆ ತನ್ನ ವ್ಯವಹಾರದಲ್ಲಿ ನಿರತನಾಗಿದ್ದು, ಇವನ ಮಾತನ್ನು ಲಕ್ಷಿಸಲಿಲ್ಲ. ನಚಿಕೇತನು ಎರಡನೇ ಬಾರಿ, ಮೂರನೇ ಬಾರಿ ಕೇಳಿದಾಗ ಕೋಪದಿಂದ-ನಿನ್ನನ್ನು ಮೃತ್ಯುವಿಗೆ ದಾನಮಾಡುತ್ತೇನೆ ಎಂದುಬಿಟ್ಟ. ಯಜ್ಞದೀಕ್ಷೆಯಲ್ಲಿದ್ದಾಗ ಆಡಿದ ಮಾತು. ಸುಳ್ಳಾಗುವಂತಿಲ್ಲ.  ನಚಿಕೇತನು ಸ್ವಲ್ಪವೂ ವಿಚಲಿತನಾಗಲಿಲ್ಲ. ನನ್ನಿಂದ ಮೃತ್ಯುವಿಗೆ ಆಗಬೇಕಾದದ್ದೇನೋ ಇರಬಹುದು ಎಂದು ಮೃತ್ಯುದೇವನಾದ ಯಮನೆಡೆಗೆ ನಡೆದೇ ಬಿಟ್ಟ. ಅಲ್ಲಿ ಯಮನು ತನ್ನ ಮನೆಯಲ್ಲಿರದ ಕಾರಣ ಮೂರುದಿನ ಅವನಿಗಾಗಿ ಉಪವಾಸದಿಂದ ಕಳೆದ. ಯಮದೇವನು ಬಂದು ತೇಜಸ್ವೀ ಬ್ರಾಹ್ಮಣ ಬಾಲಕನಲ್ಲಿ ಅವನನ್ನು ಕಾಯಿಸಿದ್ದಕ್ಕಾಗಿ ಕ್ಷಮೆ ಯಾಚಿಸಿ, ಮೂರು ವರಗಳನ್ನು ದಯಪಾಲಿಸುತ್ತಾನೆ. ನಚಿಕೇತನು ಮೊದಲ ವರವಾಗಿ ತಂದೆಯ ಮನಸ್ಸು ಶಾಂತವಾಗಬೇಕೆಂದೂ, ಎರಡನೆಯ ವರವಾಗಿ ಸ್ವರ್ಗಪ್ರಾಪ್ತಿಗಾಗಿ ಆಚರಿಸುವ ಯಜ್ಞರಹಸ್ಯವನ್ನು ಶ್ರದ್ಧಾವಂತನಾದ ತನಗೆ ಬೋಧಿಸಬೇಕೆಂದೂ ಕೇಳುತ್ತಾನೆ .ಯಮನು ಸುದೀರ್ಘವಾಗಿ ಬೋಧಿಸಿದ್ದನ್ನು ಸ್ವಲ್ಪವೂ ಸ್ಖಾಲಿತ್ಯವಿಲ್ಲದೆ ಅವನಿಗೆ ಪ್ರತಿಕ್ರಿಯೆಯಾಗಿ ಒಪ್ಪಿಸುತ್ತಾನೆ. ಯಮನು ಅವನ ಶ್ರದ್ಧೆಗೆ ಮೆಚ್ಚಿ ಆ ಯಜ್ಞಾಗ್ನಿಗೆ ನಾಚಿಕೇತಾಗ್ನಿ ಎಂದೇ ನಾಮಕರಣ ಮಾಡುತ್ತಾನೆ. ನಚಿಕೇತನು ಕೇಳುವ ಮೂರನೇ ವರ ಅತ್ಯಂತ ಪ್ರಸಿದ್ಧವಾದದ್ದು. ಮರಣಾನಂತರ ಜೀವಿಯ ಗತಾಗತಿಯು ಏನಾಗುತ್ತದೆ ಎಂಬುದಾಗಿ.  ನಚಿಕೇತನ ಈ ಪ್ರಶ್ನೆಯನ್ನು ಯಮನು ತಕ್ಷಣವೇ ಉತ್ತರಿಸದೇ ಇದರ ಬದಲಿಗೆ ಎಲ್ಲಾ ಬಗೆಯ ಐಹಿಕ ಸುಖಗಳ ಪ್ರಲೋಭನೆಯನ್ನು ಅವನಿಗೆ ಒಡ್ಡುತ್ತಾನೆ; ಮತ್ತು ದೇವತೆಗಳಿಗೂ ಈ ಪ್ರಶ್ನೆ, ಜಿಜ್ಞಾಸೆಗೆ ಕಾರಣವಾಗಿರುವುದರಿಂದ ಇದನ್ನು ಕೇಳದಂತೆ ಪ್ರೇರೇಪಿಸುತ್ತಾನೆ. ಆತ್ಮಜ್ಞಾನಕ್ಕೆ ಸಂಬಂಧಿಸಿದ ಅತಿ ಗಹನವಾದ ಪ್ರಶ್ನೆ ಅದಾಗಿದ್ದರಿಂದ ಇದೆಲ್ಲವೂ  ನಚಿಕೇತನ ಸತ್ಯಧೃತಿಯನ್ನು ಪರೀಕ್ಷಿಸುವ ಉಪಾಯವಾಗಿತ್ತು. ನಚಿಕೇತನು ಯಮನ ಯಾವ ಪ್ರಲೋಭನೆಗೂ ಒಳಗಾಗಲೇ ಇಲ್ಲ. ಅಲ್ಲದೇ ದೇವತೆಗಳಿಗೂ ಈ ವಿಷಯದಲ್ಲಿ ಸಂಶಯವಿದೆ ಎಂದಾದಮೇಲೆ ಇದು ಜೀವನಕ್ಕೆ ಅತ್ಯಂತ ಅಗತ್ಯವಾದ, ಗಹನವಾದ ವಿಷಯವಿರಲೇ ಬೇಕು. ಅಂತಹ ಉನ್ನತವಾದ ವಿಷಯವನ್ನು ತಿಳಿಸಲು ಧರ್ಮಪ್ರಭುವಾದ ನಿನ್ನಂತಹ ಗುರುವು ಸಿಕ್ಕಿದಾಗ ನಾನು ಈ ಪ್ರಶ್ನೆಯನ್ನಲ್ಲದೆ ಬೇರೇನನ್ನೂ ಕೇಳೆನು ಎಂದು ಅತ್ಯಂತ ಸ್ಪಷ್ಟವಾಗಿ ಹೇಳಿದನು. ಯಮನು –ನಿನ್ನಂತಹ ಶ್ರೇಷ್ಠನಾದ ಶಿಷ್ಯನು ದೊರಕಿದುದು ನನ್ನ ಭಾಗ್ಯ ಎಂದು ಸಂತೋಷದಿಂದ ಅವನಿಗೆ ಜೀವನದ ಪರಮೋನ್ನತ ಧ್ಯೇಯವಾದ ರಹಸ್ಯವಾದ ಆತ್ಮತತ್ತ್ವವನ್ನು ಸವಿಸ್ತಾರವಾಗಿ ಅನುಭವ ಸಹಿತವಾಗಿ ಬೋಧಿಸುತ್ತಾನೆ.  ಈ ಪ್ರಸಂಗವಿರುವುದು ಉಪನಿಷತ್ತುಗಳಲ್ಲಿ ಪ್ರಸಿದ್ಧವಾದ ಕಠೋಪನಿಷತ್ತಿನಲ್ಲಿ.

ನಚಿಕೇತನು ೯-೧೦ ವಯಸ್ಸಿನ ಬಾಲಕನಾದರೂ ತಂದೆ ಮಾಡುತ್ತಿದ್ದ ದುರ್ದಾನವನ್ನು ಪ್ರಶ್ನಿಸಿದ. ಮೃತ್ಯುವಿಗೆ ಸ್ವಲ್ಪವೂ ಭಯಪಡದೇ ಅವನನ್ನೇ ತನ್ನ ಗುರುವಾಗಿ ಸ್ವೀಕರಿಸುವ ನಿರ್ಧಾರ ಮಾಡಿದ. ತಂದೆ ತನ್ನಲ್ಲಿ ನಿಷ್ಠುರನಾಗಿ ವರ್ತಿಸಿದರೂ ರಾಗ-ದ್ವೇಷಗಳಿಗೆ ಒಳಗಾಗದೇ ತಂದೆಯ ಹಿತವನ್ನೇ ಬಯಸುವ ವರವನ್ನು ಕೇಳಿದ.  ಲೌಕಿಕ ಜೀವನವನ್ನು ಸುಖದಿಂದ ಕಳೆಯುವ  ಎಂತೆಂತಹ ವರಗಳನ್ನು ಕೊಡುತ್ತೇನೆ ಎಂದೆಲ್ಲಾ ಯಮನು ಪ್ರಲೋಭನೆ ಒಡ್ಡಿದರೂ ಸತ್ಯೈಕ ನಿಷ್ಠನಾದ ನಚಿಕೇತನು ಅದಕ್ಕೆಲ್ಲಾ ಮೋಹಗೊಳ್ಳಲಿಲ್ಲ. ಜೀವನದ ಪರಮ ಸತ್ಯವನ್ನೇ ತಿಳಿಸಲು ಆಗ್ರಹಿಸಿದ. ಜೀವನದ ಪರಮ ಸತ್ಯದ ಉಪದೇಶವನ್ನು ಯಮನಿಂದ ಪಡೆದು ಧನ್ಯನಾದ. "ಜೀವನದಲ್ಲಿ ಇಂದ್ರಿಯಕ್ಕೆ ಬೇಕಾದದ್ದು, ಮನಸ್ಸಿಗೆ ಬೇಕಾದದ್ದು, ಬುದ್ಧಿಗೆ ಬೇಕಾದದ್ದು ಎಲ್ಲಾ ಉಂಟು. ಹಾಗೆಯೇ 'ಜೀವ'ನಿಗೆ ಬೇಕಾದದ್ದೂ ಉಂಟು. ಹೀಗೆ ಆತ್ಮನಿಗೆ ಬೇಕಾದ್ದನ್ನೂ ಕೊಟ್ಟು ಮಾಡುವ ಜೀವನ ಪೂರ್ಣಜೀವನವಾಗುತ್ತದೆ" ಎಂಬ ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯ. ನಚಿಕೇತನು ಅಂತಹದನ್ನೇ ಯಮನಲ್ಲಿ ಕೇಳಿ ಪಡೆದನು. ಇಂತಹ ನಚಿಕೇತನು ಲೋಕಕ್ಕೆ ಸಾರ್ವಕಾಲಿಕ ಆದರ್ಶಪುರುಷನಲ್ಲವೇ? 

ಸೂಚನೆ: 17/11/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.