Sunday, October 30, 2022

ಯಕ್ಷಪ್ರಶ್ನೆ - 10 (Yaksha Prashne - 10)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ – ೯ ಬ್ರಾಹ್ಮಣರಿಗೆ ದೇವತ್ವವು ಯಾವುದು ?

ಉತ್ತರ - 

ಈ ಪ್ರಶ್ನೆಯಲ್ಲಿ ಅರ್ಥ ಮಾಡಿಕೊಳ್ಳಬೇಕಾದ ವಿಷಯ ಮೂರು. ಬ್ರಾಹ್ಮಣ ಯಾರು ? ದೇವತ್ವ ಎಂದರೇನು ? ದೇವತ್ವವನ್ನು ಸಾಧಿಸಲು ಬೇಕಾದ ಸಾಧನ ಯಾವುದು? ಬ್ರಹ್ಮ ಶಬ್ದದ ವಿಸ್ತಾರವೇ ಬ್ರಾಹ್ಮಣ. ಯಾರು ಬ್ರಹ್ಮಜ್ಞಾನವನ್ನು ಸಂಪಾದನೆ ಮಾಡಿದ್ದಾರೋ? ಅಥವಾ ಬ್ರಹ್ಮಜ್ಞಾನವನ್ನು ಸಂಪಾದನೆ ಮಾಡಲು ಪ್ರಯತ್ನಶೀಲರೋ ಅವರು ಬ್ರಾಹ್ಮಣರು. ಮತ್ತು ಈ ಸೃಷ್ಟಿಯಲ್ಲಿ ಇರುವ ನಾಲ್ಕು ವರ್ಣಗಳಲ್ಲಿ ಮೊದಲಿಗನು ಬ್ರಾಹ್ಮಣ. ಸೃಷ್ಟಿಯು ವಿಕಾಸವಾಗಬೇಕಾದರೆ ಸತ್ತ್ವ, ರಜಸ್ಸು ಮತ್ತು ತಮಸ್ಸುಗಳೆಂಬ ಮೂರು ಗುಣಗಳು ಬೇಕು. ಅವುಗಳಲ್ಲಿ ಸತ್ತ್ವಗುಣ ಪ್ರಧಾನವಾಗಿ ಇರುವ ಸೃಷ್ಟಿಯನ್ನು ಬ್ರಾಹ್ಮಣ ಎನ್ನುತ್ತಾರೆ. ಹಾಗೆಯೆ ರಜಸ್ಸು ಮತ್ತು ತಮಸ್ಸಿನ ಗುಣಗಳ ಪ್ರಾಧಾನ್ಯಕ್ಕೆ  ಅನುಗುಣವಾಗಿ ಮುಂದಿನ ವರ್ಣಗಳ ಸೃಷ್ಟಿಯಾಗುತ್ತದೆ. ಈ ವರ್ಣಗಳ ವಿಭಾಗವು ಸೃಷ್ಟಿಸಹಜವಾದವುಗಳು. ದೇವತೆಗಳು ಸಾತ್ತ್ವಿಕ ವಿಭಾಗಕ್ಕೆ ಸೇರಿದರೆ, ಮನುಷ್ಯ ರಾಜಸಿಕ ಸೃಷ್ಟಿ. ಸಾತ್ತ್ವಿಕವಾದ ಸೃಷ್ಟಿಯನ್ನು ಉತ್ತಮವೆಂದು ಪರಿಗಣಿಸಲಾಗಿದೆ. ಮಾನವನು ದೇವತ್ವವನ್ನು ಪಡೆದಾಗ ಆತನ ಜನ್ಮ ಸಾರ್ಥಕವಾಗುತ್ತದೆ. ಅದೇ ಮಾನವನಾಗಿ ಕುಕಾರ್ಯದಲ್ಲಿ ತೊಡಗಿದಾಗ ನೀಚಜನ್ಮವಾದ ರಾಕ್ಷಸತ್ವವು ಪ್ರಾಪ್ತವಾಗುವುದು. ಈ ಪ್ರಶ್ನೆಯ ಆಶಯವಿಷ್ಟೆ, ಮಾನವನು ದೇವತ್ವವನ್ನು ಪಡೆಯುವುದು ಹೇಗೆ? ಎಂಬುದು. ಮಾನವನ ಸೃಷ್ಟಿಯಲ್ಲೂ ಬ್ರಾಹ್ಮಣ-ಸೃಷ್ಟಿಯನ್ನು ಸಾತ್ತ್ವಿಕವಾದ್ದರಿಂದ ಬ್ರಾಹ್ಮಣತ್ವವನ್ನು ಪಡೆಯಲು ಪ್ರಯತ್ನಿಸಬೇಕಾಗುತ್ತದೆ. ಬ್ರಾಹ್ಮಣನಾದರೆ ದೇವತ್ವವನ್ನು ಪಡೆಯಬೇಕಾಗುತ್ತದೆ. ದೇವತ್ವವು ಬೆಳಕಿನ ಲೋಕ. ಅಲ್ಲಿ ಕತ್ತಲಿಲ್ಲ. ಅಜ್ಞಾನವಿಲ್ಲ. ಜ್ಞಾನವೇ ತುಂಬಿದೆ. ಜಾಡ್ಯವಿಲ್ಲ, ಚೈತನ್ಯವೇ ಇದೆ. ಇಂತಹ ದೇವತ್ವವನ್ನು ಪಡೆಯುವ ಸಾಧನವಾವುದು? ಎಂದರೆ ಸ್ವಾಧ್ಯಾಯ.

ಸ್ವಾಧ್ಯಾಯವೆಂದರೆ ವೇದಗಳನ್ನು ಆವೃತ್ತಿರೂಪದಲ್ಲಿ ತಿಳಿದುಕೊಳ್ಳುವುದು. ಸ್ವ ಎಂದರೆ ಆತ್ಮಾ, ಅದನ್ನು ತಿಳಿದುಕೊಳ್ಳುವುದೂ ಸ್ವಾಧ್ಯಾಯವೇ ಆಗಿದೆ. ಪವಿತ್ರಗೊಳಿಸುವ ಓಂಕಾರ ಮೊದಲಾದ ನಾಮಜಪ ಅಥವಾ ಮೋಕ್ಷಶಾಸ್ತ್ರದ ಅಧ್ಯಯನವನ್ನು 'ಸ್ವಾಧ್ಯಾಯ' ಎಂದು ಯೋಗಾಶಾಸ್ತ್ರವು ಹೇಳಿದೆ. ವೇದಗಳೆಲ್ಲವೂ ಆತ್ಮಾನುಸಂಧಾನಕ್ಕಾಗಿಯೇ ಇರುವಂತಹ ಜ್ಞಾನಭಂಡಾರ. ಈ ಪ್ರಪಂಚವು ಪರಬ್ರಹ್ಮದ ವಿಸ್ತಾರವಾದರೆ, ವೇದ ಮೊದಲಾದ ಸಾಹಿತ್ಯಗಳು ಶಬ್ದಬ್ರಹ್ಮವಾದ ಪ್ರಣವದ ವಿಸ್ತಾರವಾಗಿದೆ. ಪ್ರಣವವು ಪರಮಾತ್ಮನನ್ನು ಸೂಚಿಸುವ ಪದವಾಗಿದೆ. ಪರಬ್ರಹ್ಮವನ್ನು ತಿಳಿಯುವ ಸಾಧನವೇ ಸ್ವಾಧ್ಯಾಯ. ಆದ್ದರಿಂದ ವೇದಾಧ್ಯಯನವನ್ನು ಸ್ವಾಧ್ಯಾಯವೆಂದಿದ್ದಾರೆ. ವೇದವನ್ನು ಅರಿಯಬೇಕಾದರೆ ಗುರುವಿನ ಅನುಗ್ರಹದಿಂದ ಸಾಧ್ಯ. ಗುರುವು ತಾನು ತಿಳಿದ ಜ್ಞಾನವನ್ನು ಶಿಷ್ಯನಿಗೆ ಅರುಹುತ್ತಾನೆ. ಅದನ್ನು ತಿಳಿಯಲು ಶಿಷ್ಯನಾದವನು ಗುರುವಿನ ಬಳಿಯಲ್ಲಿ ಇದ್ದು ಗುರು ಶುಶ್ರೂಷೆ ಮಾಡಿ ಪಡೆಯಬೇಕು. ಇದರಿಂದ ಅರ್ಥಸಹಿತವಾಗಿ ವೇದಗಳ ಜ್ಞಾನವನ್ನು ಆತ ಪಡೆಯಬೇಕು. ಹೀಗೆ ಮಾಡುತ್ತಾ ಸಾಗಿದಾಗ ವೇದಗಳ ಪರಮ ಉದ್ದೇಶ್ಯವಾದ ಆತ್ಮಸಾಧನೆ ಸಿದ್ಧಿಸುವುದು. ಈ ವೇದಗಳ ಅಧ್ಯಯನವೇ ದೇವತ್ವದ ಸಾಧನ ಮತ್ತು ಆಗಲೇ ಬ್ರಾಹ್ಮಣನು ದೇವತ್ವವನ್ನು ಪಡೆದಂತೆ. ಕರ್ಮವೇ ಜನ್ಮಕ್ಕೆ ಕಾರಣ. ದೇವತ್ವದಿಂದ ಜಾರಿದ ಜೀವವು ಸತ್ಕರ್ಮವನ್ನು ಮಾಡಿಯೇ ದೇವತ್ವವನ್ನು ಪಡೆಯಬೇಕು. ದೇವನಾಗಬೇಕು. ಕುಕಾರ್ಯವನ್ನು ಮಾಡಿದರೆ ನೀಚಜನ್ಮವು ಪ್ರಾಪ್ತವಾಗುತ್ತಾ ಹೋಗುತ್ತದೆ. ಒಟ್ಟಾರೆ ಹೇಳುವುದಾದರೆ ಸತ್ಕಾರ್ಯ, ಸ್ವಾಧ್ಯಾಯದಿಂದಲೇ ಬ್ರಾಹ್ಮಣ್ಯ ಸಿದ್ಧವಾಗುವುದು. ಅಂತಹ ಬ್ರಾಹ್ಮಣನಿಂದಲೇ ದೇವತ್ವವನ್ನು ಪಡೆಯುವಂತಹದ್ದು.

ಸೂಚನೆ : 30/10/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.