Sunday, October 30, 2022

ಜೀವನದಲ್ಲಿ ಧರ್ಮರಕ್ಷಣೆಗೇ ಪ್ರಾಧಾನ್ಯವಿರಲಿ (Jivanadalli Dharmaraksanege Pradhanyavirali)

ಲೇಖಕರು: ವಾದಿರಾಜ. ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in)




ಶ್ರೀಕೃಷ್ಣ, ಅರ್ಜುನ ಮತ್ತು ಧರ್ಮರಾಯನ ನಡುವೆ ಘಟಿಸಿದ ಅದ್ಭುತ ಪ್ರಸಂಗವೊಂದನ್ನು ಮಹಾಭಾರತದ ಕರ್ಣಪರ್ವದಲ್ಲಿ ವರ್ಣಿಸಲಾಗಿದೆ.  

ಕುರುಕ್ಷೇತ್ರಯುದ್ಧದ ಸನ್ನಿವೇಶ. ಕರ್ಣ-ಧರ್ಮರಾಯನ ನಡುವೆ ಮಹಾಕಾಳಗ ನಡೆಯುತ್ತದೆ. ಕರ್ಣನ ಬಾಣಗಳಿಂದ ಧರ್ಮರಾಯನು  ಬಹಳವಾಗಿ ಬಳಲಿ ಅವಮಾನದಿಂದಲೂ, ದೇಹಯಾತನೆಯಿಂದಲೂ ನೊಂದು ಬಿಡಾರಕ್ಕೆ ಹಿಂದಿರುಗುತ್ತಾನೆ. 

 

ಈ ವಿಷಯ ತಿಳಿದು ಕೃಷ್ಣಾರ್ಜುನರು ಅಲ್ಲಿಗೆ ಬರುತ್ತಾರೆ. ಅರ್ಜುನನು ಕರ್ಣನನ್ನು ವಧಿಸಿಯೇ ಬರುವನೆಂದು ನಂಬಿದ್ದ ಧರ್ಮರಾಯನು ಆ ಕಾರ್ಯ ನೆರೆವೇರಲಿಲ್ಲವೆಂದರಿತು 'ನೀನು ಗಾಂಡೀವವನ್ನು ಏಕೆ ಇಟ್ಟುಕೊಂಡಿದ್ದೀಯೇ? ಯಾರಾದರು ಹೆಂಗಸರ ಕೈಗೆ ಕೊಡು' ಎಂದು ಅರ್ಜುನನನ್ನು ನಿಂದಿಸುತ್ತಾನೆ.

 

ಅತ್ಯಂತ ಕುಪಿತನಾದ ಅರ್ಜುನನು ''ನನ್ನ ಗಾಂಡೀವವನ್ನು ನಿಂದಿಸಿದವರ ತಲೆಯನ್ನು ತೆಗೆಯುತ್ತೇನೆ" ಎಂದು ತಾನು ಈ ಹಿಂದೆಯೇ ಮಾಡಿದ್ದ ಪ್ರತಿಜ್ಞೆಯಂತೆ ಅಣ್ಣನನ್ನು ಕೊಲ್ಲಲು ಧಾವಿಸುತ್ತಾನೆ. ಶ್ರೀಕೃಷ್ಣನು ಅವನನ್ನು  ತಡೆದಾಗ ಅರ್ಜುನನು ತನ್ನ ಪ್ರತಿಜ್ಞೆಯನ್ನು ತಿಳಿಸಿ ತಾನು ವಿವಶನೆಂದು ವಾದಿಸುತ್ತಾನೆ. "ಅಣ್ಣನು ತಂದೆಗೆ ಸಮಾನನು. ಆತನ ವಧೆ ಘೋರಪಾತಕದ ಕಾರ್ಯ" ಎಂದು ಎಚ್ಚರಿಸುತ್ತಾನೆ ಕೃಷ್ಣ. 

 

ತನ್ನ ಪ್ರತಿಜ್ಞಾಪಾಲನೆಯೇ ಮುಖ್ಯವೋ ಅಥವಾ ಅಣ್ಣನ ಉಳಿವೇ ಮು ಖ್ಯವೋ ಎಂಬ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕೃಷ್ಣನನ್ನೇ ಶರಣುಹೊಂದುತ್ತಾನೆ ಅರ್ಜುನ. 

  

ಶ್ರೀಕೃಷ್ಣನು ಸಮಸ್ಯೆಗೆ ಪರಿಹಾರವನ್ನು ತಿಳಿಸಿಕೊಡುತ್ತಾನೆ. "ಗುರು-ಹಿರಿಯರನ್ನು ಅವಮಾನಕರವಾಗಿ  ನಿಂದಿಸಿದರೆ ಅವರನ್ನು ವಧಿಸಿದಂತೆಯೇ ಸರಿ. ಆದ್ದರಿಂದ ಈಗ ಧರ್ಮರಾಯನನ್ನು  ಚೆನ್ನಾಗಿ ನಿಂದಿಸು" ಎನ್ನುತ್ತಾನೆ. ಅರ್ಜುನನು ಕೃಷ್ಣನ ಆದೇಶದಂತೆ ಯುಧಿಷ್ಠಿರನನ್ನು  ಚೆನ್ನಾಗಿ ಹೀಯಾಳಿಸುತ್ತಾನೆ. ಇದರಿಂದಾಗಿ ಧರ್ಮರಾಯನು ಅತ್ಯಂತ ದು:ಖಿತನಾಗುತ್ತಾನೆ. 

 

ಆದರೆ "ಪೂಜ್ಯನಾದ  ಅಣ್ಣನನ್ನು ಹೀಯಾಳಿಸಿದ ಮೇಲೆ ನಾನು ಬದುಕಿರಬಾರದು!" ಎನ್ನುತ್ತಾ ಆತ್ಮಹತ್ಯೆಮಾಡಿಕೊಳ್ಳಲು ಯತ್ನಿಸುತ್ತಾನೆ ಅರ್ಜುನ. ಆಗ ಶ್ರೀಕೃಷ್ಣನು "ಆತ್ಮಹತ್ಯೆ ಘೋರಪಾಪ! ಅದನ್ನು ತಪ್ಪಿಸುವ ಉಪಾಯವನ್ನು ಹೇಳುವೆನು ಕೇಳು" ಎನ್ನುತ್ತಾ  "ಆತ್ಮಶ್ಲಾಘನೆಯು ಆತ್ಮಹತ್ಯೆಗೆ ಸಮಾನ" ಎಂಬುದನ್ನು ನೆನಪಿಸುತ್ತಾನೆ. ಅರ್ಜುನನೂ ಅದರಂತೆಯೇ ತನ್ನ ಆತ್ಮಪ್ರಶಂಸೆಯನ್ನು ಬಹಳವಾಗಿ ಮಾಡಿಕೊಳ್ಳುತ್ತಾನೆ. ಅಲ್ಲಿಗೆ ಸಮಸ್ಯೆಯು ಪರಿಹಾರವಾಯಿತು. 

 

ತನ್ನ ಪ್ರತಿಜ್ಞಾಪಾಲನೆ ಮಾಡುವ ಭರದಲ್ಲಿ, ಅರ್ಜುನನು ಧರ್ಮರಕ್ಷಣೆಗಾಗಿ ಯುದ್ಧವನ್ನು ಮಾಡುತ್ತಿದ್ದ ಧರ್ಮರಾಯನನ್ನೇ ವಧಿಸಿಬಿಡುತ್ತಿದ್ದ!  ಧರ್ಮರಕ್ಷಣೆಯ ಮಹಾಧ್ಯೇಯವನ್ನು ಮರೆತು, ಆ ಸಮಯದಲ್ಲಿ  ಕಿರಿಯ ಧರ್ಮವಾದ  ಪ್ರತಿಜ್ಞಾಪಾಲನೆಯೇ ಪ್ರಧಾನವೆನ್ನುವಂತೆ ವರ್ತಿಸಲೆಸಗಿದ. ಸದಾ ಧರ್ಮಿಷ್ಠರಾದ ಪಾಂಡವರನ್ನು ರಕ್ಷಿಸುತ್ತಿದ್ದ ಭಗವಂತ, ಈ ಪ್ರಸಂಗದಲ್ಲೂ ಅರ್ಜುನನನ್ನು ಸರಿಯಾದ ದಾರಿಯಲ್ಲಿ ಯೋಜಿಸಿದ. ಧರ್ಮರಕ್ಷಣೆಯ ಜೊತೆಗೆ ಅರ್ಜುನನನ್ನು ಘೋರಪಾಪದಿಂದ ದೂರಮಾಡಿ ಅನುಗ್ರಹಿಸಿದ. ಪ್ರತಿಜ್ಞೆಯನ್ನು ಪಾಲಿಸುವುದೂ ಧರ್ಮವೇ ಆದ್ದರಿಂದ ಅದಕ್ಕೂ ಚ್ಯುತಿಬಾರದಂತೆ ಸನ್ಮಾರ್ಗವನ್ನು ಸೂಚಿಸಿದ. 

 

'ಕಣ್ಣಲ್ಲಿ ಒಂದು ತೊಟ್ಟು ರಕ್ತವಿರುವವರೆಗೂ ಧರ್ಮಕ್ಕಾಗಿ ಹೋರಾಡಬೇಕು' ಎನ್ನುವ ಶ್ರೀರಂಗಮಹಾಗುರುಗಳ ನಿಲುವು ಇಲ್ಲಿ ಸ್ಮರಣೀಯ.  ಮಹಾಧ್ಯೇಯಕ್ಕೆ ಪೋಷಕವಾಗಿಯೇ ನಮ್ಮ ಉಳಿದೆಲ್ಲಾ ಕಾರ್ಯಗಳೂ ಇರಬೇಕು; ದೊಡ್ಡ ಧರ್ಮದ ಸಾಧನೆಗಾಗಿ ಸಣ್ಣಧರ್ಮಗಳನ್ನು ತ್ಯಜಿಸಬೇಕಾಗಿ ಬಂದರೂ ಚಿಂತೆಯಿಲ್ಲ ಎಂಬ ವಿವೇಕವು ಜೀವನದಲ್ಲಿ ಅತ್ಯಗತ್ಯ ಎಂಬ ಜ್ಞಾನಿಗಳ ಆದೇಶವನ್ನು  ನೆನೆಪಿಡಬೇಕಾಗಿದೆ. ಧರ್ಮಮಯ ಜೀವನಕ್ಕಾಗಿ ಶ್ರಮಿಸಿದರೆ ಭಗವಂತನೆಂದಿಗೂ ನಮ್ಮ ಜೊತೆಗಾರನಾಗಿದ್ದು ರಕ್ಷಿಸುವನು ಎಂದು ತಿಳಿಸುವ ರೋಚಕ  ಪ್ರಸಂಗವಿದು.


ಸೂಚನೆ: 29/10/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.