Sunday, October 23, 2022

ಅಷ್ಟಾಕ್ಷರೀ​ - 21 ಅವಜಾನಂತಿ ಮಾಂ ಮೂಢಾಃ (Astakshara Darshana 21 Avajinanti Mam Mudhah)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಜೀವನದಲ್ಲಿ ನಮಗೆ ಅರ್ಥವಾಗಬೇಕಾದ ವಿಷಯಗಳು ಹಲವಿವೆ. ಅವುಗಳಲ್ಲಿ ಹಲವು ಅರ್ಥವಾಗುತ್ತವೆ. ಕೆಲವಂತೂ ಅರ್ಥವಾಗುವುದೇ ಇಲ್ಲ. ಯಾವುದು ಅರ್ಥವಾಗುತ್ತದೆ, ಯಾವುದು ಅರ್ಥವಾಗುವುದಿಲ್ಲ? ಮತ್ತು ಏಕೆ? - ಎಂಬ ಪ್ರಶ್ನೆಗಳಂತಿರಲಿ; ಯಾವುದು ಅರ್ಥವಾಗದೋ ಅದರ ಬಗ್ಗೆ ಜನರ ಪ್ರತಿಕ್ರಿಯೆಗಳು ಹೇಗಿರುತ್ತವೆಂಬುದನ್ನು ಗಮನಿಸುವುದು ಒಂದು ಸೋಜಿಗವೇ ಸರಿ. ಅರ್ಥವಾಗದ ವಿಷಯದ ಬಗ್ಗೆ ಅಪಾರಗೌರವವನ್ನೇ ಹೊಂದಿರುವ ಮಂದಿ ಅನೇಕರಿರುತ್ತಾರೆ. ಉದಾಹರಣೆಗೆ, ಸಂಸ್ಕೃತ ಬರದ ಮಂದಿ, ಹೀಗಂದುಕೊಳ್ಳುವುದುಂಟು: "ಸಂಸ್ಕೃತದಲ್ಲಿ ಅದೆಷ್ಟು ಉತ್ಕೃಷ್ಟಗ್ರಂಥರಾಶಿಯಿದೆ! ಅಯ್ಯೋ ನಾನು ಸಂಸ್ಕೃತವನ್ನು ಕಲಿಯಲಿಲ್ಲವಲ್ಲಾ! ಎಂತಹ ತಪ್ಪು ಮಾಡಿದೆ! ಸಂಸ್ಕೃತದಲ್ಲಿ ಎಲ್ಲವೂ ಇದೆಯಂತೆ! ನಾನು ಮುಂದಿನ ಜನ್ಮದಲ್ಲಾದರೂ ಸಂಸ್ಕೃತವನ್ನು ಕಲಿಯುವೆ. ಸಂಸ್ಕೃತಜ್ಞರನ್ನು ಆದರಿಸಿ ಅನುಗ್ರಹ ಪಡೆದರೆ, ಬರುವ ಜನ್ಮಕ್ಕಾದರೂ ಆ ಭಾಗ್ಯ ಬಂದೀತು!"

ಇದೊಂದು ಕೋಟಿಯಾದರೆ (ಕೋಟಿಯೆಂದರೆ ತುದಿ), ಮತ್ತೊಂದು ತದ್ವಿರುದ್ಧ: "ಸಂಸ್ಕೃತದಲ್ಲೇ ಎಲ್ಲವೂ ಉಂಟೋ? ಎಲ್ಲವೂ ಅಲ್ಲೇ ಇದ್ದರೆ ಮತ್ತೇನಾದರೂ ಬೇಕೇಕೆ? ಸಂಸ್ಕೃತವೆಂಬ ಭಾಷೆಯೊಂದಿದೆಯೆಂದು ಕೂಡ ಅರಿಯದವರು ಸಾವಿರಾರು ಮಂದಿಯಿಲ್ಲವೆ? ಅವರೆಲ್ಲ ಹಾಯಾಗಿಲ್ಲವೆ? ಸಂಸ್ಕೃತದಲ್ಲಿ ಏನು ಮಹಾ ಇದ್ದೀತು? ಅದಿಲ್ಲದಿದ್ದರೂ ಜೀವನವು ನಡೆಯುವುದಾದರೆ, ಅದರಿಂದೇನು?" - ಹೀಗಿರುತ್ತದೆ, ಅವರ ವಾದವೈಖರಿ.

ಸಂಸ್ಕೃತವನ್ನು ತಿಳಿಯುವುದರಿಂದ ಅಥವಾ ತಿಳಿಯದಿರುವುದರಿಂದ ಆಗುವ ಲಾಭ-ನಷ್ಟಗಳನ್ನು ಕುರಿತು ಚಿಂತನ ಮಾಡುವುದು ಪ್ರಕೃತದ ಉದ್ದೇಶವಾಗಿಲ್ಲ. ಒಂದು ವಿಷಯವನ್ನು ಅರಿಯದವರು ಅದರ ಬಗ್ಗೆ ಅತಿಗೌರವವನ್ನೋ, ಅತಿತಿರಸ್ಕಾರವನ್ನೋ ಇಟ್ಟುಕೊಂಡಿಬಿಡುವುದು ಅಪರೂಪವೇನಲ್ಲ - ಎಂಬುದನ್ನು ಜ್ಞಾಪಿಸುವುದಷ್ಟೆ ಇಲ್ಲಿ ಉದ್ದಿಷ್ಟವಾದದ್ದು. ಅಜ್ಞಾನಜನ್ಯವಾದ ಅತ್ಯಾದರಕ್ಕಾಗಲಿ, ಅಜ್ಞಾನಜನ್ಯವಾದ ಅವಜ್ಞಾನ(ತಿರಸ್ಕಾರ)ಕ್ಕಾಗಲಿ ಬಹಳ ಹೆಚ್ಚಿನ ಬೆಲೆಯೇನಿಲ್ಲ - ಎಂಬುದೂ ಮನದಟ್ಟಾಗಬೇಕಾದ ವಿಷಯವೇ.

ವಾಸ್ತವವಾಗಿ, ಸಂಸ್ಕೃತವೂ ಒಂದು ಭಾಷೆ; ಅದನ್ನು ಯಾರು ಬೇಕಾದರೂ ಕಲಿಯಬಹುದು; ಈಗಂತೂ ಸಾವಿರಾರು ಮಂದಿ ಪಾಶ್ಚಾತ್ತ್ಯರೇ ಕಲಿತಿದ್ದಾರೆ. ಹೀಗೆ ಇದು ಎಲ್ಲರಿಗೂ ಎಟುಕುವಂತಹುದೇ. ಯಾವುದೇ ಭಾಷೆಯನ್ನು ಕಲಿಯಲೂ ಶ್ರಮವೆಂಬುದು ಬೇಕಷ್ಟೆ; ಸಂಸ್ಕೃತಕ್ಕೆ ಒಂದಿಷ್ಟು ಅಧಿಕಶ್ರಮ ಬೇಕಾದೀತು, ಅಷ್ಟೆ. ಆದರೂ ಅದೆಷ್ಟು ಮಂದಿ ಕಲಿಯಲು ಕಿಂಚಿತ್ತಾದ ಯತ್ನವನ್ನೂ ಮಾಡದೆ, ಬರೀ ಹೊಗಳುವುದನ್ನೂ ತೆಗಳುವುದನ್ನೂ ನೋಡುವೆವಲ್ಲವೆ? ಇರಲಿ. ಭಗವಂತನನ್ನು ಅರಿಯುವುದು ಸುಲಭವೆಂದು ಯಾರೂ ಹೇಳಲಾರರಷ್ಟೆ. ಪ್ರಯತ್ನಪಟ್ಟರೂ ಸುಲಭವಾಗಿ ದೊರೆತುಬಿಡುವನೇ ಭಗವಂತ? "ಬಹೂನಾಂ ಜನ್ಮನಾಮ್ ಅಂತೇ", "ಅನೇಕ-ಜನ್ಮ-ಸಂಸಿದ್ಧಃ" - ಎಂಬುದಾಗಿ ಗೀತಾಚಾರ್ಯನೇ ಸ್ಪಷ್ಟವಾಗಿ ಕಷ್ಟವೆಂದು ಹೇಳಿರುವನಲ್ಲವೇ? ಹಾಗಿದ್ದರೂ, ಗೊತ್ತಿಲ್ಲದ ಅಥವಾ ಗೊತ್ತಾಗದ ವಿಷಯದ ಬಗ್ಗೆ ಜನರು ಸುಮ್ಮನಿರ(ಲಾರ)ರು!: ಆಳಿಗೊಂದು ಮಾತು! ಗೊತ್ತಿಲ್ಲದ್ದನ್ನು ಕುರಿತು ಮಾತನಾಡದಿದ್ದರೆ ಯಾರಿಗೂ ನಷ್ಟವಿಲ್ಲ; ಬದಲಾಗಿ, ಸುಮ್ಮನಿರಲಾರದೆ, ಕೆಟ್ಟಬಾಯಿ ಹಾಕುವ ಮಂದಮತಿಗಳ ಮಂದೆ ಚಿಕ್ಕದ್ದೇನಲ್ಲ!

ಭಗವಂತನ ಹಿರಿತನದ ಸುಳಿವೊಂದಿಷ್ಟು ಸಿಕ್ಕಿ ಆತನನ್ನು ಆದರಿಸುವವರುಂಟು, ಸರಿಯೇ. ಆದರೆ ಆ ಕುರಿತು ಇನಿತೂ ಅರಿವೇ ಇಲ್ಲದೆ, ಅಗೌರವತೋರಿಸುವ ಮಂದಿಗೇನೋ ಕಡಿಮೆಯಿಲ್ಲ. "ಮಾನುಷೀ-ತನು"(ಮನುಷ್ಯ-ದೇಹ)ವನ್ನು ಧರಿಸಿ, ಸರ್ವಗೋಚರನಾಗಬೇಕೆಂದೇ ಬಂದಾಗಲೂ, ಅಥವಾ ಬಂದಾಗಲೇ, ಆತನನ್ನು ಅಪಾರವಾಗಿ ಅಪಮಾನಿಸುವವರುಂಟು! ಇದನ್ನೇ ಗೀತೆಯಲ್ಲಿ ಶ್ರೀಕೃಷ್ಣನು ಹೇಳುವುದು "ಅವಜಾನಂತಿ ಮಾಂ ಮೂಢಾಃ": "ಮೂಢರು ನನ್ನನ್ನು ತಿರಸ್ಕರಿಸುವರು." ಅವಜ್ಞೆಯೆಂದರೆ ಅನಾದರ. ಆತನ ಮೂಲಸ್ವರೂಪವಾದರೂ ಎಂತಹುದು? ಅದು 'ಭೂತ-ಮಹೇಶ್ವರ' ಅರ್ಥಾತ್ ಸರ್ವಜೀವಿಗಳಿಗೂ ಪ್ರಭುವಾದದ್ದು.

ಭೂತ-ಮಹೇಶ್ವರ-ಸ್ಥಿತಿಯು ಅವ್ಯಕ್ತವಾದದ್ದು; ಆತನ ಪರಭಾವವದು. ಆ ಅವ್ಯಕ್ತವಿಲ್ಲಿ ವ್ಯಕ್ತವಾಗಿ ಬಂದಿದೆ: ನಾರಾಯಣನು ನರರೂಪಿಯಾಗಿ ಬಂದಿದ್ದಾನೆ. ಪರಭಾವವನ್ನು ಹೊತ್ತೇ ಬಂದಿದ್ದರೂ, ಅದನ್ನು ಗ್ರಹಿಸಲಾಗದವರು ನರಭಾವವನ್ನಷ್ಟೇ ಕಾಣುವರು. ಸಾಧಾರಣರು ಹೇಗೋ ಹಾಗೆಯೇ ಈತನೂ - ಎಂದುಕೊಳ್ಳುವರು. ಈ ಬಗ್ಗೆ, "ಕಣ್ಣಿನಲ್ಲಿ ವಿಕಾರವೇರ್ಪಟ್ಟಾಗ, ವಸ್ತುವಿನ ಸ್ವರೂಪವನ್ನು ಗ್ರಹಿಸಿಕೊಳ್ಳಲು ಆಗುವುದಿಲ್ಲ" - ಎಂಬ ಶ್ರೀರಂಗಮಹಾಗುರುಗಳ ವಚನವು ಕಣ್ತೆರೆಸುವಂತಹುದು. ದೈವೀಪ್ರಕೃತಿಯುಳ್ಳವರ ದೃಷ್ಟಿ ನಿರ್ವಿಕಾರವಾದದ್ದು.ಆದರೆ ರಾಕ್ಷಸೀಪ್ರಕೃತಿಯು ತಾಮಸವಾದುದು; ಆಸುರೀಪ್ರಕೃತಿಯು ರಾಜಸವಾದುದು; ಅವನ್ನುಳ್ಳವರು ಅಬುದ್ಧಿಗಳು: ವಿವೇಕವೆಂಬ ನೇತ್ರದಲ್ಲಿ ವಿಕಾರವುಳ್ಳವರು, ಮೋಹಕ್ಕೊಳಪಟ್ಟವರು.  

ವ್ಯಕ್ತವನ್ನು ಹಿಡಿದು ಅವ್ಯಕ್ತದತ್ತ ಸಾಗಲರಿಯದ ಇಂತಹ ಬೆಪ್ಪರು ತೆಪ್ಪಗಿರುವ ಬದಲು ಅವಹೇಳನದಲ್ಲಿ ತೊಡಗಿದಲ್ಲಿ ಮೂಢರೆನಿಸಿಕೊಳ್ಳರೇ?


ಸೂಚನೆ: 23/10/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.