Sunday, October 30, 2022

ವ್ಯಾಸ ವೀಕ್ಷಿತ - 10 ಹಿಡಿಂಬ-ಸಂಹಾರ (Vyaasa Vikshita 10 Hidimba-Samhara)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಕುಂತಿಯನ್ನು ಕುರಿತು ಹಿಡಿಂಬೆಯು ಹೀಗೆಂದಳು: " ಈ ಕಾರ್ಮೋಡದಂತಿರುವ ಕಾಡು ಹಿಡಿಂಬನ ಹಾಗೂ ನನ್ನ ವಾಸಸ್ಥಾನ. ನಾನಾತನ ತಂಗಿ. ನಿಮ್ಮೆಲ್ಲರನ್ನೂ ಕೊಲ್ಲುವ ಉದ್ದೇಶದಿಂದ ನನ್ನನ್ನಾತನಿಲ್ಲಿಗೆ ಕಳುಹಿರುವನು. ಆದರೆ ನಾನಿಲ್ಲಿ ಮಹಾಬಲಶಾಲಿಯಾದ ನಿಮ್ಮ ಪುತ್ರನನ್ನು ಕಂಡೆ; ಕಂಡೊಡನೆ ಆತನನ್ನೇ ನನ್ನ ಪತಿಯೆಂದು ವರಿಸಿರುವೆ. ಈ ಮಧ್ಯೆ, ನಾನು ವಿಳಂಬ ಮಾಡುತ್ತಿದ್ದೇನೆಂದು ಬಗೆದು, ಇದೋ ನನ್ನಣ್ಣನೇ ಬಂದಿರುವನು - ನಮ್ಮೆಲ್ಲರನ್ನೂ ಕೊನೆಗೊಳಿಸಲೆಂದು! ಅವನನ್ನು ನಿಮ್ಮ ಪುತ್ರನು – ಹಾಗೂ ನನ್ನ ಕಾಂತನು - ಅಪ್ಪಚ್ಚಿಮಾಡಿ ಎಳೆದುಕೊಂಡುಹೋಗಿರುವುದನ್ನು ನೋಡಿ! ಪರಸ್ಪರ-ಗರ್ಜನ-ಕರ್ಷಣಗಳಲ್ಲಿ ತೊಡಗಿರುವ ಈ ನರ-ರಾಕ್ಷಸರ ಯುದ್ಧವನ್ನು ನೋಡಿ!" ಎಂದಳು.

ಅವಳ ಮಾತನ್ನು ಕೇಳುತ್ತಿದ್ದಂತೆಯೇ ಸೆಟೆದೆದ್ದು ನಿಂತರು ಯುಧಿಷ್ಠಿರ-ಅರ್ಜುನರು, ನಕುಲ-ಸಹದೇವರು. ಬಲಶಾಲಿ ಸಿಂಹಗಳಂತೆ ಜಯಾರ್ಥಿಗಳಾಗಿ ಹೋರುತ್ತಿರುವ ಭೀಮ-ಹಿಡಿಂಬರನ್ನೆಲ್ಲರೂ ಕಂಡರು. ಆಗೆದ್ದ ಧೂಳು ಕಾಳ್ಗಿಚ್ಚಿನ ಹೊಗೆಯ ಹಾಗಿತ್ತು! ಭೂಮಿಯ ಧೂಳು ಅವರಿಬ್ಬರನ್ನೂ ಆವರಿಸಿತ್ತು. ಹಿಮಾಚ್ಛಾದಿತಪರ್ವತಗಳಂತೆ  ಅವರೀಗ ಕಂಡರು.

ಆಗ ಅರ್ಜುನನು ಭೀಮನಿಗೆಂದನು: " ಈ ಭಯಂಕರರಾಕ್ಷಸನು ನಿನ್ನನ್ನು ಕೆಣಕಿರುವುದು ನಮಗೀವರೆಗೆ ಗೊತ್ತೇ ಆಗಲಿಲ್ಲ. ಈ ರಾಕ್ಷಸನನ್ನು ನಾನು ಬೀಳಿಸುವೆ. ನಕುಲ-ಸಹದೇವರು ಅಮ್ಮನನ್ನು ಕಾಪಾಡಿಕೊಳ್ಳುವರು."  ಆಗ ಭೀಮನೆಂದನು: "ಅರ್ಜುನಾ, ತಟಸ್ಥನಾಗಿ ಸುಮ್ಮನೆ ನೋಡುತ್ತಿರು. ನನ್ನ ತೋಳ್ಗಳ ಸೆರೆಯಲ್ಲಿ ಸಿಕ್ಕ ಈತನೇನಿನ್ನುಳಿಯುವನೇ?"

ಅದಕ್ಕೆ ಅರ್ಜುನನು, "ಈ ರಾಕ್ಷಸನನ್ನು ಹೆಚ್ಚು ಕಾಲ ಉಳಿಸಿ ಏನು ಬಂದೀತು? ನಾವು ಮುಂದೆ ಸಾಗಬೇಕಾದಿದೆಯಲ್ಲವೇ? ಹೆಚ್ಚು ಕಾಲ ಇಲ್ಲುಳಿಯುವಂತಿಲ್ಲ. ಇದೋ ಪೂರ್ವದಿಕ್ಕು ಕೆಂಪಡರುತ್ತಿದೆ, ಸಂಧ್ಯಾಕಾಲ ಸಮೀಪಿಸುತ್ತಿದೆ. "ರೌದ್ರೇ ಮುಹೂರ್ತೇ ರಕ್ಷಾಂಸಿ ಪ್ರಬಲಾನಿ ಭವಂತ್ಯುತ!"- ರೌದ್ರಮುಹೂರ್ತದಲ್ಲಿ ರಾಕ್ಷಸರ ಬಲ ಹೆಚ್ಚುತ್ತದೆ, ಭೀಮ! ಮುಗಿಸೀ ಭೀಕರ-ರಾಕ್ಷಸನನ್ನು. ಸ್ವಮಾಯೆಯನ್ನು ಆತನು ಚಲಾಯಿಸುವುದರೊಳಗೆ ನಿನ್ನ ತೋಳ್ಬಲವನ್ನು ತೋರ್ಪಡಿಸು!"

ಪ್ರಳಯಕಾಲದ ವಾಯುವಿನ ಬಲವನ್ನು ಆವಾಹನೆ ಮಾಡಿಕೊಂಡು, ರೋಷದಿಂದ ಜ್ವಲಿಸುತ್ತಾ, ಭೀಮನು ಆ ರಕ್ಕಸನ ಮೈಯನ್ನು ಮೇಲೆತ್ತಿ ಬಿರುಸಾಗಿ ನೂರು ಬಾರಿ ತಿರುಗಿಸಿದನು! ಮತ್ತು ಹೀಗೆಂದನು: "ವ್ಯರ್ಥವಾದ ಮಾಂಸದಿಂದ ವ್ಯರ್ಥವಾಗಿ ಬೆಳೆದಿರುವೆ, ಓ ಹಿಡಿಂಬ! ನಿನ್ನ ಮತಿಯೂ ವ್ಯರ್ಥ, ಇನ್ನು ನಿನ್ನ ಸಾವೂ ವ್ಯರ್ಥವೇ (ಅರ್ಥಾತ್, ನಿನಗೆ ಕೀರ್ತಿ-ಸ್ವರ್ಗಗಳೂ ದೊರೆಯವು). ನೀನಿನ್ನು ಮುಂದೆ ನರರನ್ನು ಭಕ್ಷಿಸಲಾರೆ, ರಾಕ್ಷಸಾ! ಈ ಕಾಡಿನ್ನು ನಿಷ್ಕಂಟಕವಾಯಿತು (ಮುಳ್ಳಿಲ್ಲದಂತಾಯಿತು)".

ಆಗ ಅರ್ಜುನನು, "ಈತನ ಸಂಹಾರವು ಕಷ್ಟವಾದೀತೋ ಹೇಳು, ಭೀಮಾ. ಸಹಾಯಮಾಡುತ್ತೇನೆ. ಸುಸ್ತಾಗಿದ್ದರೆ ಹೇಳು, ನಾನೇ ಆತನನ್ನು ಸಾಯಿಸಿಬಿಡುವೆ!" ಎಂದನು.

ಈ ಮಾತನ್ನು ಕೇಳಿ ಕೆರಳಿಹೋದ, ಭೀಮ. ಹಿಡಿಂಬನನ್ನು ನೆಲದ ಮೇಲೆ ಜಜ್ಜಿ, ಪಶುವನ್ನು ಸಾಯಿಸುವಂತೆ ಸಾಯಿಸಿದ. ಸಾವನ್ನಪ್ಪುತ್ತಿದ್ದ ಹಿಡಿಂಬ ಕಿರಿಚಿಕೊಂಡ. ಅರಚುತ್ತಿದ್ದ ಆತನನ್ನು ತನ್ನ ತೋಳ್ಗಳಿಂದ ಅಪ್ಪಳಿಸಿ, ಆತನ ಸೊಂಟವನ್ನೇ ಮುರಿದುಹಾಕಿದ,ಭೀಮ!

ಪಾಂಡವರು ತುಷ್ಟರಾದರು. ಅರ್ಜುನ ಹೇಳಿದ: "ಇಲ್ಲಿಂದ ಊರೇನೂ ದೂರವಿದ್ದಂತಿಲ್ಲ. ಬೇಗ ಹೊರಟುಬಿಡೋಣ. ಸುಯೋಧನನಿಗೆ ಸುಳಿವು ಸಿಗಬಾರದಷ್ಟೆ!"

ಹಿಡಿಂಬೆಯನ್ನೂ ಸೇರಿಸಿಕೊಂಡು ಎಲ್ಲರೂ ಮುಂದೆ ಸಾಗಿದರು.

ಸೂಚನೆ : 30/10/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.