ಪ್ರಶ್ನೆ- ೮. ಯಾವುದರಿಂದ 'ಬುದ್ಧಿಮಾನ್ ' ಎನಿಸಿಕೊಳ್ಳುತ್ತಾನೆ ?
ಉತ್ತರ - ವೃದ್ಧರ ಸೇವೆಯಿಂದ.
ಇಲ್ಲಿ ಯಕ್ಷ ಕೇಳುವ ಪ್ರಶ್ನೆ ಯಾವುದೆಂದರೆ ಬುದ್ಧಿಮಂತ ಎಂದು ಎನಿಸಿಕೊಳ್ಳುವುದು ಹೇಗೆ ? ಎಂದು. ಅದಕ್ಕೆ ಉತ್ತರ ವೃದ್ಧರ ಸೇವೆಯಿಂದ; ಎಂಬುದಾಗಿ. ವೃದ್ಧರ ಸೇವೆಯಿಂದ ಬುದ್ಧಿಯು ಹೇಗೆ ಬರುವುದು? ವೃದ್ಧರ ಸೇವೆಗೂ ಬುದ್ಧಿಗೂ ಏನು ಸಂಬಂಧ? ಸೇವೆಯಿಂದ ಬುದ್ಧಿ ಬರಲು ಹೇಗೆ ಸಾಧ್ಯ? ಎಂಬುದು ಪ್ರಶ್ನೆಯ ಆಶಯ.
ಬುದ್ಧಿ ಎಂದರೇನು? ಅದರ ಸ್ಥಾನ ಯಾವುದು? ಅದರ ಸ್ವರೂಪ ಎನು? ಎಂಬುದರ ಬಗ್ಗೆ ಶಾಸ್ತ್ರಗಳಲ್ಲಿ ಬಹಳ ಚರ್ಚೆಯಾಗಿದೆ. ಪದದ ಬಳಕೆಯು ಯಾವ ಸಂದರ್ಭದಲ್ಲಿ ಆಗಿದೆ ಎಂಬುದರ ಮೇಲೆ ಅದರ ಅರ್ಥದ ವ್ಯಾಪ್ತಿಯು ನಿರ್ಣಯವಾಗುತ್ತದೆ. ಅಮರಕೋಷದಲ್ಲಿ ಬುದ್ಧಿಗೆ ಮನೀಷಾ, ಧಿಷಣಾ, ಧೀ, ಪ್ರಜ್ಞಾ, ಶೇಮುಷೀ, ಮತಿ, ಪ್ರೇಕ್ಷಾ, ಉಪಲಬ್ಧಿ, ಚಿತ್, ಸಂವಿತ್ ಎಂಬುದಾಗಿ ಪರ್ಯಾಯಪದಗಳನ್ನು ಕೊಟ್ಟಿದೆ. ಶಾಸ್ತ್ರಗಳಲ್ಲಿ ಮನಸ್ಸು, ಜ್ಞಾನ, ಬೋಧ ಮುಂತಾದ ಅರ್ಥಗಳಲ್ಲಿ ಬಳಕೆಯಾಗಿರುವುದು ಕಂಡುಬರುತ್ತದೆ. ಪದಗಳು ಅನೇಕ ಇದ್ದರೂ ಅವುಗಳು ಒಂದೇ ಸಂದರ್ಭವನ್ನು ತಿಳಿಸಲು ಬಂದ ಪದಗಳಲ್ಲ ಎಂಬುದನ್ನು ತಿಳಿಯಬೇಕು. ಇಲ್ಲಿ ಬುದ್ಧಿ ಎಂಬ ಪದವು ಯಾವ ಆಶಯದಲ್ಲಿ ಬಳಕೆಯಾಗಿದೆ ? ಎಂಬುದನ್ನು ತಿಳಿಯುವ ಪ್ರಯತ್ನವಿದೆ.
ಬುದ್ಧಿ ಎಂದರೆ ಸಾಮಾನ್ಯಜ್ಞಾನ. ಇದು ಕಲಿಕೆಯಿಂದ ಬರುವಂತಹದ್ದಲ್ಲ. ಕನ್ನಡದಲ್ಲಿ "ಓದು ಒಕ್ಕಾಲು ಬುದ್ಧಿ ಮುಕ್ಕಾಲು" ಎಂಬ ಗಾದೆ ಇದೆ. "ಅಭ್ಯಾಸಾನುಸಾರಿಣೀ ವಿದ್ಯಾ ಬುದ್ಧಿಃ ಕರ್ಮಾನುಸಾರಿಣೀ" ಎಂಬುದಾಗಿ ಸಂಸ್ಕೃತದಲ್ಲಿ ಒಂದು ಮಾತಿದೆ. ಆದ್ದರಿಂದ ವಿಶೇಷ ಪ್ರಯತ್ನದಿಂದ ಸಂಪಾದನೆ ಮಾಡುವುದನ್ನು ವಿದ್ಯೆ ಅಥವಾ ಜ್ಞಾನ ಎನ್ನುವುದಾದರೆ, ನಾವು ಮಾಡುವಂತಹ ಕರ್ಮದಿಂದ ಬರುವ ಪಕ್ವತೆಯನ್ನು 'ಬುದ್ಧಿ' ಎನ್ನಬಹುದು. ಹಾಗಾಗಿ ಜ್ಞಾನಕ್ಕಿಂತಲೂ ಬುದ್ಧಿಗೆ ಮಹತ್ತ್ವವನ್ನು ಕೊಟ್ಟಿರುವುದು ಕಂಡುಬರುತ್ತದೆ. ನೋಡುತ್ತಾ ನೋಡುತ್ತಾ ಕಲಿಯಬೇಕು. ಮಾಡುತ್ತಾ ಮಾಡುತ್ತಾ ತಿಳಿಯಬೇಕು. ಸ್ವತಃ ಅನುಷ್ಠಾನ ಮಾಡುವುದರಿಂದ ಬರುವಂತಹದ್ದು ಬುದ್ಧಿ.
ಇಂತಹ ಬುದ್ಧಿಯು ವೃದ್ದರ ಸೇವೆಯಿಂದ ಬರುತ್ತದೆ. ಯಾರು ಜ್ಞಾನದಿಂದ ಮತ್ತು ವಯಸ್ಸಿನಿಂದಲೂ ವೃದ್ಧರಾಗಿರುವರೋ ಅಂತಹವರ ಸೇವೆಯಿಂದ ಬುದ್ಧಿಯು ಬರುತ್ತದೆ. ವೃದ್ಧರು ತಮ್ಮ ಜೀವಿತಾವಧಿಯಲ್ಲಿ ಜ್ಞಾನವನ್ನು ಸಂಪಾದನೆ ಮಾಡಿದ್ದಲ್ಲದೆ, ಅವರ ಸಂಪೂರ್ಣ ಆಯುಷ್ಯವು ಈ ಜ್ಞಾನಾಧಾರಿತವಾದ ಕರ್ಮದಲ್ಲಿ ಪರ್ಯವಸಾನವಾಗಿರುತ್ತದೆ. ಅವರ ಸೇವೆ ಮಾಡುತ್ತಾ ಅವರ ಮಾರ್ಗದರ್ಶನವನ್ನೂ ಜೊತೆ ಜೊತೆಗೆ ಪಡೆದಂತಾಗುತ್ತದೆ. ಹೀಗೆ ತಿಳಿದು ಮಾಡಿದ ಕಾರ್ಯಕ್ಕೆ ಹೆಚ್ಚಿನ ಬಲವಿದೆ. "ಕರ್ಮವನ್ನು ಮರ್ಮವರಿತು ಆಚರಿಸಿ" ಎಂಬ ಶ್ರೀರಂಗ ಮಹಾಗುರುಗಳು ಹೇಳುವ ಮಾತು ಇಲ್ಲಿ ಸ್ಮರಣೀಯ. ಅಂದರೆ ಯಾವ ಕರ್ಮವು ಜ್ಞಾನದಿಂದ ಬಂದಿರುತ್ತದೆಯೋ ಅದು ಜ್ಞಾನರೂಪೀ ಭಗವಂತನನ್ನು ತಲುಪಲು ಸಾಧ್ಯ. ಬುದ್ಧಿಯು ಮಾತ್ರವಲ್ಲ, ನಿತ್ಯವೂ ಹಿರಿಯರಿಗೆ ನಮಸ್ಕಾರ ಮಾಡುವವರು, ನಿತ್ಯವೂ ವೃದ್ಧರ ಸೇವೆಯನ್ನು ಮಾಡುವವರು ಆಯುಷ್ಯ ವಿದ್ಯೆ ಯಶಸ್ಸು ಮತ್ತು ಬಲವನ್ನೂ ಪಡೆಯುತ್ತಾರೆ ಎಂಬ ಸುಭಾಷಿತವೂ ಇದೆ.