Sunday, October 9, 2022

ಯಕ್ಷಪ್ರಶ್ನೆ - 7 (Yaksha Prashne - 7)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)



ಪ್ರಶ್ನೆ- ೬. ಯಾವುದರಿಂದ 'ಮಹತ್' ನ್ನು ಪಡೆದುಕೊಳ್ಳುತ್ತಾನೆ ?  

ಉತ್ತರ - ತಪಸ್ಸಿನಿಂದ 


ಇಲ್ಲಿ ಯುಧಿಷ್ಠಿರನಿಗೆ ಯಕ್ಷನು ಕೇಳುವ ಪ್ರಶ್ನೆ ಇದು. 'ಮಹತ್' ಎಂಬ ಪದವಿ ಅಥವಾ ಸ್ಥಾನವನ್ನು ಹೇಗೆ ಪಡೆದುಕೊಳ್ಳುತ್ತಾನೆ? ಎಂದು ಅದಕ್ಕೆ ಉತ್ತರ- ತಪಸ್ಸಿನಿಂದ ಎಂಬುದು. 

ಹಾಗಾದರೆ ತಪಸ್ಸು ಎಂದರೇನು? ಅದರಿಂದ ಯಾವ ರೀತಿ ಮಹತ್ತನ್ನು ಪಡೆಯಲು ಸಾಧ್ಯ? ಇದಕ್ಕೂ ಮುಂಚೆ 'ಮಹತ್' ಎಂಬುದರ ಸ್ವರೂಪವೇನು ? ಅದು ಎಲ್ಲಿ ಇರುವಂತಹದ್ದು? ಇತ್ಯಾದಿ ಪ್ರಶ್ನೆಗಳು ಮೂಲ ಪ್ರಶ್ನೆಯ ಜೊತೆಜೊತೆ ಹುಟ್ಟಿಕೊಳ್ಳುತ್ತವೆ. ಸಾಂಖ್ಯ ಎಂಬುದು ಒಂದು ಶಾಸ್ತ್ರ. ಇದು ಸಮಸ್ತವಿಶ್ವವನ್ನು ತತ್ತ್ವಗಳನ್ನಾಗಿ ವಿಭಾಗಿಸುತ್ತದೆ. ಪ್ರಧಾನವಾಗಿ ಪ್ರಕೃತಿ ಮತ್ತು ಪುರುಷ ಎಂಬ ಎರಡು ತತ್ತ್ವಗಳು. ಅಲ್ಲಿ ಪ್ರಕೃತಿಯಿಂದ ಮತ್ತೆ ಇಪ್ಪತ್ತನಾಲ್ಕು ತತ್ತ್ವಗಳು ವಿಕಾಸವಾಗುತ್ತವೆ, ಅವುಗಳಲ್ಲಿ ಪ್ರಕೃತಿಯ ಮುಂದಿನ ತತ್ತ್ವವೇ 'ಮಹತ್' ಎಂಬುದಾಗಿ ಈ ಸಂಖ್ಯಾಶಾಸ್ತ್ರ ಹೇಳುತ್ತದೆ. ಭಾರತೀಯ ಎಲ್ಲಾ ತತ್ತ್ವಶಾಸ್ತ್ರಗಳ ಗುರಿ ಒಂದೇ; ಅದು ಮೋಕ್ಷ. ಆ ಮೋಕ್ಷವನ್ನು ಪಡೆಯುವ ವಿಧಾನವನ್ನು ಬಗೆಬಗೆಯಲ್ಲಿ ಕಾಣಲಾಗಿದೆ, ಅದನ್ನೇ 'ದರ್ಶನ' ಎಂದು ಕರೆಯಲಾಗುತ್ತದೆ. ಸಾಂಖ್ಯ ದರ್ಶನವು ಪ್ರಕೃತಿ ಮತ್ತು ಪುರುಷ ಎಂಬ ಎರಡರ ವಿವೇಕವನ್ನು ಪಡೆಯುವುದೇ ಮೋಕ್ಷ ಎನ್ನುತ್ತದೆ. ಈ ವಿಷಯವನ್ನು ಅರಿಯುವುದು ಹೇಗೆ? ಎಂದಾಗ ಅದಕ್ಕೆ ತಪಸ್ಸು ಬೇಕು. 


ತಪ್ಪಸ್ಸು ಎಂಬ ಶಬ್ದಕ್ಕೆ ಆಲೋಚನೆ ಮತ್ತು ತಾಪ ಎಂಬ ಎರಡು ಅರ್ಥವಿದೆ. ಈ ಎರಡರ ಅರ್ಥವೂ ಇಲ್ಲಿ ಹೊಂದುತ್ತದೆ. ಪ್ರಕೃತಿ, ಮಹತ್ತು ಮೊದಲಾಗಿ ವಿಕಾಸವಾಗುತ್ತ ಪೃಥಿವಿಯ ತನಕ ಇಪ್ಪತ್ತ ನಾಲ್ಕು ತತ್ತ್ವರೂಪದಲ್ಲಿ ವಿಕಾಸವಾಗಿರುತ್ತದೆ. ನಾವು ಭಗವಂತನೆಂಬ ಮಹಾಪುರುಷತ್ವನ್ನು ಅರಿಯಬೇಕಾದರೆ ಪೃಥಿವಿ ತತ್ತ್ವದಿಂದ ಆರಂಭಿಸಿ ಒಂದೊಂದಾಗಿ ತಿಳಿಯುತ್ತಾ ಹೋದಂತೆ ಅಲ್ಲಿ ಇಪ್ಪತ್ತ ಮೂರನೆಯ ತತ್ತ್ವವಾಗಿ ಮಹತ್ ಎಂಬ ತತ್ತ್ವ ಗೋಚರಿಸುತ್ತದೆ ಎಂಬುದು ಸಾಂಖ್ಯ ಮತ್ತು ಯೋಗಶಾಸ್ತ್ರದ ಪರಿಭಾಷೆಯೂ ಕೂಡ. ಇದನ್ನೇ ಸೋಪಾನ, ಪದ, ಪದವಿ ಎಂಬೆಲ್ಲಾ ಶಬ್ದಗಳಿಂದ ಕರೆಯುತ್ತಾರೆ. ಯಾವಾಗ ಮಹತ್ ಎಂಬ ಪದವಿಯ ಅರಿವಾಗುವುದೋ ಆಗ ಆತನನ್ನು ಮಹಾತ್ಮಾ ಎನ್ನುತ್ತಾರೆ. "ಮಹತ್  ತತ್ತ್ವದವರೆಗೆ ಮುಟ್ಟಿದವರನ್ನೇ ಮಹಾತ್ಮಾ ಎಂದು ಕರೆದಿದ್ದಾರಪ್ಪಾ" ಎಂಬ ವಿವರಣೆಯನ್ನು ಶ್ರೀರಂಗ ಮಹಾಗುರುಗಳು ಕೊಟ್ಟಿದ್ದನ್ನು ವಿಷಯದ ದಾರ್ಢ್ಯಕ್ಕಾಗಿ ನೆನಪಿಸಿಕೊಳ್ಳುತ್ತೇನೆ.   


ಇನ್ನೊಂದು ಬಹಳ ಮುಖ್ಯವಾದ ಅರ್ಥ 'ಬ್ರಹ್ಮ'. ಮಹತ್ತು ಎಂದರೆ ದೊಡ್ಡದು. ಎಲ್ಲದಕ್ಕಿಂತ ಅತಿ ದೊಡ್ಡದು ಪರಬ್ರಹ್ಮನೇ. ಅವನಿಗಿಂತ ದೊಡ್ಡದಾದ ವಸ್ತು ಈ ಪ್ರಪಂಚದಲ್ಲಿ ಇಲ್ಲ. ಇಂತಹ ಪರಬ್ರಹ್ಮವನ್ನು ಪಡೆಯಲು ತಪಸ್ಸು ಬೇಕು. ಕಾಯಿಕ, ಮಾನಸಿಕ ಮತ್ತು ವಾಚಿಕ ಎಂಬುದಾಗಿ ಮೂರೂ ಬಗೆಯ ತಪಸ್ಸುಗಳು ಇವೆ. ಈ ಮೂರನ್ನು ಶುದ್ಧಗೊಳಿಸಿಕೊಳ್ಳುವ ಪ್ರಕ್ರಿಯೆಯೇ ತಪಸ್ಸು. ಇವುಗಳಿಗೆ ಬ್ರಹ್ಮ ಅಥವಾ ಮಹತ್ತನ್ನು ದರ್ಶನ ಮಾಡುವ ಯೋಗ್ಯತೆಯನ್ನು ಪಡೆದುಕೊಳ್ಳುವಿಕೆ. ಇಂತಹ ತಪಸ್ಸಿನಿಂದ ಮಾತ್ರವೇ ಬ್ರಹ್ಮವನ್ನು ಪಡೆಯಲು ಸಾಧ್ಯ ಎಂಬುದು ಈ ಪ್ರಶ್ನೋತ್ತರದ ಅರ್ಥ.   


ಸೂಚನೆ : 10/10/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.