ಲೇಖಕರು : ಡಾ|| ಕೆ. ಎಸ್. ಕಣ್ಣನ್
ಪಾಂಡವರು ಮಲಗಿರಲು, ಅನತಿದೂರದಲ್ಲಿ ಶಾಲವೃಕ್ಷವನ್ನಾಶ್ರಯಿಸಿದ್ದ ಹಿಡಿಂಬನೆಂಬ ನರಭಕ್ಷಕರಾಕ್ಷಸನಿದ್ದ. ಆತ ಕ್ರೂರಿ, ಪರಾಕ್ರಮಿ; ಕೆಂಗಣ್ಣ, ಅಚ್ಚುಗಪ್ಪಿನ ಭೀಕರರೂಪಿ; ಕೆಂಪನೆಯ ಕೇಶ-ಮೀಶೆಗಳುಳ್ಳವ. ತುಂಬ ಹಸಿದಿದ್ದ ಆತ ಅಕಸ್ಮಾತ್ತಾಗಿ ಪಾಂಡವರನ್ನು ಕಂಡ. ತನ್ನ ಒರಟಾದ ಕೂದಲುಗಳನ್ನು ಕೊಡವಿಕೊಳ್ಳುತ್ತಾ ವಿಕಾರವಾಗಿ ಆಕಳಿಸುತ್ತಾ ಪಾಂಡವರತ್ತ ದಿಟ್ಟಿಸಿನೋಡುತ್ತಾ ತಂಗಿ ಹಿಡಿಂಬೆಗೆ ಹೇಳಿದ.
"ಅದೆಷ್ಟು ಕಾಲವಾಗಿತ್ತೋ, ಇಂದೊದಗಿದೆ ನನಗಿಷ್ಟವಾದ ಭಕ್ಷ್ಯ. ಬಾಯಿ ನೀರೊಡೆಯುತ್ತಿದೆ. ನನ್ನೆಂಟು ಕೋರೆಹಲ್ಲುಗಳನ್ನು ರಸರಸವಾದ ಇವರ ಮೈಗಳೊಳಗೆ ಊರಿಸುವೆ; ಇವರ ಕತ್ತಿಗೆ ಬಾಯಿಹಾಕಿ ನೊರೆನೊರೆಯಾದ ನವರಕ್ತ ಬಿಸಿರಕ್ತಗಳನ್ನು ಕುಡಿಯುವೆ. ಹೋಗಿ ನೋಡು ಯಾರಿಲ್ಲಿ ಮಲಗಿರುವವರೆಂದು. ನರವಾಸನೆ ಬಡಿಯುತ್ತಿದೆ. ಎಲ್ಲರನ್ನೂ ಕೊಂದಿಲ್ಲಿಗೆ ತಾ, ಇಬ್ಬರೂ ಕೂಡಿ ತಿನ್ನೋಣ, ತಾಳ ಹಾಕಿ ಕುಣಿಯೋಣ."
ಲಗುಬಗೆಯಿಂದ ನಡೆದ ಹಿಡಿಂಬೆ ಪೃಥೆಯೊಂದಿಗಿದ್ದ ಪಾಂಡವರನ್ನು ಕಂಡಳು. ಭೀಮನೊಬ್ಬ ಎಚ್ಚರವಾಗಿದ್ದ; ರೂಪದಲ್ಲಿ ಸಾಟಿಯಿಲ್ಲದ ಆತನನ್ನು ಕಾಣುತ್ತಲೇ ಮೋಹಗೊಂಡಳು. ಆತನ ತೋಳುಗಳೇನು, ಕಣ್ಗಳೇನು, ಕಾಂತಿಯೇನು! "ನನಗೀತನೇ ತಕ್ಕ ಗಂಡ; ನನ್ನಣ್ಣನ ಕ್ರೂರವಚನಕ್ಕೆ ನಾ ಬೆಲೆಗೊಡುವುದಿಲ್ಲ. ಗಂಡನೊಂದಿಗಿನ ಅಂಟಿಗಿಂತ ಅಣ್ಣನೊಂದಿಗಿನ ನಂಟು ಹೆಚ್ಚೇ? (ಪತಿಸ್ನೇಹೋಽತಿಬಲವಾನ್, ನ ತಥಾ ಭ್ರಾತೃಸೌಹೃದಮ್). ಇವರನ್ನು ಕೊಂದರೆ ನನಗೂ ಅಣ್ಣನಿಗೂ ಸಿಗಬಹುದಾದ ಸುಖ ಕ್ಷಣಿಕ. ಕೊಲ್ಲದಿದ್ದರೆ ಎಂದೆಂದಿಗೂ ನಾನವನೊಂದಿಗೆ ಆನಂದವಾಗಿರಬಹುದು" ಎಂದುಕೊಂಡಳು. ಎಷ್ಟಾದರೂ ಕಾಮರೂಪಿಣಿ: ಮನಬಂದಂತ ರೂಪ ತಾಳಬಲ್ಲಳು. ಸುಂದರಮನುಷ್ಯಸ್ತ್ರೀರೂಪವನ್ನು ತಳೆದವಳೇ, ಭೀಮನ ಬಳಿ ಸಾರಿ ಮುಗುಳ್ನಗೆಯೊಂದಿಗೆ ಕೇಳಿದಳು:
"ನೀನಾರು ಪುಂಗವ? ಎಲ್ಲಿಂದ ಬಂದಿರುವೆ? ದೇವತೆಗಳಂತಿರುವ ಇವರಾರು? ಈಕೆ ಯಾರು? ಈ ಕಾಡು ಗಹನವಾದದ್ದು, ಇಲ್ಲಿ ಹಿಡಿಂಬನೆಂಬ ದುಷ್ಟರಾಕ್ಷಸನಿರುವನು. ನನ್ನಣ್ಣನಾದ ಅವನೇ ನನ್ನನ್ನಿಲ್ಲಿಗೆ ಕಳುಹಿಸಿರುವುದು. ನಿಮ್ಮ ಮಾಂಸ ತಿನ್ನಲು ಹಪಹಪಿಸುತ್ತಿದ್ದಾನೆ! ಆದರೆ ದೇವತೆಯಂತಿರುವ ನಿನ್ನನ್ನು ಕಂಡೆನಲ್ಲಾ!; ಬೇರೆ ಗಂಡನನ್ನು ಬಯಸೆ. ಕಾಮಾರ್ತೆಯಾದ ನನ್ನನ್ನು ಸೇವಿಸು. ಆ ನರಭಕ್ಷಕನ ದೆಸೆಯಿಂದ ನಿನ್ನನ್ನು ಕಾಪಾಡುವೆ. ನಿನ್ನ ಬಿಟ್ಟಿರಲಾರೆ. ನನಗೆ ಕಾಮಚಾರವುಂಟು: ಎಲ್ಲೆಂದರಲ್ಲಿ, ಅಂತರಿಕ್ಷದಲ್ಲಿ ಸಹ, ಸಂಚರಿಸಬಲ್ಲೆ! ಎಣೆಯಿಲ್ಲದಷ್ಟು ಸುಖಪಡುವೆಯಂತೆ, ಬಾ ನನ್ನೊಂದಿಗೆ" ಎಂದಳು.
ಅದಕ್ಕೆ ಭೀಮನು, "ಸುಖಸುಪ್ತರಾದ ತಾಯಿಯನ್ನೂ ಅಣ್ಣನನ್ನೂ ಬಿಟ್ಟು ಬರುವುದುಂಟೆ? ಎಲ್ಲರನ್ನೂ ರಾಕ್ಷಸನಿಗೆ ತುತ್ತಾಗಿಸಿ, ಕಾಮಾರ್ತನಂತೆ ನಾ ಹೊರಟೇನೇ?" ಎಂದನು. "ಎಲ್ಲರನ್ನೂ ಎಬ್ಬಿಸು: ರಾಕ್ಷಸನ ದೆಸೆಯಿಂದ ಬಿಡಿಸುವೆ" ಎಂದವಳೆಂದಳು. ಅದಕ್ಕೆ ಸೊಪ್ಪುಹಾಕದೆ ಭೀಮನೆಂದ: " ದುರಾತ್ಮನಾದ ನಿನ್ನಣ್ಣನಿಗೆ ಹೆದರಿ ಇವರುಗಳನ್ನು ಎಬ್ಬಿಸಲಾರೆ. ಮನುಷ್ಯರೂ ಯಕ್ಷ-ರಾಕ್ಷಸ-ಗಂಧರ್ವರೂ ನನ್ನ ಪರಾಕ್ರಮವನ್ನು ಎದುರಿಸಲಾರರು! ಇದ್ದರಿರು; ಹೋದರೆ ಹೋಗು; ನರಭಕ್ಷಕನಾದ ನಿನ್ನಣ್ಣನನ್ನೇ ಕಳಿಸಿಲ್ಲಿಗೆ!"
ಹೊತ್ತಾದರೂ ಹಿಡಿಂಬೆ ಹಿಂತಿರುಗಲಿಲ್ಲವೆಂದು ಹಿಡಿಂಬನೇ ಅಲ್ಲಿಗೆ ಬಂದನು: ಕೆಂಪಾದ ಕಣ್ಣು, ಕೆದರಿದ ಕೇಶ, ಮೋಡದಂತಿರುವ ಮೈ, ಚೂಪು ಹಲ್ಲು - ಇವುಗಳಿಂದ ಕೂಡಿದ ಭಾರೀ ತೋಳಿನ ಆಸಾಮಿ!
ಹಿಡಿಂಬೆಯೋ ನಡುಗಿಹೋದಳು! "ಬಂದನೀ ನರಭಕ್ಷಕ! ಆಕಾಶಮಾರ್ಗದಲ್ಲಿ ನಿಮ್ಮೆಲ್ಲರನ್ನೂ ಒಯ್ದುಬಿಡುವೆ, ಬನ್ನಿ: ರಾಕ್ಷಸಬಲವುಂಟೆನಗೆ!" ಎಂದು ಭೀಮನಿಗೆ ಹೇಳಿದಳು.
ಬೆಚ್ಚಿಸುವ ಬಿರುನುಡಿಗಳಿಗೆ ಬಲಭೀಮನೇನು ಬೆದರಿಬಿಡತಕ್ಕವನೇ?
ಸೂಚನೆ : 16/10/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.