Sunday, October 2, 2022

ಅಷ್ಟಾಕ್ಷರೀ​ - 20 ತೀರ್ಥೀಕುರ್ವಂತಿ ತೀರ್ಥಾನಿ (Astakshara Darshana 20 Tirthagalu Tirthavenisuvudentu?)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ತೀರ್ಥಯಾತ್ರೆಯನ್ನು ಮಾಡುವ ಸಂಪ್ರದಾಯ ನಮ್ಮ ದೇಶದಲ್ಲಿ ಅನಾದಿಕಾಲದಿಂದಲೂ ಬಂದಿದೆ. ಪ್ರಾಯಃ ಇನ್ನಾವ ದೇಶದ ಸಂಸ್ಕೃತಿಯಲ್ಲಿಯೂ ಇಷ್ಟೊಂದು ತೀರ್ಥಯಾತ್ರೆಯನ್ನು ವಿಧಿಸಿಲ್ಲ; ವಿಧಿಸುವುದಿರಲಿ, ಕಲ್ಪಿಸಿಕೊಂಡೂ ಇಲ್ಲ. ನಮ್ಮ ದೇಶದಲ್ಲಿ ಗುಡಿಯಿಲ್ಲದ ಒಂದು ಸಣ್ಣ ಹಳ್ಳಿ ಸಹ ಸಿಗಲಾರದು. ಕ್ರಿಸ್ತಪೂರ್ವಕಾಲದವನೆನಿಸುವ ಕಾಳಿದಾಸನ ಶಾಕುಂತಲನಾಟಕದಲ್ಲೇ ಸೋಮತೀರ್ಥ-ಶಚೀತೀರ್ಥಗಳ ಉಲ್ಲೇಖವಿದೆ.


ತೀರ್ಥ, ಕ್ಷೇತ್ರ, ತೀರ್ಥಕ್ಷೇತ್ರ - ಎಂದೆಲ್ಲಾ ಪದಗಳನ್ನು ಬಳಸುವುದಿದೆ. ಹಾಗಿದ್ದರೆ ತೀರ್ಥವೆಂದರೇನು? ಸ್ಥಾವರತೀರ್ಥ-ಜಂಗಮತೀರ್ಥ ಎಂದೆಲ್ಲ ಹೇಳುವರಲ್ಲಾ, ತೀರ್ಥಗಳೇನು ಓಡಾಡಿಬಿಡುತ್ತವೆಯೇ? ಅವುಗಳಿಗೆ ಕೈಕಾಲುಗಳುಂಟೇ? ಎಂದೂ ಪ್ರಶ್ನೆಯು ಬರುತ್ತದೆ. ಎಷ್ಟೋ ಮಹಾತ್ಮರ ಹೆಸರುಗಳಲ್ಲಿ ಸಹ 'ತೀರ್ಥ'ವನ್ನು ನೋಡುತ್ತೇವೆ: ಉದಾಹರಣೆಗೆ ಆನಂದತೀರ್ಥರು. "ತೀರ್ಥರೂಪರಾದ ತಂದೆಯವರಿಗೆ ಸಾಷ್ಟಾಂಗ ನಮಸ್ಕಾರಗಳು" - ಎಂದೇ ಪತ್ರಾರಂಭದ ಒಕ್ಕಣೆ ಹಿಂದೆ ಪ್ರಸಿದ್ಧವಾದದ್ದು.


ತೀರ್ಥವೆಂಬ ಪದವು ಹೇಗೆ ಬಂದಿತೆಂಬುದೇ ಮೊದಲು ಜಿಜ್ಞಾಸ್ಯ. ಜಿಜ್ಞಾಸ್ಯವೆಂದರೆ ಜಿಜ್ಞಾಸೆಗೆ ಯೋಗ್ಯವಾದುದು. ತೀರ್ಥವೆಂಬುದು ಬಂದಿರುವುದು "ತೄ" ಪ್ಲವನ-ತರಣಯೋಃ - ಎಂಬ ಧಾತುವಿನಿಂದ. ತರಣವೆಂದರೆ ದಾಟುವುದು.

 ನದೀತರಣವೆಂದರೆ ನದಿಯನ್ನು ದಾಟುವುದು. ಈ ಸಂಸಾರವೆಂಬುದು ಬರೀ ನದಿಯಲ್ಲ, ಅದೊಂದು ಸಾಗರವೇ ಸರಿ. "ಸಂಸಾರಸಾಗರಂ ಘೋರಂ" ಎನ್ನುತ್ತಾರಲ್ಲವೇ? ಅದನ್ನು ದಾಟುವುದೇನು ಸುಲಭವೇ? "ಅಂಬಿಗಾ, ನಾ ನಿನ್ನ ನಂಬಿದೆ" - ಎಂದು ನಾವು ಭಗವಂತನನ್ನೇ ಮೊರೆಹೋಗುವೆವು.


ನಮ್ಮ ದೇಶದ ಯಾವುದೇ ಸರಸ್ಸು-ಪುಷ್ಕರಿಣಿಗಳನ್ನಾದರೂ ನೋಡಬಹುದು. ಸ್ನಾನಘಟ್ಟದಲ್ಲಿ ಇಳಿಯಲು ಮೆಟ್ಟಲುಗಳನ್ನು ನಿರ್ಮಿಸಿರುತ್ತಾರೆ. ಹಾಗೆ ಮೆಟ್ಟಲುಗಳನ್ನು ಕಟ್ಟಿದಾಗಲೇ ಅದು ತೀರ್ಥವಾಗುವುದು: ಜಲಾವತರಣಕ್ಕೆ ಅನುಕೂಲವನ್ನು ಕಲ್ಪಿಸುವುದೇ ತೀರ್ಥಕರಣ.


ರಾಮಾಯಣದ ಆರಂಭದಲ್ಲಿ ಒಂದು ಸೊಗಸಾದ ಮಾತಿದೆ: ಕಿಂಚಿತ್ತೂ ಪಾಚಿಯಿಲ್ಲದ ಈ ತೀರ್ಥ(ಅಕರ್ದಮಂ ಇದಂ ತೀರ್ಥಂ)ವದೆಷ್ಟು ರಮಣೀಯವಾಗಿದೆ, ನೋಡು ಭರದ್ವಾಜ: ತಿಳಿನೀರು ಸಜ್ಜನರ ಮನಸ್ಸಿನಂತಿದೆ!- ಎನ್ನುತ್ತಾರೆ ವಾಲ್ಮೀಕಿಗಳು. ವಿಷ್ಣುಸಹಸ್ರನಾಮದಲ್ಲಿ ಭಗವಂತನನ್ನು "ಮನೋಜವಃ ತೀರ್ಥಕರಃ" ಎಂದೇ ಕರೆದಿದೆ. ಇಪ್ಪತ್ನಾಲ್ಕು ತೀರ್ಥಂಕರರನ್ನು ಜೈನಸಂಪ್ರದಾಯವು ಗುರುತಿಸುತ್ತದೆ. 'ತೀರ್ಥಂಕರ' ಎಂಬ ಪದವನ್ನು ಯಾವುದೇ ಶಾಸ್ತ್ರಪ್ರವರ್ತಕನಿಗೂ ಅನ್ವಯಿಸಬಹುದು.


ಇನ್ನು ಪ್ರಯಾಗಕ್ಕೆ ತೀರ್ಥರಾಜವೆಂಬ ಹೆಸರಿದೆ. ಕಾಶಿಯನ್ನು ತೀರ್ಥರಾಜಿಯೆಂದೇ ಕರೆದಿದೆ: ಅಲ್ಲಿ ಸಾಲು ಸಾಲು ತೀರ್ಥಗಳು! ('ರಾಜಿ' ಎಂದರೆ  'ಸಾಲು'). ತೀರ್ಥವೆಂಬ ಪದವನ್ನು ಕೆಟ್ಟ ಅರ್ಥಕ್ಕಾಗಿ ಬಳಸಿರುವುದೂ ಇದೆ: ಕಾಗೆಗಳು ಹೊಟ್ಟೆಪಾಡಿಗಾಗಿ ಎಲ್ಲೆಡೆ ಅಲೆದಾಡುತ್ತವೆಯಲ್ಲವೆ? ಹೀಗಾಗಿ ಅತ್ಯಾಸೆಯುಳ್ಳ ಮನುಷ್ಯನಿಗೆ, ಹೊಟ್ಟೆಬಾಕನಿಗೆ, ತೀರ್ಥಕಾಕನೆಂದು ಹೇಳುವುದೂ ಉಂಟು.


ನಾನಾತೀರ್ಥಗಳನ್ನು ರೂಪಕಪರಂಪರೆಯ ಮೂಲಕ ತಿಳಿಸಿಕೊಡುವ ಸೊಗಸಾದ ಶ್ಲೋಕವೊಂದಿದೆ: ವಿದ್ವಾಂಸರು ವಿದ್ಯಾತೀರ್ಥದಲ್ಲಿ ತಮ್ಮ ಪಾಪಗಳನ್ನು ತೊಳೆದುಕೊಳ್ಳುವರು; ಸಜ್ಜನರು ಸತ್ಯತೀರ್ಥದಲ್ಲಿ; ಮಲಿನಚಿತ್ತರು ಗಂಗಾತೀರ್ಥದಲ್ಲಿ; ಯೋಗಿಗಳು ಧ್ಯಾನತೀರ್ಥದಲ್ಲಿ; ರಾಜರು ಅಭಿಷೇಕತೀರ್ಥದಲ್ಲಿ; ಧನಸಂಪನ್ನರು ದಾನತೀರ್ಥದಲ್ಲಿ; ಹಾಗೂ ಕುಲಯುವತಿಯರು ಲಜ್ಜಾತೀರ್ಥದಲ್ಲಿ!


ಮೂರ್ಖರು ಮಾಡುವ ಕೆಲಸಗಳನ್ನು ಪಟ್ಟಿಮಾಡುತ್ತಾ "ವಾರ್ಧಕೇ ತೀರ್ಥಯಾತ್ರಾಂ" ಎಂದು ಹಂಗಿಸಿದೆ. ವಯಸ್ಸಾದ ಮೇಲೆ ಮಾಡಿದರಾಯಿತು - ಎನ್ನುವುದಲ್ಲ ತೀರ್ಥಯಾತ್ರೆ! ಯೌವನ ಕಳೆದ ಮೇಲೆ ಮಾಡಿಕೊಳ್ಳುವ ವಿವಾಹದಂತೆ ಅದು - ಎಂದು ಹೇಳಿದೆ!


ಪುಷ್ಕರ-ನೈಮಿಷಾರಣ್ಯ-ಪ್ರಯಾಗ ಮೊದಲಾದವುಗಳನ್ನು ಸ್ಥಾವರತೀರ್ಥಗಳೆಂದು ಕರೆದಿದೆ - ಎಂದರೆ ಸ್ಥಿರವಾಗಿ ನಿಂತಿರತಕ್ಕವು. ಎಂದೇ ಸದಾ ಲಭ್ಯವಾದವು. ಸತ್ಯ-ಕ್ಷಮೆ-ಇಂದ್ರಿಯನಿಗ್ರಹಗಳನ್ನು ಅಂತಸ್ತೀರ್ಥವೆಂದು ಕರೆದಿದೆ. ಕಾಶೀ-ಗಂಗೆಗಳು, ಗಯಾಪ್ರಯಾಗಗಳು ನಮ್ಮ ಶರೀರದಲ್ಲಿಯೇ ಇವೆಯೆಂದು ಶಂಕರಭಗವತ್ಪಾದರ ಕಾಶೀಪಂಚಕವು ಹೇಳುತ್ತದೆ: ಶರೀರವೇ ಕಾಶಿ; ಜ್ಞಾನವೇ ಗಂಗೆ; ಭಕ್ತಿ-ಶ್ರದ್ಧೆಗಳೇ ಗಯೆ; ಹಾಗೂ ಗುರುಚರಣಧ್ಯಾನವೇ ಪ್ರಯಾಗ!


ಸ್ಥಾವರತೀರ್ಥಗಳಿಗೆ ತೀರ್ಥತ್ವವು ಎಂತು ಬಂತು? - ಎಂಬ ಪ್ರಶ್ನೆಗೆ ಉತ್ತರವಿಂತು. "ತೀರ್ಥೀಕುರ್ವಂತಿ ತೀರ್ಥಾನಿ, ತೀರ್ಥಭೂತಾ ಹಿ ಸಾಧವಃ": ಸಾಧುಗಳೇ ತೀರ್ಥಭೂತರಾದವರು. ಆ ಜಂಗಮತೀರ್ಥರು ಈ ಸ್ಥಾವರತೀರ್ಥಗಳಿಗೆ ತೀರ್ಥತ್ವವನ್ನು ಉಂಟುಮಾಡುವರು - ಎಂದಿದೆ. ಅವರಿಗೆ ಆ ಸಾಮರ್ಥ್ಯವಾದರೂ ಎಲ್ಲಿಂದ ಬಂತೆಂದರೆ "ತಮ್ಮೊಳಗಿರುವ ಗದಾಧರನಿಂದ" ಎಂಬ ಮಾತು ಭಾಗವತದಲ್ಲಿದೆ.


ಇವೆಲ್ಲದರ ಮರ್ಮವನ್ನು ಬಿಡಿಸುವ ಶ್ರೀರಂಗಮಹಾಗುರುಗಳ ವಚನವು ಮನನೀಯವಾದುದು: "ಭಗವಂತನಿಗೆ ತೀರ್ಥಪಾದ ಎಂಬ ಹೆಸರುಂಟು. ಅವನನ್ನು ಹೊತ್ತುಕೊಂಡು ಅವನಲ್ಲಿಯೇ ಆಡಿ ಪಾಡಿ ನಲಿಯುವ ಜ್ಞಾನಿಗಳೂ ತೀರ್ಥರೂಪರೇ ಆಗುವರು. ಅವರು ಕಾಲಿಟ್ಟ ಪ್ರದೇಶಗಳೆಲ್ಲವೂ ತೀರ್ಥಗಳೇ".


ಸೂಚನೆ: 02/10/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.