Sunday, October 9, 2022

ವ್ಯಾಸ ವೀಕ್ಷಿತ -7 ಧೃತರಾಷ್ಟ್ರನ ನಾಟಕ – ಭೀಮನ ಸಾಹಸ (Vyaasa Vikshita-7 Dhritarashtrana Nataka - Bhimana Sahasa)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)ಧೃತರಾಷ್ಟ್ರನಿಗೆ ಸಮಾಚಾರ ತಿಳಿಯಿತು. ಪಾಂಡುಪುತ್ರರ ವಿನಾಶವೆಂಬ "ಬಹಳವೇ ಅಪ್ರಿಯ"ವಾದ ಸುದ್ದಿಯನ್ನು ಕೇಳಿ ಬಹುದುಃಖಿತನಾಗಿ ಅತ್ತನಂತೆ, ಆತ!

"ಮಹಾಕೀರ್ತಿಶಾಲಿಯಾದ ನನ್ನ ತಮ್ಮನಾದ ಪಾಂಡುವು ಇಂದು ಸತ್ತಂತಾಗಿದೆ: ಆತನ ಮಕ್ಕಳೂ ಅವರ ತಾಯಿಯೂ ದಗ್ಧರಾಗಿಹೋದರಲ್ಲವೇ? ನೀವೆಲ್ಲರೂ ಹೋಗಿ ಅವರೆಲ್ಲರ ಅಂತ್ಯಕ್ರಿಯೆಯನ್ನು ನೆರವೇರಿಸಿರಿ. ವೀರರಿಗೂ ಕುಂತಿಗೂ "ಸತ್ಕಾರ" ಮಾಡಿರಿ; ಹಣವನ್ನು ಯಥೇಚ್ಛವಾಗಿ ಖರ್ಚುಮಾಡಿ ಅವರೆಲ್ಲರ "ಹಿತ"ವನ್ನು ಮಾಡಿರಿ." – ಎಂದು ತನ್ನ ಬಾಂಧವರಿಗೆ ಸೂಚಿಸಿದ!

ಇತ್ತ ಪಾಂಡವರು ನಾವಿಕ-ಸಹಾಯದಿಂದಾಗಿ ಗಂಗೆಯ ಪಾರವನ್ನು ಸೇರಿದರು. ನಕ್ಷತ್ರಗಣಸೂಚನೆಯಂತೆ ದಕ್ಷಿಣದತ್ತ ಸಾಗಿದರು. ಆಯಾಸ-ದಾಹ-ನಿದ್ರೆಗಳ ಬಾಧೆಗೊಳಪಟ್ಟವರಾಗಿ ಭೀಮನಿಗೆ ಹೇಳಿದರು: "ಇದೆಂತಹ ಕಷ್ಟವಯ್ಯಾ! ದಿಕ್ಕೇ ಕಾಣೆವು, ಸಾಗಲೇ ಆರೆವು. ಪಾಪಿ ಪುರೋಚನನು ಸುಟ್ಟುಹೋದನೋ ಇಲ್ಲವೋ ಅರಿಯೆವು. ಬಲಶಾಲಿಯಾದ ನೀನೇ ಸಾಗಿಸಬೇಕು, ನಮ್ಮನ್ನು".

ಭೀಮನು ಕ್ರಮಿಸುವ ಮಹಾವೇಗಕ್ಕೆ ಜ್ಯೇಷ್ಠಾಷಾಢಮಾಸಗಳ ಗಾಳಿಯು ಬೀಸಿದಂತಾಯಿತು! ಕ್ರುದ್ಧ-ಮದಗಜದಂತೆ ಭಾರೀ ಮರಗಳನ್ನೂ ಕೆಡವುತ್ತಾ ಭೀಮನು ಸಾಗಿದನು. ಉಳಿದವರಿಗೋ ಮೂರ್ಛೆಬೀಳುವಂತಾಗುತ್ತಿತ್ತು! ದುರ್ಯೋಧನನ ಕಡೆಯವರ ಕಣ್ಣಿಗೆ ಬಿದ್ದೇವೆಂಬ ಆತಂಕ! ರಾತ್ರಿಯಾವರಿಸುತ್ತಿದ್ದಂತೆ ಪಾಂಡವರಿಗೆ ತಡೆಯಲಾಗದ ನಿದ್ರೆ; ಕುಂತಿಗೋ ಮಹಾಬಾಯಾರಿಕೆ.

ಅವರು ಘೋರಾರಣ್ಯವನ್ನು ಪ್ರವೇಶಿಸುತ್ತಿದ್ದಂತೆ ದೊಡ್ಡ ಆಲದಮರವೊಂದು ಕಂಡಿತು. ಅವರನ್ನಲ್ಲುಳಿಸಿ, "ಇದೋ ಸಾರಸಪಕ್ಷಿಗಳು ಮಧುರವಾಗಿ ಧ್ವನಿಗೈಯುತ್ತಿವೆ. ಬಳಿಯೇ ನೀರೆಡೆಯಿರಬೇಕು" ಎಂದು ಹೇಳಿದ ಭೀಮನು, ಅಣ್ಣನ ಅನುಜ್ಞೆಯನ್ನು ಪಡೆದು ನೀರನ್ನರಸಿ ಹೊರಟನು. ಜಲಸ್ಥಾನವು ಸಿಕ್ಕಿತು. ಒಂದಿಷ್ಟು ನೀರು ಕುಡಿದು ಸ್ನಾನವನ್ನೂ ಮಾಡಿ, ಉಳಿದವರೆಲ್ಲರಿಗಾಗಿ ನೀರನ್ನು ತಂದನು; ಅಮ್ಮನಿದ್ದೆಡೆಗೆ ಸರಸರ ನಡೆದನು. ಅಷ್ಟರಲ್ಲೆಲ್ಲರಿಗೂ ನಿದ್ರೆ ಹತ್ತಿಯಾಗಿತ್ತು!

ನಿಟ್ಟುಸಿರಿಡುತ್ತಾ ಅಳಹತ್ತಿದ, ಭೀಮ!: "ಇದಕ್ಕಿಂತಲೂ ಮಿಗಿಲಾದ ಕಷ್ಟವನ್ನಿನ್ನು ಕಾಣಲಾದೀತೇ?: ಬೆಲೆಬಾಳುವ ಹಾಸಿಗೆಗಳಲ್ಲಿ ಸಹ ವಾರಣಾವತದಲ್ಲಿ ನಿದ್ದೆ ಕಾಣದ ಇವರು ನೆಲದ ಮೇಲೀಗ ಬಿದ್ದುಕೊಂಡು ನಿದ್ದೆಹೋಗಿರುವರಲ್ಲಾ! ದೇವತೆಗಳಿಂದ ಪುತ್ರರನ್ನು ಪಡೆದ ಕುಂತಿಯೂ ಪರಮಧರ್ಮಮತಿಯಾದ ಯುಧಿಷ್ಠಿರನೂ, ನರರಲ್ಲಿ ಅಪ್ರತಿಮನಾದ ಅರ್ಜುನನೂ, ಅತ್ಯಂತರೂಪಸಂಪನ್ನರಾದ ನಕುಲ-ಸಹದೇವರೂ - ಸಾಧಾರಣಜನರಂತೆ ನೆಲದ ಮೇಲೆ ಮಲಗಿರುವರಲ್ಲಾ!

ಆಹಾ ನಮ್ಮ ಪಾಡೇನಿದು! ಧೃತರಾಷ್ಟ್ರನೂ ಆತನ ಮಕ್ಕಳೂ ಸೇರಿ ನಮ್ಮನ್ನೋಡಿಸಿದರು; ಏನೋ ದೈವಬಲದಿಂದ ನಾವು ಸುಟ್ಟುಹೋಗಲಿಲ್ಲವಷ್ಟೆ! ಈಗೀ ಮರದ ಆಶ್ರಯದಲ್ಲಿರುವ ನಾವು ಅದಿನ್ನಾವ ದಿಕ್ಕಿಗೆ ಹೋಗಬೇಕೋ! ದೀರ್ಘದೃಷ್ಟಿಯಿಲ್ಲದ ಮೂರ್ಖಧೃತರಾಷ್ಟ್ರನೇ, ದೇವತೆಗಳದೇನೋ ನಿನ್ನಲ್ಲಿ ಪ್ರಸನ್ನವಾಗಿರುವಂತೆ ಕಾಣುತ್ತದೆ; ಎಂದೇ ನಿನ್ನನ್ನು ಯಮಸದನಕ್ಕಟ್ಟಲು ಯುಧಿಷ್ಠಿರನು ನನಗನುಮತಿ ಕೊಡುತ್ತಿಲ್ಲ."

ಹೀಗೆ ಕೈಕೈಹಿಸುಕಿಕೊಂಡು ನಿಟ್ಟುಸಿರಿಡುತ್ತಾ ದೀನಚಿತ್ತನಾಗಿ ಶಮನಗೊಂಡ ಬೆಂಕಿಯಂತೆ ಶಾಂತನಾದನು, ಭೀಮ. ಎಲ್ಲರನ್ನೂ ವೀಕ್ಷಿಸಿ, "ಆಹಾ, ದಣಿದು ಬಾಯಾರಿರುವ ಇವರುಗಳು ನಿದ್ರಾನಂತರವೇ ನೀರು ಕುಡಿಯಲಿ" - ಎಂದುಕೊಂಡನು. ಈ ಸಂದರ್ಭದಲ್ಲಿ ಭೀಮನು ನುಡಿಯುವ ಮಾತೊಂದು ಮಾರ್ಮಿಕವಾಗಿದೆ.

"ಕಾಡಿನಲ್ಲಿ ಹುಟ್ಟಿದ ಮರಗಳೆಲ್ಲವೂ ಒಂದಕ್ಕೊಂದು ಆಶ್ರಯವಾಗಿರುವಂತೆ, ಬಲಶಾಲಿಗಳೂ ಸಂಪನ್ನರೂ ಆದ ಬಂಧುಮಿತ್ರರುಗಳ ಒತ್ತಾಸೆಯಿರುವವನೂ ಸುಖಿಯಾಗಿರುವನು".  

ಇಂದಿನ ಹಿಂದುಗಳಿಗೆ ಇಲ್ಲೊಂದು ಪಾಠವಿದೆ: ಒಬ್ಬರಿಗೊಬ್ಬರ ಸಹಾನುಭೂತಿ-ಸಹಕಾರಗಳು ಸರ್ವದಾ ಅವಶ್ಯ. ಒಗ್ಗಟ್ಟಿನ ಗುಟ್ಟು ಇದೇ.


ಸೂಚನೆ : 10
/10/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.