Sunday, October 2, 2022

ಯಕ್ಷಪ್ರಶ್ನೆ - 6 (Yaksha Prashne - 6)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)


ಪ್ರಶ್ನೆ- ೫. ಯಾವುದರಿಂದ ಶ್ರೋತ್ರಿಯ ಎನಿಸಿಕೊಳ್ಳುತ್ತಾನೆ ?  

ಉತ್ತರ - ಶ್ರುತೇನ (ಶ್ರುತಿಯಿಂದ)

ಒಬ್ಬ ವ್ಯಕ್ತಿಯನ್ನು 'ಶ್ರೋತ್ರಿಯ' ಎಂದು ಕರೆಯಲು ಕಾರಣವೇನು ? ಆತನು 'ಶ್ರುತನಾದಾಗ'. ಅಂದರೆ ಯಾರು ಚೆನ್ನಾಗಿ ಕೇಳಿಸಿಕೊಂಡಿರುತ್ತಾನೋ, ಅವನನ್ನು ಶ್ರೋತ್ರಿಯ ಎನ್ನುತ್ತಾರೆ. ಶ್ರವಣದಿಂದಲೇ ಬರುವಂತಹ ವಿದ್ಯೆ ಎಂದರೆ ವೇದ ಮೊದಲಾದವು. ಅದಕ್ಕೆ ವೇದಕ್ಕೆ 'ಶ್ರುತಿ' ಎಂಬ ಇನ್ನೊಂದು ಪದವುಂಟು. ಈ ವೇದವು ಋಷಿಗಳ ತಪಸ್ಯೆಯ ಫಲವಾಗಿ ಅಂತ:ಶ್ರವಣಕ್ಕೆ ಗೋಚರವಾದ ಜ್ಞಾನರಾಶಿ.  ಋಷಿಗಳು ಕೇಳಿದ ಆ ಶ್ರುತಿಯನ್ನು ಆಚಾರ್ಯನಾದವನು ಶಿಷ್ಯನಿಗೆ ತಾನು ಕೇಳಿದ ರಸ -ಭಾವಗಳ ಸಹಿತವಾಗಿ ಹೇಳಿಕೊಡುತ್ತಾನೆ. ಅದನ್ನು ಶಿಷ್ಯನಾದವನು ಮತ್ತೆ ಮತ್ತೆ ಕೇಳುವುದರ ಮೂಲಕ ಆ ಜ್ಞಾನವನ್ನು ತನ್ನದಾಗಿಸಿಕೊಳ್ಳುತ್ತಾನೆ. ಇದಕ್ಕೆ 'ಅಧ್ಯಯನ' ಎಂದು ಕರೆಯುತ್ತಾರೆ.  ಆಗ ಆತನನ್ನು 'ಶ್ರುತ' ಎಂದು ಕರೆಯಬಹುದು. ಹಿಂದಿನ ಕಾಲದಲ್ಲಿ  ಹೇಳುವುದು ಮತ್ತು ಕೇಳುವುದು ಈ ಎರಡರ ವ್ಯಾಪಾರದಿಂದ ವಿದ್ಯೆಯನ್ನು ಪಡೆಯಲಾಗುತ್ತಿತ್ತು. ಹೇಳಿದ್ದನ್ನೇ ಕೇಳಿಕೊಂಡು, ಅದನ್ನು ತನ್ನ ಮಸ್ತಿಷ್ಕದಲ್ಲಿ ಧಾರಣೆ ಮಾಡಿಕೊಳ್ಳುವ ಮೇಧಾಶಕ್ತಿ ಅಪಾರವಾಗಿತ್ತು. ಯಾವಾಗ ಈ ಶಕ್ತಿ ಕ್ಷೀಣವಾಗುತ್ತಾ ಹೋಯಿತೋ, ಅಲ್ಲಿಂದ ಅದನ್ನು ಲಿಪಿರೂಪದಲ್ಲಿ ಕಾಪಿಡುವ ಪದ್ಧತಿ ಬಂದಿತು. ಇದೇ ಮುಂದೆ ಸಾಹಿತ್ಯರೂಪದಲ್ಲಿ ಪುಸ್ತಕವಾಗಿ ರೂಪುಗೊಂಡಿತು. ಏನೇ ಹೇಳಿದ್ದಾಗಲಿ ಅಥವಾ ಕೇಳಿದ್ದಾಗಲಿ ಮುದ್ರಣದಲ್ಲಿರುವ ಪುಸ್ತಕವನ್ನಾಗಲಿ ಆಚಾರ್ಯರ ಮುಖದಿಂದ ಪಡೆದು ಅಂತೆಯೇ ಧಾರಣೆ ಮಾಡಿದರೆ ಆಗಲೂ ಆತನನ್ನು 'ಶ್ರುತ' ಎಂದು ಕರೆಯುವ ವಾಡಿಕೆ ಬಂದಿದೆ. ಇಂತಹ ಬಹುಶ್ರುತನನ್ನೇ ಶ್ರೋತ್ರಿಯ ಎಂದು ಕರೆಯಬಹುದು, ಅವನೇ ನಿಜನಾಗಿ ತಿಳಿದವನು ಎಂಬುದು ಧರ್ಮರಾಜನ ಉತ್ತರ. 


'ಬಹುಧಾ ಶ್ರೋತವ್ಯಮ್. ಬಹುಭ್ಯ: ಶ್ರೋತವ್ಯಮ್' ಎಂಬ ಮಾತಿದೆ. ಅನೇಕ ಸಾರಿ ಕೇಳಬೇಕು. ಅನೇಕರಿಂದ ಕೇಳಬೇಕು ಎಂದು. ಇದರಿಂದ ಆತನ ಜ್ಞಾನಶಕ್ತಿ ಹಿಗ್ಗುತ್ತದೆ. ಆತ ಇನ್ನೂ ಗಟ್ಟಿಯಾದ ಶ್ರೋತ್ರಿಯನಾಗುತ್ತಾನೆ. ಅದಕ್ಕಾಗಿ ನಮ್ಮ ಪ್ರಾಚೀನ ಅಧ್ಯಯನ ಪದ್ಧತಿಯಲ್ಲಿ ಶ್ರವಣಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ಶ್ರವಣ, ಮನನ, ನಿದಿಧ್ಯಾಸನ ಈ ಮೂರನ್ನು 'ಸಾಧನತ್ರಯ' ಎನ್ನುತ್ತಾರೆ. ಇದರಲ್ಲಿ ಅತಿಮುಖ್ಯವಾದುದು ಶ್ರವಣ. ಮೊದಲನೆಯದು ವ್ಯವಸ್ಥಿತವಾಗಿ ಆದರೆ ಮಾತ್ರ ಮುಂದಿನ ಸಾಧನೆಯಲ್ಲಿ ಪೂರ್ಣತೆಗೆ ಅವಕಾಶವಿದೆ. ಒಂದು ವೇಳೆ ಅಲ್ಲೇ ನ್ಯೂನತೆಯಿದ್ದರೆ ಮುಂದಿನದೆಲ್ಲವೂ ಅಸ್ತವ್ಯಸ್ತ. ಇನ್ನೊಂದು ಸುಭಾಷಿತವೂ ಶ್ರವಣದ ಮಹತ್ತ್ವವನ್ನು ಎತ್ತಿ ಏಳುತ್ತದೆ. ಒಬ್ಬ ಜ್ಞಾನಪಿಪಾಸು ಜ್ಞಾನದಾಹವನ್ನು ತಣಿಸಿಕೊಳ್ಳಲು ಮೊದಲು ಆಚಾರ್ಯನಿಂದ ಕಾಲು ಭಾಗವನ್ನು ಪಡೆಯುತ್ತಾನೆ, ಅನಂತರ ಕಾಲು ಭಾಗವನ್ನು ತನ್ನ ಸ್ವಮೇಧೆಯಿಂದ, ತದನಂತರದ ಕಾಲು ಭಾಗವನ್ನು ತನ್ನ ಸಹಪಾಠಿಗಳ ಜೊತೆಯಾಗಿ, ಮುಂದಿನ ಕಾಲುಭಾಗವನ್ನು ಇವಿಷ್ಟನ್ನೂ ತನ್ನಲ್ಲಿ ಮನನ ಮಾಡುತ್ತಾ ಅವನ ಭವಿಷ್ಯದಲ್ಲಿ ಪಡೆಯಬಹುದು. ಇಲ್ಲೂ, ಆಚಾರ್ಯನಿಂದ ಪಡೆಯುವ ಕಾಲು ಭಾಗವನ್ನು ನೂರಕ್ಕೆ ನೂರು ಪ್ರತಿಶತ ಕೇಳಿಸಿಕೊಂಡರೆ ಮಾತ್ರ ಮುಂದಿನ ಪೂರ್ಣತೆಗೆ ಅವಕಾಶ. ಒಟ್ಟಾರೆ ಇಷ್ಟೇ ತಾತ್ಪರ್ಯ- ಶ್ರವಣಸಂಸ್ಕಾರ ಅತಿಮುಖ್ಯ. ಅದರಿಂದಲೇ ವ್ಯಕ್ತಿ ಪರಿಪೂರ್ಣನಾಗಬಲ್ಲ. ಅವನೇ ನಿಜವಾದ ಅರ್ಥದಲ್ಲಿ ಶ್ರೋತ್ರಿಯ.      


ಸೂಚನೆ : 2/10/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.