Saturday, October 8, 2022

ಕಾಳಿದಾಸನ ಜೀವನ-ದರ್ಶನ : ಉಪಸಂಹಾರ Kalidasana Jivanadarshana : Upasamhara

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಮಹಾಕವಿ ಕಾಳಿದಾಸನ ಜೀವನ-ದರ್ಶನವೆಂಬ ಶೀರ್ಷಿಕೆಯಲ್ಲಿ, ಕಾಳಿದಾಸನು ಜೀವನವನ್ನು ಕಂಡಬಗೆಯನ್ನು ನಾಲ್ಕಾರು ವಿಷಯಗಳ ದೃಷ್ಟಿಯಿಂದ ಈವರೆಗೆ ಮೂವತ್ತು ಲೇಖನಗಳಲ್ಲಿ ಪರಿಶೀಲಿಸಿದೆವು (ಮಾರ್ಚ್ 12 ಇಂದ ಅಕ್ಟೋಬರ್ 2ರವರೆಗೆ). ಅದರ ಒಂದು ಸಿಂಹಾವಲೋಕನವನ್ನೊಮ್ಮೆ ಇಲ್ಲಿ ಮಾಡುವುದರಲ್ಲಿ ಔಚಿತ್ಯವಿದೆ.

ಸ್ವದೇಶ-ವಿದೇಶಗಳ ಕವಿಗಳೂ ವಿಮರ್ಶಕರೂ ಕಾಳಿದಾಸನಿಗೆ ಯಾವ ಸ್ಥಾನವನ್ನು ಕೊಟ್ಟಿದ್ದಾರೆ? - ಎಂಬುದನ್ನು ಆರಂಭದಲ್ಲಿ ಕಂಡಿದ್ದಾಯಿತು. ಏಕೆಂದರೆ, ಧೀಮಂತರೂ ಪ್ರತಿಭಾಸಂಪನ್ನರೂ ಯಾವ ವ್ಯಕ್ತಿಯನ್ನಾದರೂ ಗೌರವದಿಂದ ಕಂಡುಕೊಂಡಿದ್ದರೆ, ನಮಗೆ ಆ ವ್ಯಕ್ತಿಯ ಬಗ್ಗೆ ಕುತೂಹಲವೂ ಆದರವೂ ಮೂಡುವುದು ಸಹಜವೇಸರಿ. ಕಾಳಿದಾಸನೇ ನಮ್ಮ ದೇಶದ ನಿಜವಾದ ರಾಷ್ಟ್ರಕವಿ; ಈಚೆಗೆ ಆ ಪಟ್ಟವನ್ನು ಗಿಟ್ಟಿಸಿಕೊಂಡವರು ಹಲವರುಂಟಾದರೂ, ಭಾರತವನ್ನು ಕುರಿತಾದ ಅವರೆಲ್ಲರ ಭೌಗೋಳಿಕ ಹಾಗೂ ಸಾಂಸ್ಕೃತಿಕ ಪರಿಜ್ಞಾನಗಳು ಕಾಳಿದಾಸನ ಒಂದಂಶ ಮಾತ್ರವೇ ಸರಿ; ಪ್ರತಿಭೆಯಲ್ಲಂತೂ ಅವನ ಸಮೀಪಕ್ಕೆ ಬರುವವರು ತೀರಾ ಕಡಿಮೆಯೆಂದೇ ಹೇಳಬಹುದೇನೋ?

ಬೇರೆ ಬೇರೆ ಭಾರತೀಯ ಭಾಷೆಗಳಲ್ಲಿ ಸಾಹಿತ್ಯರಚನೆಮಾಡಿ ರಾಷ್ಟ್ರಕವಿಸ್ಥಾನವನ್ನು ಪಡೆದುಕೊಂಡವರ ಕೃತಿಗಳನ್ನೊಂದೊಂದನ್ನೂ ಕಾಳಿದಾಸನ ಕೃತಿಗಳೊಂದಿಗೆ ಹೋಲಿಸಿ ನೋಡುವ ಸಾಮರ್ಥ್ಯವುಳ್ಳ ಸಹೃದಯ-ವಿಮರ್ಶಕರು ತೂಗಿನೋಡಿ ಹೇಳಬೇಕಾದ ಕಾರ್ಯವಿದು. ಅಭಿನವಕಾಳಿದಾಸನೆಂದು ಕರೆಸಿಕೊಳ್ಳುವ ಮಂದಿ ಹಲವರಿದ್ದಾರಾದರೂ, ಅಧ್ಯಾತ್ಮವನ್ನೂ ಒಳಗೊಂಡಂತೆ ಜೀವನದ ಆಮೂಲಾಗ್ರದರ್ಶನವನ್ನು ಕಾಳಿದಾಸನು ಮಾಡಿಸಿರುವಂತೆ ಮಾಡಿಸಿರುವವರು ಸಂಸ್ಕೃತದಲ್ಲಿ ಸಹ ಹೆಚ್ಚಿಲ್ಲವೆಂದರೆ ತಪ್ಪಾಗಲಾರದು.

ರಘುವಂಶದ ಅರಸರನ್ನು ಚಿತ್ರಿಸುವಾಗ, ವಿದ್ಯಾಭ್ಯಾಸವು ಅಂದು ಹೇಗಿತ್ತೆಂದು ಕಾಳಿದಾಸನು ನಿರೂಪಿಸಿರುವ ಪರಿ ವಿಶಿಷ್ಟವಾದದ್ದು. ಜೀವನಕ್ಕೆ ದಾರಿದೀಪವಾಗುವ ಬಗೆ ಅವುಗಳಲ್ಲಿ ಹೇಗಿತ್ತೆಂಬುದನ್ನು ಮೊದಲ ಕೆಲವು ಲೇಖನಗಳಲ್ಲಿ ಕಂಡೆವು. ವಿದ್ಯೆಯ ಪ್ರಸಾದವು ಸಿದ್ಧಿಸುವುದು ಹೇಗೆಂಬುದೂ ಲಕ್ಷಿತವಾಯಿತು.

ಅಧ್ಯಯನ-ಅಧ್ಯಾಪನಗಳೆರಡರಲ್ಲೂ ಹೆಗ್ಗಳಿಗೆಯನ್ನು ಪಡೆದವನೇ ಶಿಕ್ಷಕರಲ್ಲಿ ಶ್ರೇಷ್ಠನೆಂದು ಪರಿಗಣಿಸಲ್ಪಡುವುದು. ಯೋಗ್ಯಶಿಷ್ಯರಿಗೆ ಸರಿಯಾಗಿ ಬೋಧಿಸುವುದರಿಂದಲೇ ನಿಷ್ಣಾತತೆಯು ಗುರುವಿಗೂ ಸಿದ್ಧಿಸುವುದು. ಇದು ಬೋಧಕನ ಮೇಲೆ ಚೆಲ್ಲಿದ ಬೆಳಕು.

ಇನ್ನು ವಿದ್ಯಾರ್ಥಿಯ ಮೇಲೆ. ವಿದ್ಯಾದಾನವು ಕನ್ಯಾದಾನದ ಹಾಗೆ: ಯೋಗ್ಯನಿಗಷ್ಟೇ ಕೊಡಬೇಕಾದದ್ದು. ಯೋಗ್ಯನಿಗಿತ್ತ ವಿದ್ಯೆಯು ಬೆಳೆಯುವುದು, ಬೆಳಗುವುದು. ಶಿಷ್ಯನಂತೂ ಗುರುವನ್ನೂ ಮೀರಿಸಬಲ್ಲಂತಹವನಾಗಬೇಕು.

ಒಬ್ಬರು ಸಂಪಾದಿಸಿದ ವಿದ್ಯೆಯನ್ನು ವಿಶೇಷಜ್ಞನಷ್ಟೇ ಅಳೆಯಬಲ್ಲನು. ಶಾಸ್ತ್ರದಲ್ಲೂ ಪ್ರಯೋಗದಲ್ಲೂ ನಿಷ್ಣಾತನಾದವನೇ ವಿಶೇಷಜ್ಞ. ಗುಣಗಳನ್ನೂ ದೋಷಗಳನ್ನೂ ಗಮನಿಸಿಯೇ ತೀರ್ಪನ್ನು ಕೊಡಬೇಕಾದುದು. ವಿದ್ಯೆಯನ್ನು ಹೊಟ್ಟೆಪಾಡಿಗಷ್ಟೆ ಬಳಸುವವನು ಅಯೋಗ್ಯನೇ ಸರಿ. ಪೂರ್ವಜನ್ಮದ ಸಂಸ್ಕಾರಗಳ ಪಾತ್ರವೂ ವಿದ್ಯೆಯಲ್ಲಿಲ್ಲದಿಲ್ಲ.

ಗುರುನಿಷ್ಠೆಯುಳ್ಳ ಶಿಷ್ಯ, ಲೋಭರಹಿತನಾದ ರಾಜ - ಇವರುಗಳ ಆದರ್ಶವನ್ನು ಕವಿ ನಮ್ಮ ಕಣ್ಣ ಮುಂದೆ ಇಟ್ಟಿರುವುದನ್ನು ರಘು-ಕೌತ್ಸಪ್ರಸಂಗದಲ್ಲಿ ಕಾಣುತ್ತೇವೆ. ಇಷ್ಟಲ್ಲದೆ, ವಂಶಶುದ್ಧಿಯ ಹಿರಿಮೆಯನ್ನು ಭಾರತೀಯರು ಕಂಡುಕೊಂಡ ಬಗೆ, ಶಾಸ್ತ್ರವಿಧಿಯನ್ನನುಸರಿಸಿದ ಯಜ್ಞದಲ್ಲಿ ರಘುರಾಜರಿಗಿದ್ದ ಪ್ರೀತಿ, ಅಪರಾಧಿಗಳ ಉದ್ಧಾರಕ್ಕೇ ಆಗುವ ಅವರ ದಂಡನವಿಧಾನ - ಇವೂ ಅನುಸಂಧೇಯವಾದವೇ. ರಘುರಾಜರು ಹೇಗೆ ಹೇಗೆ ಜಾಗರೂಕರಾಗಿರುತ್ತಿದ್ದರು, ಧನಾರ್ಜನೆಯ ಹಿಂದೆ ಅವರಿಗಿದ್ದ ಚಿತ್ತವೃತ್ತಿಯೇನು, ಅವರ ವಾಕ್ಸಂಯಮದ ಹಿನ್ನೆಲೆಯೇನು, ಗಾರ್ಹಸ್ಥ್ಯದಲ್ಲಿಯ ಚಿತ್ತಸಂಯಮದ ಉದ್ದೇಶವೇನು? - ಎಂಬುದನ್ನೆಲ್ಲಾ ನೋಡಿದ್ದಾಗಿದೆ. ಕೊನೆಗೆ ಯೋಗಪ್ರಯೋಗದಿಂದ ಶರೀರತ್ಯಾಗವನ್ನೂ ಅವರು ಮಾಡುವುದಿತ್ತು. ಗಜ-ವೃಕ್ಷಗಳಲ್ಲದೆ, ಹೇಗೆ ರಾಜನ ಕಾರ್ಯವೈಖರಿಗೆ ಸೂರ್ಯ-ವಾಯು-ಶೇಷರೂ ಉಪಮೆಗಳಾಗಬಲ್ಲರೆಂಬುದರ ನಿರೂಪಣೆ ಮನಮುಟ್ಟುವಂತಹುದು.

ಇಂದು ಎಲ್ಲರ ಕೊಂಡಾಟಕ್ಕೆ ಪಾತ್ರವಾಗಿರುವ ಡೆಮಾಕ್ರೆಸಿ ಅಥವಾ ಪ್ರಜಾಪ್ರಭುತ್ವವೆಂಬುದು ವಿಶ್ವದಲ್ಲೆಲ್ಲೆಡೆ ಸಫಲವಾಗಿದೆಯೆಂದಾಗಲಿ, ಸಮಾನಪರಿಣಾಮಗಳನ್ನು ಹೊಂದಿದೆಯೆಂದಾಗಲಿ ಹೇಳಲಾಗದಷ್ಟೆ? ಹಾಗಿರುವಲ್ಲಿ, ಪಾಶ್ಚಾತ್ತ್ಯರು ದೂಷಿಸಿಬಿಡುತ್ತಾರೆಂಬ ಕಾರಣವನ್ನೇ ದೊಡ್ಡದಾಗಿಸಿಕೊಂಡು, ಹಿಂದೆ ನಮ್ಮಲ್ಲಿ ರಾಜತ್ವವಿದ್ದಾಗಿನ ರಾಜ-ಪ್ರಜಾಸಂಬಂಧದಲ್ಲಿದ್ದ ಸೌಷ್ಠವ-ಔಚಿತ್ಯಗಳನ್ನು ಬಿಸುಟಿದ್ದಾಗಿದೆ! ಆದರೂ ಪ್ರಜಾಹಿತಕ್ಕಾಗಿ ಶ್ರಮಿಸುತ್ತಿದ್ದ ಆಗಿನ ಅರಸರ ಕರ್ತವ್ಯಪ್ರಜ್ಞೆಯನ್ನು ಕಾಣಿಸಿರುವ ಕವಿಕೃತಿಗಳತ್ತ ಕಣ್ಣುಹಾಯಿಸಬೇಕಾದ ಕರ್ತವ್ಯವು ನಮಗಿದೆಯಷ್ಟೆ?

ಮಹಾರಾಜನು ಅತಿಮೃದುವೂ ಅತಿತೀಕ್ಷ್ಣನೂ ಆಗದೆ, ಪ್ರಜೆಗಳನ್ನು ಹತೋಟಿಯಲ್ಲಿಟ್ಟುಕೊಂಡು ಆಳುವ ಬಗೆ; ನಿರ್ಭಯರಾಗಿದ್ದರೂ ಒಳ್ಳೆಯ ಕೊತ್ತಲಗಳಲ್ಲಿ ಅರಸರು ನೆಲೆನಿಂತಿದ್ದು - ಇವನ್ನು ಗಮನಿಸಿದ್ದಾಯಿತು. ಶಾಸ್ತ್ರಗಳನ್ನು ಅಭ್ಯಸಿಸಿ, ಅವುಗಳ ಸಾರವನ್ನು ಹಿಡಿದ ರಾಜಕುಮಾರರಿಗೆ ಮುಂದೆ ದರ್ಪವೆಂಬುದು ಕಾಡುವುದಿಲ್ಲ. ಸೋಲನ್ನು ಕಂಡ ರಾಜರೊಂದಿಗೆ ಅಮಾನವೀಯವಾಗಿ ವರ್ತಿಸದೆ, ಅವರನ್ನೂ ಬಾಳಲು ಬಿಡುವ ಸಂಸ್ಕೃತಿಯು ಹಿಂದೂದೊರೆಗಳಲ್ಲಿ ಮಾತ್ರವೇ ಇದ್ದದ್ದು.

ಇಷ್ಟಲ್ಲದೆ, ದೊಡ್ಡವರು ತಪ್ಪುಮಾಡುವುದಿಲ್ಲವೆಂದೇನಲ್ಲ. ರಾಜನೊಬ್ಬನ ತಪ್ಪು, ರಾಜರ್ಷಿಯ ಪುತ್ರಿಯೊಬ್ಬಳು ಎಸಗಿದ ಅಪರಾಧ - ಇವರ ಕರ್ಮದ ಗತಿಗಳ ಬಗೆಗಳನ್ನು ವಿಶ್ಲೇಷಿಸಲಾಯಿತು. ಹಿರಿದಾದ ಬಾಳಿಗೆ ಕಿರಿದಾದ ಬದುಕು ನಮನ ಸಲ್ಲಿಸಬೇಕು: ಸಲ್ಲಿಸಿದರೆ ಲಾಭ, ಇಲ್ಲದಿದ್ದರೆ ನಷ್ಟ - ಎಂಬುದನ್ನು ಎರಡೂ ಕಥೆಗಳು ಅನ್ವಯ-ವ್ಯತಿರೇಕಗಳ ಮೂಲಕ ತಿಳಿಸಿಕೊಡುತ್ತವೆ. (ಹೀಗೆ ಮಾಡಿದರೆ ಹೀಗೆ ಫಲಪ್ರಾಪ್ತಿಯಾಗುವುದೆಂಬುದು ಅನ್ವಯ; ಹೀಗೆ ಮಾಡಲಿಲ್ಲವೋ ಹೀಗೆ ಮಹಾನಷ್ಟವಾಗುವುದೆಂಬುದು ವ್ಯತಿರೇಕ). ದಿಲೀಪನು ಸುರಭಿಗೆ ವಂದಿಸದೆ ಸಾಗಿದುದು ಮೊದಲನೆಯದರ ಉದಾಹರಣೆ. ಶಕುಂತಲೆಯು ದುರ್ವಾಸರ ಆಗಮನವನ್ನು ಗಮನಿಸದೇ ಉಳಿದದ್ದು ಎರಡನೆಯದರದ್ದು. ಋಷಿಮಾರ್ಗದರ್ಶನವನ್ನು ಕೇಳಿಪಡೆದುದರಿಂದ (ದಿಲೀಪನಿಗೆ) ಮೊದಲನೆಯದರ ಪರಿಹಾರವಾಯಿತು; ದುರ್ದೈವವೇ ಕಾಡುತ್ತಿರುವಾಗ ಜಾಸ್ತಿಯಾದ ಜಾಗರೂಕತೆಯು ಬೇಕೆಂಬುದನ್ನು ಕಡೆಗಾಣಿಸಿದರೆ ಕಷ್ಟನಷ್ಟಗಳು ಉತ್ಕಟವಾಗುವುವು ಎಂಬ ಎರಡನೆಯ ಬಗೆಯನ್ನು (ಶಕುಂತಲೆಗೆ ಆದ ನೋವಿನಿಂದ) ತಿಳಿದುಕೊಳ್ಳುವುದಾಯಿತು. "ನನ್ನಿಂದೆಲ್ಲಿ ತಪ್ಪಾದೀತೋ?" - ಎಂಬ ಎಚ್ಚರವನ್ನು ಪ್ರಜೆಗಳು ಮಾತ್ರವಲ್ಲ, ರಾಜರೂ ಹೊಂದಿರಬೇಕೆಂಬುದನ್ನು ಕವಿ ತೋರಿಸಿದ್ದಾನೆ.

ಹೀಗೆ ಜೀವನವನ್ನು ಸುಗಮವಾಗಿ ಸಫಲವಾಗಿ ಸಾಗಿಸಲು ಮತ್ತು ಸಾಧಿಸಲು ಬೇಕಾಗುವ ಮುಖ್ಯಮಾರ್ಗದರ್ಶನವನ್ನು ಮಹಾಕವಿಯು ತನ್ನ ಮಹಾಕಾವ್ಯಗಳಿಂದ ಸಹೃದಯರ ಮುಂದಿರಿಸಿದ್ದಾನಲ್ಲವೇ? ಇಂತಹ ವರಕವಿಗೆ ನಮ್ಮೆಲ್ಲರ ವಂದನೆಗಳು.

ಸೂಚನೆ : 08/10/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.