Sunday, October 16, 2022

ಯಕ್ಷಪ್ರಶ್ನೆ - 8 (Yaksha Prashne - 8)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)


ಪ್ರಶ್ನೆ- ೭. ಯಾವುದರಿಂದ 'ದ್ವಿತೀಯವಾನ್ ' ಎನಿಸಿಕೊಳ್ಳುತ್ತಾನೆ ?  

ಉತ್ತರ - ಧೃತಿಯಿಂದ 

ಈ ಪ್ರಶ್ನೋತ್ತರದಲ್ಲಿ ಎರಡು ವಿಷಯಗಳಿವೆ. ದ್ವಿತೀಯವಾನ್ ಎಂದರೇನು? ದ್ವಿತೀಯವಾನ್ ಆಗಲು ಧೃತಿ  ಯಾವ ರೀತಿ ಸಾಧನವಾಗುವುದು? ಎಂಬುದು. ಸುಖ ಉಳ್ಳವನು ಸುಖವಾನ್, ಧನ ಉಳ್ಳವನು ಧನವಾನ್ ಎಂಬಂತೆ ದ್ವಿತೀಯ ಉಳ್ಳವನು ದ್ವಿತೀಯವಾನ್. ದ್ವಿತೀಯ ಎಂದರೆ ಎರಡನೆಯದು. ಅಂದರೆ ಪರಮಾತ್ಮನ ಇನ್ನಿಂದು ರೂಪವೇ ಜೀವ. ಅದೇ ದ್ವಿತೀಯವಾದುದು. ಸೃಷ್ಟಿಯಲ್ಲಿ ಪ್ರಧಾನವಾಗಿ ದೇವ ಮತ್ತು ಜೀವ ಎಂಬ ಎರಡು ತತ್ತ್ವಗಳಿವೆ. ದೇವನಿಂದ ಬೇರ್ಪಟ್ಟಾಗ ಜೀವಭಾವ ಬರುತ್ತದೆ. ಜೀವಭಾವ ಶಾಶ್ವತವಲ್ಲ. ಜೀವಭಾವ ಕಳೆದು ಪುನಃ ದೇವಭಾವವನ್ನು ತಳೆಯಲೇಬೇಕು. ಜೀವಭಾವವೇ ಎರಡನೆಯ ರೂಪ. ಬಂದ ಜೀವಭಾವವು ಕಳೆಯಲು ಬೇಕಾದ ಸಾಧನವೇ ಧೃತಿ.


ಧೃತಿ ಎಂದರೆ ಧೈರ್ಯ ಧಾರಣಾ, ಸುಖ, ತುಷ್ಟಿ ಎಂಬೆಲ್ಲಾ ಅರ್ಥಗಳಿವೆ. ಈ ಎಲ್ಲಾ ಅರ್ಥಗಳನ್ನು ಸ್ವೀಕರಿಸಿದರೂ ಜೀವನು ಪ್ರಮಾತ್ಮನ ರೂಪವಾಗಿ ಗುರುತಿಸಿಕೊಳ್ಳಲು ಯಾವುದೇ ಅಭ್ಯಂತರವೂ ಕಾಣದು. ಆದರೆ ಎಲ್ಲಕಿಂತ ಉತ್ತಮವಾಗಿ ಇಲ್ಲಿ ಹೊಂದಿಕೊಳ್ಳುವ ಅರ್ಥವೆಂದರೆ ಧೈರ್ಯ. ಧೈರ್ಯವಿದ್ದರೆ ಮಾತ್ರ ಯಾವುದನ್ನೂ ಜೀವನದಲ್ಲಿ ಸಾಧಿಸಲು ಸಾಧ್ಯ. ಸಾಧನೆಯನ್ನು ಮಾಡುವಾಗ ಮಧ್ಯೆ ಅನೇಕ ಕಷ್ಟಗಳು ಬರಬಹುದು. ಅವುಗಳನ್ನು ಎಲ್ಲವನ್ನೂ ಮೇಟ್ಟಿ ತನ್ನ ಅಚಲವಾದ ಗುರಿಯನ್ನು ಮುಟ್ಟಲು ಧೈರ್ಯ ಮಾತ್ರ ಸಾಧವಾಗುವುದು ಧೀರ್ಧೈರ್ಯಾತ್ಮಾದಿ ವಿಜ್ಞಾನಂ ಮನೋದೋಷ- ಔಷಧಮ್ ಪರಂ' - ಧೈರ್ಯವು ಎಲ್ಲಾ ದೋಷಗಳನ್ನು ಕಳೆಯುವ ದಿವ್ಯವಾದ ಔಷಧ. ಧೈರ್ಯವು ಬುದ್ಧಿಯ ಗುಣ. ಅಚಲವಾದ  ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ತನ್ನ ಸ್ತಿಮಿತವನ್ನು ಕೆಡಿಸಿಕೊಳ್ಳದಿರುವಿಕೆ. ಸರಿಯಾದುದು ಯಾವುದು? ತಪ್ಪಾದುದು ಯಾವುದು? ಎಂಬ ಬಗೆಗಿನ ವಿವೇಕವೇ ಅದು. ಇಂತಹ ಬುದ್ಧಿಯು  ಉದ್ದೇಶವನ್ನು ಸುಲಭದಲ್ಲಿ ಪಡೆಯಬಲ್ಲ ಸಾಧನವಾಗಿದೆ. ಕಾಲದ  ವಿಳಂಬಕ್ಕೂ ಅಲ್ಲಿ ಅವಕಾಶವಿರುವುದಿಲ್ಲ. ಪ್ರತಿಯೊಬ್ಬ ಮಾನವನ ಉದ್ದೇಶವಿಷ್ಟೇ 'ಭಗಂತನಲ್ಲೆ ಸೇರಬೇಕಾದವನು' ಎಂಬ ಅರಿವು. ಈ ಅರಿವು ಯಾವಾಗ ಬರುವುದೋ ಆಗ ಆತ ಎರಡನೆಯ   (ದ್ವಿತೀಯವಾನ್) ಅಂದರೆ ಪರಮಾತ್ಮನ ಸ್ವರೂಪದ ಅನುಸಂಧಾನಕ್ಕೆ ಬೇಕಾದ ಎಲ್ಲ ಬಗೆಯ ಸಿದ್ಧತೆ ಅವನಲ್ಲಿ ಆದಂತೆಯೇ. ಆದರೆ 'ಇದು ಅಷ್ಟು ಸುಲಭಸಾಧ್ಯವಲ್ಲ, ಅದು ದುರ್ಗಮವಾದ ಮಾರ್ಗ, ಕತ್ತಿ ಅಲಗು ಎಂಬುದು ನಮ್ಮ ಹಿರಿಯರ ಮಾತು.


ಭಗವದ್ಗೀತೆಯಲ್ಲಿ ಸಾತ್ತ್ವಿಕ, ರಾಜಸಿಕ ಮತ್ತು ತಾಮಸಿಕ ಎಂದು ಮೂರು ಬಗೆಯ ಧೃತಿಯನ್ನು ಶ್ರೀಕೃಷ್ಣನು ಹೇಳುತ್ತಾನೆ. ಯೋಗದ ಅಭ್ಯಾಸದಿಂದ ಪ್ರಾಣ, ಇಂದ್ರಿಯ ಮತ್ತು ಮನಸ್ಸುಗಳನ್ನು ಸಂಯಮ ಮಾಡುವುದು ಸಾತ್ತ್ವಿಕವಾದರೆ, ಧರ್ಮಾರ್ಥ ಕಾಮಗಳನ್ನು ಫಲಾಪೇಕ್ಷೆಯಿಂದ ಸಾಧನೆ ಮಾಡುವುದು ರಾಜಸಿಕವಾದರೆ, ಯಾವುದರಿಂದ ಸ್ವಪ್ನ, ಭಯ, ಶೋಕ, ವಿಷಾದ, ಮದಗಳನ್ನು ಬಿಡುವುದಿಲ್ಲವೋ ಅಂತಹ ಧೈರ್ಯವು ತಾಮಸಿಕವೆಂದು ಹೇಳಲ್ಪಟ್ಟಿದೆ. ಸಾತ್ತ್ವಿಕ ಧೃತಿಯಿಂದ ಜೀವದ ಉನ್ನತಿ, ಉಳಿದ ಧೃತಿಯಿಂದ ಜೀವದ ಅಧೋಗತಿಯೇ ನಿಶ್ಚಿತವಾಗಿ ಆಗುತ್ತದೆ. ಉತ್ತಮ ಧೃತಿಯಿಂದ ಮಾತ್ರವೇ ಜೀವನು ತನ್ನ ತನವನ್ನು ಅರಿಯಬಲ್ಲ. ಆಗ ತಾನೇ ಆತ ಪರಮಾತ್ಮನ ರೂಪವೆಂದು ಭಾವಿಸಲು ಸಾಧ್ಯವಾಗುವುದು.   


ಸೂಚನೆ : 16/10/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.