Sunday, October 9, 2022

ಕಾಳಿದಾಸನ ಜೀವನದರ್ಶನ - 27 ರಾಜರ ಪರಾಕ್ರಮ: ಗುರಿ, ಹಾದಿ (Kalidasana Jivanadarshana - 27 Rajara Parakrama: Guri, Hadi)

 ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

ನಮ್ಮ ರಾಜರ ಪರಾಕ್ರಮವೆಂಬುದು ಹೇಗಿತ್ತೆಂಬುದು ಗಮನಿಸಬೇಕಾದ ಒಂದು ಅಂಶವೇ ಸರಿ. ಪರದೇಶಗಳ ರಾಜರಿಗೂ ನಮ್ಮ ದೇಶದ ರಾಜರಿಗೂ ಇದ್ದ ಭೇದವು ಇಲ್ಲಿ ಸ್ಫುಟವಾಗುತ್ತದೆ. ಅನ್ಯದೇಶಗಳ ಅರಸುಗಳು ಅದೆಷ್ಟು ಮಂದಿ ಅದೆಷ್ಟು ಬಾರಿ ಅಸಂಸ್ಕೃತರಾಗಿ ವರ್ತಿಸಿದ್ದರು/ವರ್ತಿಸುತ್ತಿದ್ದಾರೆ - ಎಂಬುದನ್ನು ಸಹ ಇಲ್ಲಿ ಮನಗಾಣಲು ಸಾಧ್ಯವಿದೆ. ಹಾಗೆಯೇ ಇದಕ್ಕೆ ಪ್ರತಿಯಾಗಿ ನಮ್ಮ ದೇಶದ ಹತ್ತುಹಲವು ರಾಜರು ಅದೆಷ್ಟು ಉದಾತ್ತರಾಗಿರುತ್ತಿದ್ದರೆಂಬುದಕ್ಕೂ ನಿದರ್ಶನಗಳಿವೆ.

ಒಂದು ದೇಶದ ರಾಜರು ಆಳ್ವಿಕೆಗೋಸ್ಕರವಾಗಿ ಯಾವ ಆದರ್ಶಗಳನ್ನು ಇಟ್ಟುಕೊಂಡಿರುವರು? - ಎಂಬಷ್ಟರಿಂದಲೇ ಕೆಲವಂಶಗಳು ಅಳತೆಗೆ ಸಿಗಬಹುದು (ಎಲ್ಲೆಡೆಯೂ ಎಲ್ಲ ಆದರ್ಶಗಳೂ ಪಾಲಿತವಾಗಿರುವುದಿಲ್ಲ - ಎಂಬ ಲೆಕ್ಕವನ್ನಿಟ್ಟುಕೊಂಡೇ).  

ಮೊಟ್ಟಮೊದಲಾಗಿ ವಿಚಾರ್ಯವಾದ ಒಂದಂಶವಿದೆ. ರಾಜನೆನಿಸಿಕೊಂಡವನು ಮೃದುವಾಗಿರಬೇಕೋ ಉಗ್ರನಾಗಿರಬೇಕೋ?: "ನಾತಿತೀಕ್ಷ್ಣಃ, ನಾತಿಮೃದುಃ" ಎಂಬುದೊಂದು ಪ್ರಾಥಮಿಕ ಪಾಠ, ನಮ್ಮ ರಾಜನೀತಿಯಲ್ಲಿ. ಅತಿತೀಕ್ಷ್ಣನಾದ ಪ್ರಭುವನ್ನು ಕಂಡು ಜನರು ಬೆದರಿ ಬೀಳಾಗುವರು; ಅತಿಮೃದುವಾದನಾದರೋ ಅವನನ್ನೇ ಮೆಟ್ಟಲೆಳಸುವರು. ಎಂದೇ 'ಕೇವಲ-ನಯ'ವೆನ್ನುವ ರಾಜವೃತ್ತವು ಕಾತರ್ಯ - ಎಂದರೆ ಹೇಡಿತನ - ಎನಿಸಿಕೊಳ್ಳುತ್ತದೆ; ಇನ್ನು ಎಲ್ಲೆಡೆ ಶೌರ್ಯವನ್ನಷ್ಟೆ ತೋರಿಸಿಕೊಳ್ಳುವುದಾದರೆ ಅದು ವ್ಯಾಘ್ರಾದಿಗಳ ವರ್ತನೆಯಂತೆ ಪಾಶವೀವೃತ್ತಿಯಾಗುವುದು.

ಎಂದೇ, ಇವೆರಡರ ಅತಿರೇಕಗಳನ್ನೂ ತೊರೆದು, ಆದರೆ ಯಥೋಚಿತವಾಗಿ ಎರಡನ್ನೂ ಬಳಸಿಕೊಳ್ಳುತ್ತಾ ಕಾರ್ಯಸಿದ್ಧಿಯನ್ನು ಅರಸಿದನು, ಅತಿಥಿ-ಮಹಾರಾಜ (=ರಾಮನ ದೊಡ್ಡಮಗನಾದ ಕುಶನ ಪುತ್ರ) – ಎನ್ನುತ್ತಾನೆ, ಕಾಳಿದಾಸ.

ಅರಸರು ಕೋಟೆಕೊತ್ತಲಗಳನ್ನು ಕಟ್ಟಿಸಿಕೊಂಡು ಅವುಗಳೊಳಗೆ ವಾಸಿಸುವರಲ್ಲವೇ? ಅತಿಥಿಮಹಾರಾಜನೂ ಕೋಟೆಗಳನ್ನು ಚೆನ್ನಾಗಿಯೇ ಕಟ್ಟಿಸಿಕೊಂಡಿದ್ದವನೇ. ಅವನ ದುರ್ಗಗಳು ಅರಿಗಳಿಗೆ ದುರ್ಗ್ರಹವಾಗಿದ್ದವು - ಎಂದರೆ ಆಕ್ರಮಿಸಿಕೊಳ್ಳಲಾಗದಂತಹವಾಗಿದ್ದವು; ಅರ್ಥಾತ್, ಅವರ 'ಹಿಡಿತ'ಕ್ಕೆ ಸಿಕ್ಕದವವು. ಹಾಗಾದರೆ ಆತನಿಗೇನಾದರೂ ಶತ್ರುಭಯವಿತ್ತೋ? - ಎಂಬ ಶಂಕೆಯೋ? ಆತನು ಸ್ವತಃ ಶತ್ರು-ರೋಧಕ: ರಿಪುರಾಜರನ್ನು ತಡೆಗಟ್ಟುವುದು ಅವನಿಗೆ ಅತಿಕಷ್ಟವೆಂದೇನಿರಲಿಲ್ಲ. ಅತಿಥಿಯು ಅಪ್ರತಿಹತನಾಗಿರುತ್ತಿದ್ದ; ಶತ್ರುಗಳೇ ಪ್ರತಿಹತರಾಗುತ್ತಿದ್ದರು.

ಹಾಗಿದ್ದರೆ ನಿರ್ಭೀಕನಿಗೆ (ಎಂದರೆ ಭಯರಹಿತನಿಗೆ) ದುರ್ಗಗಳೇಕೆ? – ಎಂಬ ಪ್ರಶ್ನೆಯಲ್ಲವೇ? ಅದಕ್ಕೆ ಕವಿಯ ಉತ್ತರವು ಸಿದ್ಧವೇ. ಉತ್ತರವು ಒಂದು ಉತ್ತಮ ಉಪಮೆಯೇ: ತನಗಿಂತಲೂ ಮಹಾಕಾಯವೂ ಮಹಾಬಲಶಾಲಿಯೂ ಆಗಿರುವ ಆನೆಗಳನ್ನೇ ಕೊಲ್ಲಬಲ್ಲುದು ಕೇಸರಿ; ಆದರೂ ಪರ್ವತಗಹ್ವರಗಳಲ್ಲಿ ಅದು ವಾಸಮಾಡುವುದಲ್ಲವೇ? ಅಂದಮಾತ್ರಕ್ಕೆ, ಅದೇನೋ ಗಜರಾಜನ ಭೀತಿಯಿಂದಲೇ ಗಿರಿ ಗುಹೆಯಲ್ಲಿ ಮೃಗರಾಜನ ವಾಸವೆಂದೇ? ತನ್ನ ಖುಷಿಗಷ್ಟೆ ಸಿಂಹವು ಗುಹಾಪ್ರಿಯ; ಭೀರುವಾಗಿ (ಎಂದರೆ ಪುಕ್ಕಲನಾಗಿ) ಗೂಡುಸೇರಿಕೊಂಡು ಬಾಗಿಲುಹಾಕಿಕೊಳ್ಳುವುದು ಅದರ ಜಾಯಮಾನವಲ್ಲವಲ್ಲವೇ?

ಮನುಸ್ಮೃತಿ ಮುಂತಾದುವುಗಳಲ್ಲಿ ಆರು ಬಗೆಯ ಕೋಟೆಗಳನ್ನೇ ಹೇಳಿರುವರು. ಅಕುತೋಭಯನಾಗಿದ್ದರೂ (ಎಂದರೆ ಎತ್ತಣದಿಂದಲೂ ಭೀತಿಯಿಲ್ಲದವನಾಗಿದ್ದರೂ) ರಕ್ಷಣಾವ್ಯವಸ್ಥೆಯೆಂಬುದಿರಲೇಬೇಕು. "ರಾಮರಾಜ್ಯದಲ್ಲೂ ಸೈನ್ಯವಿತ್ತಪ್ಪಾ!" – ಎಂಬ ಎಚ್ಚರದ ವಾಣಿಯನ್ನು ಶ್ರೀರಂಗಮಹಾಗುರುಗಳಿತ್ತಿದ್ದರು.

ಬಲಸಂಪನ್ನರಿಗೆ ಇದೊಂದು ಮುಖವಾದರೆ, ಮತ್ತೊಂದು ಮುಖವೂ ಇರುವುದೇ. ತನ್ನಲ್ಲಿ ಬಲವು ಅಧಿಕವಾಗುತ್ತಲೇ ಶಕ್ತಿಶಾಲಿಗಳಿಗೆ ದರ್ಪವೆಂಬುದು ಗೋಚರಿಸುವುದು ಬಹುತ್ರ ಕಂಡುಬರುವುದೇ. ದಾಸರು ಪಟ್ಟಿ ಮಾಡುವರಲ್ಲವೇ?: ಅನ್ನಮದ, ಅರ್ಥಮದ, ಅಖಿಲವೈಭವದ ಮದ, ಮುನ್ನ ಪ್ರಾಯದ ಮದವು, ರೂಪಮದವೂ – ಎಂಬ ಮದಪ್ರಕಾರಗಳನ್ನು? ಮದಿಸಿದವನು ಮರ್ದಿಸುವವನೇ: ಅನ್ಯರನ್ನು ಅನ್ಯಾಯವಾಗಿಯೇ ನೋಯಿಸುವವನೇ. ಆದರೆ ಶಾಸ್ತ್ರ-ವಿನೀತನು (ಸರಿಯಾಗಿ ಪಳಗಿದವನು) ಹಾಗೆ ವರ್ತಿಸ.

ಮತ್ತೊಬ್ಬರ ಸೊತ್ತನ್ನು ಕೊಳ್ಳೆಹೊಡೆಯುವುದೇ, ಹಾಗೂ ಪರಸ್ತ್ರೀಯರ ಮಾನಭಂಗವೇ ಕ್ರೈಸ್ತ ಹಾಗೂ ಇಸ್ಲಾಮೀಯ ದೊರೆಗಳ ಮಹಾಧ್ಯೇಯವಾಗಿತ್ತೆಂಬಂಶವು ಇತಿಹಾಸದ ಪುಟಪುಟಗಳಲ್ಲೂ ದಾಖಲೆಯಾಗಿದೆ; ಇಂದಿಗಾದರೂ ಅದೇನು ಮುಗಿದ ಅಧ್ಯಾಯವೇ? ಆದರೆ ರಘುರಾಜನ ಆಳ್ವಿಕೆಯು ಹಾಗಿರಲಿಲ್ಲವೆಂಬುದನ್ನು ಕವಿಯು ತೋರಿಸಿಕೊಟ್ಟಿದ್ದಾನೆ. ರಘುವು ಕೇವಲ 'ಧರ್ಮವಿಜಯಿ'ಯಾಗಿದ್ದವನು. ಎಂದರೆ ಧರ್ಮಕ್ಕಾಗಿನ ವಿಜಯ ಅವನದು. ಧರ್ಮದ ನಡೆಯಿಲ್ಲದ, ಅರ್ಥಾತ್ ಅಧರ್ಮಿಷ್ಠರಾದ, ರಾಜರ ಮೇಲೆ ದಂಡೆತ್ತಿಹೋಗುವುದರಲ್ಲಿ ಹಿಂಜರಿಕೆ-ಹಿಂದೇಟುಗಳು ರಘುವಿಗಿರಲಿಲ್ಲ. ಎಂದೇ ಕಳಿಂಗರಾಜನಾದ ಮಹೇಂದ್ರನ ವಿಷಯದಲ್ಲಿ ರಘುವಿನ ವರ್ತನೆಯು ಹೇಗಿತ್ತೆಂದರೆ "ಗೃಹೀತ-ಪ್ರತಿಮುಕ್ತ"ವಾಗಿತ್ತು: ಎಂದರೆ, ಅವನ ಪ್ರಭುತ್ವವನ್ನು ಕಿತ್ತುಕೊಂಡು ಹಿಂದಿರುಗಿಸುವುದು; ಮೊದಲು ಮಣಿಸಿ ಬಳಿಕ ಬಾಳಬಿಡುವುದು. ಆತನ ಐಶ್ವರ್ಯವನ್ನಿಷ್ಟು ಸೆಳೆದುಕೊಂಡನೇ ವಿನಾ ಆತನ ರಾಜ್ಯವನ್ನೇ ಕಬಳಿಸಿಬಿಡಲಿಲ್ಲ: ಮತ್ತೆ ಮತ್ತೇರಿ ವರ್ತಿಸದಿರಲು ಅದೊಂದು ಎಚ್ಚರಿಕೆ. ಅದು ಬಿಟ್ಟು, "ಸಮೃದ್ಧಿಯ ನಿನ್ನೀ ರಾಜ್ಯವೆಲ್ಲಾ ನನ್ನದಾಯಿತು; ನೀನಿನ್ನು ಬರೀ ಭಿಕಾರಿ" - ಎಂಬಂತಲ್ಲ.

ಹಾಗೆಯೇ ರಘುಪುತ್ರನಾದ ಅಜನೂ ಮಧ್ಯಮಕ್ರಮವನ್ನೇ ಹಿಡಿದದ್ದು. ಶತ್ರುವನ್ನು ಸುಮ್ಮಸುಮ್ಮನೆ ಸಾಯಿಸಿಬಿಡುವುದೇ ದೊಡ್ಡದಲ್ಲ, ಆತನು ಸೊಕ್ಕಲಾಗಬಾರದು - ಎಂಬುದಷ್ಟೇ ಈತನ ನೀತಿ. ಅದಕ್ಕೊಂದು ಉಪಮೆ: ಗಾಳಿಯು ಮರಗಳನ್ನು ಬಗ್ಗಿಸುವುದು, ಕಿತ್ತುಹಾಕುವುದಿಲ್ಲ. ಹೀಗೆ ರಿಪುವಿನ ಅಧರ್ಮಪ್ರವೃತ್ತಿಯನ್ನು ಮೆಟ್ಟಿ, ಮತ್ತೆ "ಬಾಲ ಬಿಚ್ಚದಂತಾಗಿಸಿ" ಬಾಳಲು ಬಿಡುವ ಔದಾರ್ಯದ ಆದರ್ಶವನ್ನು ನಮ್ಮ ಅರಸರು ಸಾರಿದ್ದಾರೆ.

ಸೂಚನೆ : 10/09/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.