Saturday, October 1, 2022

ಕಾಳಿದಾಸನ ಜೀವನದರ್ಶನ -30 ಪಶ್ಚಾತ್ತಾಪ ಪಡಲಿಲ್ಲ; ಪ್ರಾಯಶ್ಚಿತ್ತ ಮಾಡಿಕೊಳ್ಳಲಿಲ್ಲ! (Kalidasana Jivanadarshana - 30 Pashcattapa Padalilla; Prayashcitta Madikollalilla!)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಕಾಳಿದಾಸನ ಜೀವನದರ್ಶನವನ್ನು ಸುದೀರ್ಘವಾಗಿಯೇ ಪರ್ಯಾಲೋಚಿಸುತ್ತ ಬಂದಿದ್ದೇವೆ. ಕವಿಯೂ ದಾರ್ಶನಿಕನೂ ಆಗಿರುವವನು ಕಾಣಿಸುವ ನೋಟವೇ ವಿಶಿಷ್ಟವಾದುದು. ಇನ್ನೂ ಅಧ್ಯಾತ್ಮಾದಿ ಹತ್ತಾರು ಮುಖ್ಯವಿಷಯಗಳಲ್ಲಿ ಅವನೀಯುವ ಒಳನೋಟವನ್ನು ಅರಿಯಬೇಕಾದುದಿದೆಯಾದರೂ, ಈ ಮಾಲೆಯ ಕೊನೆಯ ಕಂತಾದ ಈ ಲೇಖನದಲ್ಲಿ, ಪೂರ್ವಸೂಚಿತವಿಷಯವೊಂದನ್ನು ವಿಶ್ಲೇಷಿಸಿ, ಸರಣಿಯನ್ನು ಮುಕ್ತಾಯಗೊಳಿಸೋಣ.

ಅರಿಯದೆ ಮಾಡಿದ ತಪ್ಪು ಸಹ ಫಲಕೊಡದೆ ಬಿಡದು: ದಿಲೀಪನ ಅಪರಾಧ-ಫಲ-ಪರಿಹಾರ-ಪ್ರಸಂಗಗಳಲ್ಲಿ ಈ ಆಳವಾದ ಸತ್ಯವನ್ನು ಕಂಡುಕೊಂಡಿದ್ದೇವೆ. ಈಗ ಶಕುಂತಲೆಯ ಜೀವನದಲ್ಲೂ ಅದರ ಬೇರೆಬಗೆಯ ಅ ನ್ವಯವನ್ನು ಗಮನಿಸೋಣ.

ದುಷ್ಯಂತನನ್ನು ಕಂಡೊಡನೆಯೇ ಆತನಲ್ಲಿ ಪ್ರೇಮವು ಅಂಕುರಿಸಿತು, ಶಕುಂತಲೆಗೆ. ಹಾಗೆ ನೋಡಿದರೆ ಅವರದು ಒಳ್ಳೆಯ ಜೋಡಿಯೇ: ದುಷ್ಯಂತನು ರಾಜರ್ಷಿ; ಶಕುಂತಲೆಯ ತಂದೆ ವಿಶ್ವಾಮಿತ್ರನೂ ರಾಜರ್ಷಿಯೇ. ಗಾಂಧರ್ವವಿವಾಹವಂತೂ ಕ್ಷತ್ರಿಯರಲ್ಲಿ ಅಪರೂಪವೇನಲ್ಲ; ಅಂತೆಯೇ ಅವರ ವಿವಾಹವಾದದ್ದೂ. ಇಲ್ಲೆಲ್ಲೂ ದುಷ್ಯಂತನಾಗಲಿ ಶಕುಂತಲೆಯಾಗಲಿ ಎಡವಿಲ್ಲ. ಎಡವಟ್ಟಾದುದು ಮುಂದೆ.

ಥಟ್ಟನೆ ಅರಮನೆಯ ಕರೆ ಬಂದು, ದುಷ್ಯಂತನು ರಾಜಧಾನಿಗೆ ಹಿಂದಿರುಗಬೇಕಾಯಿತು. ಮೂರು ದಿನಗಳಲ್ಲಿ ರಾಜವೈಭವದೊಡನೆ ನಿನ್ನನ್ನು ಕರೆಸಿಕೊಳ್ಳುವೆನೆಂದು ನುಡಿದು ಆತನು ತೆರಳಿದನು. ಅಂದೇ ಬಂದರು ದುರ್ವಾಸರು. ಅವರು ಬಂದಾಗ, ದುಷ್ಯಂತನ ಚಿಂತೆಯಲ್ಲೇ ಇದ್ದಳು ಶಕುಂತಲೆ. ಎದುರಿಗೇ ಬಂದು ತಾನು ನಿಂತಿರುವುದನ್ನು ಕೂಗಿಯೇ ಹೇಳಿದರು: ಪ್ರಿಯಪತಿಯ  ಚಿಂತೆಯಲ್ಲಿ ಮುಳುಗಿಹೋಗಿದ್ದ ಶಕುಂತಲೆಗೆ ಮುನಿಯ ಆಕಾರವು ಕಾಣಿಸಲಿಲ್ಲವಷ್ಟೇ ಅಲ್ಲ; ಅವರ ಅಮರ್ಷದ ಉಚ್ಚಸ್ವರವೂ ಕೇಳಿಬರಲಿಲ್ಲ!

ಇದು ತಪೋವನಕ್ಕೆ ಸಲ್ಲುವ ವರ್ತನೆಯೇ ಅಲ್ಲ - ಎನಿಸಿತು, ಮುನಿಯುವ ಈ ಮುನಿಗಳಿಗೆ. ಮರುಘಳಿಗೆಯಲ್ಲೇ ಶಾಪಹೊಮ್ಮಿತು: "ಯಾರದೋ ಬಗ್ಗೆ ಚಿಂತಿಸುತ್ತಿರುವವಳಾಗಿ, [ಅತಿಥಿಯಾಗಿ] ಸಮೀಪಸ್ಥಿತನಾದ [ಮಹಾ]ತಪಸ್ವಿಯನ್ನೂ ನೀನರಿಯದೆಹೋದೆಯಲ್ಲವೇ? [ಇದಕ್ಕೆ ಪ್ರತಿಯಾಗಿ,] ಜ್ಞಾಪಿಸಿಕೊಟ್ಟರೂ ಆತನು ನಿನ್ನನ್ನು ಜ್ಞಾಪಿಸಿಕೊಳ್ಳಲಾಗದಿರಲಿ: ತಾನೇ ಮೊದಲಾಡಿದ ಮಾತನ್ನು ಕುಡುಕನು ಮರೆತುಕೊಳ್ಳುವನಲ್ಲವೇ? ಹಾಗಾಗಲಿ!" – ಎಂದವರೇ, ಹೊರಟೇಬಿಟ್ಟರು. ದೂರದಲ್ಲಿದ್ದ ಶಕುಂತಲೆಯ ಸಖಿಯು ಓಡಿಬಂದು ಅವರ ಪಾದಕ್ಕೆ ಬಿದ್ದಳು, ಕ್ಷಮೆ ಯಾಚಿಸಿದಳು - ಶಕುಂತಲೆಯ ಪರವಾಗಿ. ಶಾಪಕ್ಕೆ ಕೊನೆಯನ್ನು ಸೂಚಿಸಿ ಮುನಿ ಮರೆಯಾದರು.

ಎಲ್ಲರಿಗೆ ಬರುವ ಪ್ರಶ್ನೆ - ಇಲ್ಲಿ ಶಕುಂತಲೆಯ ತಪ್ಪೆಂತು? - ಎಂಬುದು. ಏಕೆ? ಅಂದಷ್ಟೇ ಹಿಂದಿರುಗಿದ ಪತಿಯ ಕುರಿತು ಚಿಂತನಾಲಹರಿಗಳು ಬರುವುದು ತಪ್ಪೇ?; ಯೌವನಸ್ಥೆಯಾದವಳು ಅವಲ್ಲಿ ಮೈಮರೆಯುವುದರಲ್ಲಿ ಆಶ್ಚರ್ಯವಾದರೂ ಏನು? ಆದರೆ, ಧರ್ಮದ ಅತಿಕ್ರಮವಾದಾಗ ಮುನಿಗೆ ಕ್ರೋಧವುಕ್ಕದಿರಲಾಗುವುದೇ?

ಮುಂದೆ, ಶಕುಂತಲೆಯೂ ಮುನಿಪರಿವಾರವೂ ದುಷ್ಯಂತನ ಆಸ್ಥಾನಕ್ಕೆ ಬಂದರು. ಧರ್ಮಪತ್ನಿಯನ್ನೊಪ್ಪಿಸಿಹೋಗಲು ಬಂದಿದ್ದೇವೆಂದರು. ಶಾಪವಂತೂ ಬಲುಹಿಂದೆಯೇ ಪ್ರಭಾವ ಬೀರಿಯಾಗಿತ್ತು! ಸ್ಮೃತಿಯೇ ಅಳಿಸಿಹೋದಂತಾದವರಿಗೆ ಜ್ಞಾಪಿಸಿದರೂ ಉದ್ಬೋಧವಾಗದು!

"ಪತ್ನಿಯಾದವಳು ಪತಿಯೊಂದಿಗೆ ಇರುವುದೇ ಸಹಜವಾದದ್ದು; ತವರುಮನೆಯಲ್ಲಿಯೇ ಇರುವುದದಾವ ಶೋಭೆ?: ಎಂದೇ ಇವಳನ್ನು ನಿನ್ನಲ್ಲಿಗೆ ತಂದೊಪ್ಪಿಸುತ್ತಿರುವುದು" - ಎಂಬ ಕಣ್ವಶಿಷ್ಯನ ಮಾತಿಗೆ, ದುಷ್ಯಂತನು ಸಾಶ್ಚರ್ಯನಾಗಿ ಕೇಳಿದುದು "ಅಂದರೆ, ನಾನಿವಳನ್ನು ವಿವಾಹವಾಗಿದ್ದೇನೆಂದೇ?" ಎಂದು! "ಇದೇನು ದರ್ಪದ ಮಾತೆಂದೇ?" ಎಂಬ ಋಷಿಯ ಕೇಳ್ಕೆಗೆ "ತಮ್ಮ ಆಕ್ಷೇಪವು ತೀವ್ರವಾಗಲಿಲ್ಲವೇ?" ಎಂದು ಸಂಯಮದಿಂದಲೇ ಕೇಳುತ್ತಾನೆ, ರಾಜ. "ಅವಳ ಮುಖವನ್ನು ಕಂಡರೆ ನೆನಪು ಬರದೆ ಏನು?" ಎಂದುಕೊಂಡ ತಾಪಸಿಯ ಯತ್ನವೂ ಸಫಲವಾಗುವುದಿಲ್ಲ.

"ಸ್ಪಷ್ಟವಾಗಿಯೇ ಗರ್ಭವತಿಯಾಗಿರುವ ಈಕೆಯನ್ನು, ನನ್ನ ಪತ್ನಿಯೇ ಇವಳಿರಬೇಕೆಂದು ಮತ್ತೊಬ್ಬರ ಮಾತನ್ನು ಆಧರಿಸಿ ಸ್ವೀಕರಿಸಲಾದೀತೇ?" ಎಂದು ರಾಜನು ಕೇಳುತ್ತಾನೆ. "ಇದು ದಸ್ಯು-ವರ್ತನೆಯಾಯಿತು!"- ಎಂದು ಮುನಿಶಿಷ್ಯನು ರೊಚ್ಚಿಗೇಳುತ್ತಾನೆ; ಇದೆಂತಹ ವಂಚನೆಯೆಂದು ಶಕುಂತಲೆಯೂ ಬೆಚ್ಚಿಬೀಳುತ್ತಾಳೆ.

ಸಖಿಯರು ಸೂಚಿಸಿದ್ದಂತೆ ಉಂಗುರವನ್ನು ತೋರಿಸಿಬಿಟ್ಟರಾಯಿತು - ಎಂದುಕೊಂಡ ಅವಳಿಗೆ, ಉಂಗುರವೆಲ್ಲೋ ಜಾರಿಹೋಗಿರುವುದು ಆಗಷ್ಟೆ ಗೋಚರವಾಗುತ್ತದೆ! ಏಕಾಂತದ ಪ್ರಸಂಗವೊಂದನ್ನು ಜ್ಞಾಪಿಸಲೆಳಸುತ್ತಾಳೆ; ಅದೂ ವಿಫಲವೇ ಆಗುತ್ತದೆ. ಓ! ಹಿರಿಯರ ಪಾತ್ರವಿಲ್ಲದೆ ನಡೆಯುವ ರಹಸ್ಯವಿವಾಹಗಳಲ್ಲಿ ಸಮಸ್ಯಾಪರಿಹಾರವೇನು ಸುಲಭವೇ?

ಹಲವು ಪತ್ನಿಯರಿರುವುದರಿಂದ ಒಬ್ಬಳಲ್ಲಿ ಆಸಕ್ತಿಯು ಹೆಚ್ಚಿ ಮತ್ತೊಬ್ಬಳು ಮನಸ್ಸಿನಿಂದ ಮರೆಯುವಂತಾಗುವುದು ಅರಸರಲ್ಲಿ ಅಸಂಭವವಲ್ಲ, ಅಲ್ಲವೆ? ಶಕುಂತಲೆಯ ವಿಷಯವೂ ಹಾಗೇ ಆಗಿದ್ದರೋ? - ಎಂಬರ್ಥದ ಋಷಿಪ್ರಶ್ನೆಗೆ ರಾಜನ ಪ್ರತಿಪ್ರಶ್ನೆ ಸಿದ್ಧ: "ಹಾಗಿದ್ದರೆ ತಾವೇ ಹೇಳೋಣವಾಗಲಿ: ಸ್ವಪತ್ನೀತ್ಯಾಗವು ಹೆಚ್ಚು ದೋಷವೋ? ಪರಪತ್ನೀಸ್ವೀಕಾರವೋ?" ಈ ಧರ್ಮಸೂಕ್ಷ್ಮದ ಪ್ರಶ್ನೆಗೆ ಆ ಧರ್ಮಧುರಂಧರರಲ್ಲೂ ಉತ್ತರವಿಲ್ಲ!

ಕೊನೆಗೆ ನಿರ್ವಾಹವಿಲ್ಲದೆ ಹೀಗೆ ನಿಶ್ಚಯಿಸುವುದಾಗುತ್ತದೆ: ಪ್ರಸವಪರ್ಯಂತ ಆಕೆಯು ರಾಜಪುರೋಹಿತನ ಆಶ್ರಯದಲ್ಲಿರತಕ್ಕದ್ದು; ರಾಜನಿಗೊದಗಿರುವ ಪೂರ್ವಾಶೀರ್ವಾದದಂತೆ, ಹುಟ್ಟುವ ಶಿಶುವು ಚಕ್ರವರ್ತಿಲಕ್ಷಣಸಂಪನ್ನನಾಗಿದ್ದಲ್ಲಿ ಅವಳನ್ನು ರಾಜನು ಪತ್ನಿಯನ್ನಾಗಿ ಸ್ವೀಕರಿಸತಕ್ಕದ್ದು; ಇಲ್ಲದಿದ್ದಲ್ಲಿ ಆಕೆ ಹಿಂದಿರುಗತಕ್ಕದ್ದಿದ್ದೇ ಇದೆ! ಬೇರೆ ದಾರಿಕಾಣದೆ ಹೆಜ್ಜೆಯಿಟ್ಟ ಶಕುಂತಲೆಯನ್ನು ಮೇನಕೆಯು ಒಯ್ಯುವ ಅದ್ಭುತವಿಲ್ಲಿ ನಡೆಯುತ್ತದೆ.

ಮುಂದೆ ಉಂಗುರವು ದೊರೆತು ಶಾಪಾಂತವಾಗುತ್ತದೆ: ದುಷ್ಯಂತನಿಗೆ ಶಕುಂತಲಾಸ್ಮರಣೆಯೂ ದುಃಖವೂ ಉಕ್ಕುತ್ತವೆ. ಕೆಲಕಾಲಾನಂತರ ಪುತ್ರದರ್ಶನ-ಶಕುಂತಲಾದರ್ಶನಗಳು ಕಶ್ಯಪಮಹರ್ಷಿಗಳ ಆಶ್ರಮದಲ್ಲಿ ಸಂಭವಿಸುತ್ತವೆ; ಅವರಿಂದ ಶಾಪವೃತ್ತಾಂತದ ಅರಿವಾಗುತ್ತಲೇ ಇಬ್ಬರ ಮನಸ್ಸುಗಳೂ ತಿಳಿಯಾಗುತ್ತವೆ.

ಅಂತೂ ಶಕುಂತಲೆಯು ತಾನು ಮಾಡಿದ ತಪ್ಪಿನಿಂದ ತಾನು ಮಾತ್ರವಲ್ಲದೆ ತನ್ನ ಪತಿಯೂ ತೀವ್ರಕ್ಲೇಶಗಳನ್ನು ಅನುಭವಿಸುವಂತಾಯಿತು! ಶಾಪಕ್ಕೆ ಅಂತವೆಂಬುದು ದೊರೆತುದಾದರೂ ಅವಳ ಸಖಿಯರ ಸಮಯಪ್ರಜ್ಞೆ-ಕ್ಷಮಾಯಾಚನೆಗಳಿಂದಾಗಿ! ಅಪರಾಧಿಯ ಪರವಾಗಿ ಮತ್ತೊಬ್ಬರು ಯಾಚಿಸಿದರೂ ಕ್ಷಮಿಸುವ ದೊಡ್ಡಕರುಣೆ ಮುನಿಯದು, ಅಲ್ಲವೇ?

ತಪ್ಪಾದದ್ದು ಗೊತ್ತಾಗಿ, ಬಳಿಕ ಅದಕ್ಕಾಗಿ ಪೇಚಾಡಿ ದುಃಖಪಡುವುದು ಪಶ್ಚಾತ್ತಾಪವೆನಿಸುತ್ತದೆ; ಆಗಿಬಿಟ್ಟಿರುವ ತಪ್ಪಿಗೆ ಪ್ರತಿವಿಧಾನವನ್ನು ಮಾಡಿಕೊಳ್ಳುವುದು ಪ್ರಾಯಶ್ಚಿತ್ತವೆನಿಸುತ್ತದೆ. ಆದರಿದೋ, ಅಪರಾಧವೆಸಗಿಯೂ ಶಕುಂತಲೆ ಪಶ್ಚಾತ್ತಾಪಪಡಲಿಲ್ಲ: ತಪ್ಪೆಸಗಿದ್ದು ಗೊತ್ತಾಗಿದ್ದರಲ್ಲವೆ? ಇನ್ನು, ಅವಳ ಪರವಾಗಿ ಮತ್ತೊಬ್ಬರು ಪ್ರಾಯಶ್ಚಿತ್ತಮಾಡಿಕೊಡುವಂತಾಯಿತು! ಇತ್ತ, ತಪ್ಪು ತನ್ನದೇಯೋ ಎಂದು ಭ್ರಮಿಸಿ ದುಷ್ಯಂತನೇ ತಾಪಪಡುವಂತಾಯಿತು!

ಧರ್ಮಾಚರಣೆಯಲ್ಲಿ ಎಚ್ಚರವಾಗಿರುವಿಕೆಯು ಅದೆಷ್ಟು ಮುಖ್ಯವೆಂಬುದನ್ನು ಈ ಪ್ರಸಂಗವು ಚೆನ್ನಾಗಿ ಮನದಟ್ಟುಮಾಡಿಕೊಡುತ್ತದೆ. ನಮ್ಮ ಹಾಗೂ ನಮ್ಮವರ ನೆಮ್ಮದಿಗಾಗಿ ಧರ್ಮದ ಬಗೆಗಿನ ಜಾಗರೂಕತೆ ಬೇಕು!

ಸೂಚನೆ : 30/09/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.