Sunday, October 23, 2022

ವ್ಯಾಸ ವೀಕ್ಷಿತ - 9 ಭೀಮ-ಹಿಡಿಂಬರ ಕಾಳಗ (Vyaasa Vikshita-6 Bhima-Hidimbara Kalaga)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


(ಸಾಂದರ್ಭಿಕ ಚಿತ್ರ) 

ರೊಚ್ಚಿಗೆದ್ದ ಹಿಡಿಂಬನ ಆಗಮನದಿಂದ ಆತಂಕಗೊಂಡ ಹಿಡಿಂಬೆಗೆ ಧೈರ್ಯಹೇಳುತ್ತಾ ಭೀಮನೆಂದ: "ಹೆದರಬೇಡ ಹಿಡಿಂಬೆ, ನೀನು ನೋಡುತ್ತಿರುವಂತೆಯೇ ಈ ಹಿಡಿಂಬನನ್ನು ಸಂಹರಿಸಿಬಿಡುವೆ. ನನಗಿವನಾವ ಲೆಕ್ಕ! ನೋಡು ನನ್ನ ತೋಳುಗಳನ್ನು - ಆನೆಯ ಸೊಂಡಿಲಿನಂತಿರುವುದನ್ನು! ಮನುಷ್ಯನೆಂದೇನೂ ನನ್ನನ್ನು ಕಡೆಗಾಣಿಸಬೇಡ". ಅದಕ್ಕುತ್ತರವಾಗಿ ಹಿಡಿಂಬೆಯೂ, "ದೇವರೂಪಿಯಾದ ನಿನ್ನನ್ನು ಕಡಿಮೆಯೆಂದು ನಾ ಭಾವಿಸುತ್ತಿಲ್ಲ. ಆದರೆ ಮನುಷ್ಯರ ಮೇಲೆ ಈ ರಾಕ್ಷಸನ ಬಲವೆಂತಹುದೆಂಬುದನ್ನು ಬಲ್ಲೆನಾಗಿ ಹಾಗೆ ಹೇಳಿದೆ" ಎಂದಳು.

ಬಳಿಬಂದ ಹಿಡಿಂಬನಿಗೆ ಇವಳೀ ಮಾತುಗಳು ಕೇಳಿಸದೆ ಇರಲಿಲ್ಲ. ಕ್ರೋಧದಿಂದ ಅವಳತ್ತ ನೋಡಿದ. ಆದರದೆಂತಹ ರೂಪವನ್ನವಳೀಗ ಧರಿಸಿದ್ದಳು!: ತಲೆಯ ಮೇಲೆ ಹೂಮಾಲೆಯೇನು, ಚಂದ್ರನಂತಿರುವ ವದನವೇನು, ಕೋಮಲವಾದ ಚರ್ಮ-ಉಗುರುಗಳೇನು, ಪೇರಿಸಿಕೊಂಡ ಆಭರಣಗಳೇನು, ನವಿರಾದ ಆ ಸೂಕ್ಷ್ಮವಸ್ತ್ರವೇನು! ಮಾನುಷರೂಪಧಾರಿಣಿಯಾದ ಈಕೆ ಪುಂಸ್ಕಾಮೆಯಾಗಿದ್ದಾಳೆ (ಎಂದರೆ ಪುರುಷನನ್ನು ಬಯಸುತ್ತಿರುವವಳಾಗಿದ್ದಾಳೆ) - ಎಂಬುದು ಸ್ಫುಟವಾಗಿಹೋಯಿತು! ಕೋಪವುಕ್ಕಿತು.  ಸಿಟ್ಟಿನಿಂದ ಅವಳನ್ನು ದಿಟ್ಟಿಸಿ ನೋಡುತ್ತಾ, "ನನ್ನನ್ನಕ್ಕೇ ಕಲ್ಲು  ಹಾಕುವೆಯಾ, ದುರ್ಮತಿ! ನನ್ನ ಕೋಪಕ್ಕೂ ಹೆದರೆಯಾ, ಅಸತಿ! ಸರ್ವಪೂರ್ವರಾಕ್ಷಸಶ್ರೇಷ್ಠರಿಗೂ ತಂದಿರುವೆ ನೀನಪಕೀರ್ತಿ. ಇಲ್ಲಿರುವ ಇವರೆಲ್ಲರನ್ನೂ ಕೊಲ್ಲುವೆ - ನಿನ್ನೊಂದಿಗೇ" ಎಂದಬ್ಬರಿಸಿದ.

ಕೆಂಗಣ್ಣಿನಿಂದ ನೋಡುತ್ತಾ, ಹಲ್ಲುಕಡಿಯುತ್ತಾ, ಕೊಲ್ಲಲೆಂದು ಅವಳತ್ತ ನುಗ್ಗಿಬರುತ್ತಿದ್ದ ಹಿಡಿಂಬನನ್ನು ಕಂಡು ನಿಲ್ಲುನಿಲ್ಲೆನ್ನುತ್ತಾ ಭೀಮನೆಂದ: "ಏಯ್! ನನ್ನನ್ನು ಬಯಸಿರುವ ಇವಳು ನಿನಗಾವ ಅಪಚಾರ ಮಾಡಿದ್ದಾಳೆ? ದುಷ್ಟನೇ! ನಾನಿಲ್ಲಿರಲು ಸ್ತ್ರೀವಧೆಯನ್ನು ನೀ ಮಾಡಲಾರೆ (ನ ಸ್ತ್ರಿಯಂ ಹಂತುಮರ್ಹಸಿ). ನನ್ನೊಂದಿಗೆ ಸೆಣಸು: ನಿನ್ನನ್ನಿಂದು ಯಮಲೋಕಕ್ಕಟ್ಟುವೆ! ನಿನ್ನ ತಲೆಯಿಂದು ಜಜ್ಜಿಹೋಗುತ್ತದೆ - ಆನೆಯ ತುಳಿತಕ್ಕೊಳಗಾದಂತೆ. ನಿನ್ನ ಶರೀರವನ್ನಿಂದು ಗೃಧ್ರ-ಗೋಮಾಯುಗಳು (ಗಿಡುಗಗಳು, ನರಿಗಳು) ಎಳೆದಾಡುವುವು. ಈ ಕಾಡಿನಲ್ಲಿನ್ನು ರಾಕ್ಷಸರೇ ಇಲ್ಲದಂತೆ ಮಾಡಿಹಾಕುವೆ!  ಆನೆಯನ್ನು ಸಿಂಹವು ಮತ್ತೆ ಮತ್ತೆ ಎಳೆದಾಡುವಂತೆ ನಿನ್ನನ್ನು ನಾನೆಳೆದಾಡುವುದನ್ನು ನಿನ್ನ ತಂಗಿಯೀಗ ಕಾಣುವಳು."

ಅದಕ್ಕೆ ಹಿಡಿಂಬನೆಂದ: " ನಿನ್ನ ಗರ್ಜನೆಯಿಂದೇನು, ಕೊಚ್ಚಿಕೊಳ್ಳುವುದರಿಂದೇನು? ಸಾಧಿಸಿ ತೋರಿಸಿ ಕೊಚ್ಚಿಕೋ, ವಿಳಂಬಬೇಡ. ಯಾರ ಬಲ ಅಧಿಕವೆಂಬುದನ್ನೀಗ ನೀನರಿಯುವೆ. ಮಲಗಿರುವ ಇವರನ್ನು ಈಗ ಹಿಂಸಿಸುವುದಿಲ್ಲ. ನಿನ್ನನ್ನು ಮೊದಲು ಕೊಂದು, ನಿನ್ನ ರಕ್ತ ಕುಡಿದು, ಆ ಬಳಿಕ ಇವರನ್ನೂ, ಜೊತೆಗೆ ಇವಳನ್ನೂ, ಸಂಹರಿಸುವೆ!"

ಹೀಗೆ ಹೇಳಿದವನೇ, ಭೀಮನ ಮೇಲೇರಿ ಬಂದ. ಬಿರುಸಾಗಿ ಬಂದ ಆತನ ತೋಳಿಗೆ  ಪಟ್ಟು ಹಾಕಿ ಒಂದಿಪ್ಪತ್ತು ಅಡಿ ಆತನನ್ನು ಎಳೆದಾಡಿದ, ಭೀಮ - ಕ್ಷುದ್ರಮೃಗವೊಂದನ್ನು ಸಿಂಹವು ಎಳೆದಾಡುವಂತೆ. ಭೀಮನನ್ನು ಬರಸೆಳೆದು ಭೀಕರಧ್ವನಿಯನ್ನು ಹಿಡಿಂಬನು ಮಾಡಿದ ("ಭೈರವಂ ರವಂ"). ಅವರ ಸೆಣಸಾಟಕ್ಕೆ ಭಗ್ನವಾದ ಮರಗಳೆಷ್ಟೋ, ಎಳೆದಾಟಕ್ಕೆ ಸಿಕ್ಕ ಲತೆಗಳೆಷ್ಟೋ! ಆನೆಗಳೆರಡರ ಹೋರಾಟದಂತಾಗಿತ್ತು, ಅವರ ಕಾಳಗ. ಅವರ ದಾರುಣಯುದ್ಧಕ್ಕೆ ಸುತ್ತಲಿನ ಮೃಗಪಕ್ಷಿಗಳು ಬೆದರಿಹೋದವು! ಅವರ ಗರ್ಜನ-ಪ್ರತಿಗರ್ಜನಗಳ ಗುಲ್ಲಿಗೆ, ಹೊಡೆತ-ಬಡಿತಗಳ ಸದ್ದಿಗೆ, ಮಲಗಿದ್ದವರೆಲ್ಲರೂ ಎದ್ದರು!

ನಿದ್ದೆಯಿಂದೆದ್ದ ಕುಂತಿಯು ಬಳಿಯಿದ್ದ ಹಿಡಿಂಬೆಯ ಅಲೌಕಿಕರೂಪರಾಶಿಯನ್ನು ಕಂಡು, "ದೇವಕನ್ಯೆಯಂತಿರುವ ನೀನಾರು, ಸುಂದರಿ? ನೀನೇನು ವನದೇವತೆಯೋ ಅಪ್ಸರಸ್ತ್ರೀಯೋ? ಇಲ್ಲಿ ಬಂದು ನಿಂತಿರುವುದೇಕೆಂಬುದನ್ನು ಹೇಳುವೆಯಾ?" ಎಂದು ಕೇಳಿದಳು.

(ಮುಂದುವರೆಯುವುದು)

ಸೂಚನೆ : 23/10/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.