Sunday, October 23, 2022

ಯೋಗ-ಭೋಗದ ದೀಪಾವಳಿ ಹಬ್ಬ(Yoga-Bhogada Dipavali Habba)

ಲೇಖಕರು: ವಾದಿರಾಜ. ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in)


 


ಹಬ್ಬಕ್ಕೊಂದು ನೋಟ 

ಭಾರತದಾದ್ಯಂತ ದೀಪಾವಳಿ ಹಬ್ಬವು ಬಂತೆಂದರೆ ಎಲ್ಲಿಲ್ಲದ ಸಂತೋಷ, ಸಂಭ್ರಮ-ಸಡಗರ. ಪ್ರಾತಃಕಾಲದಲ್ಲಿ ಅಭ್ಯಂಗ ಮಾಡಿಕೊಂಡು, ಹಿರಿಯರಿಂದ ಆರತಿ ಎತ್ತಿಸಿಕೊಂಡು, ಸ್ನಾನವನ್ನು ಮಾಡಿ, ಹೊಸ ವಸ್ತ್ರವನ್ನು ಧರಿಸಿ ಸಂಭ್ರಮಿಸುವುದು, ವಿವಿಧ ಬಗೆಯ ತಿಂಡಿತಿನಿಸುಗಳನ್ನು ಆಸ್ವಾದಿಸುವುದು-ಇವುಗಳಿಂದಾಗಿ  ಈ ಹಬ್ಬ ಬಂತೆಂದರೆ ಅದೆಷ್ಟು ಸಂತೋಷ! ಪಟಾಕಿಯಂತೂ ಅತಿ ಉತ್ಸಾಹವನ್ನು ಕೊಡುತ್ತದೆ. ಅನೇಕ ಬಗೆಯ ಪಟಾಕಿಗಳು -ಶಬ್ದರಹಿತ, ಬಗೆಬಗೆಯ ಬೆಳಕಿನ ಬಣ್ಣದ್ದು, ಶಬ್ದ ಬರುವಂಥದ್ದು, ಗಾಳಿಯಲ್ಲಿ ತೇಲಿಹೋಗಿ ಆಕಾಶದಲ್ಲಿ ಚಿತ್ತಾರದೊಂದಿಗೆ ಶಬ್ದದೊಡನೆ ವಿಜೃಂಭಿಸುವುದು- ಇತ್ಯಾದಿ ಎಲ್ಲ ವಯಸ್ಸಿನವರಿಗೂ ಖುಷಿತರುವಂತಹದ್ದೇ. ಇವೆಲ್ಲವೂ ನಮ್ಮ ಇಂದ್ರಿಯತೃಪ್ತಿಯ ವಿಷಯಗಳಾದವು. ಇದರ ಹಿಂಬದಿಯಲ್ಲೇನಾದರೂ ತಾತ್ತ್ವಿಕ ದೃಷ್ಟಿ ಇದೆಯೇ ಎಂದು ಆಲೋಚಿಸಬೇಕು.

 ನಮ್ಮ ಮಹರ್ಷಿಗಳು ತಂದುಕೊಟ್ಟ ಹಬ್ಬದ ಹಿನ್ನೆಲೆಯನ್ನು ಅರ್ಥಮಾಡಿಕೊಂಡು, ಆಚರಿಸಿದಾಗ ಭೋಗ- ಯೋಗ ಎರಡನ್ನೂ ಅನುಭವಿಸಿ ಆನಂದಿಸಬಹುದಾಗಿದೆ.

 


ದೀಪಾವಳಿ ಹಬ್ಬದ ಮಹತ್ತ್ವ 

ಈ ಹಬ್ಬವನ್ನು ಚಾಂದ್ರಮಾನದ ಪ್ರಕಾರ ಆಚರಣೆ ಮಾಡುವ ಅಭ್ಯಾಸ ಬಂದಿದೆ. ಶರದೃತುವಿನಲ್ಲಿ, ಆಶ್ವಯುಜ ಮತ್ತು ಕಾರ್ತಿಕ ಎಂಬ ಎರಡು ಮಾಸಗಳು ಬರುತ್ತವೆ. ಆಶ್ವಯುಜ ಮಾಸದ ಕೃಷ್ಣಪಕ್ಷದ ಚತುರ್ದಶಿಯಿಂದ ಪ್ರಾರಂಭಿಸಿ ಕಾರ್ತಿಕ ಮಾಸದ ಶುಕ್ಲ ಪ್ರತಿಪತ್, ಈ ಮೂರುದಿನಗಳ ಕಾಲವನ್ನು 'ದೀಪಾವಳಿ' ಎಂದು ಆಚರಿಸಲಾಗುತ್ತಿದೆ. ಇನ್ನು ಕೆಲವರಲ್ಲಿ, ಸೌರಮಾನದ ಪ್ರಕಾರ 'ತುಲಾವೃಶ್ಚಿಕಯೋಃ ಶರತ್' ಎಂಬ ವಾಕ್ಯದಂತೆ ತುಲಾಮಾಸದ ಶುಕ್ಲ ಪಾಡ್ಯದಿಂದ ದರ್ಶದವರೆಗಿನ(ಅಮಾವಾಸ್ಯೆ) ಕಾಲವನ್ನು ಒಂದು ಮಾಸ ಎಂದು ಪರಿಗಣಿಸಿ ಕೃಷ್ಣಪಕ್ಷದ ಚತುರ್ದಶಿಯಿಂದ ಮೂರು ದಿನಗಳನ್ನು ದೀಪಾವಳಿಯ ಹಬ್ಬವಾಗಿ ಆಚರಿಸುವ ಪದ್ಧತಿ ಇದೆ. ಇನ್ನು ತುಲಾಮಾಸ ಅಥವಾ ಕಾರ್ತಿಕ ಮಾಸದ ಸಮಯದಲ್ಲಿ ಆಚರಿಸುವ ಈ ಹಬ್ಬವು ಸತ್ಫಲವನ್ನು, ಸಂತೋಷವನ್ನು ಕೊಡುವುದು.

 

ಕಾರ್ತಿಕಸ್ನಾನ ಮತ್ತು ತುಲಾಸ್ನಾನ ಎಂಬ ಎರಡು ವಿಧಿಯೂ ಸಮಂಜಸವಾಗಿದೆ. ದೀಪಾವಳಿ (ದೀಪಗಳ ಸಾಲು) ಎಂದು ದೀಪದ ಹಬ್ಬವನ್ನು ಕಾರ್ತಿಕ ಮಾಸದ ರೀತ್ಯಾ ಅಚರಿಸುವಲ್ಲಿ ಔಚಿತ್ಯವನ್ನು ಕಾಣಬಹುದು. ಯಾವ ಮಾಸದ ಪೂರ್ಣಿಮೆಯಂದು ಕೃತ್ತಿಕಾನಕ್ಷತ್ರವು ಘಟಿಸುವುದೋ ಆ ಮಾಸಕ್ಕೆ ಕಾರ್ತಿಕಮಾಸ ಎಂದು ಕರೆಯುತ್ತಾರೆ. "ಕೃತ್ತಿಕಾನಕ್ಷತ್ರಮಗ್ನಿರ್ದೇವತಾ" ಎಂದು ವೇದವು ಹೇಳುವಂತೆ ಕೃತ್ತಿಕಾನಕ್ಷತ್ರವನ್ನು ಅಗ್ನಿದೇವತಾತ್ಮಕವಾದ ನಕ್ಷತ್ರವೆಂದು ಕರೆಯಲಾಗಿದೆ. ಎಂದೇ ಈ ಮಾಸದಲ್ಲಿ  ದೀಪವನ್ನು ಬೆಳಗಿಸುವುದೇ ಔಚಿತ್ಯ. ಲಕ್ಷದೀಪೋತ್ಸವ, ವಿಷ್ಣುದೀಪೋತ್ಸವ, ಶಿವದೀಪೋತ್ಸವ ಎಂದೆಲ್ಲ ದೀಪಾರಾಧನೆಯೇ ಪ್ರಧಾನವಾಗಿರುವುದು ಇಲ್ಲಿನ ವಿಶೇಷತೆ. ಯಾವುದೇ ಬಗೆಯಲ್ಲಿ ದೀಪವನ್ನು ಆರಾಧಿಸಿದರೂ, ಅದು ದೀಪರೂಪೀ ಪರಮಾತ್ಮನ ಆರಾಧನೆಯಾಗಿ ಪರ್ಯವಸಾನವಾಗುತ್ತದೆ ಎಂಬುದು ಜ್ಞಾನಿಗಳ ಮಾತು. 

 

ಹಬ್ಬದ ಮುನ್ನ, ಸಕಲ ಸೌಭಾಗ್ಯಗಳನ್ನೂ ಕರುಣಿಸುವ  ಮಹಾಲಕ್ಷ್ಮಿಯನ್ನು ಸ್ವಾಗತಿಸಲು ಇಡೀ ಮನೆಯನ್ನು ಸ್ವಚ್ಛಗೊಳಿಸಿ ಸಿಂಗರಿಸುವ ಸಂಭ್ರಮ. ಉತ್ತರಭಾರತದಲ್ಲಿ 'ಧನ್ತೇರಸ್' ಎಂಬ ಹೆಸರಿನಲ್ಲಿ ಆಚರಿಸುತ್ತಾರೆ. ಹೊಸ ಮನೆ, ಆಭರಣ, ವಾಹನ ಮೊದಲಾದವುಗಳನ್ನು ಕೊಂಡು ಸಂಗ್ರಹ ಮಾಡುವ ಕಾಲವಿದಾಗಿದೆ. ದೀಪಾವಳಿ ಮಹೋತ್ಸವವು ವಿವಿಧ ಹಬ್ಬಗಳನ್ನೊಳಗೊಂಡು, ಸುಖರಾತ್ರಿ, ಸುಖಸುಪ್ತಿಕಾ, ಯಕ್ಷರಾತ್ರಿ, ಕೌಮುದೀಮಹೋತ್ಸವ, ಬಲಿಪಾಡ್ಯಮೀ, ನರಕಚತುರ್ದಶೀ, ವೀರಪ್ರತಿಪದಾ, ಭಗಿನಿದ್ವಿತೀಯಾ, ಸೋದರಬಿದಿಗೆ ಇತ್ಯಾದಿ ನಾಮಗಳಿಂದ ಪ್ರಸಿದ್ಧವಾಗಿದೆ. ಇದನ್ನು ಕೇವಲ ವೈದಿಕಸಂಪ್ರದಾಯದಲ್ಲಿ ಮಾತ್ರವಲ್ಲ, ಬೌದ್ಧ, ಜೈನ ಸಂಪ್ರದಾಯಗಳಲ್ಲೂ ಆಚರಿಸುವ ರೂಢಿಯಿದೆ. ಅಲ್ಲದೇ, ಈ ಹಬ್ಬವನ್ನು  ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ತಮಿಳುನಾಡು ಆಂಧ್ರ, ಮಹಾರಾಷ್ಟ್ರ ಹೀಗೆ ಭಾರತದ ಪ್ರತಿಯೊಂದು ಭಾಗದಲ್ಲೂ ಅತ್ಯಂತ ವಿಜೃಂಭಣೆಯಿಂದ ಆಚರಿಸುವಂತಹದ್ದಾಗಿದೆ.

ದೀಪಾವಳಿಯಲ್ಲಿ ನಾವು ಮನೆಯಲ್ಲಿ  ಬೆಳಗುವ ದೀಪಗಳು, ನಮಗೆ, ನಮ್ಮೊಳಗಿನ  ಅಧ್ಯಾತ್ಮದೀಪದ ನೆನಪನ್ನುಂಟುಮಾಡುವ  ಪ್ರತೀಕಗಳು.  ಆ ಆಧ್ಯಾತ್ಮ ದೀಪವೇ ದೀಪಾವಳಿಯ ಕೇಂದ್ರ ಬಿಂದು, ಉಗಮಸ್ಥಾನ. ಇಂದ್ರಿಯಸೌಖ್ಯ ಹಾಗೂ ಮೋಕ್ಷ ಸಾಧನೆಗೆ ಸಹಾಯಕವಾದ ಮಹಾಪರ್ವಕಾಲ. 

 

 

ಗೋಪೂಜಾ

"ಪ್ರತಿಪದ್ದರ್ಶಸಂಯೋಗೇ ಕ್ರೀಡನಂ ತು ಗವಾಂ ಮತಮ್" (ನಿರ್ಣಯಾಮೃತ). ಈ ದಿನ ಗೋವುಗಳನ್ನು ಸ್ನಾನ ಮಾಡಿಸಿ, ಅಲಂಕಾರ ಮಾಡಿ " ಲಕ್ಷ್ಮೀರ್ಯಾ ಲೋಕಪಾಲಾನಾಂ ಧೇನುರೂಪೇಣ ಸಂಸ್ಥಿತಾ | ಘೃತಂ ವಹತಿ ಯಜ್ಞಾರ್ಥೇ ಮಮ ಪಾಪಂ ವ್ಯಪೋಹತು" ಎಂಬ ಮಂತ್ರದಿಂದ ಪೂಜಿಸಿ ಅವುಗಳಿಗೆ ತೃಪ್ತಿಯಾಗುವಷ್ಟು ಗ್ರಾಸವನ್ನು  ನೀಡಬೇಕು. ಗೋವರ್ಧನಪರ್ವತವನ್ನು "ಗೋವರ್ಧನ ಧರಾಧಾರ ಗೋಕುಲತ್ರಾಣಕಾರಣ | ಬಹುಬಾಹುಕೃತಚ್ಛಾಯ ಗವಾಂ ಕೋಟಿಪ್ರದೋ ಭವ" ಎಂಬ ಮಂತ್ರದಿಂದ ಪ್ರದಕ್ಷಿಣೆ ಮಾಡಿ ಗೋಪಾಲಕೃಷ್ಣನನ್ನು ಆರಾಧಿಸಬೇಕು. ಈ ದಿನ ಮಧ್ಯಾಹ್ನ, ಹಸುಗಳನ್ನು ರಾಸುಗಳನ್ನು ಮೈದಾನಕ್ಕೆ ಕರೆದೊಯ್ದು, ಅವುಗಳನ್ನು ಓಡಿಸಿ ಆಟವಾಡುವ ಪದ್ಧತಿಯಿದೆ. ಅಲ್ಲದೆ ರಾತ್ರಿಯಲ್ಲಿ ಅವುಗಳಿಗೆ 'ಕಿಚ್ಚಾಯಿಸಿ' ಅವುಗಳಿಗಿರುವ ದೃಷ್ಟಿದೋಷವನ್ನು ತೆಗೆಯುವ ಪದ್ಧತಿಯೂ ಇದೆ. ಈ ದಿನ ಗೋಪಾಲಕೃಷ್ಣನು ಗೋವರ್ಧನ ಪರ್ವತವನ್ನು ಕಿರುಬೆರಳಿನಿಂದ ಎತ್ತಿ ಗೋವುಗಳನ್ನು, ಗೋಪಾಲಕರನ್ನು ರಕ್ಷಿಸಿ ಇಂದ್ರನ ಗರ್ವಭಂಗ ಮಾಡಿದನೆಂಬ ಪುರಾಣ ಕಥೆ ಈ ಹಬ್ಬಕ್ಕಿದೆ. 

 


ದೀಪದ ವಿಶೇಷತೆ  

ನರಕ ಚತುರ್ದಶಿಯಿಂದ ಆರಂಭಿಸಿ ಕಾರ್ತಿಕಮಾಸದ ಪರ್ಯಂತ ಎಲ್ಲೆಲ್ಲೂ ದೀಪಗಳನ್ನು ಲಕ್ಶಲಕ್ಷಸಂಖ್ಯೆಯಲ್ಲಿ ಬೆಳಗಿಸುವುದು ಪದ್ಧತಿ. ದೀಪವು ಭಗವಂತನ ಪ್ರತೀಕ. ದೀಪದ ಜ್ವಾಲೆ ಭಗವಂತನ ವರ್ಣವನ್ನು ಹೋಲುತ್ತದೆ. ತಿಲತೈಲ ಅಥವಾ ತುಪ್ಪದ ದೀಪವನ್ನು ಬೆಳಗಿಸಬೇಕು. ಏಕೆಂದರೆ ಈ ದೀಪದಿಂದ ಬರುವ ಬೆಳಕು ಮಾತ್ರ ಭಗವಂತನ ಬಣ್ಣವನ್ನು ಬಹುವಾಗಿ ನೆನಪಿಸುವಂತಹದ್ದು. ವಿಷ್ಣುದೀಪೋತ್ಸವ, ಶಿವದೀಪೋತ್ಸವ, ಕಾರ್ತಿಕಸೋಮವಾರ, ಲಕ್ಷದೀಪೋತ್ಸವ, ಆಕಾಶದೀಪ ಹೀಗೆ ಪ್ರತಿನಿತ್ಯವೂ ದೀಪವನ್ನು ಆರಾಧಿಸುವ ವಿಶೇಷವಾದ ಹಬ್ಬವೇ ದೀಪಾವಳಿ. ಭಗವಂತನನ್ನು ಬೇರೆಬೇರೆ ರೂಪದಲ್ಲಿ ಆರಾಧಿಸಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಲು ನಮ್ಮ ಭಾರತೀಯ ಮಹರ್ಷಿಗಳು ಕಂಡು ಅರುಹಿದ ಪವಿತ್ರಕಾಲ. 

 

ಅಭ್ಯಂಗದ ಮಹತ್ತ್ವ

ಕಾರ್ತಿಕ ಮಾಸದ ಪ್ರಾತಃಕಾಲದಲ್ಲಿ ಮಾಡುವ ಅಭ್ಯಂಗಸ್ನಾನ ಅತ್ಯಂತ ಶ್ರೇಷ್ಠ ಎನ್ನಲಾಗಿದೆ. ಅಥವಾ ತುಲಾಸ್ನಾನ ಎಂದೇ ಪ್ರಸಿದ್ಧವಾದ ನದಿ, ಸಮುದ್ರಗಳಲ್ಲಿ ಮಾಡುವ ಸ್ನಾನವೂ ಮಹಾಪಾತಕನಾಶಕ  ಎಂದು ಅದರ ಮಹತ್ತ್ವವನ್ನು ಸಾರಲಾಗಿದೆ. ಆಶ್ವಯುಜ ಮಾಸದ ಶುಕ್ಲಪಕ್ಷದ ಏಕಾದಶಿಯಿಂದ ಪ್ರಾರಂಭಿಸಿ ಕಾರ್ತಿಕಮಾಸದ ಪೂರ್ತಿ, ಪ್ರಾತಃಕಾಲದಲ್ಲಿ ಮಾಡುವ ಅಭ್ಯಂಗವು ವಿಶೇಷಫಲದಾಯಕವಾಗಿದೆ ಎಂದು ಭಾರ್ಗವ ವಚನವಿದೆ. ಯಾರು ಪ್ರತಿನಿತ್ಯ ಅಭ್ಯಂಗ ಅಥವಾ ತೀರ್ಥಸ್ನಾನಮಾಡುತ್ತಾರೋ ಮತ್ತು ಶಾಂತನಾಗಿ ಜಪಧ್ಯಾನಗಳಲ್ಲಿ ಮುಳುಗಿ ಯಜ್ಞಪ್ರಸಾದರೂಪವಾದ ಹವಿಷ್ಯಾನ್ನವನ್ನು ಸ್ವೀಕರಿಸುತ್ತಾರೋ ಅಂತಹವರು ಎಲ್ಲಾ ಪಾಪಗಳಿಂದ ಮುಕ್ತರಾಗುತ್ತಾರೆಂಬ ಮಾತಿದೆ. ಈ ಕಾಲದಲ್ಲಿ ಕುರುಕ್ಷೇತ್ರ, ಗಂಗಾನದೀ, ಪುಷ್ಕರ, ದ್ವಾರಾವತೀ, ಮಥುರಾ ಹೀಗೆ ಪುಣ್ಯಕ್ಷೇತ್ರಗಳಲ್ಲಿ ಮಾಡುವ ಸ್ನಾನವು ಶ್ರೇಷ್ಠ ಫಲಗಳನ್ನು ನೀಡುತ್ತದೆ ಎಂಬುದು ಹಿರಿಯರ ಅನುಭವದ ಮಾತು.

ಈ ಅಭ್ಯಂಜನಸ್ನಾನ-ವೈಜ್ಞಾನಿಕವಾಗಿದೆಯೆಂದೂ, ಆರೋಗ್ಯ ಮತ್ತು ದೀರ್ಘಾಯುಸ್ಸನ್ನು ಒದಗಿಸಿ, ಯೋಗ ಮಾರ್ಗದ ವಿಘ್ನಗಳನ್ನು ಪರಿಹಾರಮಾಡುತ್ತದೆಂಬುದೂ ಸಹ  ಮಹರ್ಷಿಗಳ ಮತ. 

 

ನರಕಚತುರ್ದಶೀ ವಿಶೇಷತೆ  

ಈ ದಿನ ಬೆಳಗಿನ ಜಾವ ಮಾಡುವ  ತಿಲತೈಲದ  ಅಭ್ಯಂಗಸ್ನಾನವು ನರಕಭೀತಿಯನ್ನು ದೂರಮಾಡುತ್ತದೆ. ತೈಲದಲ್ಲಿ ಲಕ್ಷ್ಮಿಯು, ಜಲದಲ್ಲಿ ಗಂಗೆಯು ಈ ದಿನ ವಿಶೇಷಸಾನ್ನಿಧ್ಯವನ್ನು ವಹಿಸುವುದರಿಂದ ಈ ದಿನದಲ್ಲಿ ಮಾಡುವ ಸ್ನಾನದಿಂದ ಯಮಲೋಕದ ದರ್ಶನವೂ ಉಂಟಾಗದು ಎಂದು ಪದ್ಮಪುರಾಣದಲ್ಲಿ ಉಲ್ಲೇಖವಿದೆ. ಇದಕ್ಕೊಂದು ಪುರಾಣಕಥೆಯನ್ನೂ ಹೇಳುವುದುಂಟು. ನರಕಾಸುರನು ಹದಿನಾರುಸಾವಿರ ಸ್ತ್ರೀಯರನ್ನು ಬಲಾತ್ಕಾರವಾಗಿ ತನ್ನ ಸೆರೆಮನೆಯಲ್ಲಿ ಇರಿಸಿಕೊಂಡ. ಈತನ ಉಪಟಳ ಹೆಚ್ಚಾಗಿತ್ತು. ಶ್ರೀಕೃಷ್ಣನು ಅಸುರನನ್ನು ಸಂಹಾರ ಮಾಡಿ ಬಂಧಿತರಾದ ಆ ಸ್ತ್ರೀಯರನ್ನು ಬಿಡುಗಡೆಗೊಳಿಸಿ ಅವರಲ್ಲಿ ಆತ್ಮರತಿಯನ್ನು ಉಂಟುಮಾಡುವಂತೆ ಮಾಡಿದ. ನರಕಾಸುರನ ತಾಯಿಯ ಪ್ರಾರ್ಥನೆಯನ್ನು ಒಪ್ಪಿ ಅಂದಿನಿಂದ ಈ ದಿನವನ್ನು ನರಕಚತುರ್ದಶಿಯೆಂದು ಆಚರಿಸಲಾಗುವುದು, ಭಗವಂತ, ಲೋಕಕ್ಕೆ ಅನುಗ್ರಹಿಸಿದ ಪರ್ವಕಾಲ. ಇಲ್ಲಿ ತಾತ್ತ್ವಿಕವಾದ ಅಂಶವೊಂದಿದೆ. ಶ್ರೀಶ್ರೀರಂಗಪ್ರಿಯಸ್ವಾಮಿಗಳು ತಮ್ಮ 'ಭಾರತೀಯರ ಹಬ್ಬಹರಿದಿನಗಳು' ಎಂಬ ಪುಸ್ತಕದಲ್ಲಿ ಹೀಗೆ ವಿವರಿಸಿದ್ದಾರೆ. "ಶ್ರೀಕೃಷ್ಣನು ಪ್ರತ್ಯಕ್ ಜ್ಯೋತಿ-ಒಳಗಿನ ಬೆಳಕಾದ  ಭಗವಂತ. ನರಕಾಸುರನು ಹೊರಗಿನ ಬೆಳಕಿನ-ಅಂದರೆ ಕೇವಲ ಇಂದ್ರಿಯ ಸೌಖ್ಯದ ಹಿಂದೋಡುವ  ಪ್ರಾಗ್ಜ್ಯೋತಿಷಪುರದ ರಾಜ. ಹದಿನಾರುಸಾವಿರ ನಾರಿ ಅಂದರೆ ಹದಿನಾರುಸಾವಿರ ನಾಡಿಗಳು. ಪ್ರಣವಪಕ್ಷಿಯಾದ ಗರುಡನನ್ನು ಏರಿ ವಿಷ್ಣುವು ಪಂಚಭೂತಾತ್ಮಕವಾದ ಆಸುರೀ ಶಕ್ತಿಯನ್ನು ಸಂಹರಿಸಿದ. ಹದಿನಾರುಸಾವಿರ ನಾಡಿಗಳಲ್ಲಿ ತನ್ನ ಶಕ್ತಿಯನ್ನು ಹರಿಸಿ ಆ ಜೀವವನ್ನು ಉದ್ಧರಿಸಿದನೆಂಬುದು ಜ್ಞಾನಿಗಳು ಈ ಪ್ರಸಂಗಕ್ಕೆ  ನೀಡುವ ತಾತ್ತ್ವಿಕ ಹಿನ್ನೆಲೆ. 

 

ಲಕ್ಷ್ಮೀಪೂಜೆಯ ವಿಶೇಷತೆ

ಆಶ್ವಯುಜಮಾಸದ ಅಮಾಮಾಸ್ಯೆಯಂದು ಲಕ್ಷ್ಮೀಪೂಜೆಯನ್ನು ಮಾಡುತ್ತಾರೆ. ನಮ್ಮೊಳಗೇ ಬೆಳಗುತ್ತಿರುವ  ಮಹಾಲಕ್ಷ್ಮೀಯನ್ನು ವಿಗ್ರಹದಲ್ಲೋ, ಕಲಶದಲ್ಲೋ ಆವಾಹನೆಮಾಡಿ ಪೂಜಿಸಬೇಕು. ಲಕ್ಷ್ಮೀಪೂಜೆಗೆ ಪ್ರದೋಷ, ಅತ್ಯಂತಶ್ರೇಷ್ಠವಾದ ಕಾಲ. ಪ್ರದೋಷಕಾಲದಿಂದ ಆರಂಭಿಸಿ ಅರ್ಧರಾತ್ರಿಯವರೆಗೂ ಪೂಜೆ. ಈ ದಿನ ವರ್ತಕರಿಗೆ -ವ್ಯಾಪಾರಿಗಳಿಗೆ ಸಂಜೆ ಮಾಡುವ ಲಕ್ಷ್ಮೀಪೂಜೆ, ಹೊಸ ಆರ್ಥಿಕ ವರ್ಷದ ನಾಂದಿ. ಧನಕ್ಕೆ ಒಡೆಯನಾದ ಕುಬೇರನನ್ನೂ ಅರ್ಚಿಸುವ ವಾಡಿಕೆಯುಂಟು. ಸಾಯಂಕಾಲ ಅಂಗಡಿಯಲ್ಲಿ ತಾವು ಸಂಪಾದಿಸಿದ ಧನವನ್ನೇ ಲಕ್ಷ್ಮಿಯೆಂದು ಭಾವಿಸಿ ಅದು ಇನ್ನಷ್ಟು ವೃದ್ಧಿಯಾಗಲೆಂದು ಸಂಕಲ್ಪಮಾಡಿ, ಪೂಜಿಸಿ ಬಂಧುಬಾಂಧವರು ಇಷ್ಟಮಿತ್ರರಿಗೆ ಸಿಹಿ ವಿತರಿಸಿ ಸಂಭ್ರಮಿಸುತ್ತಾರೆ.  


ಬಲಿಪಾಡ್ಯಮೀ - ವಿಶೇಷಪೂಜೆ 

ಕಾರ್ತಿಕ ಮಾಸದ ಮೊದಲ ದಿನವೇ ಬಲಿಪಾಡ್ಯಮೀ. ಈ ದಿನ ಬಲಿಗೆ ವಿಶೇಷಪೂಜೆ ಸಲ್ಲುತ್ತದೆ.  ಐದು ಬಗೆಯ ಬಣ್ಣಗಳಿಂದ ಬಲಿಯನ್ನು ಭೂಮಿಯ ಮೇಲೆ ಚಿತ್ರಿಸಿ, ಮನೆಯೊಳಗೆ ಬಲಿಯನ್ನು ಕಲಶದಲ್ಲಿ ಆವಾಹಿಸಿ ಅರ್ಚಿಸಬೇಕು. ಸಾಮಾನ್ಯರು ಮಂಚದ ಮೇಲೆ ಬಿಳಿಯ ಅಕ್ಕಿಯಲ್ಲಿ  ಬಲಿಯನ್ನು ಆವಾಹಿಸಿ ಫಲ ಪುಷ್ಪಗಳಿಂದ ಅರ್ಚಿಸಬೇಕು. "ಬಲಿರಾಜ ನಮಸ್ತುಭ್ಯಂ ದೈತ್ಯದಾನವವಂದಿತ | ಇಂದ್ರಶರೋಽಮರಾರಾತೇ ವಿಷ್ಣುಸಾನ್ನಿಧ್ಯದೋ ಭವ" ಎಂಬ ಮಂತ್ರದಿಂದ ಪೂಜಿಸಬೇಕು. ಬಲಿಮಹಾರಾಜನು ದಾನಕ್ಕೆ ಪ್ರಸಿದ್ಧನು. ಈ ದಿನ ಮಾಡುವ ದಾನಕ್ಕೆ ವಿಶೇಷಫಲ. ಅಮಾಯುಕ್ತವಾದ ಪಾಡ್ಯದಂದು ಉಪವಾಸವಿದ್ದು ಬಲಿಯನ್ನು ಪೂಜಿಸಿ ಗೋವನ್ನು ಯಾರು ಪೂಜಿಸುತ್ತಾರೋ ಅಂತಹವರು ಅಭಿವೃದ್ಧಿಯನ್ನು ಹೊಂದುವರು ಎಂಬುದು ಶಾಸ್ತ್ರ ವಚನ. 

 

ಈ ಉತ್ಸವಕ್ಕೆ ಒಂದು ಪುರಾಣ ಮತ್ತು ತಾತ್ತ್ವಿಕವಾದ ಹಿನ್ನೆಲೆಯಿದೆ. ವಿಷ್ಣುವು ವಾಮನನ ರೂಪದಲ್ಲಿ ಅವತರಿಸಿ ಇಂದ್ರನ ರಾಜ್ಯವನ್ನು ಅಪಹರಿಸಿ ಅಧರ್ಮದಿಂದ ರಾಜ್ಯಭಾರ ಮಾಡುತ್ತಿದ್ದ ಬಲಿಯ ದರ್ಪವನ್ನು ಅಡಗಿಸಿ ಪಾತಾಲಲೋಕಕ್ಕೆ ತಳ್ಳಿ ಇಂದ್ರನ ರಾಜ್ಯವನ್ನು ಮರಳಿಸಿದ ಎಂಬುದು ಪುರಾಣಕಥೆ. ಬಲಿಯ ತಲೆಯ ಮೇಲೆ ತನ್ನ ದಿವ್ಯಪಾದವನ್ನು ಇಟ್ಟು, ಬಲಿಯಲ್ಲಿದ್ದ ಆಸುರಭಾವವನ್ನು ದೂರಮಾಡಿದ ಭಗವಂತ. ಅವನನ್ನು ಪುನೀತನನ್ನಾಗಿ ಮಾಡಿ ಉದ್ಧರಿಸಿದ ವಿಧಾನವಿದು. ಇದರಿಂದ  ಬಲಿಯು ಚಿರಂಜೀವಿ ಪದವಿಯನ್ನು ಪಡೆದ. ಅದು ಭಗವಂತನ ಅನುಗ್ರಹವೆಂದು ತಿಳಿದ ಪರಮಭಾಗವತನೀತ. ಹಾಗಾಗಿ ಭಾಗವತರ ಪೂಜೆಗೆ  ಭಗವಂತನನ್ನು ಪೂಜಿಸಿದಷ್ಟೇ ಫಲ.

 

ಪಗಡೆಯಾಟ ಯಾಕೆ ?

ಈ ದಿನ ಬೆಳಗ್ಗೆ, ಪಗಡೆಯಾಟವನ್ನು ಆಡುವ ರೂಢಿಯಿದೆ. ಪಾರ್ವತೀಪರಮೇಶ್ವರರು ಸೃಷ್ಟಿಯ ವಿನೋದಕ್ಕಾಗಿ ಪಗಡೆಯಾಡಿದರೆಂಬ ಪುರಾಣಕಥೆಯ ಹಿನ್ನೆಲೆಯಲ್ಲಿ ಪಗಡೆಯಾಟ ಬಂದಿದೆ. ಈ ಪಗಡೆಯಾಟದಲ್ಲಿ ತಾತ್ತ್ವಿಕವಾದ ಆಶಯವೂ ಅಡಗಿದೆ ಎಂಬುದಾಗಿ ಶ್ರೀಶ್ರೀರಂಗಪ್ರಿಯಸ್ವಾಮಿಗಳು ಹೀಗೆ ವಿವರಿಸಿದ್ದರು- "ಇದು ಸೃಷ್ಟಿಯಲ್ಲಿ ಬರುವ ತ್ರಿಗುಣಗಳ ಆಟ. ಜೀವಿಗಳು ಇಲ್ಲಿ ಪಗಡೆಕಾಯಿಗಳು. ಪುಣ್ಯಪಾಪರೂಪವಾದ ಜೀವಿಗಳ ಕರ್ಮಗಳು ದಾಳ. ಕೆಲವು ಕಾಯಿಗಳು ಹೊಡೆಯಲ್ಪಡುತ್ತವೆ. ಇನ್ನು ಕೆಲವು ಕಾಯಿಗಳು ಹಣ್ಣಾಗುತ್ತವೆ. ಹೊಡೆಯಲ್ಪಡುವ ಕಾಯಿಗಳು (ಜೀವಿಗಳು) ತಮ್ಮ ಕರ್ಮಾನುಗುಣವಾಗಿ ಪುನರ್ಜನ್ಮವನ್ನು ಪಡೆಯುತ್ತವೆ. ಹಣ್ಣಾದ ಕಾಯಿಗಳು ಮೋಕ್ಷವನ್ನು ಪಡೆಯುತ್ತವೆ. ಕೊನೆಗೊಮ್ಮೆ ಎಲ್ಲಾ ಕಾಯಿಗಳೂ ಹಣ್ಣಾಗುವಂತೆ ಎಲ್ಲಾ ಜೀವಿಗಳೂ ಮೋಕ್ಷವನ್ನು ಪಡೆಯಬೇಕು" ಎಂದು. ಇಂತಹ ಜಗನ್ಮಾತಾಪಿತೃಗಳನ್ನು ಸ್ಮರಿಸಿಕೊಂಡು ಆಡುವ ಆಟವಿದು.

 

ಭಗಿನೀದ್ವಿತೀಯಾ/ ಯಮದ್ವಿತೀಯಾ

ಕಾರ್ತಿಕಶುಕ್ಲಪಕ್ಷದ ಎರಡನೆಯ ದಿನದಂದು ಈ ಹಬ್ಬವನ್ನು ಆಚರಿಸಲಾಗುವುದು. ಈ ದಿನ ಯಮನು ತನ್ನ ಸೋದರಿ ಯಮುನೆಯ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸಿದನೆಂಬ ನಂಬಿಕೆಯಿದೆ. ಇದನ್ನೇ ಹಿನ್ನೆಲೆಯಾಗಿಸಿಕೊಂಡು ಅಂದು ಸೋದರಿಯರ ಮನೆಗೆ ಹೋಗಿ ಅವಳಿಂದ ಭೋಜನ ಸ್ವೀಕರಿಸಬೇಕು. ಮತ್ತು ಸೋದರಿಗೆ ಉಡುಗೊರೆ ಕೊಟ್ಟು ಗೌರವಿಸುವ ಪದ್ಧತಿಯಿದೆ. ಯಾವ ನಾರಿಯು ಈ ದಿನ ಅಣ್ಣನನ್ನು ಫಲತಾಂಬೂಲಾದಿಗಳಿಂದ ಸತ್ಕರಿಸುವಳೋ, ಅವಳು ವೈಧವ್ಯವನ್ನು ಹೊಂದಲಾರಳು ಎಂಬ ಶಾಸ್ತ್ರವಚನವಿದೆ. ಈ ಎಲ್ಲಾ ಕಾರಣದಿಂದ ಈ ದಿನಕ್ಕೆ ಅಷ್ಟೊಂದು ವಿಶೇಷತೆ.

 

ಉಪಸಂಹಾರ 

ಅನೇಕ ಮಹತ್ತ್ವಗಳಿಂದ ಕೂಡಿರುವ ಭಾರತೀಯ ಹಬ್ಬಗಳ ರಾಜ ದೀಪಾವಳಿ. "ಜೀವನವೃಕ್ಷಕ್ಕೆ ಮೂಲವುಂಟು. ಆ ಮೂಲವೇ ವಿದ್ಯಾಮೂಲವಾದ ಶರೀರವನ್ನು ಹೊಂದಿರುವ ಆ ಜ್ಯೋತಿಯಾಗಿದೆಯಪ್ಪ" ಎಂಬ ಶ್ರೀರಂಗ ಮಾಹಾಗುರುಗಳ ಮಾತು ಸ್ಮರಣೀಯವಾಗಿದೆ. ಯೋಗ-ಭೋಗಗಳ ಸಮನ್ವಯವಾಗಿರುವ ಈ ಬೆಳಕಿನ ಹಬ್ಬದ ಪರಿಪೂರ್ಣ ಪ್ರಯೋಜನವನ್ನು ಪಡೆಯೋಣ. ನಮ್ಮ ಭಾರತೀಯ ಮಹರ್ಷಿಗಳು ಕಂಡರುಹಿದ ಸತ್ಯವನ್ನು ನಾವೂ ಸಹ ಅನುಭವಿಸುವಂತಾಗಲೆಂದು ಆಶಿಸೋಣ.


ಸೂಚನೆ:  ಈ ಲೇಖನ ವಿಜಯವಾಣಿಯ 2022 ನೇ ವರ್ಷದ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾಗಿದೆ.