Monday, April 11, 2022

ಅಂತರಂಗ ಪ್ರಪಂಚದ ಸೊಬಗು (Antaranga Prapancada Sobagu)

ಲೇಖಕರು : ಸುಮುಖ ಹೆಬ್ಬಾರ್ 
(ಪ್ರತಿಕ್ರಿಯಿಸಿರಿ lekhana@ayvm.in)


ಪ್ರವೀಣನೆಂಬ ಯುವಕನು, ಒಂದು ನಗರವನ್ನು ನೋಡಿಕೊಂಡು ಬಂದು ತನ್ನವರ ಜೊತೆ, ಅಲ್ಲಿನ ಉದ್ಯಾನವನಗಳು, ಕಟ್ಟಡಗಳು, ನದಿ-ಸರೋವರಗಳು ಇತ್ಯಾದಿಗಳ ವಿಷಯವಾಗಿ ವಿವರಿಸುತ್ತಿದ್ದನು.  ಗುಂಪಿನಲ್ಲಿ ಕೇಳುತ್ತಿದ್ದ ತರುಣನಿಗೆ, ಪ್ರವೀಣನ ವಿವರಣೆಯನ್ನು ಕೇಳಿ, ಇಂತಹ ನಗರವು ಇರಲು ಸಾಧ್ಯವೇ  ಇಲ್ಲ ಎನ್ನಿಸಿತು. ಇದನ್ನೆಲ್ಲಾ ಪ್ರವೀಣನು ಕಲ್ಪಿಸಿಕೊಂಡು ಹೇಳುತ್ತಿದ್ದಾನೆ ಎಂದು ಆರೋಪಿಸಿದನು. ಇದನ್ನು ಸಾವಧಾನವಾಗಿ ಆಲಿಸಿದ ಪ್ರವೀಣನು, "ನೀನು ನನ್ನ ಜೊತೆಯಲ್ಲಿ ಬರುವುದಾದರೆ ಅದನ್ನೆಲ್ಲ ತೋರಿಸುವೆ. ಆದರೆ ಹೋಗುವ ದಾರಿ ತುಂಬಾ ದುರ್ಗಮವಾಗಿದೆ" ಎಂದನು. ಉತ್ಸಾಹಿಯಾದ ತರುಣನು ಇದನ್ನು ಸವಾಲಾಗಿ ಸ್ವೀಕರಿಸಿ, ಬರುವೆನೆಂದ. ಇಬ್ಬರೂ ಹೊರಟರು. ಅದು ಕಲ್ಲು-ಮುಳ್ಳು ಬೆಟ್ಟ ಕಾಡುಗಳಿಂದ ಕೂಡಿದ ಕಷ್ಟಕರವಾದ ಹಾದಿ. ಪ್ರವೀಣನಿಗೆ ಹಾದಿಯ ಪರಿಚಯವಿದ್ದುದರಿಂದ ಸುಲಭವಾಗಿ ಮುಂದೆ ಸಾಗುತ್ತಿದ್ದನು. ಆದರೆ ತರುಣನಿಗೆ ಪ್ರಯಾಣ ಹೊಸತಾದ್ದರಿಂದ, ಹಲವಾರು ಕಡೆಗಳಲ್ಲಿ ಆಯುತಪ್ಪಿ ಬಿದ್ದನು. ಪ್ರವೀಣನ ಸಹಾಯದಿಂದ ಎದ್ದು, ಬೀಳದಂತೆ ಮುಂದೆ ಸಾಗಲು ಮಾರ್ಗದರ್ಶನವನ್ನು ಪಡೆದನು. ಆಗಾಗ್ಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದನು. ಪ್ರವೀಣನ ಮಾತಿನಿಂದ ಸ್ಫೂರ್ತಿಯನ್ನು ಪಡೆಯುತ್ತಾ, ಮುಂದೆ ಸಾಗುತ್ತಾ ಬಂದನು. ಹೀಗೆಯೇ ಮುಂದುವರೆಯುತ್ತಾ, ಒಂದು ದಿನ ಆ ಅದ್ಭುತ ನಗರವನ್ನು ತಲುಪಿ, ಅದರ ಸೌಂದರ್ಯವನ್ನು ಆಸ್ವಾದಿಸಿದನು. ಪ್ರವೀಣನು ಹೇಳಿದಂತೆಯೇ ನಗರವು ಇರುವುದನ್ನು ಮನಗಂಡು, ಸತ್ಯವೆಂದು ಒಪ್ಪಿಕೊಂಡನು.  

ಭಾರತೀಯ ಇತಿಹಾಸ ಪುರಾಣಗಳಲ್ಲಿ ಅನೇಕ ಜಾಗಗಳ ಉಲ್ಲೇಖವಿದೆ. ಕೈಲಾಸವೆಂಬ ಜಾಗದಲ್ಲಿ ಶಿವನು ತನ್ನ ಗಣಗಳೊಡನೆ ವಾಸವಿರುವನಂತೆ. ಸಪ್ತದ್ವಾರದಾಚೆ ಹಾಲಿನ ಸಮುದ್ರದ ಮಧ್ಯದಲ್ಲಿ, ಒಂದು ಮಹಾಸರ್ಪದ ಮೇಲೆ ವಿಷ್ಣುವು ಪವಡಿಸಿದ್ದಾನಂತೆ. ಅದು ವೈಕುಂಠವಂತೆ. ಸ್ವರ್ಗವೆಂಬ ಇಂದ್ರನ ಆಸ್ಥಾನ. ಅಲ್ಲಿ ಇಂದ್ರ, ಅಗ್ನಿ, ವರುಣ ಮುಂತಾದ ದೇವತೆಗಳ ಉಪಸ್ಥಿತಿ ಇರುತ್ತದೆಯಂತೆ. ರಂಭೆ, ಊರ್ವಶಿ, ಮೇನಕೆ  ತಿಲೋತ್ತಮೆ ಮುಂತಾದ ಅಪ್ಸರೆಯರು ನರ್ತಿಸುವರಂತೆ. ಪಾಪಿಗಳನ್ನು ಶಿಕ್ಷಿಸುವ ಜಾಗ ಯಮಲೋಕವಂತೆ.  ಹೀಗೆ ಅನೇಕ ಜಾಗಗಳಷ್ಟೇ ಅಲ್ಲದೆ, ಅನೇಕ ದೇವತೆಗಳ ಆಕಾರಗಳು, ಅವರ ವೇಷಭೂಷಣಗಳು, ವಾಹನಗಳು ಮತ್ತು ಆಯುಧಗಳು ಮುಂತಾದವುಗಳ ವಿವರಣೆ ಸಿಗುತ್ತದೆ. ಇಂತಹವುಗಳನ್ನೆಲ್ಲಾ ಗಮನಿಸಿದಾಗ ಹೀಗೆ ಇರಲು ಸಾಧ್ಯವಿದೆಯೇ? ಅಥವಾ ಕಲ್ಪನೆಯೇ? ಎಂಬ ಪ್ರಶ್ನೆ ಬರುವುದು ಸಹಜವಷ್ಟೇ.       

ಮಹರ್ಷಿಗಳು ತಮ್ಮ ನೋಟವನ್ನು ಭೌತಿಕವಾದ ಪ್ರಪಂಚಕ್ಕಷ್ಟೇ ಸೀಮಿತಗೊಳಿಸದೆ, ಇಂದ್ರಿಯಗಳನ್ನು ನಿಗ್ರಹಗೊಳಿಸಿ ಅತಿದುರ್ಗಮವಾದ ಅಂತರ್ಯಾತ್ರೆಯನ್ನು ಮಾಡುತ್ತಾ, ಆಧಿದೈವಿಕ ಮತ್ತು ಆಧ್ಯಾತ್ಮಿಕ ಪ್ರಪಂಚದಲ್ಲಿ ವಿಹರಿಸುವ ಸಾಮರ್ಥ್ಯವುಳ್ಳವರಾಗಿದ್ದರು. ಅಂತರಂಗದಲ್ಲಿ ಕಂಡ ಅಮರವಾದ ಆನಂದಮಯವಾದ ಸತ್ಯವನ್ನು ಅಂತೆಯೇ ಇತಿಹಾಸ-ಪುರಾಣಗಳಲ್ಲಿ, ಕಾವ್ಯಗಳಲ್ಲಿ, ಸ್ತೋತ್ರಗಳಲ್ಲಿ ಮತ್ತು ದೇವಾಲಯಗಳ ವಿಗ್ರಹಗಳಲ್ಲಿ ಚಿತ್ರಿಸಿದ್ದಾರೆ. ಹಾಗೆಯೇ ಈ ಸತ್ಯವನ್ನು ಅರಿಯುವ ಮಾರ್ಗವನ್ನು ಹಾಕಿಕೊಟ್ಟಿದ್ದಾರೆ.  ಪ್ರವೀಣನು, ತರುಣನನ್ನು ದಾರಿಯಲ್ಲಿ ಮುನ್ನಡೆಸಿ ಕರೆದೊಯ್ಯುವಂತೆ, ಗುರು ಸ್ಥಾನದಲ್ಲಿರುವ ನಮ್ಮ ಋಷಿಗಳು ಅಂತಮಾರ್ಗದಲ್ಲಿ ಅಡೆತಡೆಗಳಿದ್ದರೂ ಶಿಷ್ಯರನ್ನು  ಮುನ್ನಡೆಸಿ, ಸತ್ಯದರ್ಶನದಿಂದ ಅವರನ್ನು  ಹೂಗುಟ್ಟುವಂತೆ ಮಾಡಿದ್ದಾರೆ. ಶ್ರೀರಂಗ ಮಹಾಗುರುಗಳು, "ಅಂತರಂಗದ ಸತ್ಯವನ್ನು ಕಂಡು, ನಮಗೆ ತಿಳಿಸುವವರನ್ನು ಆಪ್ತರು(ಪಡೆದವರು)" ಎಂಬುದಾಗಿ ಕರೆಯುತ್ತಿದ್ದರು. ಇಂತಹವರ ಸತ್ಯಸಿದ್ಧವಾದ ಮಾತುಗಳೇ  ಆಪ್ತವಾಕ್ಯಗಳು. ಅವನ್ನು ನಮ್ಮ ಜೀವನದಲ್ಲಿ  ಪ್ರಾಮಾಣಿಕವಾಗಿ  ಅನುಸರಿಸುತ್ತಾ ನಡೆಯುವಂತಾಗಿ  ನಮಗೂ ಅಂತಹ ಸತ್ಯದರ್ಶನವಾಗಲಿ ಎಂದು ಆಶಿಸೋಣ.

ಸೂಚನೆ: 11/04/2022 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.