Sunday, April 17, 2022

ಕಾಳಿದಾಸನ ಜೀವನದರ್ಶನ – 6 ವಿದ್ಯೆ: ಸಾಧನೆ ಮತ್ತು ಸಂಕ್ರಾಂತಿ (Kalidasana Jivanadarshana - 6 Vidye: Sadhane Mattu Sankranti)

ಲೇಖಕರು : ಪ್ರೊ.  ಕೆ. ಎಸ್. ಕಣ್ಣನ್
ಪೀಠಪ್ರಾಧ್ಯಾಪಕರು, ಐ.ಐ.ಟಿ. ಮದ್ರಾಸ್.


ವಿದ್ಯೆಯ ಪ್ರಸನ್ನತೆಯನ್ನು ಗಳಿಸಬೇಕು ಎಂದರೆ ಯಾವ ರೀತಿ? – ಎಂಬ ಪ್ರಶ್ನೆ ಎದುರಾಗುವುದು ಸಹಜವೇ. ದಿಲೀಪನು ನಂದಿನಿಯ ಪ್ರಸನ್ನತೆಯನ್ನು ಸಾಧಿಸಿದ ಕ್ರಮವು ಅದಕ್ಕೆ ದಾರಿದೀಪ. ಅದನ್ನು ಪರಿಶೀಲಿಸುವ ಮುನ್ನ, ನಮ್ಮಲ್ಲಿಯೇ ಆಗಬೇಕಾದ ಸಿದ್ಧತೆಯೂ ಒಂದುಂಟೆಂಬುದನ್ನು ಮನಗಾಣವುದುಚಿತ.

ನಮ್ಮಲ್ಲಿಯೇ ಒಂದು ಪ್ರಸನ್ನತೆಯಿಲ್ಲದಿದ್ದರೆ ವಿದ್ಯೆಯ ಪ್ರಸನ್ನತೆಯನ್ನು ಸಾಧಿಸಲಾರೆವು. ಪ್ರಸನ್ನತೆಯೆಂದರೆ "ತಿಳಿ"ಯಷ್ಟೆ. ನಮ್ಮ ಮನೋ-ಬುದ್ಧಿಗಳು ಬಗ್ಗಡದಿಂದ ತುಂಬಿಹೋಗಿದ್ದಲ್ಲಿ ವಿದ್ಯೆಯ ಪ್ರಸನ್ನತೆಯಿರಲಿ, ಸಾಧಾರಣವಾದ ಗ್ರಹಣ-ಧಾರಣಗಳು ಸಹ ಸಾಧ್ಯವೆನಿಸವು. ಹಾಗಾದರೆ ಈ ಧೀ-ಚಿತ್ತಗಳ ಮಲಗಳೆಂದರೇನು?

ಕಾಮ-ಕ್ರೋಧಾದಿಗಳು ಮನಸ್ಸಿನ ಕೊಳೆಗಳು. ಈ ವೇಗಗಳಿದ್ದಲ್ಲಿ ಮನಸ್ಸಿನಲ್ಲಿ ದುಗುಡವಿದ್ದು, ಪಾಠ ಕೇಳುವಾಗಲೂ ಕಿವಿಯೆಲ್ಲೋ ಮನಸ್ಸೆಲ್ಲೋ ಎಂಬಂತಾಗುತ್ತದೆ. ಶಾಂತವಾದ ಮನಸ್ಸಿನೊಂದಿಗೇ ಶ್ರವಣವಾಗಬೇಕಲ್ಲವೇ? ಹಾಗೆ ಶ್ರವಣವಾಗುವುದಾದರೆ, ಬುದ್ಧಿಯ ಬಗ್ಗಡಗಳು ದೂರವಾಗುವುದು ಸುಲಭ. ಭ್ರಮೆ-ಸಂಶಯಗಳು ಬುದ್ಧಿಯ ಬಗ್ಗಡಗಳು. ಸಂಶಯವೆಂದರೆ ಇದು ಸರಿಯೋ ಅದು ಸರಿಯೋ (ಎರಡೂ ಅಲ್ಲವೋ)? – ಎಂದೆಲ್ಲಾ ತೋರುತ್ತಿರುವುದು. ಭ್ರಮವೆಂದರೆ ಸರಿಯನ್ನೇ ತಪ್ಪೆಂದುಕೊಳ್ಳುವುದು, ತಪ್ಪನ್ನೇ ಸರಿಯೆಂದುಕೊಂಡುಬಿಡುವುದು. ಸಂಶಯ-ಭ್ರಮೆಗಳೇ ಸಂದೇಹ-ಭ್ರಾಂತಿಗಳು. ಅವುಗಳ ನಿವಾರಣೆಯಾಗಬೇಕಲ್ಲವೇ?

ಹೀಗೆ ಈ ಬಗ್ಗಡಗಳೆಲ್ಲಾ ಕಳೆದಾಗ ಉಳಿಯುವುದೇ ತಿಳಿ.  ಅಜ್ಞಾನ-ಅಲ್ಪಜ್ಞಾನ-ಅನ್ಯಥಾಜ್ಞಾನಗಳು ಮರೆಯಾದಾಗಲೇ   ಸ್ಪಷ್ಟತೆಯುಂಟಾಗುವುದು (ಅನ್ಯಥಾಜ್ಞಾನ ಎಂದರೆ ತಪ್ಪಾದ ಗ್ರಹಿಕೆ). ಇದೇ ತಿಳಿವು. ಇಂತಹ  ತಿಳಿವಿನಿಂದಲೇ ಉಚಿತ-ಅನುಚಿತಗಳ, ಸರಿ-ತಪ್ಪುಗಳ, ಸರಿಯಾದ ಅಳತೆಯು ಸಾಧ್ಯವಾಗುವುದು. ಅಳತೆಯನ್ನೇ ಅಳಕೆಯೆನ್ನಬಹುದು. ತಿಳಿವಿನಿಂದಾಗುವ ಈ ಅಳಕೆಯನ್ನು 'ತಿಳಿವಳಕೆ' ಎಂದು ಕರೆಯುವುದೇ ಯೋಗ್ಯ: ಇದು ಪ್ರಸಿದ್ಧವಾದ 'ತಿಳಿವಳಿಕೆ' ಎನ್ನುವುದಕ್ಕಿಂತಲೂ ಸಮುಚಿತಪದವೆಂದು ಶಬ್ದಸೌಷ್ಠವ-ಶಬ್ದವ್ಯುತ್ಪತ್ತಿಗಳತ್ತ ವಿಶೇಷಗಮನಕೊಡುತ್ತಿದ್ದ ಶ್ರೀರಂಗಮಹಾಗುರುಗಳು ಸೂಚಿಸಿದ್ದರು. (ಸೌಷ್ಠವವೆಂದರೆ ಸುಷ್ಠುವಾಗಿರುವಿಕೆ; ವ್ಯುತ್ಪತ್ತಿಯೆಂದರೆ ಆ ಪದವು ಹುಟ್ಟಿದ್ದು ಹೇಗೆಂಬುದರ ವಿಚಾರ). ತಿಳಿಯಾದ ತಿಳಿವಿಗಿಂತಲೂ ದೊಡ್ಡದೇನಿದೆ? ಶಮದೊಂದಿಗಿನ ಈ ಬೋಧಕ್ಕೆ ಸಾಟಿಯುಂಟೇ?

ಇಂತಹ ವಿದ್ಯಾಪ್ರಸಾದವನ್ನು ಸಂಪಾದಿಸುವ ಬಗೆಯೇನು? - ಎಂಬ ಪ್ರಶ್ನೆಗೆ ಕಾಳಿದಾಸನ ಉತ್ತರವು ಸಿದ್ಧ. "ವಿದ್ಯಾಮ್ ಅಭ್ಯಸನೇನೇವ ಪ್ರಸಾದಯಿತುಮರ್ಹಸಿ" (ರಘುವಂಶ ೨.೮೮). ಅಲ್ಲಿಗೆ,  ಪುನಃಪುನರಭ್ಯಾಸದಿಂದಲೇ ವಿದ್ಯೆಯ ಪ್ರಸನ್ನತೆಯನ್ನು ಸಂಪಾದಿಸುವುದು ಸಾಧ್ಯವಾಗುವುದು. ಅಭ್ಯಸನ-ಮನನಗಳಿಂದಲೇ ಅಧಿಗಮನ.

ದಿಲೀಪನಿಗೆ ಈ ಮಾತನ್ನು ಒಂದು ಉಪಮೆಯಾಗಿಯೇ ವಸಿಷ್ಠಮಹರ್ಷಿಗಳು ಹೇಳುತ್ತಾರೆ. ನಂದಿನೀಧೇನುವಿನ ಸೇವೆಯನ್ನು ಹಾಗೆ ಮಾಡಿ ಅದರ ಒಂದು ಪ್ರಸನ್ನತೆಯನ್ನು ದಿಲೀಪನು ಸಂಪಾದಿಸಬೇಕಾಗಿದೆ - ಎಂದು ಹೇಳುತ್ತಾರೆ: ಅಭ್ಯಾಸದಿಂದ ವಿದ್ಯೆಯನ್ನು ಒಲಿಸಿಕೊಳ್ಳುವ ಬಗೆಯಲ್ಲೇ ಅದು ಸಾಧ್ಯವಾಗುವುದೆಂಬುದನ್ನು ಸೂಚಿಸುತ್ತಾರೆ. ದಿಲೀಪನು ಸ್ವತಃ ರಾಜನಾಗಿದ್ದುಕೊಂಡು ಲೋಕದ ಲೆಕ್ಕಕ್ಕೆ ಸಾಧಾರಣ-ಪ್ರಾಣಿಯೆನಿಸುವ ಗೋವಿನ ಸೇವೆಯನ್ನು ಸ್ವತಃ ಅದ್ಭುತವಾಗಿ ನೆರವೇರಿಸುತ್ತಾನೆ.

ಯಾವಾಗಲೂ ಉಪಮೆಯೆಂಬುದು ಸರ್ವವಿದಿತವೂ ಸುಲಭಗ್ರಾಹ್ಯವೂ ಆಗಿರುತ್ತದೆಯಷ್ಟೆ. ಹೀಗಾಗಿ, ಮತ್ತೆ ಮತ್ತೆ ಮಾಡುವ ಅಭ್ಯಾಸದಿಂದಲೇ ವಿದ್ಯಾಪ್ರಸಾದವು ಸಿದ್ಧವಾಗುವುದು -ಎಂಬುದು ಉಪಮೆಗಾಗಿ ಕೊಡುವಷ್ಟು ಸುಪ್ರಸಿದ್ಧವಾದದ್ದು – ಎಂದಂತಾಯಿತು!

'ವ್ಯಸನ'ವೆಂಬ ಪದಕ್ಕೆ ದುಃಖವೆಂಬ ಅರ್ಥ ಕನ್ನಡದಲ್ಲಿ ಪ್ರಚುರ; ಸಂಸ್ಕೃತದಲ್ಲೂ ಆ ಅರ್ಥವಿದೆ; ಆದರೂ ಸಂಸ್ಕೃತದಲ್ಲಿ ಅದಕ್ಕಿಂತಲೂ ಹೆಚ್ಚು ಪ್ರಸಿದ್ಧವಾದ ಅರ್ಥವೆಂದರೆ 'ಗೀಳು' ಎಂಬುದು. ವಿದ್ಯೆಯ ಅಭ್ಯಸನವು ಒಂದು ಗೀಳಾಗಬೇಕೆಂದು ಸುಭಾಷಿತವೊಂದು ಹೇಳುತ್ತದೆ: "ವಿದ್ಯಾಭ್ಯಸನಂ ವ್ಯಸನಮ್". ಹಾಗಾದಲ್ಲಿ ಅದೊಂದು ಉಪಾಸನೆಯೇ ಆಗುತ್ತದೆ. ಹಾಗೆ ಉಪಾಸಿತವಾದ ವಿದ್ಯೆಯು ಒಲಿಯದಿರುವುದೇ? ಪ್ರೀತ್ಯಾದರಗಳಿಂದ ಮಾಡುವ ಗೋಸೇವೆಯ ಹಾಗೆ ಆಗಬೇಕಾದದ್ದು ವಿದ್ಯಾಸೇವೆಯೆಂದು ನಾವಿಂದು ಹೇಳಬಹುದು!

ಗುರುಲಕ್ಷಣ

ವಿದ್ಯೆಯನ್ನು ಹೇಳಿಕೊಡಬೇಕಾದ ಗುರುವು ಹೇಗಿರಬೇಕೆಂಬುದನ್ನೂ ಕಾಳಿದಾಸನು ಸುಭಗವಾಗಿ ನಿರೂಪಿಸುತ್ತಾನೆ. ಶಿಕ್ಷಕರಲ್ಲಿ ಎರಡು ಬಗೆಯುಂಟೆಂದು ತೋರಿಸುತ್ತಾನೆ. ಇದು ನಮ್ಮ ಅನುಭವಕ್ಕೂ ಬರುವಂತಹುದೇ. ಕಲಿತ ವಿದ್ಯೆಯು ಕೆಲವರಲ್ಲಿ "ಆತ್ಮಸಂಸ್ಥ"ವಾಗಿದ್ದು "ಶ್ಲಿಷ್ಟ"ವಾಗಿ ಚೆನ್ನಾಗಿರುತ್ತದೆ. ಹಾಗೆಂದರೇನು? ಅವರಲ್ಲಿ ನೆಲೆಗೊಂಡಿರುತ್ತದೆ, ಹಾಗೂ ಅವರಿಗೆ ಚೆನ್ನಾಗಿ "ಅಂಟಿರುತ್ತದೆ", ಎಂದರೆ ಮೈಗೂಡಿರುತ್ತದೆ. ಸುಶೋಭಿತವಾಗಿರುತ್ತದೆ ("ಆತ್ಮಸಂಸ್ಥಾ ಶ್ಲಿಷ್ಟಾ"). ಅಂತಹ ಶಿಕ್ಷಕರು ಅದನ್ನು ಚೆನ್ನಾಗಿ ಜಿತ ಮಾಡಿಕೊಂಡಿರುತ್ತಾರೆ.

ಮತ್ತೆ ಕೆಲವರಲ್ಲಿಯ ವಿಶೇಷವೆಂದರೆ ಸಂಕ್ರಾಂತಿ. ಸಂಕ್ರಾಂತಿಯೆಂದರೂ ಸಂಕ್ರಮಣವೆಂದರೂ ಒಂದೇ. ಈ ಎರಡೂ ಪದಗಳಿಗೆ "ಒಂದೆಡೆಯಿಂದ ಮತ್ತೊಂದೆಡೆಗೆ ಹೆಜ್ಜೆಯಿಡುವುದು" ಎಂದು ಅರ್ಥ. ಇಲ್ಲಿಯ ಪ್ರಸಂಗದಲ್ಲಿ ಸಂಕ್ರಮಣವೆಂದರೆ ಸಂಕ್ರಾಮಣವೆಂದೇ. ಹಾಗೆಂದರೇನು? ಸಂಕ್ರಮಣವೆಂದರೆ, ಒಂದೆಡೆಯಿಂದ ಮತ್ತೊಂದೆಡೆಗೆ ತಾನು ಹೋಗುವುದು; ಇನ್ನು ಸಂಕ್ರಾಮಣವೆಂದರೆ ಒಂದು ಸ್ಥಾನದಿಂದ ಮತ್ತೊಂದು ಸ್ಥಾನಕ್ಕೆ ತಲುಪಿಸುವುದು, ಅಲ್ಲಿ ನೆಲೆಗೊಳಿಸುವುದು.  

ಇಲ್ಲಿ ಅದರ ಅನ್ವಯ ಹೀಗೆ. ವಿದ್ಯೆಯು ಗುರುವಿನಲ್ಲುಂಟು; ಗುರುವು ಬೋಧಿಸಿದ ಬಳಿಕ ಈಗ ಅದು ಶಿಷ್ಯನಲ್ಲಿಗೆ ಬಂದಿದೆ: ಅರ್ಥಾತ್ ಗುರುವಿನಿಂದ ಶಿಷ್ಯನಿಗೆ "ವಿದ್ಯೆಯ ಸಂಕ್ರಮಣ"ವಾಗಿದೆ; ವಿದ್ಯೆಯನ್ನು ಗುರುವು "ಸಂಕ್ರಾಮಣ"ಗೊಳಿಸಿದ್ದಾನೆ. ಹೀಗೆ ಕೆಲವು ಶಿಕ್ಷಕರು ವಿದ್ಯಾಸಂಕ್ರಾಂತಿಯನ್ನು ಶಿಷ್ಯರಲ್ಲಿ ಚೆನ್ನಾಗಿ ಉಂಟಾಗಿಸುತ್ತಾರೆ. ತಾವು ತಿಳಿದಿರುವುದು ತೀರ ಹೆಚ್ಚಲ್ಲವಾದರೂ ಅವರು ಮಾಡಿಸುವ ವಿದ್ಯಾಸಂಕ್ರಮಣವು ವಿಶೇಷದಿಂದ ಕೂಡಿರುವುದು. ("ಸಂಕ್ರಾಂತಿಃ ವಿಶೇಷಯುಕ್ತಾ"). ವಿಶೇಷವೆಂದರೆ ಸಾಧಾರಣವಲ್ಲದ್ದು: ಅರ್ಥಾತ್ ಅದು ತುಂಬ ಅತಿಶಯವುಳ್ಳದಾಗಿರುವುದು ಎಂದರ್ಥ. ಎಂದರೆ, ಶಿಷ್ಯರಿಗೆ ಮೂಡುವ ಸ್ಪಷ್ಟತೆ ಅಭಿನಂದ್ಯವಾದದ್ದು ಎಂದು.

ಹೀಗಾಗಿ ವಿದ್ಯೆಯು ತಮ್ಮಲ್ಲಿರುವಂತೆ ಅತಿಶಯದಿಂದ ಕೂಡಿರುವುದು ಕೆಲವು ಶಿಕ್ಷಕರಲ್ಲಿ; ಅದನ್ನು ಸಂಕ್ರಾಮಮಾಡಿಸುವುದರಲ್ಲಿ ಸಾಮರ್ಥ್ಯಾತಿಶಯವಿರುವುದು ಮತ್ತೆ ಕೆಲವರಲ್ಲಿ. ಹೀಗೆ ಎರಡು ಬಗೆ. ತಾತ್ಪರ್ಯವಿದು: ನಾವು ಅರಿತಿರುವುದನ್ನೆಲ್ಲಾ ಹೇಳಲಾರೆವು. ಹೇಳಲು ಬಂದರೂ ಮತ್ತೊಬ್ಬರಿಗೆ ಚೆನ್ನಾಗಿ ಅರ್ಥವಾಗುವಂತೆ ಹೇಳುವುದು, ಹೇಳಿಕೊಡುವುದು ಸುಲಭವೇನಲ್ಲ.

ಹೀಗಾಗಿ ವಿದ್ಯಾಸಾಧನೆಯಲ್ಲಿ ಎರಡು ಪ್ರಕಾರಗಳು: ಒಂದು, ಅದನ್ನು ತನ್ನಲ್ಲಿ ಸಾತ್ಮ್ಯಮಾಡಿಕೊಳ್ಳುವುದು; ಎರಡು, ಅದನ್ನು ಮತ್ತೊಬ್ಬರಲ್ಲಿ ಸಂಕ್ರಾಮಮಾಡಿಸುವುದು. ಈ ಎರಡೂ ಪ್ರಕಾರಗಳಲ್ಲೂ - ಅರ್ಥಾತ್ ವಿದ್ಯಾರ್ಜನ-ವಿದ್ಯಾಸಂಕ್ರಾಂತಿಯೆಂಬ ಎರಡೂ ಘಟ್ಟಗಳಲ್ಲೂ ಯಾವನು "ಭೇಷ್" ಎನ್ನಿಸಿಕೊಳ್ಳಬಲ್ಲನೋ (ಯಸ್ಯ ಉಭಯಂ ಸಾಧು), ಎರಡರಲ್ಲೂ ಹೆಗ್ಗಳಿಕೆಯುಳ್ಳ ಅಂತಹವನನ್ನೇ ಶಿಕ್ಷಕರಲ್ಲಿ ಅಗ್ರಸ್ಥಾನದಲ್ಲಿ ನೆಲೆಗೊಳಿಸಬೇಕು - ಎನ್ನುತ್ತಾನೆ, ಕಾಳಿದಾಸ.

ಹೀಗೆ ವಿದ್ಯೆಯ ಗ್ರಹಿಸುವಿಕೆ-ಬೋಧಿಸುವಿಕೆಗಳೆರಡರಲ್ಲೂ ಹಿರಿಮೆಯನ್ನು ಸಾಧಿಸುವ ಶಿಕ್ಷಕರೇ ಶ್ರೇಷ್ಠರು - ಎಂಬ ತತ್ತ್ವವನ್ನು ಕಾಳಿದಾಸನು ಇಲ್ಲಿ ತೋರಿಸಿಕೊಟ್ಟಿದ್ದಾನೆ.

ಸೂಚನೆ : 16/04/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.