Sunday, April 24, 2022

ಅಷ್ಟಾಕ್ಷರ ದರ್ಶನ -9 ಆ ಮೃತ್ಯೋಃ ಶ್ರಿಯಮನ್ವಿಚ್ಛೇತ್ (Astakshara Darshana -9 A Mrutyoh Shriyamanvicchet)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಭಾರತೀಯ ಸಂಸ್ಕೃತಿಯನ್ನು ದೂರುವ ಮಂದಿ ಪದೇ ಪದೇ ಹೇಳುವ ಮಾತೊಂದಿದೆ. ಜಗತ್ತು ನಶ್ವರವೆಂದೋ ಮಿಥ್ಯೆಯೆಂದೋ ಭಾರತೀಯರು ನಂಬಿಕೊಂಡರು; ಸದಾ ಪರಲೋಕಪರರಾಗಿದ್ದುಬಿಟ್ಟು, ಐಶ್ವರ್ಯಸಂಪಾದನೆ-ಭೋಗಪ್ರಾಪ್ತಿಗಳನ್ನು ಕಡೆಗಾಣಿಸಿದರು: ಎಂದೇ ಬಂದದ್ದು ದೇಶಕ್ಕೆ ಬಡತನ  - ಎಂದು.

 

ಆದರೆ ಆ ವಾದಕ್ಕೆ ಕೊಡಲಿ ಏಟನ್ನೇ ಕೊಡುತ್ತದೆ, ಈ ಮನುವಚನ:

ಸಾಯುವವರೆಗೂ ಸಂಪತ್ತನ್ನು ಬಯಸಬೇಕು (ಆ ಮೃತ್ಯೋಃ ಶ್ರಿಯಮನ್ವಿಚ್ಛೇತ್) – ಎನ್ನುತ್ತದೆ ಮನುಸ್ಮೃತಿ!  "ಎಷ್ಟಾದರೂ ಹಣ ಕೆಟ್ಟದ್ದೇ" – ಎನ್ನುವವರಿಗೆ "ಅಯ್ಯೋ, ಮನುವು ಹೀಗೆ ಹೇಳಿರುವನೇ!" – ಎಂದು ಅಚ್ಚರಿಯಾಗಬಹುದಲ್ಲವೇ?

 

ಧನದ ಬಗ್ಗೆ ತಿಳಿವಳಿಕೆಕೊಡುವ ಶಂಕರಾಚಾರ್ಯರ ಮಾತುಗಳಿಗೂ ಇದು ವಿರುದ್ಧವೆನಿಸುವುದಿಲ್ಲವೇ? ಅವರ ಪ್ರಸಿದ್ಧವಾದ ಭಜಗೋವಿಂದ-ಸ್ತೋತ್ರವು ಸೂಚಿಸುವ ಕೆಲವು ಎಚ್ಚರಿಕೆಗಳನ್ನೊಮ್ಮೆ ನೋಡೋಣವೇ?

 

ಧನಸಂಪಾದನದಾಹವನ್ನು ಬಿಡೆಲೋ ಮೂಢ, ಎಂದು ಆರಂಭದಲ್ಲೇ ಅದು ಎಚ್ಚರಿಸುತ್ತದೆ. ಹಣಗಳಿಸುತ್ತಿರುವವರೆಗೆ ಮಾತ್ರವೇ ಬಂಧುಬಾಂಧವರಿಗೆ ನೀ ಬೇಕಾಗುವುದು; ಶರೀರವು ಬೀಳಾಗುತ್ತಿರಲು ಕೇಳಲಾರಿದ್ದಾರು? - ಎಂದು ಮೂದಲಿಸಿ, ಲೋಕದ ಸಂಬಂಧಗಳು ಗಟ್ಟಿಯಲ್ಲವೆಂದು ಸೂಚಿಸುತ್ತದೆ. ಧನಬಲ-ಜನಬಲ-ಯೌವನಬಲಗಳು ಗರ್ವಕಾರಕ; ಅವನ್ನೆಲ್ಲಾ ಕ್ಷಣಮಾತ್ರದಲ್ಲಿ ಕಾಲ ಕಸಿಯಬಲ್ಲುದು! ನಿರಂತರ ಕಾಂತಾಚಿಂತೆ-ಧನಚಿಂತೆಗಳಿಂದೇನು ಬಂತು? ದಾಟಿಸತಕ್ಕದ್ದು ಸಜ್ಜನರ ಸಂಗವೇ; "ಅರ್ಥಂ ಅನರ್ಥಂ!" ಎಂದುಕೋ: ಅದರಿಂದ ಸುಖಲೇಶವೂ ಬಾರದು; ಹಣವಂತರಿಗೆ ತಮ್ಮ ಮಕ್ಕಳಿಂದಲೂ ಭೀತಿಯೇ!

 

ಹೀಗೆ ಧನವ್ಯಾಮೋಹವನ್ನೂ ಅದರ ದುಷ್ಪರಿಣಾಮಗಳನ್ನೂ ತೋರಿಸಿ, "ಸ್ವಂತದುಡಿಮೆಯಿಂದ  ಪಡೆದ ಧನವಷ್ಟರಿಂದಲೇ ಸಂತುಷ್ಟನಾಗು; ದೀನಜನರಿಗೆ ಧನದಾನ ಮಾಡು" - ಎಂದು ಹಿತವಚನವನ್ನೇ ಹೇಳುತ್ತದೆ.

 

ಲೋಕದ ಭ್ರಾಂತಿಗಳು ವಿಚಿತ್ರವಾದ್ದರಿಂದಲೇ ಇಷ್ಟೆಲ್ಲಾ ಎಚ್ಚರಗಳು. ಹಣವೆಂದರೆ ಹೆಣವೂ ಬಾಯಿಬಿಡುತ್ತದೆಯೆಂದು ಗಾದೆಯಿಲ್ಲವೇ? "ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ" - ಎಂಬ ಕಾಲ ಹೋಯಿತೋ ಏನೋ? ಎಲ್ಲರೂ ಮಾಡುವುದೂ ಹಣಕ್ಕಾಗಿ - ಎಂಬ ಯುಗವೊಂದು ಬಂದವತರಿಸಿದಂತಿದೆ.

 

ಹಣದ ಬಗೆಗಿನ ಲೋಕರೂಢಿಯ ಪ್ರಚುರನೀತಿವಚನಗಳನ್ನೂ ಒಮ್ಮೆ ನೋಡಿ: ಲೋಕದಲ್ಲಿ ಮನುಷ್ಯನಿಗೆ ಹಣವೇ ಬಂಧು; ಸಮಾಜದಲ್ಲಿ ಗೌರವವೆಂಬುದು ಹಣದಿಂದ; ಹಣವಂತನಿಗೇ ಮಿತ್ರರು ದೊರೆಯುವುದು; ಧನವಂತನೇ ಬಲವಂತ. ಹಣವಿದ್ದರೆ ಹೆಂಗಸೂ ಗಂಡಸಿನಂತೆ ಸಬಲೆ; ಹಣವಿಲ್ಲದಿದ್ದರೆ ಗಂಡಸೂ ಹೆಂಗಸಿನಂತೆ ಅಬಲ.

 

ಹಣವನ್ನು ಬೇಡವೆನ್ನುವಂತಿಲ್ಲ: ಆಪತ್ಕಾಲಕ್ಕಾಗಿಯೂ ಬೇಡವೆಂದೇವೇ? ದಾನ-ಭೋಗಗಳಿಗಾಗಿ ಬರುವುದೇ ಧನ. ಧನವಿಲ್ಲವೋ, ಧರ್ಮಕಾರ್ಯಗಳನ್ನು ಸಹ ನೀ ಮಾಡಲಾರೆ. ದಾನವನ್ನು ಬಿಡಬೇಡ: ಬೇಡುವವರಲ್ಲಿ ಬಡವರಲ್ಲಿ ವಿತರಣೆಗೆ ಬರುವಂತಹುದೇ ನಿಜವಾದ ಸಂಪತ್ತು. ಸಂಪಾದಿತವಾದ ಸೊತ್ತಿಗೆ ಸಂರಕ್ಷಣೆಯೊಂದು ಬೇಕಲ್ಲವೇ?: ದಾನವೇ ಆ ರಕ್ಷಣೆ. "ಧರ್ಮ-ಕಾಮಗಳಿಗೆ ಅರ್ಥವೇ ಮೂಲವಲ್ಲವೇ?" – ಎಂದಿದ್ದಾನಲ್ಲವೇ ಕೌಟಲ್ಯ?

 

ಕೆಲವು ಎಚ್ಚರದ ಮಾತುಗಳೂ ಉಂಟು: ಧನಿಕರಿಗೇ ದಾನ ಮಾಡುವುದು ತರವಲ್ಲ. ಏನೇ ಆದರೂ ಧನಿಕರಿಗೇ ಧನದಾಹ ಜಾಸ್ತಿ; ಧನಮದ ಬಂದವನು, ಬಿದ್ದಮೇಲೇ ಎಚ್ಚರಗೊಳ್ಳುವುದು; ಚಾರಿತ್ರವಿಲ್ಲದವನು ಎಷ್ಟೇ ಧನಿಕನಾದರೂ ಇಂದೋ ನಾಳೆಯೋ ಬೀಳತಕ್ಕವನೇ. ಹಣದ ಕಾರಣದಿಂದಾಗಿಯಷ್ಟೆ ಹೆಂಡತಿಯಾಗಿರುವವಳನ್ನು ಹೆಂಡತಿಯೆನ್ನಲಾದೀತೇ?

 

ಧರ್ಮದಿಂದ ಸಂಪಾದಿಸಿದ ಹಣವೇ ಸತ್ಯ: ಧನ-ಸಂಪಾದನೆಯಲ್ಲಿ ಶುಚಿಯಾಗಿರು; ಅಧರ್ಮದ ಹಣವನ್ನೊಲ್ಲೆಯೆನ್ನು. ಮೂಲಧನವನ್ನು ಕಾಪಾಡಿಕೋ. ಸಾಹುಕಾರನೆಂದರೆ ಹೆಚ್ಚು ಹಣವುಳ್ಳವನೆಂದು ಹೇಳುವರು; ವಾಸ್ತವವಾಗಿ ಗುಣವೇ ನಿಜವಾದ ಧನ. ವಿತ್ತ ಹೋದರೆ ನಷ್ಟವಿಲ್ಲ; ವೃತ್ತ(ನಡತೆ) ಹೋದರೆ ಎಲ್ಲವೂ ಹಾಳು.

 

ಇವೆಲ್ಲವೂ ಲೋಕನೀತಿಯ ಮಾತುಗಳೇ. ನಾನಾದೃಷ್ಟಿಗಳಿಂದ ಆಡಿದವು; ನಾನಾಸಂದರ್ಭಗಳಿಗೆ ಸಲ್ಲತಕ್ಕವೇ.

 

ಆದರೆ ಹಣದ ಸಂಪಾದನೆಯನ್ನು ಕುರಿತಾಗಿ ಮನುವು ಹೇಳಿರುವ ಮಾತು ಮಾರ್ಮಿಕವಾದುದೇ ಸರಿ: ನಾವು ಇರುವ ಪರ್ಯಂತವೂ ಸಿರಿಯನ್ನು ಬಯಸಬೇಕು. ಅಷ್ಟೇ ಅಲ್ಲ; "ಐಶ್ವರ್ಯವು ದುರ್ಲಭ (ಎಂದರೆ ಪಡೆಯುವುದಾಗದು)" - ಎಂಬುದಾಗಿ ಎಂದೂ ಭಾವಿಸಬಾರದು – ಎನ್ನುತ್ತಾನೆ ಮನು!

 

ಮನುವಿನ ಮಾತಿನ ಮರ್ಮವನ್ನು ಹಿಡಿದಿರುವ, ಆದರೆ ಮೇಲಿನೆಲ್ಲ ಮಾತುಗಳಿಗೆ ಪೂರಕವೋ ಪೋಷಕವೋ ಆಗಿದ್ದು, ಅವುಗಳ ಓರೆ-ಕೋರೆಗಳನ್ನು ತಿದ್ದಬಲ್ಲದ್ದೂ ಆದದ್ದೆಂದರೆ ಶ್ರೀರಂಗಮಹಾಗುರುಗಳು ಕೊಟ್ಟಿರುವ ಮತ್ತೂ ಮಾರ್ಮಿಕವಾದ ನೋಟ: "ಐಶ್ವರ್ಯ" ಎಂಬ ಪದವು ಬಂದಿರುವುದಾದರೂ ಈಶ್ವರ ಎಂಬುದರಿಂದಲೇ, ಅಲ್ಲವೇ? ಭಗವಂತನು ಕೊಟ್ಟ ಐಶ್ವರ್ಯವನ್ನು ಅನುಭವಿಸುವಾಗ ಶರೀರವು ಭೋಗಾಯತನವೆನಿಸುವುದು; ಆತನು ಕೊಟ್ಟದ್ದನ್ನು ಆತನಿಗೇ ಸಮರ್ಪಿಸಿ, ಆತನ ಸಂಕಲ್ಪದಂತೆಯೇ ಬೆಳೆಸಿದಲ್ಲಿ, ಜೀವ-ದೇವರನ್ನು ಸೇರಿಸುವುದಾಗಿ ಶರೀರವು ಯೋಗಾಯತನವೂ ಹೌದು. ಹೀಗೆ ಈಶ್ವರನಿಂದ ಪ್ರಾಪ್ತವಾದದ್ದು, ಈಶ್ವರನಿಗಾಗಿ ಸಮರ್ಪ್ಯವಾದದ್ದು, ಐಶ್ವರ್ಯವೆಂಬುದು.

 

ಹೀಗೆ ಯೋಗ-ಭೋಗಗಳ ಸಮರಸೀಭಾವದ ಸತ್ಸಂಕಲ್ಪದೊಂದಿಗೆ ಸಂಭ್ರಮಸಹಿತವಾದ ಸಜ್ಜೀವನವನ್ನು ನಡೆಸಿ, ಕೊನೆಯುಸಿರಿನ ಪರ್ಯಂತವೂ ಸಿರಿಯನ್ನು ಸದುಪಯೋಗಕ್ಕಾಗಿಯಷ್ಟೆ ಬಯಸುವ ಬಳಸುವ ಬೆಳೆಸುವ ಸ್ಫೂರ್ತ್ಯುತ್ಸಾಹಗಳು ಸರ್ವದಾ ಸೊಂಪಾಗಿರಬೇಕಾದದ್ದೇ ಸಮೀಚೀನವಲ್ಲವೇ?


ಸೂಚನೆ: 24/4/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.