Sunday, April 3, 2022

ಕಾಳಿದಾಸನ ಜೀವನದರ್ಶನ – 4 ರಾಷ್ಟ್ರಕವಿಯು ಸಾಂಖ್ಯಯೋಗಿಯೂ ಹೌದು (Kalidasana Jivanadarshana - 4 Rashtrakaviyu Sankhya-yogiyu Haudu)

 ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



 

ತಮ್ಮ ಕಾವ್ಯ-ನಾಟಕಗಳಿಂದಾಗಿ ಅಪಾರವಾದ ಖ್ಯಾತಿಯನ್ನು ಸಂಪಾದಿಸಿದ ಬಂಗಾಳದ ರವೀಂದ್ರನಾಥ ಠಾಕೂರರನ್ನುರಾಷ್ಟ್ರಕವಿಯೆಂದು ನಾವು ಆದರಿಸುತ್ತೇವೆ. ನಮ್ಮ ನಿಕಟತರ ಕಾಲದ ಕರ್ನಾಟಕದವರೇ ಆದ ಕುವೆಂಪು ಅವರನ್ನು ಸಹ ಹಾಗೆಯೇ ಗೌರವಿಸುತ್ತೇವೆ. ಕೆಲವೊಮ್ಮೆ ಯುಗಕವಿ-ವಿಶ್ವಕವಿಗಳೆಂದೇ ಅವರನ್ನು ಸಂಭಾವಿಸುವುದೂ ಉಂಟು. ಅವರುಗಳ ಕವಿತ್ವದಲ್ಲಿ ಉದಾತ್ತಭಾವನೆಗಳು, ಪ್ರತಿಭಾಸಂಪತ್ತು ಮುಂತಾದ ಹಲವು ಗುಣಗಳ ರಾಶಿಗಳು ತುಂಬಿರುವುದರಲ್ಲಿ ಸಂಶಯವೇ ಇಲ್ಲ. ಅವರುಗಳ ರಚನೆಗಳಲ್ಲಿಯ ವೈವಿಧ್ಯವೂ ಸಹ ಶ್ಲಾಘ್ಯವಾದದ್ದೇ.  

ಅವರ ಕೃತಿಗಳನ್ನು ಓದಿದವರಿಗೆ ಭಾರತೀಯಸಂಸ್ಕೃತಿಯ ಪರಿಚಯವೂ ಆಗುವುದು ಸಹಜವೇ. ಆದರೂ ನಮ್ಮ ಇಡೀ ದೇಶದ ಸಂಸ್ಕೃತಿಯ ಪರಿಚಯವು ಆಗುವಂತಿದೆಯೇ? – ಎಂಬ ಪ್ರಶ್ನೆಗೆ ಹೌದೆಂದು ಧೈರ್ಯವಾಗಿ ಉತ್ತರ ಹೇಳಲಾಗದೇನೋ? ಪೂರ್ವಗ್ರಹಗಳಿಂದ ಪೀಡಿತರಾಗದೆ, ಭಾವುಕತೆಗೆ ಎಡೆಗೊಡದೆ, ವಿಚಾರಪರರಾಗಿ ಇದನ್ನು ಚಿಂತಿಸಬೇಕಲ್ಲವೇ?

ವಿದೇಶಗಳಲ್ಲಿ ಸಹ ಮನ್ನಣೆಗೆ ಪಾತ್ರವಾಗಿರತಕ್ಕವು ಠಾಕೂರರ ಕೃತಿಗಳು. ಅವಲ್ಲಿ ಬಂಗಾಳದ "ಭದ್ರಲೋಕ"ದ ಪರಿಚಯವು ಬಹಳ ಚೆನ್ನಾಗಿಯೇ ಆಗುತ್ತದೆ. ಠಾಕೂರರು ಬಹುವಾಗಿ ಸಂಚರಿಸಿದುದು ಇಂತಹ ಮಂದಿಯ ಮಧ್ಯದಲ್ಲೇ. ಸಮಾಜದ ಇತರ ಸ್ತರಗಳ ಮಂದಿಯ ಜೀವನಕ್ರಮದ ನಿರೂಪಣೆಯೂ ಅಲ್ಲಿರುವುದಾದರೂ, ಅವರ ಕೃತಿಗಳಲ್ಲಿಯ ಭದ್ರಲೋಕದ ನಿರೂಪಣೆಯು ಓದುಗರ ಮೇಲೆ ಬೀರುವ ಪರಿಣಾಮ ಅತಿವಿಶಿಷ್ಟವಾದುದೇ ಸರಿ. ಇನ್ನು ಭೌಗೋಳಿಕವಾಗಿ ಅವಲೋಕಿಸಿದರೆ, ಬಂಗಾಳದ ಚಿತ್ರಣವನ್ನೇ ಬಹುವಾಗಿ ಅವರ ಕೃತಿಗಳಲ್ಲಿ ಕಾಣುವುವೇ ವಿನಾ ಭಾರತದ ಇತರ ಭೂಭಾಗಗಳ ವಿಶಾಲ ಚಿತ್ರಣವನ್ನಲ್ಲ. ಹಾಗೆ ನೋಡಿದರೆ ದೇಶಪ್ರೇಮವು ಉಕ್ಕುತ್ತಿದ್ದ ಕಾಲವದು! ಇತ್ತ ಕುವೆಂಪುರವರ ಕೃತಿಗಳ ವಿಷಯವೂ ನಾತಿಭಿನ್ನ. ನಾತಿಭಿನ್ನವೆಂದರೆ 'ಬಹಳವಾಗಿ ಬೇರೆಯೇನಲ್ಲ". ಮಲೆನಾಡು ಶಿವಮೊಗ್ಗಗಳ ಮಂದಿಯೋ ಮೈಸೂರಿನ ಜನತೆಯೋ 'ಆಹಾ' ಎಂದು ಆತ್ಮೀಯವಾಗಿ ಭಾವಿಸಲಾಗುವ ಹತ್ತಾರು ಪ್ರಾಕೃತಿಕ ಹಾಗೂ ಮಾನುಷ್ಯಕ-ಸಂನಿವೇಶಗಳು ಅವಲ್ಲಿ ಮನಮುಟ್ಟುವಂತೆ ಚಿತ್ರಿತವಾಗಿವೆಯಾದರೂ, ಕರ್ಣಾಟಕದ ಗಡಿಯನ್ನು ದಾಟಿ ಭಾರತದ ಉಳಿದೆಷ್ಟೆಷ್ಟು ಪ್ರಾಂತಗಳಲ್ಲಿ ಅವರ ಕಲ್ಪನಾವಿಹಂಗಮವು ಹಾರಾಡಿದೆಯೆಂಬುದು ಗವೇಷಣೀಯವಾಗಿಯೇ ಉಳಿಯಬಹುದು.

ಇಂದಂತೂ ವಿಮಾನಪ್ರಯಾಣ (ಕೆಲವೊಮ್ಮೆ ಹೆಲಿಕಾಪ್ಟರಿನಲ್ಲಿಯೂ ಪ್ರಯಾಣ) - ಮುಂತಾದುವು ಸಾಧಾರಣವಾಗುತ್ತಿದೆಯೆಂಬುದು ಎಲ್ಲರಿಗೂ ತಿಳಿದಿರುವುದೇ. ಆದರೆ ಎಂಭತ್ತುವರ್ಷಗಳ ಹಿಂದೆ (ಠಾಕೂರರ ಅವಸಾನಕಾಲ 1941), ಅಥವಾ ಮೂವತ್ತು ವರ್ಷಗಳ ಹಿಂದೆ (ಕುವೆಂಪುರವರ ಅವಸಾನಕಾಲ 1994), ಬಸ್ಸು ಹಾಗೂ ರೈಲುಯಾನಗಳಂತೂ ಲಭ್ಯವಿದ್ದುವಷ್ಟೆ: ದೇಶಸಂಚಾರ ದುರ್ಭರವಾಗಿರಲಿಲ್ಲವೆನ್ನಬಹುದಾದದ್ದೇ. ಈ ಹಿನ್ನೆಲೆಗಳನ್ನು ಇಲ್ಲಿ ಸೂಚಿಸುವ ಉದ್ದೇಶವೇನೆಂದರೆ, ಕಾಳಿದಾಸನ ಕಾಲದಲ್ಲಿ ಈ ತೆರನಾದ ಶೀಘ್ರಯಾನಗಳಾವುವೂ ಲಭ್ಯವಿರಲಿ, ಊಹ್ಯವೂ ಆಗಿರಲಿಲ್ಲವೆಂಬುದು ಅವಧೇಯವಾದ ವಿಷಯ - ಎನ್ನಲು. ಅವಧೇಯವೆಂದರೆ ಗಮನವಿಟ್ಟು ಅರಿಯಬೇಕಾದದ್ದು.

ಹಾಗಿದ್ದರೂ ಅಖಂಡಭಾರತದ ಪ್ರಮುಖವಾದ ಎಲ್ಲಾ ಗಿರಿ-ನದಿಗಳ ಗ್ರಾಮ-ನಗರಗಳ ಒಂದು ಆತ್ಮೀಯವಾದ ಅರಿವು ಕಾಳಿದಾಸನಿಗಿತ್ತೆಂಬುದು ಅಂದಿಗೂ ಇಂದಿಗೂ ಆಶ್ಚರ್ಯವನ್ನು ಉಂಟುಮಾಡುವಂತಹುದೇ. ಅವರಿವರಿಂದ ಕಾಳಿದಾಸನು ಕೇಳಿ ತಿಳಿದುಕೊಂಡಿರಬಹುದಾದ ಒಂದೆರಡಂಶಗಳೂ ಇದ್ದಿರಬಹುದೆಂದು ನಾವಂದುಕೊಂಡರೂ ಚಿಂತೆಯಿಲ್ಲ. ಇಂತಹ ಅಂಶಗಳೂ ಈಗಿನ್ನೂ ಸುಲಭವೇ ಆಗಿವೆಯಲ್ಲಾ?: ಪ್ರಯಾಣಿಕರ ಕೈಪಿಡಿಗಳಿಲ್ಲವೇ? ಭೂಪಟ(ಅಟ್ಲಾಸ್)- ಭೂಗೋಳ(ಗ್ಲೋಬ್)ಗಳಿಲ್ಲವೇ? ಪ್ರವಾಸಸಾಹಿತ್ಯವಿಲ್ಲವೇ? (ಈಗಂತೂ ಅಂತರ್ಜಾಲದಿಂದಾಗಿ) ಜನಸಾಮಾನ್ಯಕ್ಕೂ ಇವು ಎಟಕಿಸುವುವೇ.  

ಇನ್ನಿದಕ್ಕೂ ಮಿಗಿಲಾಗಿ, ಸಾಂಸ್ಕೃತಿಕವಾಗಿಯೂ ಸಹ, ರೈತಾಪಿಗಳಿಂದ ಹಿಡಿದು ಅರಸುಗಳ ಪರ್ಯಂತ, ನಾನಾಪ್ರಾಂತಗಳ ಜನಮಾನಸದ ಮಿಡಿತವನ್ನು, ಆಚಾರ-ವಿಚಾರಗಳನ್ನು, ಆಳವಾಗಿ ಪರಿಚಯಿಸಿಕೊಂಡು ಗಾಢವಾಗಿ ನಿರೂಪಿಸಬಲ್ಲ ಕಾಳಿದಾಸನ ಬಹುಜ್ಞತೆ, ಹಾಗೂ ಅವುಗಳ ಚಿತ್ರಣದಲ್ಲಿಯ ಪ್ರಾವೀಣ್ಯ ಮತ್ತು ವೈಪುಲ್ಯಗಳಿಗೆ ಸಾಟಿಯಿದ್ದಂತಿಲ್ಲ.

ಇನ್ನೂ ಮೌಲಿಕವಾದ ಮತ್ತೊಂದು ವಿಷಯವೂ ಉಂಟು. ನಾನಾಮತ-ದರ್ಶನಗಳ ಗ್ರಾಂಥಿಕಪರಿಚಯವು ಇಂದಿನ ಮಂದಿಗೆ ಅಲಭ್ಯವಲ್ಲವೆಂದಾದರೂ, ದರ್ಶನಸಾರಜ್ಞನಾದ ಕಾಳಿದಾಸನಿಗೆ ಋಷಿಜೀವನದ ಸಾಕ್ಷಾತ್-ಪರಿಚಯವೂ ಇತ್ತೆಂಬುದು ಅವಿಸ್ಮರಣೀಯ. ಭಾಸನನ್ನು ಮುನಿಯೆಂದು ಕರೆದವರು ಉಂಟೆಂಬುದಾದರೂ, ತನ್ನ ಯಾವ ಕೃತಿಯಲ್ಲಿ ಕಾಳಿದಾಸನು ನಮ್ಮನ್ನು ತಪೋವನಗಳಿಗೆ ಕರೆದುಕೊಂಡುಹೋಗಿಲ್ಲವೆಂದು ಕೇಳುವಂತಾಗುತ್ತದೆ.

ಅಷ್ಟೇ ಅಲ್ಲ; ವ್ಯಷ್ಟಿಜೀವನ-ಸಮಷ್ಟಿಜೀವನಗಳಲ್ಲಿ ಪಾತ್ರವಹಿಸುವ ಕಾಮಶಾಸ್ತ್ರ-ಅರ್ಥಶಾಸ್ತ್ರಗಳ ಹಲವಾರು ಅಂಶಗಳ ಸ್ಪಷ್ಟವಾದ ಅರಿವನ್ನೂ ಕಾಳಿದಾಸನು ಹೊಂದಿದ್ದವನೇ; ಅರ್ಥಶಾಸ್ತ್ರ-ಕಾಮಶಾಸ್ತ್ರಗಳಾದರೂ ಧರ್ಮಶಾಸ್ತ್ರದ ಚೌಕಟ್ಟಿನಲ್ಲಿಯೇ ಹೆಣೆದವೇ. ಇವುಗಳ ಜೊತೆ ಧರ್ಮಶಾಸ್ತ್ರ-ಮೋಕ್ಷಶಾಸ್ತ್ರಗಳ ಜೀವಾತುವಾದ ಸಾಂಖ್ಯ-ಯೋಗಗಳನ್ನು ಅರಿತಿದ್ದವನು ಕಾಳಿದಾಸ.

"ಸಾಂಖ್ಯ"ವು ಸಂಖ್ಯೆಯೆಂಬುದರಿಂದ ಬಂದುದು. ಸಂಖ್ಯೆಯೆಂದರೆ ಎಣಿಸಿ ಹೇಳುವುದಲ್ಲವೆ? 'ಇದು ಈ ಬಗೆ'ಯೆಂದು ಸಾಧಾರಣವಾಗಿ ಹೇಳುವುದಕ್ಕಿಂತಲೂ, 'ಇದು ಇಷ್ಟು' ಎಂದು ನಿಷ್ಕೃಷ್ಟವಾಗಿ ಹೇಳುವುದರಲ್ಲಿಯೇ ಸ್ಪಷ್ಟತೆ-ಖಚಿತತೆಗಳು: ಆಧುನಿಕ ವಿಜ್ಞಾನದ ಹೆಗ್ಗಳಿಕೆಗಳಿವೇ ತಾನೇ? (ಇವುಗಳೇ qualitative/quantitativeಗಳು). ಸೃಷ್ಟಿಯಲ್ಲಿ ಇಷ್ಟು ತತ್ತ್ವಗಳು ಕೆಲಸ ಮಾಡುವುವು - ಎಂಬುದನ್ನು ಪರಿಶೀಲಿಸಿ ನೋಡಿ, "ಇವಿಷ್ಟೇ" ಎಂಬ ದೃಢತೆ ಯಾವಾಗ ತೀರ್ಮಾನವಾಗಿ ಬರುವುದೋ ಅದುವೇ ಸಾಂಖ್ಯ. ಇಪ್ಪತ್ತೈದು ತತ್ತ್ವಗಳಿಂದಲೇ ಆದುದು ಸೃಷ್ಟಿಸಾಮಸ್ತ್ಯವೂ (ಸಾಮಸ್ತ್ಯವೆಂದರೆ ಸಮಸ್ತವೇ). ಈ ತತ್ತ್ವಗಳಲ್ಲಿ ಸ್ಥೂಲದೃಷ್ಟಿಗೇ ಎಲ್ಲವೂ ಗೋಚರಿಸವು; ಮುಖ್ಯವಾದವು ಕೇವಲ ಸೂಕ್ಷ್ಮದೃಷ್ಟಿಗೆ ಮಾತ್ರವೇ ಲಭ್ಯ.

ಸೂಕ್ಷ್ಮ-ಸೂಕ್ಷ್ಮತರ-ಸೂಕ್ಷ್ಮತಮವೆಂಬ ತತ್ತ್ವಗಳನ್ನು ಸಾಕ್ಷಾದನುಭವಕ್ಕೆ ತಂದುಕೊಳ್ಳುವ ಪ್ರಾಯೋಗಿಕವಾದ ಕ್ರಮವೇ ಯೋಗ. ಸೂಕ್ಷ್ಮತಮವಾದುದನ್ನು ಬರಿಗಣ್ಣಿನಿಂದ ಕಾಣಲಾಗದು. ಅದು ಅತ್ತ ವಿಭುವೂ (ಸರ್ವವ್ಯಾಪಿ) ಹೌದು!: "ಅಣೋರಣೀಯಾನ್ ಮಹತೋ ಮಹೀಯಾನ್!" ಶರೀರದಲ್ಲಿಯೇ ಇರುವ ಅದು, ಜ್ಞಾನಚಕ್ಷುಸ್ಸು ಹಾಗೂ ತಪಶ್ಚಕ್ಷುಸ್ಸುಗಳನ್ನುಳ್ಳವರಿಗೆ  ಮಾತ್ರವೇ ಗೋಚರವೆಂಬುದನ್ನುಹೇಳುವ ಆಯುರ್ವೇದಶ್ಲೋಕವನ್ನು ಉದ್ಧರಿಸುವುದಲ್ಲದೆ, "ಕಾಳಿದಾಸನೊಬ್ಬ ಸಾಂಖ್ಯಯೋಗಿ!" ಎಂದು ಶ್ರೀರಂಗಮಹಾಗುರುಗಳು ಉದ್ಗರಿಸಿದ್ದರು.

ಸಾಂಖ್ಯವೆಂಬುದು ವಿಚಾರಣಶಾಸ್ತ್ರವಾದರೆ, ಯೋಗವೆಂಬುದು ಅನುಭವಶಾಸ್ತ್ರ. ಅಲ್ಲಲ್ಲಿ ಜೀವನ-ತತ್ತ್ವಗಳನ್ನು ಕಾವ್ಯಭಂಗಿಯಲ್ಲಿ ಹೇಳುವ ಕೃತಿಯು ರಾಮಾಯಣವಾಗಿದೆ; ಹತ್ತುಹಲವೆಡೆ ವಿಚಾರಪರತೆಯಿಂದಲೂ ಅನುಭವದ ಆಧಾರದ ಮೇಲೂ ವಿಸ್ತೃತವಾಗಿ ಹೇಳುವ ಕೃತಿ ಮಹಾಭಾರತವಾಗಿದೆ. ಮಹಾಭಾರತವೂ (ಪುರಾಣಗಳೂ) ಸಾಂಖ್ಯ-ಯೋಗಗಳನ್ನು ಒತ್ತಿಹೇಳುತ್ತವೆ. ದರ್ಶನಗಳಾವುವೂ ಇವೆರಡನ್ನು ಬಿಟ್ಟಿರಲಾರವು. ಒಂದರ್ಥದಲ್ಲಿ ಇಡೀ ಭಾರತ-ಸಂಸ್ಕೃತಿಯ ತಳಹದಿಗಳೇ ಈ ಸಾಂಖ್ಯಯೋಗಗಳು. ಅವೆರಡನ್ನೂ ಕರತಲಾಮಲಕವಾಗಿ ಕಂಡುಕೊಂಡಿದ್ದ ಕಾಳಿದಾಸನು ಭಾರತೀಯಸಂಸ್ಕೃತಿಯ ಹೃದಯಜ್ಞನೇ ಸರಿ.

ಸೂಚನೆ : 02/04/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.