Saturday, April 30, 2022

ಕಾಳಿದಾಸನ ಜೀವನದರ್ಶನ – 8 ನಿಷ್ಣಾತಗುರು – ಯೋಗ್ಯಶಿಷ್ಯ (Kalidasana Jivanadarshana - 8 Nishnataguru - Yogyashishya)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

 

ನಿಷ್ಣಾತನಾಗುವುದು ಹೇಗೆಂಬುದನ್ನು ಕಾಳಿದಾಸನು ಸೂಚಿಸಿರುವುದನ್ನು ಗಮನಿಸಬಹುದು. ವಾಸ್ತವವಾಗಿ "ನಿಷ್ಣಾತ" ಎಂಬ ಆ ಪದದಲ್ಲೇ ಒಂದು ಸ್ವಾರಸ್ಯವಿದೆ; ವ್ಯಾಕರಣವು ತೋರಿಸುವ  ಸೂಕ್ಷ್ಮತೆಯಿದೆ; ಒಂದು ರೂಪಕವೂ ಅದರಲ್ಲಡಗಿದೆ.


ನಿತ್ಯವೂ ಸ್ನಾನ ಮಾಡುವಾಗ ಮೈಮೇಲೆ ನೀರುಹುಯ್ದುಕೊಳ್ಳುತ್ತೇವೆ. ಆದರೆ ನೀರಿನಲ್ಲಿ ಮುಳುಗುಹಾಕುವುದೇ ಪ್ರಶಸ್ತವಾದ ಸ್ನಾನವೆನಿಸುತ್ತದೆ. "ಮಜ್ಜನ"-"ಅವಗಾಹನ"ಗಳೆಂದರೂ ಮುಳುಗುಹಾಕುವುದೇ. ಸ್ನಾನಮಾಡಿದವನು ಸ್ನಾತ. ಮುಳುಗಿ ಸ್ನಾನಮಾಡಿದವ "ನಿ-ಸ್ನಾತ": ಎಂದರೆ ಚೆನ್ನಾಗಿ ಸ್ನಾತ. ಯಾವುದಾದರೂ ವಿದ್ಯೆಯನ್ನು ಚೆನ್ನಾಗಿ ಸಾಧಿಸಬೇಕೆಂದರೆ, ಅದರಲ್ಲಿ "ಮುಳುಗ"ಬೇಕಷ್ಟೆ? ಹಾಗೆ ಮುಳುಗಿ ವಿದ್ಯಾಕೌಶಲವೊಂದನ್ನು ಸಂಪಾದಿಸಿಕೊಂಡಿದ್ದಲ್ಲಿ ಅಂತಹವನನ್ನು - ಅಂತಹವನನ್ನು ಮಾತ್ರ - 'ನಿಷ್ಣಾತ'ನೆನ್ನುತ್ತಾರೆ. (ನಿ-ನದೀಭ್ಯಾಂ ಸ್ನಾತೇಃ ಕೌಶಲೇ - ಎಂಬ ಪಾಣಿನಿಯ ವ್ಯಾಕರಣ-ನಿಯಮವು ಇದನ್ನು ವ್ಯವಸ್ಥೆಗೊಳಿಸಿದೆ). 


ವಿದ್ಯೆಯನ್ನು ಸಂಪಾದಿಸಿದವನು ನಿಷ್ಣಾತನೆನಿಸಬೇಕಾದರೆ ಬೇರೆಯವರಿಗೆ ತನ್ನಲ್ಲಿಯ ವಿದ್ಯೆಯನ್ನು ಬೋಧಿಸಬೇಕು, ಬೋಧಿಸುತ್ತಿರಬೇಕು, ಬೋಧಿಸುತ್ತಿರಲೇಬೇಕು! ಇದನ್ನು ಕಾಳಿದಾಸನು "ಸುಶಿಕ್ಷಿತೋಽಪಿ ಉಪದೇಶೇನ ನಿಷ್ಣಾತೋ ಭವತಿ" ಎನ್ನುತ್ತಾನೆ.  'ಸುಶಿಕ್ಷಿತ' ಎಂದರೆ ಚೆನ್ನಾಗಿಯೇ ಶಿಕ್ಷಣವನ್ನು ಪಡೆದಿರುವವನು; ಆದರೆ ಅಷ್ಟು ಮಾತ್ರದಿಂದಲೇ ನಿಷ್ಣಾತತೆ ದೊರಕದು. ಬರೀ ಸುಶಿಕ್ಷಿತನಿಗೂ ಒಬ್ಬ ನಿಷ್ಣಾತನಿಗೂ ಕಾಲಿದಾಸನು ತೋರಿಸುವ ಭೇದವನ್ನು ಇಲ್ಲಿ ಗಮನಿಸಿಕೊಳ್ಳಬಹುದು. ಪಾಣಿನಿಯ ನಿಯಮಕ್ಕಿಂತಲೂ ಕಾಳಿದಾಸನ ನಿಯಮವೇ ಹೆಚ್ಚು ಬಿಗಿಯೆಂಬಂತಿದೆ! 

ಶಾಸ್ತ್ರಜ್ಞಾನವು ಕ್ಲೇಶಮಯ – ಯಾವುದೇ ಶಾಸ್ತ್ರವಾದರೂ ಕೂಡ. "ನನಗೆ ಈ ಶಾಸ್ತ್ರವು ವಶವಾಗಿಬಿಟ್ಟಿತು" – ಎಂದು ನೆಚ್ಚಿಕೊಂಡುಬಿಟ್ಟವನು ಅಲ್ಲೋ ಇಲ್ಲೋ ಎಡವುವುದು ಅಸಂಭವವಲ್ಲ. "ಶಾಸ್ತ್ರಂ ಸುಚಿಂತಿತಮಥೋ ಪರಿಚಿಂತನೀಯಂ": ಚೆನ್ನಾಗಿ  ಚಿಂತನ ಮಾಡಿದ್ದರೂ, ಪರಿ-ಚಿಂತನವನ್ನು - ಎಂದರೆ ಪರಿಪರಿಯಾದ, ನಾನಾದಿಕ್ಕುಗಳಿಂದಾದ ಚಿಂತನವನ್ನು - ಶಾಸ್ತ್ರವು ಅಪೇಕ್ಷಿಸುತ್ತದೆ: ಬಗೆಬಗೆಯಾದ ಶಿಷ್ಯರಿಗೆ ಬೋಧಿಸುತ್ತಿರುವುದೆಂದರೆ ಸುಚಿಂತನ-ಪರಿಚಿಂತನಗಳಿಗೆ ಪುಷ್ಕಲಾವಕಾಶವನ್ನು ಒದಗಿಸಿದಂತೆಯೇ. ಶಿಷ್ಯರ ಪ್ರಶ್ನೆಗಳಿಗೆ ಸದಾ ಸ್ವಾಗತವಿಟ್ಟಿರುವುದೂ ಒಳ್ಳೆಯ ಬೋಧಕರ, ನಿಷ್ಣಾತರ, ಲಕ್ಷಣವೇ. 

ಶಿಷ್ಯರು ತಮ್ಮಲ್ಲಿಗೆ ಬಂದಾಗಲೆಲ್ಲ, ಕಿಂಚಿತ್ತಾಗಿ ಕುಶಲವಾರ್ತೆಯನ್ನು ಮಾತನಾಡಿ, "ಏನಾದರೂ ಪ್ರಶ್ನೆಯಿದ್ದರೆ ಕೇಳಬಹುದು" ಎಂದೇ ಶ್ರೀರಂಗಮಹಾಗುರುಗಳು ಮೊಟ್ಟಮೊದಲು ವಿಚಾರಿಸುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು. ಧೀಮಂತ-ಜಿಜ್ಞಾಸುಗಳ ಸುಕ್ಲಿಷ್ಟವಾದ ಪ್ರಶ್ನೆಗಳಿಂದ ನಿಷ್ಣಾತ-ಗುರುವರ್ಯರು ಸಂತುಷ್ಟರೇ ಆಗುವರು. ಎಂದೇ ಅಂತಹವ(ರ)ನ್ನು ಅವರು ಸದಾ ಸ್ವಾಗತಿಸುವವರೇ. ಮೇಧಾವಿಗಳಾದ ಶಿಷ್ಯರು ಕೇಳುವ ಗಹನವಾದ ಪ್ರಶ್ನೆಗಳಿಗೆ ಉತ್ತರಿಸುವುದು ಸಹ ಒಂದು ರೀತಿಯಲ್ಲಿ ಹರ್ಷಪ್ರದವೇ. ಅನುಭವದ ಆಧಾರದ ಮೇಲಿನ ಬೌದ್ಧಿಕ ಉತ್ತರವು ಮನಮುಟ್ಟುವಂತಿರುತ್ತದೆ.

"ಇಂದ್ರಿಯಸುಖಕ್ಕಿಂತಲೂ ಬೌದ್ಧಿಕಸುಖವು ನಿಸ್ಸಂಶಯವಾಗಿಯೂ ಮಿಗಿಲಾದುದು" – ಎಂಬ ಶ್ರೀರಂಗಮಹಾಗುರುಗಳ ಸೂತ್ರವೂ ಇಲ್ಲಿ ಸ್ಮರಣೀಯವಾದದ್ದೇ. ವರಿಷ್ಠರಾದ ಗುರುವರ್ಯರೂ ನಿಷ್ಠೆ-ಮೇಧೆಗಳುಳ್ಳ ಯೋಗ್ಯಶಿಷ್ಯರಿಗಾಗಿ ಹಂಬಲಿಸುವರೇ ಸರಿ. 

 

ಅಯೋಗ್ಯಶಿಷ್ಯರಾದರೆ?

ಇಲ್ಲಿ ಸಂಭವಿಸುವ ಮತ್ತೊಂದು ಪ್ರಶ್ನೆಯಿದೆ. ಶಿಷ್ಯನು ಮೇಧಾವಿಯಾದರೆ ಗುರುವಿಗೆ ಒಳ್ಳೆಯ ಹೆಸರನ್ನು ತರುವನು, ಸರಿಯೇ. ಆದರೆ ಶಿಷ್ಯನು ಮೇಧಾವಿಯಲ್ಲದಿದ್ದರೆ (ಅಥವಾ ಮತ್ತೊಬ್ಬ ಗುರುವಿನ ಶಿಷ್ಯನಿಗಿಂತಲೂ ಕಡಿಮೆ ಮೇಧಾವಿಯಾಗಿದ್ದಲ್ಲಿ), ಆತನು ಕಲಿಯುವ ವಿದ್ಯೆಯ ಮಟ್ಟವೂ (ಹೋಲಿಕೆಯಲ್ಲಿ) ಕಡಿಮೆಯದೇ ಆಗಿಬಿಡುತ್ತದೆ. ಅದರಿಂದಾಗುವ ಪರಿಣಾಮವೆಂದರೆ, ಗುರುವಿಗೆ ಮಾತ್ರವಲ್ಲದೆ, ಗುರುವು ಉಪದೇಶಿಸಿದ ವಿದ್ಯೆಗೂ ಕೆಟ್ಟ ಹೆಸರು ಬರುವುದು. ಹೀಗೆ ಗುರುವು ವಿದ್ಯೆಯನ್ನು ಚೆನ್ನಾಗಿಯೇ ಹೇಳಿಕೊಟ್ಟಿದ್ದರೂ ಶಿಷ್ಯನು ಚೆನ್ನಾಗಿ ಗ್ರಹಿಸಿ ಧರಿಸಿಲ್ಲದ ಕಾರಣವಾಗಿ, ಶಿಷ್ಯನಿಗೂ, ಅಂತಹ ಶಿಷ್ಯನಿಂದಾಗಿ ಆತನ ಗುರುವಿಗೂ, ಅಪಕೀರ್ತಿಯುಂಟಾಗಬಹುದಲ್ಲವೇ? ಆದ್ದರಿಂದ ಹಾಗಾದಲ್ಲಿ ಗುರುವಿಗೆ ಸಲ್ಲತಕ್ಕ ಗೌರವವು ಸಲ್ಲದೆ, ಗುರುವಿಗೆ ಅಪಚಾರವಾಗುವುದಲ್ಲವೆ? - ಎಂಬ ಪ್ರಶ್ನೆಯೂ ಉದ್ಭವಿಸುವುದೇ. ಹಾಗಾದಲ್ಲಿ ಒಳ್ಳೆಯ ವಿದ್ಯೆಯನ್ನು ಸಂಪಾದಿಸಿಯೂ ವಿದ್ಯೆಯನ್ನು  ಚೆನ್ನಾಗಿ ಹೇಳಿಕೊಟ್ಟೂ ಗುರುವಿಗೆ ದಕ್ಕಬೇಕಾದ ಸ್ಥಾನವು ದಕ್ಕದಂತಾಗುವುದಲ್ಲವೇ? - ಎಂಬುದು ಮುಂದಿನ ಪ್ರಶ್ನೆ. ಇದನ್ನೇ ಅದೇ ನಾಟಕದಲ್ಲಿಯ "ಅಮೇಧಾವಿನೀ ಶಿಷ್ಯಾ ಉಪದೇಶಂ ಮಲಿನಯತಿ ಯದಿ" ಎಂಬ ಪ್ರಶ್ನೆ ಕೇಳುತ್ತದೆ. "ಹಾಗಾದಾಗ ಅದನ್ನು ಆಚಾರ್ಯನ ದೋಷವೆಂದು ಹೇಳುವಿರೋ?" ಎಂಬ ಮಾತನ್ನು ರಾಣಿಯು ಕೇಳುತ್ತಾಳೆ.

ಅದಕ್ಕೆ ರಾಜನು ಕೊಡುವ ಉತ್ತರವು ಗಮನಕ್ಕೆ ಅರ್ಹವಾದುದೇ ಸರಿ.


'ಅದ್ರವ್ಯ'ಸ್ವೀಕಾರದ ದೋಷ

ಈ ಸಂದರ್ಭದಲ್ಲಿ ರಾಜನು ಉತ್ತರಕೊಡುತ್ತಾ "ಅದನ್ನು ಹೀಗೆಯೇ ಹೇಳಬೇಕಾಗಿಬರುತ್ತದೆ" ಎನ್ನುತ್ತಾನೆ. ದಡ್ಡನಾದ ಶಿಷ್ಯನನ್ನು ಸ್ವೀಕರಿಸುವುದು ಗುರುವಿನ ಮೊದಲ ತಪ್ಪು. "ಅದ್ರವ್ಯ-ಶಿಷ್ಯ"ನೆಂದರೆ ಸಾಮರ್ಥ್ಯರಹಿತನಾದ ಶಿಷ್ಯ. ಅಂತಹವನ ಸ್ವೀಕಾರವು ತೋರಿಸುವುದೇನನ್ನು? ಗುರುವಿನ "ಬುದ್ಧಿ-ಲಾಘವವನ್ನು": ಅರ್ಥಾತ್, ಗುರುವಿನ ಬುದ್ಧಿಯು ಗುರುವಾಗಿರದೆ, ಬದಲಾಗಿ ಲಘುವಾಗಿದೆಯೆಂಬುದನ್ನು! ಬುದ್ಧಿಯ ಈ ಲಾಘವವು ಒಂದು ದೋಷವೇ.


ಹೇಳಿಕೊಟ್ಟ ವಿದ್ಯೆಯು ಶಿಷ್ಯನಿಗೆ ದಕ್ಕುವುದಿಲ್ಲವೆಂದರೆ ಹೇಳಿಕೊಟ್ಟದ್ದೆಷ್ಟೋ ಭಾಗ, ಅಥವಾ ಬಹುಭಾಗವೇ, ವ್ಯರ್ಥವೇ ಆಯಿತು. ಗುರುವಿಗೆ ವಿದ್ಯೆ ಮರೆಯಲಿಲ್ಲ; ಶಿಷ್ಯನಿಗೆ ವಿದ್ಯೆ ತಲೆಹತ್ತಲಿಲ್ಲ - ಎಂಬಂತಾಗಿ, ಇಬ್ಬರ ಶ್ರಮವೂ ವ್ಯರ್ಥವೇ. ಇಬ್ಬರಿಗೂ ಅಸಮಾಧಾನ-ಅತೃಪ್ತಿಗಳು, ಕೊರಗು-ಕೋಪಗಳು - ಉಂಟಾಗತಕ್ಕವೇ. ಶಿಷ್ಯನು ವಿದ್ಯೆಯನ್ನು ಚೆನ್ನಾಗಿ ಕಲಿತು ಗುರುವಿಗೆ ಸತ್ಕೀರ್ತಿಯನ್ನು ತಂದುಕೊಡುವಂತಿರಬೇಕು. ಬದಲಾಗಿ ಅಪಕೀರ್ತಿಯನ್ನು ತಂದುಕೊಡುವಂತಾದಲ್ಲಿ, ಪ್ರಯೋಜನವಿಲ್ಲವೆಂದಷ್ಟೇ ಅಲ್ಲ. ನಾಲ್ಕು ಮಂದಿಯ ಮುಂದೆ ಗುರುವಿಗೆ ಪರಾಭವವಾಗಿ, ಆತನ ಹೆಸರು ಕೆಟ್ಟು, ಕೊನೆಗೆ ಆತನು ಕಲಿಸಿದ ವಿದ್ಯೆಗೂ ಅಪಕೀರ್ತಿ ಬಂದು, ಪೇಚಾಗುತ್ತದೆ. ಆದ್ದರಿಂದ, ಆರಿಸಿಕೊಳ್ಳುವಾಗಲೇ ಸರಿಯಾದ ಶಿಷ್ಯರನ್ನು ಆಯ್ದುಕೊಳ್ಳಬೇಕಾದದ್ದು ಗುರುವಿನ ಕರ್ತವ್ಯವಾಗುತ್ತದೆ. ಎಲ್ಲರಿಗೂ ಎಲ್ಲ ವಿದ್ಯೆಗಳೂ ರುಚಿಸಬೇಕೆಂದೇನಿಲ್ಲ. ಮನಸ್ಸಿಗೆ ಮುಟ್ಟದ, ಹೃದಯವನ್ನು ತಟ್ಟದ, ಬುದ್ಧಿಗೆ ಎಟುಕದ, ವಿದ್ಯೆಗಾಗಿ ಸಮಯ-ಸಂಪತ್ತುಗಳನ್ನು ವ್ಯಯಿಸಬೇಕೇಕೆ?


ಇದೆಲ್ಲವೂ ವಿದ್ಯೆಯ ಬಗ್ಗೆ ಇರಬೇಕಾದ ಒಂದು ಜವಾಬ್ದಾರಿಯನ್ನು ಆಧರಿಸಿದ ಮಾತು. ವಿದ್ಯೆಯನ್ನು ಯುಕ್ತವಾದ ಲಕ್ಷ್ಯಗಳಿಗಾಗಿ ಬಳಸುವವರನ್ನೇ ಆಯ್ದುಕೊಳ್ಳಬೇಕಾದ ಕರ್ತವ್ಯವಿದೆ. ದೂರದೃಷ್ಟಿಯಿಂದಲೇ ಇಂತಹ ನೋಟವು ಶಕ್ಯ: ದೀರ್ಘಂ ಪಶ್ಯತ, ಮಾ ಹ್ರಸ್ವಮ್ – ಎನ್ನುವರಲ್ಲವೇ?


ಮೇಧಾವಿಯಲ್ಲದ ಶಿಷ್ಯನಿಂದ ಗುರುವಿಗೆ ಮಾತ್ರವಲ್ಲದೆ ವಿದ್ಯೆಗೇ ಕಳಂಕ ಬಂದೀತೆಂಬ ಎಚ್ಚರಿಕೆಯನ್ನೂ ಇಲ್ಲಿ ಗ್ರಹಿಸಬಹುದಾಗಿದೆ. (ಇಂದು ಯೋಗವೆಂಬುದೂ ಫ್ಯಾಷನ್ ಎಂಬಂತಾಗುತ್ತಿದ್ದು, ಅದರ ಮೂಲೋದ್ದೇಶವೇ ಎಲ್ಲೋ ಮರೆಯಾಗುತ್ತಿಲ್ಲವೇ?)


ಸೂಚನೆ : 30/04/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.