Tuesday, April 26, 2022

ಭಾರತೀಯ ನಾಟ್ಯಕಲೆಯ ವೈಶಿಷ್ಟ್ಯ(Bharatiya Natyakaleya Vaishistya)

 ಲೇಖಕಿ ; ಮೈಥಿಲೀ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)



ನಾಟ್ಯವೆನ್ನುವುದು ವಿಶ್ವದಾದ್ಯಂತ ನಾನಾರೀತಿಗಳಲ್ಲಿ  ಬೆಳೆದುಬಂದಿದೆ. ಬ್ರೇಕ್ಡಾನ್ಸ್, ಬಾಲ್ ಡಾನ್ಸ್ ಮುಂತಾದ ಅನೇಕ ನಟನಶೈಲಿಗಳು ಪ್ರಚಲಿತವಾಗಿವೆ. ವಿಶ್ವದ ಎಲ್ಲೆಡೆಗಳಲ್ಲಿಯೂ ಅವರವರದೇ ಆದ ಕ್ರಮಗಳು ಬೆಳೆದುಬಂದಿವೆ. ಸಾಮಾನ್ಯವಾಗಿ ಇವೆಲ್ಲದರ ಉದ್ದೇಶವೂ ತಮ್ಮ ಕಲಾನೈಪುಣ್ಯದ ಪ್ರದರ್ಶನದಿಂದ ಪ್ರೇಕ್ಷಕರಿಗೆ ಮನರಂಜನೆಯನ್ನುಂಟುಮಾಡುವುದೇ ಆಗಿದೆ. ಅಲ್ಲದೇ ಇದರ ಹಿಂಬದಿಯಲ್ಲಿ ನರ್ತಿಸುವವರ ಕೀರ್ತಿಕಾಮನೆ, ಧನಕಾಮನೆಗಳೂ ಇರುವುದುಂಟು.  ಇದು ಎಲ್ಲ ದೇಶಗಳಿಗೂ ಅನ್ವಯಿಸುವ ಸಾಮಾನ್ಯ ಅಂಶವೇ  ಆಗಿದೆ.  


ಭಾರತವೂ ಸಹ ತನ್ನದೇ ಆದ ನಾಟ್ಯಶೈಲಿಗಳನ್ನು ಬೆಳೆಸಿಕೊಂಡು ಬಂದಿದೆ. ಭಾರತದ ವಿವಿಧ ಪ್ರಾಂತ್ಯಗಳಿಗೆ ಸಂಬಂಧಿಸಿದಂತೆ ಭರತನಾಟ್ಯ, ಕಥಕ್ಕಳಿ, ಒಡಿಸ್ಸಿ, ಮೋಹಿನಿಯಾಟ್ಟಂ, ಕೂಚಿಪುಡಿ ಮುಂತಾದ ಪ್ರಧಾನವಾದ ಎಂಟು ಶೈಲಿಗಳನ್ನು ನೋಡಬಹುದಾಗಿದೆ.  ಪ್ರತಿಯೊಂದು ಶೈಲಿಯೂ ತಾಳಬದ್ಧವಾದ  ಅಭಿನಯಗಳ ಮೂಲಕ ನವರಸಗಳನ್ನು ಪ್ರದರ್ಶಿಸುವಲ್ಲಿ ಕೆಲವು ಅಂಶಗಳಿಗೆ ಹೆಚ್ಚು ಪ್ರಾಧಾನ್ಯವನ್ನು ನೀಡುತ್ತವೆ. ನಟ-ನರ್ತಕಿಯರ ಆಭರಣ ಅಲಂಕಾರಗಳು ಅವರ ಸೌಂದರ್ಯವನ್ನು ಹೆಚ್ಚಿಸುತ್ತ  ಪ್ರೇಕ್ಷಕರ ಕಣ್ಮನಗಳನ್ನು ತಣಿಸುತ್ತವೆ.

ನಾಟ್ಯದ ಮೂಲ     

ಒಬ್ಬ ವ್ಯಕ್ತಿಯು ಅತ್ಯಂತ ನೋವಿನಿಂದಲೋ ದುಃಖದಿಂದಲೋ ನರಳುವಾಗ ಆ ನೋವು ಮುಖ-ಅಂಗಾಂಗಗಳ ಮೇಲೆ ತನ್ನನ್ನು ಮುದ್ರಿಸಿಕೊಳ್ಳುವುದನ್ನು ಸಾಮಾನ್ಯ ಜೀವನದಲ್ಲಿ ನೋಡಬಹುದಾಗಿದೆ. ಅಂತೆಯೇ ಸಂತೋಷ-ಉಲ್ಲಾಸಗಳೂ ಸಹ ತಮ್ಮ ಭಾವವನ್ನು ವ್ಯಕ್ತಿಯ ದೇಹದ ಮೇಲೆ ಒತ್ತುತ್ತದೆಯೆನ್ನುವುದು ಸಾಮಾನ್ಯಜ್ಞಾನ. ತೊಟ್ಟಿಲ ಕೂಸೂ ಸಹ ಸಂತೋಷವಾದಾಗ ಕೈ-ಕಾಲುಗಳನ್ನು ಉತ್ಸಾಹದಿಂದ ಆಡಿಸುತ್ತಾ ನಗುತ್ತದೆ. ಅದರ ನಗು, ಕೈಕಾಲುಗಳ ಚಲನೆಯೇ ಸಂತೋಷದ ಮಟ್ಟವನ್ನು ಸೂಚಿಸುವಂತಿರುತ್ತದೆ. ಹೀಗೆ ವಯೋಧರ್ಮ, ಪ್ರಕೃತಿಧರ್ಮಗಳಿಗನುಗುಣವಾಗಿ ಮನಸ್ಸಿನಲ್ಲೇಳುವ ಭಾವಗಳು   ತಮ್ಮದೇ ಆದ ರೀತಿಯಲ್ಲಿ ತಮ್ಮನ್ನು ತೋರ್ಪಡಿಸಿಕೊಳ್ಳುತ್ತವೆ.  ಈ ಭಾವಗಳೂ, ಅವುಗಳು ಉಂಟುಮಾಡುವ ಮುಖ-ಅಂಗ ವಿನ್ಯಾಸಗಳೂ ಜನಸಾಮಾನ್ಯರಿಗೆ  ಸುಪರಿಚಿತವಾಗಿರುವುದರಿಂದ  ಆಯಾ ಭಂಗಿಗಳ ಅನುಕರಣೆಯು ನೋಡುಗರನ್ನು ಒಡನೆಯೇ ಅದರ ಭಾವದೆಡೆ ಎಳೆಯುತ್ತದೆ. ಮಾನವನ  ಮನಸ್ಸಿನಲ್ಲಿ ಮಾತ್ರವಲ್ಲದೆ ಪಶುಪಕ್ಷಿಗಳಲ್ಲಿ ಸುಳಿಯಬಹುದಾದ ವಿವಿಧ ಭಾವಗಳ ಅನುಕರಣೆಯೇ ನಾಟ್ಯವಾಗಿ ಮನರಂಜನೆಗೆ ವಿಷಯವಾಗುವುದು. ಆದ್ದರಿಂದ ಮನಸ್ಸೇ ನಾಟ್ಯಕ್ಕೆ ಮೂಲ ಎನ್ನುವುದು ಎಲ್ಲ  ನಾಟ್ಯಗಳಿಗೂ ಅನ್ವಯಿಸುವ  ಸತ್ಯ.   


ಭಾರತೀಯ ನಾಟ್ಯಕಲೆಯ ಮೂಲ 

ಮನರಂಜನೆಯೇ ನಾಟ್ಯದ ಪ್ರಯೋಜನವೆನ್ನುವುದಾದರೆ ಭಾರತೀಯವಾದ ನಾಟ್ಯಗಳಿಗೂ ಇತರ  ನಾಟ್ಯಗಳಿಗೂ ಪರಿಣಾಮದಲ್ಲಿ ಯಾವ ವ್ಯತ್ಯಾಸವೂ ಕಂಡುಬರುವುದಿಲ್ಲ. ಹಾಗಿದ್ದಲ್ಲಿ ಭಾರತೀಯ ನಾಟ್ಯಕಲೆಯ ವೈಶಿಷ್ಟ್ಯವೇನು? ಸನಾತನಾರ್ಯ ಭಾರತಮಹರ್ಷಿಗಳಿಂದ ಬೆಳೆಸಲ್ಪಟ್ಟಿರುವ ಈ ಕಲೆಯ ವೈಶಿಷ್ಟ್ಯವನ್ನರಿಯಲು ಮಹರ್ಷಿಗಳ ಮನೋಭೂಮಿಕೆಯಲ್ಲಾಡಿದ ವಿಚಾರಗಳನ್ನು ತಿಳಿಯುವುದು ಆವಶ್ಯಕ. ಈ ನಿಟ್ಟಿನಲ್ಲಿ ಮಹರ್ಷಿಹೃದಯವೇದಿಗಳಾದ ಶ್ರೀರಂಗಮಹಾಗುರುಗಳು ನೀಡಿದ ವಿವರಣೆಯು ಉಲ್ಲೇಖಾರ್ಹವಾಗಿದೆ. 



ಮನಸ್ಸಿನಲ್ಲಾಡುವ ವಿಚಾರಗಳೆಲ್ಲವೂ ಇಂದ್ರಿಯಪ್ರಪಂಚದಿಂದ ಇಂದ್ರಿಯಗಳ ಮೂಲಕವೇ ಬರುವುವೆಂಬುದು ಸಾಮಾನ್ಯಜ್ಞಾನ. ಆದರೆ ಭಾರತೀಯಮಹರ್ಷಿಗಳು ಇಂದ್ರಿಯಗಳನ್ನು ಹೊರಪ್ರಪಂಚದಿಂದ ಹಿಂಸೆಳೆದು ಮನಸ್ಸನ್ನು ಒಳಪ್ರಪಂಚದತ್ತ ತಿರುಗಿಸಿದರು. ಹಿಂದೆ ಬೆಳಗುವ ದೇವತಾಶಕ್ತಿಗಳನ್ನೂ, ಅವುಗಳಿಗೂ ಶಕ್ತಿಯನ್ನೀವ ಮನಸಸ್ಪತಿಯಾದ ಪರಮಪುರುಷನನ್ನು ಕಂಡರು. ಆ ದರ್ಶನಗಳಿಂದ ಅವರಲ್ಲಿ ಲ್ಲಿ ತುಂಬಿದ ದೈವೀರಸದ ಪರಮಾನಂದಭಾವವು  ಮುಂದೆ ಅವರ ಮನದುಂಬಿ  ತನ್ನದೇ ಆದ ರೀತಿಯಲ್ಲಿ ಮುಖ-ಅಂಗಾಂಗಗಳ ಮೇಲೆಯೂ ಪ್ರಕಟಗೊಂಡಿತು.  ಆ ಭಾವ-ಭಂಗಿಗಳು ಸುಸಂಸ್ಕಾರಿಗಳಾದ ನೋಡುಗರನ್ನು ಭಾವಮೂಲವಾದ ಒಳ ಅನುಭವಸ್ಥಾನಕ್ಕೆ ಕರೆದೊಯ್ಯುವುವೆಂಬುದನ್ನು  ಅರಿತ ಮಹರ್ಷಿಗಳು ಅವುಗಳನ್ನು ಚಿತ್ರ-ಶಿಲ್ಪಗಳ ಮೂಲಕ ಹೊರಗಿಟ್ಟರು. ಆ ಭಾವಗಳನ್ನೇ ನಾಟ್ಯದ ರೂಪದಲ್ಲಿ ತೋರಲು ನಾಟ್ಯಶಾಸ್ತ್ರವನ್ನೂ ತಂದರು. 

ಆದ್ದರಿಂದ ಭಾರತೀಯ ನಾಟ್ಯಕಲೆಯ ಮೂಲ ಮನಸ್ಸಲ್ಲ, ಮನಸ್ಸಿಗೂ ಹಿಂದಿರುವ ಶಕ್ತಿಗಳು. ಮನಸ್ಸು ಒಂದು ಮಾಧ್ಯಮವಷ್ಟೆ. 


ನಾಟ್ಯ -ಒಂದು ಕಲೆ 

'ಕಲೆ'ಯೆಂಬ ಪದವು ಅಂಶ(ಭಾಗ) ಎಂಬರ್ಥವನ್ನೊಳಗೊಂಡಿದೆ.  ಅಂಶವು ತನ್ನ ಮೂಲವಾದ ಪೂರ್ಣದೊಂದಿಗೆ ಸಂಬಂಧವನ್ನುಳಿಸಿಕೊಂಡಿದ್ದರೆ ಮಾತ್ರ ಅಂಶವೆನಿಸಿಕೊಳ್ಳುವುದು. ಅಂತೆಯೇ ನಾಟ್ಯವೂ  ತನ್ನ ಮೂಲವಾದ  ಮನಸಸ್ಪತಿಯೊಂದಿಗೆ ಸಂಬಂಧವನ್ನು ಉಳಿಸಿ ಬೆಳೆಸಿಕೊಂಡಾಗ ಮಾತ್ರವೇ 'ಕಲೆ'ಯಾಗುವುದು.  "ಕಲೆಯು ನೆಲೆಯನ್ನು ಮುಟ್ಟಿಸುವಂತಿರಬೇಕು" ಎನ್ನುವ ಶ್ರೀರಂಗಮಹಾಗುರುಗಳ ಸೂತ್ರರೂಪವಾದ ಮಾತು ಇಲ್ಲಿ ಸ್ಮರಣೀಯ. 

ಕೇವಲ ಭಾವಾಭಿನಯ ಮಾತ್ರವಿದ್ದಾಗ ಅದು ನೃತ್ತವೆನಿಸಿಕೊಳ್ಳುತ್ತದೆ. ತಾಳ-ಲಯಬದ್ಧವಾದಾಗ ನೃತ್ಯವೆನಿಸುವುದು. ಸಂಗೀತದೊಡನೆ ಸಮ್ಮಿಲಿತವಾಗಿ ಭಾವ-ರಾಗ-ತಾಳಗಳಿಂದ ಕೂಡಿದಾಗ   ನಾಟ್ಯಕಲೆಯಾಗಿ ಜನಮನವನ್ನು ಆಕರ್ಷಿಸುತ್ತದೆ.  ದೈವೀಭಾವದಲ್ಲಿ ಮುಳುಗಿ ಅ ಭಾವವನ್ನು ಹೊರತರಬಲ್ಲ ನರ್ತಕ-ನರ್ತಕಿಯರ ನಾಟ್ಯವು  ಸುಸಂಸ್ಕೃತರಾದವರನ್ನು ಜೀವನದ ಒಳ ಸತ್ಯದತ್ತ ಅವಶ್ಯವಾಗಿ ಸೆಳೆಯಬಲ್ಲದು. ನಾಟ್ಯದೊಂದಿಗೆ ಸೇರುವ ಸಂಗೀತವೂ ಸಹ  ಭಾರತೀಯ ಸಂಸ್ಕೃತಿಯಲ್ಲಿ ಸೃಷ್ಟಿಮೂಲವಾದ ಪ್ರಣವದ ವಿಸ್ತಾರವೇ ಆಗಿದೆ. 

ತಕಾರ-ಲಕಾರಗಳು ಶಂಕರ-ಶಕ್ತಿಯರನ್ನು ಸೂಚಿಸುವುದರಿಂದ 'ತಾಳ'ವು ಆ ಶಿವ-ಶಿವೆಯರ ಸಮ್ಮೇಳನವನ್ನೇ ಸೂಚಿಸುತ್ತದೆಂಬುದು ಜ್ಞಾನಿಗಳ ನೋಟ. ಶಿವ-ಶಕ್ತಿಯರ, ಸೃಷ್ಟಿ-ಸ್ಥಿತಿ-ಲಯ ಲೀಲಾವಿಲಾಸಗಳನ್ನೇ ಅವರ ದಿವ್ಯನಾಟ್ಯವೆಂಬುದಾಗಿ ನಮ್ಮ  ಮಹರ್ಷಿಗಳು ಕಂಡಿದ್ದಾರೆ. ಆದ್ದರಿಂದ        ಬ್ರಹ್ಮಾಂಡವೇ  ಪರಮಾತ್ಮನ ನಾಟ್ಯರಂಗವೆಂಬ ಸತ್ಯಾರ್ಥವನ್ನು ಸಾರಿದರು.

ನಾಟ್ಯದ ಜೊತೆಗೂಡುವ ವೀಣಾ-ವೇಣು-ಮೃದಂಗಾದಿ ವಾದ್ಯಗಳ ನಾದಗಳು ಮಹರ್ಷಿಗಳ ಅಂತ:ಶ್ರವಣ ಗೋಚರವಾದ ದಶವಿಧ ನಾದಗಳ ಹೊರರೂಪಗಳೇ ಆಗಿವೆ. ಈ  ಹೊರ ನಾದಗಳೂ ನಮ್ಮನ್ನು ತಮ್ಮ ಒಳಮೂಲದತ್ತ ಸೆಳೆಯಬಲ್ಲವು.  ಆದ್ದರಿಂದ ಭಾವ-ರಾಗ-ತಾಳಗಳಿಂದ ಕೂಡಿ ಜನರನ್ನು ರಂಜಿಸುವ ನಾಟ್ಯಕಲೆಯು ತನ್ನ ಪ್ರತಿಯೊಂದು ಅಂಶದಿಂದಲೂ ಜನಮನವನ್ನು ಭಗವಂತನೆಡೆ ಸೆಳೆಯಬಲ್ಲದಾದ್ದರಿಂದ ಅದೊಂದು ಕಲೆಯೇ ಆಗುವುದೆಂಬುದು ಜ್ಞಾನಿಗಳ ತೀರ್ಮಾನವಾಗಿದೆ. 


ನಾಟ್ಯ-ಒಂದು ವೇದ 

ನಾಟ್ಯವು 'ನಾಟ್ಯವೇದ`ವೆಂದೂ ಪ್ರಸಿದ್ಧವಾಗಿದೆ. ಯಾವುದೇ ವೇದಮಂತ್ರಗಳೂ ಕಾಣಿಸಿಕೊಳ್ಳದಿರುವ ನಾಟ್ಯವನ್ನು ವೇದವೆನ್ನುವುದು ಸೂಕ್ತವೇ? ಜ್ಞಾನಿಗಳ ಮತದಲ್ಲಿ ವೇದವೆನ್ನುವುದು ಮಂತ್ರರಾಶಿಯನ್ನೊಳಗೊಂಡ ಸಾಹಿತ್ಯಮಾತ್ರವಲ್ಲ. ಸೃಷ್ಟಿಮೂಲಶಕ್ತಿ-ಭಗವಂತನೇ ಋಷಿದೃಷ್ಟಿಯಲ್ಲಿ 'ವೇದ' ಎಂಬುದಾಗಿದೆ. ಅತೀಂದ್ರಿಯ ಪ್ರಪಂಚದಿಂದಲೇ ಉಗಮವಾಗುವ, ಅಂತ:ಶ್ರವಣಗೋಚರವಾದ ಮಂತ್ರಗಳೂ ವೇದವೆಂದು ಕರೆಯಲ್ಪಟ್ಟುದು ಈ ಹಿನ್ನೆಲೆಯಿಂದಲೇ. (ಅವುಗಳನ್ನೇ ಪುಸ್ತಕದಲ್ಲಿ ಉಲ್ಲೇಖಿಸಿದಾಗ ಪುಸ್ತಕವೂ ವೇದವೆನಿಸುವುದು). ಈ ಮಂತ್ರಗಳನ್ನು ಶ್ರುತವಾದಂತೆಯೇ ಉಚ್ಚರಿಸಿದಾಗ ಅವು ತಮ್ಮ ಮೂಲವಾದ ದೈವೀಸ್ಥಾನಕ್ಕೇ ಪಠಿಸುವವರನ್ನೂ ಕೇಳುವವರನ್ನೂ ಏರಿಸಬಹುದು. ನಾಟ್ಯವೂ ವೇದದಂತೆಯೇ  ಅತೀಂದ್ರಿಯ  ಪ್ರಪಂಚದಲ್ಲೇ ಜನಿಸಿ, ವೇದದಂತೆಯೇ ಪರಂಜ್ಯೋತಿಯ ಕಡೆಗೆ ಜೀವಿಗಳನ್ನು ಕರೆದೊಯ್ಯಬಲ್ಲುದು. ಆದ್ದರಿಂದಲೇ "ಪರಾತ್ಮಾ ವೇದ್ಯತೇ ಯೇನ ಸ ವೇದೋ ವೇದ ಉಚ್ಯತೇ"(ಪರಮಾತ್ಮನನ್ನು ತಿಳಿಯಲು ಸಹಾಯಕವಾದುದೆಲ್ಲವೂ ವೇದವೇ)  ಎಂಬ ಆರ್ಷವಾಣಿಯಂತೆ ನಾಟ್ಯಕ್ಕೂ ವೇದವೆಂಬ ಹೆಸರು ಸೂಕ್ತವೇ ಆಗಿದೆಯೆಂಬ ಮಹಾಗುರುಗಳ ವಿವರಣೆಯನ್ನು ಸ್ಮರಿಸುತ್ತೇವೆ.  

   

ನಾಟ್ಯ-ಒಂದು ಯಜ್ಞ 

ಯಜ್ಞವೆಂದರೆ ದೇವತಾಪ್ರೀತಿಯನ್ನುಂಟು ಮಾಡುವ ಕ್ರಿಯೆ. ನಾಟ್ಯವು ಕಲೆಯೇ ಆಗುವ ಪಕ್ಷದಲ್ಲಿ ನರ್ತಕ-ನರ್ತಕಿಯರು ದೇವಭಾವಕ್ಕೇರಿ ಅದನ್ನು ತಮ್ಮ ಹೊರ ಅಂಗಾಂಗಗಳ ಮೂಲಕ ಹೊರತರುವ ಕ್ರಿಯೆಯಾಗುತ್ತದೆ. ಹೀಗೆ ದೈವೀಭಾವಕ್ಕೇರುವುದೇ ದೇವತಾಪ್ರೀತಿಕರವಾದದ್ದು. ಆದ್ದರಿಂದ ನಾಟ್ಯಕಲೆಯು ಯಜ್ಞವೇ ಸರಿ ಎಂಬುದು ಜ್ಞಾನಿಜನಸಮ್ಮತವಾದ ಮಾತಾಗಿದೆ. 

ದೇವಾದಿದೇವನಾದ ಪರಮಾತ್ಮನ ಭಾವಕ್ಕೇರಿದಾಗ ಅಲ್ಲಿ ಮೂಡಿಬರುವುದು ಶಾಂತರಸ. ಆತನಿಂದ ವಿಸ್ತಾರವಾದ ಶಕ್ತಿಗಳು ಮತ್ತು ಅವರ ವಿಲಾಸಗಳನ್ನು ತೋರಿಸುವಾಗ ಅಲ್ಲಿ ತ್ರಿಗುಣಗಳ ಪಾತ್ರವು ಸೇರುತ್ತದೆ. ತ್ರಿಗುಣಗಳೇ ಶೃಂಗಾರಾದಿ ರಸಗಳನ್ನೊಳಗೊಂಡ ಸಮಸ್ತ ಲೋಕವ್ಯಾಪಾರಗಳನ್ನೂ ಆವರಿಸಿವೆ. ಆದ್ದರಿಂದ ನಾಟ್ಯದಲ್ಲಿ ರಸಗಳೆಲ್ಲಕ್ಕೂ ಮೂಲವಾದ ಶಾಂತರಸದ ಅಭಿನಯದಿಂದ ಪ್ರಾರಂಭವಾಗಿ, ನವರಸಗಳನ್ನೂ ಪ್ರದರ್ಶಿಸಿ ಕೊನೆಗೆ ಶಾಂತರಸದಲ್ಲೇ ನಿಲ್ಲಿಸುವ ಪದ್ಧತಿಯಿದೆ. ಅಂದರೆ ಜನರಿಗೆ ಪರಿಚಿತವಾದ ರಸಗಳನ್ನೇ ತೋರುತ್ತಾ ಅವರನ್ನಾಕರ್ಷಿಸಿ ಮೆಲ್ಲಗೆ ಶಾಂತರಸದಲ್ಲಿ ನಿಲ್ಲಿಸುವ ಜಾಣ್ಮೆಯನ್ನು ಇಲ್ಲಿ ಕಾಣಬಹುದಾಗಿದೆ. ನಾಟ್ಯಂ ಭಿನ್ನರುಚೇರ್ಜನಸ್ಯ ಬಹುದಾಪ್ಯೇಕಂ  ಸಮಾರಾಧನಂ ಎಂದು ಮಹಾಕವಿ ಕಾಳಿದಾಸನು ಕೊಂಡಾಡುವಂತೆ ನಾನಾ ರಸಗಳಲ್ಲಿ ಅಭಿರುಚಿಯುಳ್ಳ  ಜನರೆಲ್ಲರನ್ನೂ ತೃಪ್ತಿಗೊಳಿಸುವ ಸಮಾರಾಧನೆಯೇ ಆಗಿದೆ. 

ಇಂದಿನ ಭಾರತೀಯ ನಾಟ್ಯಕಲೆಯು ಮನಮೋಹಕವಾಗಿ ಭಾವ-ಭಂಗಿಗಳನ್ನು ಪ್ರದರ್ಶಿಸುತ್ತಿರುವುದು ನಿಸ್ಸಂಶಯ. ಇದರೊಂದಿಗೆ ಯೋಗದೃಷ್ಟಿಯೂ ಸಮ್ಮಿಲಿತವಾದಾಗ ಇದು ನಿಜವಾದ ನಾಟ್ಯಕಲೆಯಾಗುವುದರಲ್ಲಿ ಸಂಶಯವಿಲ್ಲ. ಆ ಗುರಿಯತ್ತ ಇಂದಿನ ನಾಟ್ಯಕಲಾಭ್ಯಾಸವು ಸಾಗಲೆಂದು ಆಶಿಸೋಣ.


ಸೂಚನೆ: 21/04/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ಲ್ಲಿ ಪ್ರಕಟವಾಗಿದೆ.