Monday, April 18, 2022

ಶ್ರೀ ರಾಮನ ಗುಣಗಳು - 51 ಸಂವೇದನಾಶೀಲ - ಶ್ರೀರಾಮ (Sriramana Gunagalu -51 Sanvedanasila -Sriramana)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್

(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀರಾಮನು ಸಂವೇದನಾಶೀಲನಾಗಿದ್ದ ಎಂಬುದಕ್ಕೆ ಶ್ರೀಮದ್ರಾಮಾಯಣದಲ್ಲಿ ಕೆಲವು ಉದಾಹರಣೆಗಳನ್ನು ಕಾಣಬಹುದು. ಸಂವೇದನಾಶೀಲತೆ ಎಂದರೇನು? ಅದು ಶ್ರೀರಾಮನಲ್ಲಿ ಕಂಡಿದ್ದು ಹೇಗೆ ಎಂಬುದನ್ನು ಸ್ವಲ್ಪ ತಿಳಿಯುವ ಪ್ರಯತ್ನ ಮಾಡೋಣ.


ಮಾಯಾರೂಪದಲ್ಲಿ ಬಂದ ಮಾರೀಚನನ್ನು ಬೆನ್ನಟ್ಟಿ ಹೋಗಿ ಮಾರೀಚನನ್ನು ಶ್ರೀರಾಮನು ಸಂಹರಿಸುತ್ತಾನೆ. ಅನಂತರ ಆಶ್ರಮದ ಕಡೆ ಬರುತ್ತಾನೆ. ಇತ್ತ ದುಷ್ಟನಾದ ರಾವಣನು ಸೀತಾಮಾತೆಯನ್ನು ಅಪಹರಿಸಿರುತ್ತಾನೆ. ಆಶ್ರಮಕ್ಕೆ ಬರುತ್ತಿರುವಾಗಲೇ ಶ್ರೀರಾಮನ ಎಡಗಣ್ಣು ಅದರಿ ಅಪಶಕುನವಾಗುತ್ತದೆ. ಪುರುಷರಿಗೆ ಎಡಭಾಗದ ಕಣ್ಣುರೆಪ್ಪೆ ಅದುರಿದರೆ ಅವರಿಗೆ ಯಾವುದೋ ಕೆಟ್ಟದ್ದರ ಸೂಚನೆ ಎಂಬುದಾಗಿ ಶಕುನಶಾಸ್ತ್ರ ಸಾರುತ್ತದೆ. ಇದನ್ನು ಗಮನಿಸಿದ ರಾಮನಿಗೆ 'ಅಪಿ ಕ್ಷೇಮಂ ನು ಸೀತಾಯಾಃ?'- ಸೀತೆಯು ಕ್ಷೇಮವಾಗಿರುವಳೇ? ಎಂಬ ಆತಂಕವಾಗುತ್ತದೆ. ಉದ್ವಿಗ್ನನಾದ ಮನಸ್ಸಿನಿಂದಲೇ ಆಶ್ರಮವನ್ನು ಪ್ರವೇಶಿಸುತ್ತಾನೆ. ಅಲ್ಲಿ, ಇಲ್ಲಿ, ಎಲ್ಲೆಲ್ಲೂ ಸೀತೆಯನ್ನು ಹುಡುಕುತ್ತಾನೆ. ಪರ್ಣಶಾಲೆಯಲ್ಲಿ ಹುಡುಕುತ್ತಾನೆ. ಎಲ್ಲೂ ಸೀತೆಯು ಇರುವಂತೆ ಕಂಡುಬರುತ್ತಿಲ್ಲ.  ಸೀತೆಯ ವಿರಹವನ್ನು ಶ್ರೀರಾಮನು ಯಾವರೀತಿಯಾಗಿ ಅನುಭವಿಸಿದ? ಅವನ ಸಂವೇದನಾಶೀಲತೆ ಎಷ್ಟರಮಟ್ಟಿಗೆ ಇತ್ತು ಎಂಬುದನ್ನು ವಾಲ್ಮೀಕಿಗಳು ಬಹಳ ಸುಂದರವಾಗಿ ವಿವರಿಸುತ್ತಾರೆ. ಹೇಗೆಂದರೆ - ಸೀತೆಯಿಲ್ಲದೆ ಕಮಲಗಳು ಕಾಂತಿಹೀನವಾಗಿದ್ದವು. ಹೂವುಗಳೆಲ್ಲವೂ ಬಾಡಿಹೋಗಿದ್ದವು. ಮೃಗ-ಪಕ್ಷಿಗಳ ಮುಖದಲ್ಲೂ ಎಂದಿನ ಉತ್ಸಾಹ ಕಾಣುತ್ತಿರಲಿಲ್ಲ. ಪರ್ಣಶಾಲೆಯಲ್ಲಿದ್ದ ಕೃಷ್ಣಾಜಿನ, ದರ್ಭೆ, ಆಸನ ಮುಂತಾದ ಪದಾರ್ಥಗಳೆಲ್ಲವೂ ಚಲ್ಲಾಪಿಲ್ಲಿಯಾಗಿದ್ದವು. ಇದನ್ನು ನೋಡಿ ಶ್ರೀರಾಮನು ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದನು. ಸೀತೆಯನ್ನು ಯಾರಾದರೂ ದುಷ್ಟರು ಅಪಹರಿಸಿರುವರೇ? ಕಾಡುಪ್ರಾಣಿಗಳ ಪಾಲಾದಳೇ? ಹೀಗೆ ಬಗೆಬಗೆಯಲ್ಲಿ ಅವನಿಗೆ ನೂರಾರು ಪ್ರಶ್ನೆಗಳ ಮಾಲೆಯೆ ಎದುರು ಬಂದಿತು. ಒಂದು ಕಡೆಯಿಂದ ಇನ್ನೊಂದು ಕಡೆ, ಒಂದು ಬೆಟ್ಟದಿಂದ ಇನ್ನೊಂದು ಬೆಟ್ಟದ ಕಡೆ, ಒಂದು ನದಿಯ ತೀರದಿಂದ ಇನ್ನೊಂದು ನದಿಯ ತೀರಕ್ಕೆ ಓಡಿ ಓಡಿ ಹೋಗುತ್ತಿದ್ದನು. ಎಲ್ಲೆಡೆ ಹೋಗಿ ಸೀತೆ! ಸೀತೇ! ಎಂದು ಕರೆಯುತ್ತಿದ್ದನು. ಅತ್ತ ಕಡೆಯಿಂದ ಪ್ರತ್ಯುತ್ತರ ಬಾರದಿರುವುದನ್ನು ಕಂಡು ಗಟ್ಟಿಯಾಗಿ ಅಳುತ್ತಿದ್ದನು. ಕದಂಬವೃಕ್ಷ, ಬಲ್ವ, ಅರ್ಜುನ, ಅಶೋಕ ಹೀಗೆ ನೂರಾರು ವೃಕ್ಷಗಳ ಬಳಿ ಹೋಗಿ ನೀವು ಸೀತೆಯನ್ನು ಕಂಡಿರಾ? ಎಂದು ಕೇಳುತ್ತಿದ್ದನು. ಯಾವ ವೃಕ್ಷದಿಂದಲೂ ಪ್ರತ್ಯುತ್ತರವನ್ನು ರಾಮನು ಕೇಳಲಿಲ್ಲ.


ಇದನ್ನು ಗಮನಿಸಿದಾಗ ನಮಗೆ ಬರುವ ಸಂದೇಹವೇನೆಂದರೆ- ಪುರುಷೋತ್ತಮನಾದ ಶ್ರೀರಾಮ ಪತ್ನಿಯ ವಿರಹವನ್ನು ಜಡಪದಾರ್ಥಗಳಲ್ಲಿ ಕೇಳುವುದೇ? ಎಂದು. ಹೌದು ಇದು ಶ್ರೀರಾಮನಿಗಿರುವ ಪ್ರೀತಿಯ - ಬಾಂಧವ್ಯದ ಸಂವೇದನಾಶೀಲತೆ. ಅಂತರಂಗದಲ್ಲಿ ವೇದನೆ ತೀವ್ರವಾದಾಗ ಅದು ಎಲ್ಲೂ, ಯಾರಲ್ಲೂ ವ್ಯಕ್ತವಾಗಬಹುದು.  


ಒಂದು ಕ್ರಿಯೆಗೆ ಪ್ರತಿಕ್ರಿಯೆಂಬುದು ಸರ್ವೇಸಾಮಾನ್ಯ. ಒಂದು ಜಡಪದಾರ್ಥದಲ್ಲಿ ನಡೆಯುವ ಕ್ರಿಯೆಯ ಪ್ರತಿಕ್ರಿಯೆಯಲ್ಲಿ ಕ್ರಿಯೆಗೆ ಸಮಾನವಾದ ಪ್ರತಿಕ್ರಿಯೆಯನ್ನು ಕಾಣಬಹುದು. ಆದರೆ ಚೈತನ್ಯವಿರುವ ವ್ಯಕ್ತಿಯಲ್ಲಿ ನಡೆಯುವ ಪ್ರತಿಕ್ರಿಯೆಯು ಹಾಗೆಯೇ ನಡೆಯಬೇಕೆಂಬ ನಿಯಮವಿಲ್ಲ. ಕೆಲವೊಮ್ಮೆ ಪ್ರತಿಕ್ರಿಯೆಯು ವ್ಯಕ್ತವಾಗಿ, ಇನ್ನು ಕೆಲವೊಮ್ಮೆ ಅಸ್ಪಷ್ಟವಾಗಿ, ಇನ್ನು ಕೆಲವೂ ಗೋಚರಿಸದೇ ಇರಬಹುದು. ಅವು ಪ್ರತಿಕ್ರಿಯೆಯ ಪ್ರಕಾರಗಳು. ಯಾವುದೋ ಒಂದು ಘಟನೆಯು ನಮ್ಮ ಎದುರಿಗೆ ಸಂಭವಿಸಿದಾಗ ಆ ಘಟನೆಗೂ ನಮಗೂ ಇರುವ ಸಂಬಂಧಕ್ಕನುಸಾರವಾಗಿ ಅದಕ್ಕೆ ನಾವು ಯಾವ ರೀತಿಯಾಗಿ ಪ್ರತಿಕ್ರಿಯಿಸುತ್ತೇವೋ ಅದಕ್ಕೆ 'ಸಂವೇದನೆ' ಎಂದು ಕರೆಯಬಹುದು. ಇಲ್ಲಿ ಶ್ರೀರಾಮನು ಒಬ್ಬ ಸಾಮಾನ್ಯ ಮಾನವ. ಹೇಗೆಲ್ಲ ಸಂವೇದನೆಗಳು ಉಕ್ಕಬಹುದು ಎಂಬುದಕ್ಕೆ ಶ್ರೀರಾಮನೇ ಉತ್ತಮ ಉದಾಹರಣೆ.


ಸೂಚನೆ :17/4/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.