Sunday, April 3, 2022

ಯುಗಾದಿಯ ಅಭ್ಯಂಗದ ಆರೋಗ್ಯ ಗುಟ್ಟು (Yugadiya Abhyangada Arogya Guttu)


ಲೇಖಕರು: ಡಾ|| ಪುನೀತ್ ಕುಮಾರ್. ಪಿ.
ಮಿಂಚಂಚೆ (lekhana@ayvm.in)



ಯುಗಾದಿಯ ಅಭ್ಯಂಗಸ್ನಾನ - ಏನಿದರ ಮಹತ್ವ?

ಒಂದು ನಿರ್ದಿಷ್ಟವಾದ ಕಾಲಚಕ್ರದ ಆದಿಯನ್ನು ಯುಗಾದಿ ಎಂದು ಕರೆಯುವುದು ಪ್ರತೀತಿ. 'ಯುಗಸ್ಯ ಆದಿ: ಯುಗಾದಿ:' ಇಲ್ಲಿ ಕಾಲವಾಚಕವಾಗಿ, ಸಂವತ್ಸರದ ಆದಿಯಾಗಿ, ಚೈತ್ರಶುಕ್ಲ ಪ್ರಥಮೆಯಂದು ಯುಗಾದಿಯನ್ನು ಆಚರಣೆ ಮಾಡುತ್ತೇವೆ. ಇದು ವರ್ಷ, ಋತು, ಮಾಸ, ಪಕ್ಷ ಎಲ್ಲಕ್ಕೂ ಪ್ರಾರಂಭಮಂಗಲವಾದ ಕಾಲ. ಯುಗಾದಿಯ ದಿನದಂದೇ  ಪ್ರಜಾಪತಿ ಬ್ರಹ್ಮನು ಮೊಟ್ಟಮೊದಲ ಜಗತ್ತನ್ನು ಸೃಷ್ಟಿ ಮಾಡಿ, ಕಾಲಗಣನೆ ಪ್ರಾರಂಭ ಮಾಡಿದನು. ಯುಗಾದಿಯ ದಿನದಿಂದಲೇ ವಸಂತ ನವರಾತ್ರಿಯ ಪ್ರಾರಂಭ; ರಾಮಪೂಜೆ, ದುರ್ಗಾಪೂಜೆಯನ್ನು ಪ್ರಾರಂಭಿಸಬೇಕಾದ ಪುಣ್ಯ ಕಾಲ. 


ಯುಗಾದಿಹಬ್ಬದ ಆಚರಣೆಗಳ ಹೊರಮೈಯನ್ನು ಗಮನಿಸಿದಾಗ, ಸಂಪ್ರದಾಯಬದ್ಧವಾಗಿ ಅಭ್ಯಂಗಸ್ನಾನ, ಮನೆಯ ಅಲಂಕಾರ, ದೇವರ ಪೂಜೆ, ಪಂಚಾಂಗಶ್ರವಣ, ಬೇವುಬೆಲ್ಲ ಸೇವನೆ, ಬಂಧುಗಳೊಡನೆ ಭಕ್ಷ್ಯ ಭೋಜ್ಯಾದಿಗಳನ್ನು ಭುಂಜಿಸುವುದು ಮುಖ್ಯವಾದ ಅಂಗಗಳು. ಇವೆಲ್ಲವುಗಳ ಆಚರಣೆಯಲ್ಲಿ ಉಪಯೋಗಿಸಲಾಗುವ ದ್ರವ್ಯಗಳ ಗುಣಧರ್ಮ, ಹಬ್ಬದ ಆಹಾರ ಸೇವನೆಯಿಂದಾಗುವ ಆರೋಗ್ಯ ಲಾಭಗಳು ಮತ್ತು ಸಹಜವಾಗಿ ಪ್ರಕೃತಿಯಲ್ಲಿ ಆಗಿರಬಹುದಾದ ಬದಲಾವಣೆಗಳಿಗೆ ದೇಹ ಹೊಂದಿಕೊಳ್ಳಲು, ಆಚರಣೆಗಳ ಮಹತ್ವ ಮತ್ತು  ಹಿನ್ನೆಲೆ ತಿಳಿದು ಆಚರಿಸುವುದು ಉತ್ತಮ. ಇಂದು ಅಭ್ಯಂಜನದ ಹಿನ್ನಲೆಯನ್ನು ತಿಳಿಯೋಣ. 


ಅಭ್ಯಂಜನ 


ಎಣ್ಣೆಸ್ನಾನವು ಆರೋಗ್ಯ ತಂದುಕೊಡುವ ಒಂದು ಸಾಧನ. ಬೆಳಗಿನ ಸೂರ್ಯೋದಯದ ಸಮಯಕ್ಕೆ ಅಭ್ಯಂಜನ ಸ್ನಾನ ಮಾಡಬೇಕು. ಯುಗಾದಿಯು ವಸಂತ ಋತುವಿನ ಆದಿಯನ್ನು ಸೂಚಿಸುವ ಹಬ್ಬ. ಪ್ರಕೃತಿಯು ಹೊಸ ಹೂ-ತಳಿರುಗಳಿಂದ ತನ್ನ ಸಿಂಗಾರ ಮಾಡಿಕೊಂಡು, ಜಗತ್ತಿಗೆ ಹೊಸತನದ ಸಂದೇಶವನ್ನು ಸಾರುತ್ತಿರುವ ಸಮಯದ  ಹಬ್ಬ. ಅಭ್ಯಂಗವು ನಮ್ಮ ದೇಹ-ಮನಸ್ಸುಗಳಿಗೆ ಹೊಸತನದ ಪರಿಚಯ ಮಾಡುವ ವಿಶೇಷ ಆಚರಣೆ.   


ಅಭ್ಯಂಗ ಅಂದರೆ ಏನು? ಅದರ ಕ್ರಮ ಹೇಗೆ?

ತುಪ್ಪ, ತೈಲ, ವಸಾ (ಮಾಂಸ ಕೊಬ್ಬು), ಮಜ್ಜಾ(Bone Marrow) ಗಳನ್ನು ಪ್ರತ್ಯೇಕವಾಗಿ ಅಥವಾ ಮಿಶ್ರಣ ಮಾಡಿ, ಅದನ್ನು  ತುಸು ಬಿಸಿ ಮಾಡಿ 'ಶಿರಃ ಶ್ರವಣ ಪಾದೇಷು ತಂ ವಿಶೇಷೇಣ ಶೀಲಯೇತ್|' ಎಂದು ವಾಗ್ಭಟ ಋಷಿ ಹೇಳುವಂತೆ, ಮುಖ್ಯವಾಗಿ ಮರ್ಮಸ್ಥಾನಗಳಾದ ಶಿರಸ್ಸು, ಕಿವಿ, ಪಾದಗಳ ನಂತರದಲ್ಲಿ ಉಳಿದ  ಭಾಗಗಳಿಗೆ ಎಣ್ಣೆ ಲೇಪಿಸಿ, ಲೋಮಕೂಪದ(ರೋಮದ ಬುಡದಿಂದ ಇಳಿಜಾರಿನಂತೆ) ದಿಕ್ಕಿನ ಅನುಸಾರವಾಗಿ ಮಾಂಸಗಳನ್ನು ಹಿಂಡುವಂತೆ ಮಾಡಬೇಕು. ಕೀಲುಗಳಲ್ಲಿ ವೃತ್ತಾಕಾರದಲ್ಲಿಯೂ, ಕೈ-ಕಾಲು-ಪೃಷ್ಠದಲ್ಲಿ ಲಂಬಾಕಾರದಲ್ಲಿಯೂ ಎಣ್ಣೆಯನ್ನು ತಿಕ್ಕಬೇಕು. ನಂತರ ಬಿಸಿನೀರಿನ ಸ್ನಾನ ಮಾಡಬೇಕು.  ಅಭ್ಯಂಜನವನ್ನು  ನುರಿತ ಆಯುರ್ವೇದ ವೈದ್ಯರ ಮಾರ್ಗದರ್ಶನದಲ್ಲಿ ಮಾಡಿಕೊಳ್ಳುವುದು ಇನ್ನೂ ಉತ್ತಮ.    


ಅಭ್ಯಂಜನದ ಮಹತ್ವ 


ಅಭ್ಯಂಗಮಾಚರೇತ್ ನಿತ್ಯಂ ಸ ಜರಾಶ್ರಮವಾತಹಾ| 

ದೃಷ್ಟಿಪ್ರಸಾದಃ ಪುಷ್ಟ್ಯಾಯು: ಸ್ವಪ್ನಸುತ್ವಕ್ತ್ವ  ದಾರ್ಢ್ಯ ಕೃತ್ ।।


ಅಭ್ಯಂಜನದಿಂದ ಮುಪ್ಪು, ಶ್ರಮ, ವಾತ ದೋಷ(Neurological Problems) ನಿವಾರಣೆಯಾಗಿ, ಇಂದ್ರಿಯ ಪಟುತ್ವ, ದೈಹಿಕ ಪುಷ್ಟಿ, ಆಯುಷ್ಯ  ವೃದ್ಧಿ, ನಿದ್ರಾಸುಖ, ಸುಕ್ಕುರಹಿತ ಚರ್ಮ ಹಾಗೂ ದೇಹ ದೃಢವಾಗುವುದು. ಇದರಿಂದಾಗಿ ಧಾತುಸಾಮ್ಯ ಉಂಟಾಗಿ, ದೇಹಮನಸ್ಸುಗಳು ಆಧ್ಯಾತ್ಮಿಕ ಚಿಂತನೆಗಳಲ್ಲಿ ನಿರತವಾಗುವಲ್ಲಿ ಸಹಾಯವಾಗುತ್ತದೆ.  

ಆಯುರ್ವೇದರ್ಷಿ ವಾಗ್ಭಟರು ಹೇಳಿರುವಂತೆ, ಅಭ್ಯಂಜನ ಸ್ನಾನವನ್ನು ನಿತ್ಯ ಮಾಡಲೇಬೇಕು. ವಾತ ಪ್ರಕೃತಿಯವರು ಎರಡು ದಿನಗಳಿಗೆ ಒಮ್ಮೆಯೂ(೧ ದಿನ ಅಂತರ), ಪಿತ್ತ ಪ್ರಕೃತಿಯವರು ಮೂರು ದಿನಗಳಿಗೊಮ್ಮೆಯೂ(೨ ದಿನ ಅಂತರ) ಹಾಗು ಕಫ ಪ್ರಕೃತಿಯವರು ನಾಲ್ಕು ದಿನಗಳಿಗೊಮ್ಮೆ(೩ ದಿನ ಅಂತರ) ಅಭ್ಯಂಗ ಮಾಡಿಕೊಂಡರೆ ದೋಷವಿಲ್ಲ.    


ಅಭ್ಯಂಜನಕ್ಕೆ ಯಾವ ಎಣ್ಣೆ ಸೂಕ್ತ ?


ಸರ್ವದಾ ಎಳ್ಳೆಣ್ಣೆ ಸೂಕ್ತ.  ಚರಕ ಮಹರ್ಷಿ ಕೊಟ್ಟ ಸೂತ್ರದಂತೆ 

ಮಾರುತಘ್ನಂ ನ ಚ ಶ್ಲೇಷ್ಮವರ್ಧನಂ ಬಲವರ್ಧನಂ |

ತ್ವಚ್ಯಂ ಉಷ್ಣಮ್ ಸ್ಥಿರಕರಂ ತೈಲಂ ಯೋನಿವಿಶೋಧನಮ್ ।।


ಎಳ್ಳೆಣ್ಣೆಯು ವಾತ ಹಾಗು ಕಫದ ನಡುವೆ ಸಾಮ್ಯ ತಂದು, ದೇಹಬಲ ಹೆಚ್ಚಿಸಿ, ಚರ್ಮ ಹಾಗು ದೇಹದ ಉಷ್ಣತೆ ಕಾಪಾಡಿ, ಅಂಗಾಂಗ ಶುದ್ಧಿ ಮಾಡುವುದು. ಎಳ್ಳೆಣ್ಣೆಯು ದೇಹದ ಸೂಕ್ಶ್ಮಾತಿ ಕಣಗಳಲ್ಲಿ ಬೆರೆತು, ಅಲ್ಲಿರುವ ದೋಷಗಳ ನಿವಾರಣೆ ಮಾಡುವ ಶಕ್ತಿ ಹೊಂದಿದೆ. ಹರಳೆಣ್ಣೆ, ತುಪ್ಪ, ಸಾಸಿವೆ ಎಣ್ಣೆಗಳಿಂದಲೂ ಆರೋಗ್ಯ ಲಾಭಗಳಿವೆ. ಆಯುರ್ವೇದ ವೈದ್ಯರ ಸಲಹೆಯ ಮೇರೆಗೆ ತಮ್ಮ ತಮ್ಮ ಪ್ರಕೃತಿಗೆ ಹೊಂದಿಕೊಳ್ಳುವ ಔಷಧೀಯ ಎಣ್ಣೆಗಳನ್ನೂ ಬಳಸಬಹುದು.   


ಯುಗಾದಿ - ಅಭ್ಯಂಜನ

 ಯುಗಾದಿಯು ಸಮಶೀತೋಷ್ಣ ವಾತಾವರಣದ ವಸಂತ ಋತುವಿನ ಆದಿಕಾಲವಾಗಿದೆ. ಸಹಜವಾಗಿ ದೇಹದಲ್ಲಿಯೂ ಕೂಡ ಶೀತೋಷ್ಣಗಳ ಸಂಗಮವಾಗಿ ಸಮಸ್ಥಿತಿ ಅಥವಾ ಸಮಾಧಿ ಸ್ಥಿತಿಗೆ ಸ್ಫೂರ್ತಿ. ಯುಗಾದಿಯ ಅಭ್ಯಂಜನದಲ್ಲಿ ಎಣ್ಣೆ ಜೊತೆಗೆ ತಾರೆಕಾಯಿ, ನೆಲ್ಲಿಕಾಯಿ, ಅಳಲೆಕಾಯಿ, ಕೊನ್ನಾರಿಗೆಡ್ಡೆಯ ಒಣ ಪುಡಿಗಳನ್ನು ಸೇರಿಸಿ ಲೇಪನ ಮಾಡಿ ಸ್ನಾನ ಮಾಡಿದರೆ ವಸಂತ ಋತುವಿನ ಕಫದೋಷದ ಜಾಡ್ಯದಿಂದ ಪಾರಾಗಬಹುದು. ಸೂರ್ಯರಶ್ಮಿಯಿಂದ ದಣಿವಾದ ದೇಹದ ಶಕ್ತಿ ಹೆಚ್ಚಿಸಿ, ಆಯಾಸ ನೀಗಿಸಿಕೊಳ್ಳಬಹುದು. ಇದರಿಂದ ದೇಹ ಲಘುವಾಗಿ, ಪಾಚನಾದಿ ಕ್ರಿಯೆಗಳು ಚುರುಕಾಗುತ್ತವೆ. ಯುಗಾದಿಯ ಪರ್ವದಿನದಂದು ಸಂಕಲ್ಪಪೂರ್ವಕವಾಗಿ ಅಭ್ಯಂಜನವನ್ನು ಮಾಡಿದರೆ ವಿಶೇಷವಾದ ದೈಹಿಕ ಹಾಗು ಮಾನಸಿಕ ಆರೋಗ್ಯ ಲಾಭಗಳು ಕೂಡಿಬಂದು, ಮುಂದಿನ ದಿನಗಳಲ್ಲಿ ನಿಯಮಿತವಾಗಿ ಎಣ್ಣೆಸ್ನಾನ ಆಚರಿಸಿಕೊಳ್ಳಲು ಸ್ಫೂರ್ತಿಯೂ, ನಾಂದಿಯೂ ಆಗಲಿದೆ.     

 "ಇವುಗಳೆಲ್ಲವೂ ಆಕಸ್ಮಿಕ ಘಟನೆಗಳೆಂದು ಭಾವಿಸಬಾರದು. ಪ್ರಾಮಾಣಿಕವಾಗಿ ಧ್ಯಾನಾಭ್ಯಾಸ ಮಾಡುವ ಸಾಧಕರಿಗೆ ಸಂಗಮ-ಸಾಮ್ಯಗಳ ಪರ್ವಕಾಲಗಳ ಮಹಾಮೌಲ್ಯವು ಅನುಭವಕ್ಕೆ ಬರುವ ವಿಷಯಗಳಾಗಿವೆ. ನಾಡೀ ವಿಜ್ಞಾನದಲ್ಲಿ ಒಳ್ಳೆಯ ಪರಿಚಯವುಳ್ಳವರಿಗೆ ಈ ಮಹತ್ವವನ್ನು ಪ್ರಾಯೋಗಿಕವಾಗಿಯೂ ತೋರಿಸಬಹುದು" ಎಂಬುದು ಶ್ರೀರಂಗಮಹಾಗುರುಗಳ ವಾಣಿ.  


ಅಭ್ಯಂಗಕ್ಕೆ ವರ್ಜ್ಯರು ಯಾರು?

ಅಭ್ಯಂಗವನ್ನು ಎಲ್ಲರೂ ನಿತ್ಯ ಆಚರಿಸಬೇಕು ಎಂಬ ಶಾಸ್ತ್ರವನ್ನು ಮಂಡನೆ  ಮಾಡಿ ಆಗಿದೆ. ಇಷ್ಟಾದರೂ, ಕೆಲ ಆರೋಗ್ಯ ಸಂಬಂಧೀ ಕಾರಣಗಳಲ್ಲಿ Every Rule has an Exception (ಪ್ರತಿ ನಿಯಮಕ್ಕೂ ಒಂದು ಅಪವಾದವುಂಟು) ಎನ್ನುವ ಹಾಗೆ ವಿಶೇಷವಾಗಿ ಕಫದೋಷದಲ್ಲಿ, ಕಫವ್ಯಾಧಿಗ್ರಸ್ಥರಲ್ಲಿ, ಅಜೀರ್ಣದಿಂದ ಬಳಲುತ್ತಿರುವ ಕೆಲ ಸಂದರ್ಭಗಳಲ್ಲಿ ಅಭ್ಯಂಜನ ವರ್ಜ್ಯ. ತಿಳಿದೋ ತಿಳಿಯದೆಯೋ ಮಾಡಿದರೆ, ಅಗ್ನಿ ಇನ್ನಷ್ಟು ಮಂದವಾಗಿ ಮುಂದೆ ಹಲವಾರು ಕಾಯಿಲೆಗಳಿಗೆ ಅಂಕುರವಾಗಬಹುದು. 


ಭಾರತೀಯರ ಇತರ ಶಾಸ್ತ್ರಗಳಂತೆ ವೈಜ್ಞಾನಿಕವಾಗಿರುವ ಆಯುರ್ವೇದ ಶಾಸ್ತ್ರವು ಅಭ್ಯಂಗದ ಬಗ್ಗೆ ಒಂದು ವಿಸ್ತಾರವಾದ ನೋಟವನ್ನು ಕೊಟ್ಟಿದೆ. ಇಂತಹ ವೈಜ್ಞಾನಿಕ ಆಚರಣೆಯಾದಂತಹ ಯುಗಾದಿಯ ಅಭ್ಯಂಜನವನ್ನು ಯಾವುದೇ ಒಣವೈರಾಗ್ಯಕ್ಕೆ ಒಳಗಾಗಿ ತ್ಯಜಿಸದೆ, ಯೋಗ ಭೋಗಗಳೆರಡನ್ನೂ ಸಾಧಿಸಿಕೊಡುವುದರಿಂದ  ಯಥೋಚಿತವಾಗಿ ಆಚರಿಸಿಕೊಂಡು ಧನ್ಯರಾಗೋಣ.


ಸೂಚನೆ : 02/04/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.