'ರಾಮ ಮಂತ್ರವ ಜಪಿಸೋ' ಎಂಬ ದಾಸರ ಪದವು ಪ್ರಖ್ಯಾತವಾಗಿದೆ. ಮಂತ್ರ ಹಾಗೂ ನಾಮಜಪಗಳು ನಮ್ಮ ದೇಶದ ಸಾಧನಾ ಪದ್ಧತಿಗಳಲ್ಲಿ ಪ್ರಮುಖವಾದ ಸ್ಥಾನವನ್ನು ಪಡೆಯುತ್ತದೆ. ರಾಮ ತಾರಕ ಮಂತ್ರ ಹಾಗೂ ಅದರ ಜಪವಿಧಿಗಳು ಜಪಯೋಗದ ಸಾಧನಾ ಮಾರ್ಗವಾಗಿದೆ. ಕಲಿಸಂತರಣ ಉಪನಿಷತ್ತು ವಿವರಿಸುವಂತಹ ಹರೇ ರಾಮ ಹರೇ ಕೃಷ್ಣ ಮಂತ್ರವು ಇಂದು ವಿಶ್ವದಲ್ಲಿಯೇ ಪ್ರಖ್ಯಾತವಾಗಿದೆ. ರಾಮನಾಮ ಜಪದಿಂದ ಭಕ್ತಿಯ ಪರಾಕಾಷ್ಠೆಯನ್ನು ಹತ್ತಿದ ಮಹನೀಯರಲ್ಲಿ ವಾಗ್ಗೇ ಯಕಾರರಾದ ತ್ಯಾಗರಾಜರು ಚಿರಪರಿಚಿತರು. ಇನ್ನು ಈ ನಾಮದ ಮಹಿಮೆಯನ್ನು ಹಾಡುತ್ತಾ 'ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮ ಒಂದಿರಲು ಸಾಕು' ಎಂದು ದಾಸರು ಹಾಡುತ್ತಾರೆ. ಆದರೆ ಇದು ಹೇಗೆ ಸಾಧ್ಯವಾದೀತು? ರಾಮ ನಾಮಕ್ಕೂ ರಾಮನಿಗೂ ಏನು ಸಂಬಂಧ? ನಮ್ಮ ಚರಿತ್ರೆಯಲ್ಲಿ ದಶರಥನ ಪುತ್ರನಾದ ರಾಮ, ಪರಶುರಾಮ, ಕೃಷ್ಣನ ಅಣ್ಣ ಬಲರಾಮ, ಮುಂತಾದ ಅನೇಕ ರಾಮರು ಉಂಟು. ಹಾಗಾದರೆ ಈ 'ರಾಮ' ಎಂಬ ಹೆಸರನ್ನು ಕರೆದರೆ ಸಿಗುವುದು ಯಾರು ಎಂಬೀ ಪ್ರಶ್ನೆಗಳೆಲ್ಲವೂ ಹುಟ್ಟಿಕೊಳ್ಳುತ್ತದೆ.
ಪದ - ಪದಾರ್ಥಗಳ ಸಂಬಂಧ
ವಾಕ್ ಮತ್ತು ಅರ್ಥಗಳಿಗೆ ಅನನ್ಯವಾದ ಸಂಬಂಧ ಉಂಟು ಎಂಬುದು ಭಾರತೀಯವಾದ ಪರಂಪರೆಯಲ್ಲಿ ಬಂದಿರುವ ಮಾತು. ಯಾವುದೇ ಒಂದು ಪದ ಮತ್ತು ಆ ಪದದಿಂದ ಸೂಚಿಸಲ್ಪಡುವ ಪದಾರ್ಥದ ನಡುವೆ ಅನನ್ಯವಾದ ಸಂಬಂಧವನ್ನು ಅರಿಯುವುದು ಹೇಗೆ. ಪ್ರಸಿದ್ಧವಾದ ಮೆದುಳಿನ ವಿಜ್ಞಾನಿ ವಿಲಯನೂರ್ ರಾಮಚಂದ್ರನ್ರವರು ವಿವರಿಸುವಂತಹ ಕೆಲವು ಪ್ರಯೋಗಗಳನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಪ್ರಯೋಗದಲ್ಲಿ ಜನರ ಮುಂದೆ ಎರಡು ಪದಾರ್ಥಗಳನ್ನು ಇಟ್ಟರು - ಒಂದು ದುಂಡಗಿರುವಂಥ ಪದಾರ್ಥ, ಮತ್ತೊಂದು ಚೂಪಾದ ಸೂಜಿ. ಎರಡು ಕಪೋಲಕಲ್ಪಿತ ವಾದ ಹೆಸರುಗಳನ್ನು ಜನರಿಗೆ ಕೊಟ್ಟರು, 'ಬೊಬೋ' ಮತ್ತು 'ಕಿಕಿ'. ಯಾವ ಪದಾರ್ಥಕ್ಕೆ ಯಾವ ಹೆಸರು ಹೊಂದುತ್ತದೆ ? ಹೇಗೆ ನಾಮಕರಣ ಮಾಡುತ್ತೀರಿ ? ಎಂದು ಸಭೆಯನ್ನು ಕೇಳಿದರು. ಹೆಚ್ಚುವರಿ ಜನ ದುಂಡಗಿರುವ ವಸ್ತುಗೆ 'ಬೋಬೋ' ಎಂದು ಹೆಸರಿಟ್ಟರು, ಸೂಜಿಗೆ 'ಕಿಕಿ' ಎಂದಿಟ್ಟರು. ನಾನಾ ದೇಶ, ಭಾಷೆಗಳ ಮಾತನಾಡುವವರ ಸಮಕ್ಷದಲ್ಲಿ ಈ ಪ್ರಯೋಗವನ್ನು ನಡೆಸಿದಾಗಲೂ ಫಲಿತಾಂಶ ಒಂದೇ ಆಗಿತ್ತು. ದುಂಡಗಿರುವ ಪದಾರ್ಥಕ್ಕೆ ಬೋಬೋ ಎಂಬ ಹೆಸರು ಹೊಂದುತ್ತದೆ, ಕಿಕ್ಕಿ ಎಂಬ ಹೆಸರು ಚೂಪಾಗಿರುವ ಅಂತಹ ಪದಾರ್ಥಕ್ಕೆ ಹೊಂದುತ್ತದೆ ಎಂಬುದು ಸಿದ್ಧವಾಯಿತು.
ಪ್ರತಿಯೊಂದು ಪದವಾಗಲಿ, ಪದಾರ್ಥವಾಗಲಿ ನಮ್ಮ ಮೇಲೆ ಒಂದು ಸೂಕ್ಷ್ಮವಾದ ಪರಿಣಾಮ ಬೀರುತ್ತದೆ. ಪದ-ಪದಾರ್ಥಗಳೆರಡೂ ನಮ್ಮಲ್ಲಿ ಒಂದೇ ರೀತಿಯ ಭಾವತರಂಗಗಳನ್ನು ಎಬ್ಬಿಸಿದಾಗ ಎಬ್ಬಿಸಿದಾಗ, ಆ ಪದ-ಪದಾರ್ಥಗಳ ಜೋಡಿ ತುಂಬಾ ಹೊಂದುತ್ತೆ. ಪದಾರ್ಥಕ್ಕೆ ಹೊಂದುವಂತಹ ಪದಪುಂಜಗಳನ್ನು ಹುಡುಕುವುದು ಸಾಧ್ಯವೇ? ಪದಾರ್ಥದ ಅರಿವು ಅನುಭವ ನಮಗೆ ಚೆನ್ನಾಗಿ ಇದ್ದಾಗ ಅಲ್ಲಿಗೆ ಹೊಂದುವ ಪದಪುಂಜಗಳನ್ನು ಹುಡುಕಿ ಪದಾರ್ಥಕ್ಕೆ ಹೆಸರಿಸು ವಂತಹ ಕಾರ್ಯ ಸಾಧ್ಯ. ಇಂಥಹ ಅನೇಕ ಪದ-ಪದಾರ್ಥಗಳ ಜೋಡಿಗಳು ಸಂಸ್ಕೃತವನ್ನು ತಾಯಿಬೇರಾಗಿ ಇಟ್ಟುಕೊಂಡು ಬಂದಿರುವ ಭಾರತೀಯ ಭಾಷೆಗಳಲ್ಲಿ ಲಭ್ಯವಾಗಿದೆ.
ಮಂತ್ರಗಳೂ ಅಂತಹ ವಿಶೇಷವಾದಂತಹ ಪದಪುಂಜಗಳು. ಅದರ ಜೋಡಣೆ, ಅದರಲ್ಲಿ ಉಪಯೋಗಿಸುವಂತಹ ಸ್ವರ-ವ್ಯಂಜನ ಗಳು, ಅವುಗಳನ್ನು ಉಚ್ಚರಿಸುವ ಸ್ವರಸ್ಥಾಯಿ, ಮಾತ್ತ್ರಾಕಾಲಗಳು, ಬಲ, ಪ್ರಯತ್ನಗಳು ಎಲ್ಲವೂ ಕೂಡಿ ಉಚ್ಚರಿಸಿದವರಿಗೆ ಆ ಪದಾರ್ಥದ ಅನುಭವವನ್ನೇ ಮಾಡಿಸಿಬಿಡುತ್ತದೆ. ದೇವತಾ ಸಾನ್ನಿಧ್ಯವನ್ನು ತಂದುಕೊಡುವಂತಹ ಇಂತಹ ವಿಶಿಷ್ಟವಾದ ಪದಪುಂಜಗಳನ್ನು ತಮ್ಮ ಮೇಧೆಯಿಂದ ಕಂಡುಕೊಂಡು ಲೋಕಕ್ಕೆ ಕೊಟ್ಟವರು ಋಷಿಗಳು-ಕವಿಗಳು ಅನಿಸಿಕೊಳ್ಳುತ್ತಾರೆ. ವಾಲ್ಮೀಕಿ ಮಹರ್ಷಿಗಳು ಅಂತಹ ಕವಿವರೇಣ್ಯರು. ಅವರ ಕೃತಿಯೇ ಆದಿಕಾವ್ಯ. ಅಲ್ಲಿ ವರ್ಣಿತವಾದ ಪದಾರ್ಥವೇ ಸೀತಾ-ರಾಮರ ತತ್ತ್ವ.
'ರಾಮ'ನಾಮ ಯಾವ ಪದಾರ್ಥವನ್ನು ತಂದುಕೊಡುತ್ತದೆ
ಜ್ನ್ಯಾನಿಗಳ ಹೃದಯದಲ್ಲಿ ರಮಿಸುವುದರಿಂದ ಅವನು ರಾಮ. ರಾಮ ಎಂಬವನು ಕೇವಲ ಐತಿಹಾಸಿಕವಾದ ವ್ಯಕ್ತಿ ಮಾತ್ರವಲ್ಲ. ಶ್ರೀರಂಗ ಮಹಾಗುರುಗಳು ಹೇಳಿರುವಂತೆ ರಾಮನು ಸ್ಥೂಲದೃಷ್ಟಿಗೆ ಮನುಷ್ಯ ಸೂಕ್ಷ್ಮ ದೃಷ್ಟಿಗೆ ದೇವತೆ ಪರಾ ದೃಷ್ಟಿಗೆ ಪರಂಜ್ಯೋತಿ. ಅವನು ಒಂದು ವ್ಯಕ್ತಿತ್ವ, ಗುಣಗಳ ಸಮೂಹ, ಒಂದು ಶಕ್ತಿ. ಜ್ಞಾನಿಗಳು ಹೃದಯದಲ್ಲಿ ಕಂಡರಿದು ಆನಂದಿಸುವಂತಹ, ಸೀತಾ ಸಮೇತನಾಗಿ ಕೋದಂಡವನ್ನು ಧರಿಸಿರುವ ಒಂದು ರೂಪ, ಒಂದು ಯೋಗಾನುಭವ. ರಾಮ ಎಂಬ ನಾಮವನ್ನು ಉಚ್ಚರಿಸಿ ಜಪಿಸಿದವರಿಗೆ ರಾಮನ ಗುಣಗಳು ಸಂಕ್ರಾಂತ ವಾಗುತ್ತದೆ. ಸತ್ಯಪರತೆ, ಧರ್ಮದಲ್ಲಿ ನಿಷ್ಠೆ ಮತ್ತು ಆತ್ಮಗುಣಗಳು ಸಿದ್ಧಿಸುತ್ತವೆ. ನಮ್ಮ ಜೀವನವನ್ನು ಧಾರ್ಮಮಯವಾಗಿ ಮಾಡುತ್ತದೆ.
ಸೂಚನೆ: 10/4/2022 ರಂದು "ವಿಜಯ ವಾಣಿ ಕ್ಲಬ್ಈ ಹೌಸ್ ಪ್ರವಚನ" ಲೇಖನವಾಗಿ ಶ್ರೀರಾಮನವಮೀ ವಿಶೇಷ ಅಂಕಣದಲ್ಲಿ ಪ್ರಕಟವಾಗಿದೆ.