Sunday, April 10, 2022

ಶ್ರೀ ರಾಮನ ಗುಣಗಳು - 50 ಏಕಪತ್ನೀವ್ರತಸ್ಥ - ಶ್ರೀರಾಮ (Sriramana Gunagalu -50 Ekapatnivratastha -Sriramana)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್

(ಪ್ರತಿಕ್ರಿಯಿಸಿರಿ lekhana@ayvm.in)




ಶ್ರೀರಾಮನು ಮಹರ್ಷಿ ವಿಶ್ವಾಮಿತ್ರರ ಯಜ್ಞರಕ್ಷಣೆಗಾಗಿ ಅವರ ಆಶ್ರಮಕ್ಕೆ ಹೋಗುತ್ತಾನೆ. ಅಲ್ಲಿ ಮಿಥಿಲಾಧಿಪತಿಯಾದ ಜನಕಮಹಾರಾಜನ ಮಗಳು ಜಾನಕಿಯ ಸ್ವಯಂವರ ನಿಶ್ಚಯವಾಗಿರುತ್ತದೆ. ಇದಕ್ಕೆ ವಿಶ್ವಾಮಿತ್ರರು ಶ್ರೀರಾಮ ಲಕ್ಷ್ಮಣರನ್ನು ಕರೆದುಕೊಂಡು ಹೋಗುತ್ತಾರೆ. ರಾಮನು ಶಿವಧನುಸ್ಸೆಂಬ ಸವಾಲನ್ನು ಭೇದಿಸಿದಾಗ ಸೀತಾಮಾತೆಯು ರಾಮನನ್ನೇ ಪತಿಯಾಗಿ ವರಿಸುತ್ತಾಳೆ. ಅಲ್ಲ್ಲಿಂದಾಚೆ ಅವರಿಬ್ಬರೂ ಪರಸ್ಪರ ಪತಿಪತ್ನಿಭಾವವನ್ನು ತಳೆದರು. ಮತ್ತೆಂದೂ ಎರಡಾಗಿ - ಭಿನ್ನರಾಗಿ ಕಂಡಿದ್ದಿಲ್ಲ. ಸೀತೆಯೊಡನೆ ಶ್ರೀರಾಮನು; ಶ್ರೀರಾಮನೊಡನೆ ಸೀತಾಮಾತೆಯು ಸದಾ ಭಾವುಕರ ಮನದಲ್ಲಿ ಇಂದಿಗೂ ನೆಲೆಗೊಂಡಿದ್ದಾರೆ. ಇದಕ್ಕೆ ಕಾರಣ ಇಷ್ಟೇ ಶ್ರೀರಾಮನ 'ಏಕಪತ್ನಿವ್ರತತ್ವ'. 


ಮುಂದೆ ಶ್ರೀರಾಮನು ಲಂಕಾಧಿಪತಿಯಾದ ರಾವಣನನ್ನು ಸಂಹರಿಸಿ ಅಖಂಡ ಚಕ್ರಾಧಿಪತಿಯಾಗುತ್ತಾನೆ. ಹತ್ತುಸಾವಿರಕ್ಕೂ ಹೆಚ್ಚು ವರ್ಷಗಳ ಕಾಲ  ಅಯೋಧ್ಯೆಯನ್ನು ಕೇಂದ್ರವಾಗಿಸಿಕೊಂಡು ಶಾಸನ ಮಾಡುತ್ತಾನೆ. ಆದರೆ ಯಾವಾಗಲೂ ಇನ್ನೊಂದು ಸ್ತ್ರೀಯನ್ನು ತನ್ನ ಮನಸ್ಸಿನಿಂದಲೂ ಭಾವಿಸಿದವನಲ್ಲ. ಮುಂದೊಂದು ದಿನ ಸೀತಾಯ ಪರಿತ್ಯಾಗವಾಗುತ್ತದೆ. ಸೀತೆಯಾದರೋ ವಾಲ್ಮೀಕಿಗಳ ಆಶ್ರಮದಲ್ಲಿ ಎರಡು ಮಕ್ಕಳಿಗೆ ಜನ್ಮಕೊಟ್ಟು ಸಂತೋಷವಾಗಿರುತ್ತಾಳೆ. ವಾಲ್ಮೀಕಿಗಳು ಈ ಭಾಗವನ್ನು ಹೀಗೆ ವರ್ಣಿಸುತ್ತಾರೆ" ಶ್ರೀರಾಮನು ಅಶ್ವಮೇಧಯಾಗದ ಸಿದ್ಧತೆಯನ್ನು ಮಾಡಲು ಆಜ್ಞಾಪಿಸುತ್ತಾನೆ. ಆಗ ಯಜ್ಞದಲ್ಲಿ ನಾನು ದೀಕ್ಷಿತನಾಗಲು ಕಾಂಚನಮಯವಾದ ಸೀತೆಯ ಪ್ರತಿರೂಪವನ್ನು ನಿರ್ಮಾಣ ಮಾಡುವಂತೆ ಸೂಚಿಸುತ್ತಾನೆ" ಎಂದು. ಈ ಸಂದರ್ಭವನ್ನು ಕಾಳಿದಾಸನು ತನ್ನ ರಘುವಂಶ ಮಹಾಕಾವ್ಯದಲ್ಲಿ ವರ್ಣಿಸುತ್ತಾನೆ. "ದಶಮುಖರೂಪುವಾದ ಶ್ರೀರಾಮನು ಸೀತಾಪರಿತ್ಯಾಗದ ಅನಂತರ ಸೀತೆಯ ಸುವರ್ಣದ ಪ್ರತಿಕೃತಿಯನ್ನು ಮಾಡಿ ಅಶ್ವಮೇಧ ಯಜ್ಞವನ್ನು ಮಾಡಿದ ಎಂಬ ವಾರ್ತೆಯನ್ನು ಕೇಳಿ  ಪತಿವಿಯೋಗದುಃಖವನ್ನು ಸಹಿಸಿಕೊಂಡಳು" ಎಂಬುದಾಗಿ. ಶ್ರೀರಾಮನು ಏಕೆ ಹೀಗೆ ಮಾಡಿದ? ಒಬ್ಬ ರಾಜನಾದವನಿಗೆ ಅನೇಕಪತ್ನಿಯರನ್ನು ಪಡೆಯಲು ಭಾರತೀಯ ಸಂಪ್ರದಾಯದಲ್ಲಿ ಅವಕಾಶವಿದೆ. 'ರಾಜಾನೋ ಬಹುವಲ್ಲಭಾಃ' ಎಂಬ ಮಾತು ರಾಜರಿಗೆ ಬಹುಪತ್ನೀತ್ವವನ್ನು ಅಂಗೀಕರಿಸುತ್ತದೆ. ಈ ಕಾರಣದಿಂದ ಶ್ರೀರಾಮನಿಗೆ ಈ ಅವಕಾಶ ಇತ್ತು. ಅವನ ತಂದೆಯಾದ ದಶರಥನಿಗೆ ಪಟ್ಟದ ರಾಣಿಯರಾಗಿ ಮೂರುಮಂದಿಯಿದ್ದರೂ ಎಂಬುದನ್ನು ನಾವು ನೋಡುತ್ತೇವೆ.


ರಾಜನಿಗೆ ರಾಜ್ಯಭಾರದ ಜವಾಬ್ದಾರಿಯಿರುತ್ತದೆ. ಶತ್ರುಗಳ ಆಕ್ರಮಣದಿಂದ ರಾಜ್ಯವನ್ನು ರಕ್ಷಿಸಬೇಕಾಗುತ್ತದೆ. ಅದಕ್ಕಾಗಿ ಕೆಲವೊಮ್ಮೆ ಯುದ್ಧಭೂಮಿಯಲ್ಲೂ ಹೋರಾಡುವ ಸನ್ನಿವೇಶವಿರುತ್ತದೆ. ಅನೇಕ ಮಕ್ಕಳನ್ನು ಪಡೆದಲ್ಲಿ ರಾಜ್ಯರಕ್ಷಣೆಗೆ ಕೆಲವರಾದರೂ ಉಳಿಯಲಿ ಎಂಬ ಆಶಯದಿಂದ ಅಲ್ಲಿ ಬಹುಪತ್ನೀತ್ವವನ್ನು ಅಂಗೀಕರಿಸಲಾಗಿದೆಯೇ ಹೊರತು ಯಾವುದೋ ಶಾರೀರಕಾಮನೆಯ ಲಾಲಸೆಯನ್ನು ಈಡೇರಿಸಿಕೊಳ್ಳುಲು ಅಲ್ಲ. ಇದರಿಂದ ನಮಗೆ ತಿಳಿಯುವ ಅಂಶವಿಷ್ಟೇ ನಮ್ಮ ಭಾರತೀಯ ಸಂಪ್ರದಾಯವು ಧರ್ಮಸಂರಕ್ಷಣೆಯನ್ನು ಯಾವ ಹಿನ್ನೆಲೆಯಲ್ಲಿ ನೋಡುತ್ತಿದ್ದರು ಎಂಬುದನ್ನು. ರಾಷ್ಟ್ರರಕ್ಷಣೆಯು ಧರ್ಮರಕ್ಷಣೆಯ ಅತಿಮುಖ್ಯವಾದ ಕರ್ತವ್ಯವಾಗಿತ್ತು. ರಾಜನಾದವನಿಗೆ ರಾಷ್ಟ್ರ ಬೇರೆಯಲ್ಲ; ಅವನ ವ್ಯಕ್ತಿಗತವಾದ ಜೀವನ ಬೇರೆಯಲ್ಲ. ಇದನ್ನು ಶ್ರೀರಾಮನ ಜೀವನದ ಎಲ್ಲಾ ಮಜಲುಗಳನ್ನು ಕಾಣಲು ಸಾಧ್ಯ.


ಸೂಚನೆ :10/4/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.