ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಪ್ರಾಚೀನ-ಭಾರತೀಯ-ಪರಂಪರೆಯಲ್ಲಿ ಪುಸ್ತಕದಿಂದಲೇ ನೇರಾಗಿ ಅಧ್ಯಯನ ಮಾಡುವುದನ್ನೆಲ್ಲೂ ಪ್ರಶಂಸಿಸಿಲ್ಲ, ಪುರಸ್ಕರಿಸಿಲ್ಲ. ಹಾಗೆ ನೋಡಿದರೆ, ಪ್ರಾಚೀನಭಾರತವು ನಿರ್ಮಿಸಿದಷ್ಟು ಪುಸ್ತಕರಾಶಿಯನ್ನು ಪ್ರಪಂಚದಲ್ಲೆಲ್ಲೂ ಆ ಕಾಲಕ್ಕೆ ನಿರ್ಮಿಸಲಾಗಿ(ರಲಿ)ಲ್ಲ. ಆ ಕಾಲಕ್ಕೇನು? ಈಚಿನ ಕೆಲವು ಶತಮಾನಗಳವರೆವಿಗೂ ಆಗಿರಲಿಲ್ಲವೆಂದೇ ಹೇಳಬಹುದು. ( ಮುದ್ರಣಾಲಯಗಳು ಅಲ್ಲಿ ಹೇರಳವಾಗಿ ಆರಂಭವಾದ ಮೇಲಿನ ಮಾತು ಬೇರೆ). ಪ್ರಾಗ್-ಆಧುನಿಕ (pre-modern) ಯುಗದಲ್ಲಿ ವಿಶ್ವದ ಸಮಸ್ತ-ಭಾಷೆಗಳಲ್ಲೂ ಜನಿತವಾಗಿರುವ ಸಾಹಿತ್ಯರಾಶಿಯನ್ನೆಲ್ಲ ಒಟ್ಟುಗೂಡಿಸಿದರೂ ಸಂಸ್ಕೃತಮಾತ್ರದಲ್ಲಿರುವ ಅಪಾರ ಸಾಹಿತ್ಯಸಂಪತ್ತಿನ ಒಂದು ಸಣ್ಣಭಾಗವಷ್ಟೆ ಆದೀತು - ಎಂಬುದಾಗಿ (ವಸ್ತುತಃ ಭಾರತದ್ವೇಷಿಗಳೇ ಆದ ಷೆಲ್ಡನ್ ಪೊಲ್ಲಾಕ್ ಮೊದಲಾದ) ಈಚಿನ ವಿದೇಶೀಯ-ವಿದ್ವಾಂಸರು ಸಹ ಒಪ್ಪಿದ್ದಾರೆ.
ಪ್ರತಿಯೊಂದು ವಿದ್ಯೆಯಲ್ಲಿಯೂ ಅನೇಕಾನೇಕ-ಸೂಕ್ಷ್ಮವಿಷಯಗಳಿದ್ದು, ಅವೆಲ್ಲವನ್ನೂ ಬರವಣಿಗೆಗೆ ಇಳಿಸುವುದೆಂದರೆ ಗ್ರಂಥವು ಭಾರಿಯಾಗಿಬಿಡುವುದರಲ್ಲಿ ಸಂಶಯವಿಲ್ಲ. ಬದಲಾಗಿ, ಶಿಷ್ಯನು ತಪ್ಪಿದಾಗಲೆಲ್ಲ ತಿದ್ದುತ್ತಾ, ಎದ್ದ ಸಂಶಯಗಳನ್ನುಅಲ್ಲಲ್ಲೇ ನಿವಾರಿಸುವ ಗುರುವೊಬ್ಬ ಬಳಿಯಿದ್ದರೆ, ಕಲಿಕೆಯು ಬಹಳವೇ ಸುಲಭವಾಗುವುದೆಂಬುದನ್ನು ಯಾರಾದರೂ ಮನಗಾಣಬಹುದಾಗಿದೆ. ಎಂದೇ, ಇಂದದೆಷ್ಟೇ ಆಧುನಿಕಸೌಕರ್ಯಗಳಿದ್ದರೂ, ಒಳ್ಳೆಯ ಗುರುವೊಬ್ಬ ಎದುರಿಗಿದ್ದು ಹೇಳಿಕೊಡುವುದನ್ನೇ ಬಹುತೇಕ(ರು) ಬಯಸುವುದು.
ಜ್ಞಾನಸಂಪಾದನೆಯು ಗುರೂಪದೇಶದಿಂದಲೇ ಆಗತಕ್ಕದ್ದೆಂಬ ನಿಯಮವೇ ನಮ್ಮಲ್ಲಿದ್ದುದು. "ಪುಸ್ತಕಾಧೀತವಿದ್ಯ"ನೆಂಬುದು ನಿಂದಾರ್ಥಕಪದವೇ ಸಂಸ್ಕೃತದಲ್ಲಿ! (ಆ ಪದಕ್ಕೆ, "ಪುಸ್ತಕಮಾತ್ರದಿಂದಲೇ ಅಧ್ಯಯನ ಮಾಡಿರುವವನು"; ಅರ್ಥಾತ್, "ಗುರುಮುಖೇನ ವಿದ್ಯಾಸಂಪಾದನೆಯನ್ನು ಮಾಡಿಲ್ಲದವನು (ಎಚ್ಚರ!)" - ಎಂದು ಅರ್ಥ).
ಅಭಿನವಗುಪ್ತನು ತನ್ನ ತಂತ್ರಾಲೋಕವೆಂಬ ಬೃಹದ್‍ಗ್ರಂಥದಲ್ಲಿ, "ಕೇವಲ ಪುಸ್ತಕದಿಂದಲೇ ಮಂತ್ರವನ್ನು ಪಡೆದುಕೊಂಡವರ" ಬಗ್ಗೆ ಎಚ್ಚರಿಸುತ್ತಾನೆ. ಅದು ತಾಮಸಪ್ರವೃತ್ತಿಯನ್ನು ಉಂಟುಮಾಡುವುದೆಂದೂ ಜಾಗರಿಸುತ್ತಾನೆ.
ವಿದ್ಯೆಯನ್ನು "ಅಂತರ್ಧನ"ವೆಂದು ಹೇಳುವುದೂ ಉಂಟು (ವಿದ್ಯಾಖ್ಯಮ್ ಅಂತರ್ಧನಮ್). ಮಕ್ಕಳಿಗೆ ಧನವನ್ನು ಕೊಡುವಾಗ, ಅದನ್ನು ಬಳಸುವ ಜವಾಬ್ದಾರಿಯೊಂದಿಗೇ ಕೊಡತಕ್ಕದ್ದು. ಇಲ್ಲವೋ ಹಣವು ಪೋಲಾಗಬಹುದು, ಅಪವ್ಯಯವಾಗಬಹುದು: ದುಶ್ಚಟಗಳಿಗಾಗಿ ವ್ಯಯಿತವಾಗಬಹುದು. ಇದೇ ಲೆಕ್ಕವು ವಿದ್ಯೆಗೂ ಅನ್ವಯಿಸದೇ? ಎಂದೇ ವಿದ್ಯೆಯನ್ನು ಕೊಡುವುದರ ಜೊತೆಗೇ, ಶಿಷ್ಯನ ಯೋಗ್ಯತೆಯನ್ನೂ ಆತನ ಪ್ರವೃತ್ತಿಯನ್ನೂ ಗಮನಿಸಿಕೊಂಡೇ ವಿದ್ಯೆಯನ್ನು ಕೊಡುವ ಸಂಪ್ರದಾಯವು ನಮ್ಮದು. ಪುಸ್ತಕಲಬ್ಧಜ್ಞಾನದ ವಿಷಯದಲ್ಲಿ ಇದನ್ನೆಲ್ಲಾ ಹೇಳಲಾಗದು. ವಿದ್ಯೆಯನ್ನು ಗುರುವು ಶಿಷ್ಯನಲ್ಲಿ ಯಾವ ಜವಾಬ್ದಾರಿಯೊಡನೆ ಹರಿಸುವನೋ ಅದೇ ಜವಾಬ್ದಾರಿಯೊಡನೆ ಪುಸ್ತಕವು ವಿದ್ಯೆಯನ್ನು ಆತನಲ್ಲಿ ಹರಿಸಲಾದೀತೇ?
ವಿದ್ಯೆಯ ಕಲಿಕೆ
ವಿದ್ಯೆಯನ್ನು ಕಲಿಯಬೇಕಾದದ್ದಾದರೂ ಒಬ್ಬ ಶ್ರೇಷ್ಠವಾದ ಗುರುವಿನಿಂದಲೇ. ಸಾಧಾರಣನಾದ ಗುರುವಿನಿಂದ ಕಲಿತ ವಿದ್ಯೆಯು ತಾನೂ ಸಾಧಾರಣವಾಗಿಯೇ ಇರುವ/ಉಳಿಯುವ ಸಂಭವವಿರುತ್ತದೆ.
ಹಿಂದೆ ತಂದೆತಾಯಿಯರನ್ನು "ತೀರ್ಥರೂಪ"ರೆಂದೇ ನಿರ್ದೇಶಿಸುತ್ತಿದ್ದರಲ್ಲವೇ? ಗುರುವಿಗೆ ಸಹ 'ತೀರ್ಥ' ಎಂಬ ಪ್ರಯೋಗವಿದೆ! ಒಬ್ಬ ಶ್ರೇಷ್ಠಗುರುವಿನಿಂದಲೇ ತಾನು ಅಭಿನಯವಿದ್ಯೆಯನ್ನು ಕಲಿತದ್ದೆಂದು ಸೂಚಿಸಲು, "ಮಯಾ ಸುತೀರ್ಥಾದ್ ಅಭಿನಯವಿದ್ಯಾ ಶಿಕ್ಷಿತಾ" ಎಂದು ಹೇಳುತ್ತಾನೆ, ಮಾಳವಿಕಾಗ್ನಿಮಿತ್ರನಾಟಕದ ಗಣದಾಸ. 'ತೀರ್ಥ' ಎಂಬುದಕ್ಕೇ ಬಹು ಪ್ರಶಸ್ತವಾದ ಅರ್ಥವಿದೆ. ಅಂದಮೇಲೆ, 'ಸು-ತೀರ್ಥ'ವೆನಿಸುವವನಿಂದ - ಎಂದರೆ ಆದರಣೀಯನಾದ ಆಚಾರ್ಯನಿಂದ - ತಾನು ವಿದ್ಯೆಯ ಶಿಕ್ಷಣವನ್ನು ಪಡೆದಿದ್ದೇನೆ ಎಂದು ಹೇಳುವ ಗಣದಾಸನ ಮಾತು ಗಣನೀಯವೇ ಸರಿ.
ಶಿಕ್ಷಿತ-ಅಶಿಕ್ಷಿತ – ಎಂಬ ಪದಗಳನ್ನು ನಾವೆಲ್ಲಾ ಬಳಸುತ್ತಿರುತ್ತೇವೆ. ಯಾರು ಶಿಕ್ಷಿತ? ವಾಸ್ತವವಾಗಿ "ಶಿಕ್ಷೆಯನ್ನು ಪಡೆದವನೇ ಶಿಕ್ಷಿತ"ನಲ್ಲವೇ? 'ಶಿಕ್ಷೆ'ಯೆಂಬುದಕ್ಕೆ ಇಂದಿನ ಬಹುಮಂದಿ ತಿಳಿದಿರುವ ಅರ್ಥವೇನು?: "ತಪ್ಪುಮಾಡಿದವನಿಗೆ ಮಾಡಲಾಗುವ ಸರಿಯಾದ ಶಾಸ್ತಿ, ಛೀಮಾರಿಯೊಂದಿಗೆ ಆತನಿಗೆ ಕೊಡಲಾಗುವ ಏಟು ಮೊದಲಾದದ್ದು" - ಎಂಬುದಾಗಿ. ಆದರೆ ಶ್ರೀರಂಗ ಮಹಾಗುರುಗಳು "ಶಿಕ್ಷೆ" ಎಂಬ ಪದದ ವ್ಯುತ್ಪತ್ತಿಯನ್ನು ಕುರಿತು, ಅದು "ಶಿಕ್ಷ ವಿದ್ಯೋಪಾದಾನೇ" ಎಂಬ ಧಾತುವಿನಿಂದಲೇ ಬಂದಿರುವುದೆಂಬುದನ್ನು ನಮ್ಮ ಗಮನಕ್ಕೆ ತಂದುಕೊಟ್ಟಿದ್ದಾರೆ. ಅಲ್ಲಿಗೆ, ದುಷ್ಟರಿಗೋ ಅಪರಾಧಿಗಳಿಗೋ ಕೊಡುವ ಶಿಕ್ಷೆಯೂ ಅಂತತೋ ಗತ್ವಾ - ಎಂದರೆ ಕೊನೆಯ ಫಲವಾಗಿ - ಒಂದು ಶಿಕ್ಷಣವನ್ನೇ ಉಂಟುಮಾಡುವಂತಿರಬೇಕು – ಎಂಬುದೇ ಆ ಪದದ ಮೂಲಾಶಯ – ಎಂಬುದನ್ನೂ ಬಿಡಿಸಿ ಹೇಳಿದ್ದರು.
ನಿಷ್ಣಾತತೆಯನ್ನು ಸಂಪಾದಿಸುವುದು
ಇದೇ ಸಂದರ್ಭದಲ್ಲಿ ಸ್ಮರಿಸಬೇಕಾದ ಮತ್ತೊಂದು ವಿಷಯವೆಂದರೆ, ಗುರುವು ಸಹ ವಿಷಯವನ್ನು ಎಷ್ಟೇ ಚೆನ್ನಾಗಿ ತಿಳಿದುಕೊಂಡಿದ್ದಾನೆಂದರೂ, ಮತ್ತೊಬ್ಬರಿಗೆ ಹೇಳಿಕೊಟ್ಟಾಗಲೇ ಆತನು ನಿಷ್ಣಾತನಾಗುವುದು. ಸುಭಾಷಿತಕಾರನು ಹೇಳುವಂತೆ, ವಿದ್ಯೆಯೆಂಬುದು "ವ್ಯಯೇ ಕೃತೇ ವರ್ಧತ ಏವ ನಿತ್ಯಂ": ವ್ಯಯ ಮಾಡಿದಷ್ಟೂ - ಎಂದರೆ ಹತ್ತಾರುಮಂದಿ ಶಿಷ್ಯರಿಗೆ ಹಂಚಿದಷ್ಟೂ - ವಿದ್ಯೆಯು ಬೆಳೆಯುತ್ತಲಿರುವುದು. "ನಾನು ಚೆನ್ನಾಗಿಯೇ ತಿಳಿದುಕೊಂಡಿದ್ದೇನೆ" ಎಂದು ಭಾವಿಸಿಕೊಂಡು, ವಿದ್ಯಾಪ್ರದಾನವನ್ನು ಮಾಡದೆ ಸುಮ್ಮನೆ ಕುಳಿತಲ್ಲಿ, ವಿದ್ಯೆಯು ಜಿತವಾಗದು; ಅಷ್ಟೇ ಅಲ್ಲ; ಕೊನೆಗೆ, ಕಲಿತಿದ್ದ ವಿದ್ಯೆಯೂ ಮರೆಯಾಗುತ್ತ ಹೋಗುವುದು. ಜಿಪುಣತನವೆಂಬುದು ವಿದ್ಯೆಗೆ ಹೀಗೆ ಮಾರಕವೇ ಆಗುವುದು!
ಇನ್ನೊಬ್ಬರಿಗೆ ಹೇಳಿಕೊಡಲು ಹೊರಟಾಗಲೇ ನಮಗೇ ಗೊತ್ತಿಲ್ಲದಿರುವುದರ ಅರಿವಾಗುವುದೂ. ಎಷ್ಟೋ ಭಾಗ ಚೆನ್ನಾಗಿಯೇ ಗೊತ್ತಿದ್ದರೂ, ಅಲ್ಲಲ್ಲಿ ಅಸ್ಪಷ್ಟವಾದ (ಅಥವಾ ಕಿಂಚಿತ್-ಸಂಶಯಗ್ರಸ್ತವಾದ) ಅಂಶಗಳು ಉಳಿದಿರುವುದುಂಟು. ಜಾಣವಿದ್ಯಾರ್ಥಿಗಳು ಪ್ರಶ್ನೆ-ಉಪಪ್ರಶ್ನೆಗಳನ್ನು ಮಾಡಿದಾಗಲೇ ಅಲ್ಲವೇ, ತಾನು ಈ ವಿಷಯದ ಬಗ್ಗೆ ಏನೇನು ಎಷ್ಟೆಷ್ಟು ಎಲ್ಲೆಲ್ಲಿ ಅರಿತಿಲ್ಲವೆಂಬುದರ ಬಗ್ಗೆ ಅರಿಯಲಾಗುವುದು?: ನಮ್ಮ ಅಜ್ಞಾನದ ಬಗ್ಗೆ ನಮಗೇ ಜ್ಞಾನೋದಯವಾಗುವುದು! ಇದು ಅಧ್ಯಾಪಕರೆಲ್ಲರ ಅನುಭವವೇ ಸರಿ.
ಜಾಣರ ಪ್ರಶ್ನೆಗಳಿಗೆ ತೃಪ್ತಿಕರವಾದ ಉತ್ತರಕೊಡುವುದರಲ್ಲಿ ಮಾತ್ರವೇ ಗುರುವಿನ ಜಾಣ್ಮೆಯೆಂದಲ್ಲ; ಉದಾಹರಣ-ಪ್ರತ್ಯುದಾಹರಣಗಳನ್ನಿತ್ತು ಜಾಣರಲ್ಲದವರಿಗೂ ಮನದಟ್ಟು ಮಾಡಿಸುವುದರಲ್ಲೂ ಗುರುವಿನ ಜಾಣ್ಮೆಯೆಂಬುದು ಗೋಚರವಾಗುವುದು.
ಎಂದೇ ನಮ್ಮ ಗೀತೆ-ಉಪನಿಷತ್ತುಗಳೆಲ್ಲ ಪ್ರಧಾನವಾಗಿ ಗುರು-ಶಿಷ್ಯ-ಸಂವಾದದ ರೂಪದಲ್ಲಿಯೇ ಇರುವುದು. ಪರಿಪ್ರಶ್ನವು ಮುಖ್ಯ. ಪರಿಪ್ರಶ್ನವೆಂದರೆ ಒಂದು ವಿಷಯವನ್ನು ಕುರಿತಾಗಿ ನಾನಾಮುಖಗಳಿಂದೇಳುವ ಪ್ರಶ್ನೆಗಳನ್ನು ಕೇಳುವುದು. ಹಾಗೆ ಕೇಳುವುದನ್ನೂ ಅರಿವಿನ ಮಾರ್ಗವೊಂದೆಂಬುದಾಗಿ ಗೀತೆಯಲ್ಲಿ ಶ್ರೀಕೃಷ್ಣನು ಸೂಚಿಸುತ್ತಾನೆ. "ಧರ್ಮಸಂಮೂಢಚೇತ"ನಾದ ಅರ್ಜುನನು ಕೃಷ್ಣನಿಗೆ "ನಿನ್ನ ವಾಕ್ಯ ವ್ಯಾಮಿಶ್ರವಾಗಿರುವಂತಿದೆ: ನನ್ನ ಬುದ್ಧಿಗೆ ಮಂಕು ಕವಿಯಿಸುವಂತಿದೆ" ಎಂದೆಲ್ಲ ಆಕ್ಷೇಪಿಸುವಂತೆ ಹೇಳಿದಾಗಲೂ ಬೇಸರಿಸಿಕೊಳ್ಳದೆ, ತಾಳ್ಮೆಗೆಡದೆ, ಕೊನೆಗೆ ಅರ್ಜುನನ ಬಾಯಲ್ಲೇ "ನನ್ನ ಸಂದೇಹಗಳೆಲ್ಲ ಕಳೆದವು" ಎಂಬ ಮಾತು ಬಂದಮೇಲೇ ತೃಪ್ತಿಪಟ್ಟುಕೊಳ್ಳುತ್ತಾನೆ, ನಿಷ್ಣಾತನಾದ ಕೃಷ್ಣ.
ಸೂಚನೆ : 23/04/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.