Sunday, April 10, 2022

ಕಾಳಿದಾಸನ ಜೀವನದರ್ಶನ – 5 ಕಾಳಿದಾಸನು ಕಾಣಿಸುವ ವಿದ್ಯಾದರ್ಶನ (Kalidasana Jivanadarshana - 5 Kalidasanu Kanisuva Vidyadarshana)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)ಕಾಳಿದಾಸನು ರಾಷ್ಟ್ರಕವಿ ಮತ್ತು ಸಾಂಖ್ಯಯೋಗಿಯೆಂಬುದರ ಹಿನ್ನೆಲೆಯಲ್ಲಿ, ಭಾರತೀಯ ಪರಂಪರೆಯು ಜೀವನದ ದರ್ಶನವನ್ನು ಹೇಗೆ ಮಾಡಿಸಿದೆ, ಮತ್ತು ಕಾಳಿದಾಸನ ಸಾಹಿತ್ಯವು ಅದನ್ನು ಹೇಗೆ ಮೂಡಿಸಿದೆ – ಎಂಬ ವಿಷಯಗಳನ್ನು ಈ ಮುಂದಕ್ಕೆ ನೋಡಬೇಕಾಗಿದೆ.

ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ಹೇಗೆ ನಡೆಸುತ್ತಾನೆನ್ನುವುದು ಆತನಿಗೆ ಮೊದಲಿನಿಂದಲೂ ಏರ್ಪಟ್ಟ ಸಂಸ್ಕಾರಗಳನ್ನು ಅವಲಂಬಿಸಿರುತ್ತದೆಯಷ್ಟೆ. ಸುತ್ತಲಿನ ಸಮಾಜವೆಂಬ ಪರಿಸರವು ಕೆಲವು ವಿಧವಾದ ಸಂಸ್ಕಾರಗಳನ್ನು ಕೊಡುವುದು; ಇದಲ್ಲದೆ ಕುಟುಂಬ, ಬಂಧುವೃಂದ, ಮಿತ್ರಸಮೂಹ – ಇವುಗಳೂ ಕೆಲವು ಸಂಸ್ಕಾರಗಳನ್ನು ಸೇರಿಸುವುವು. ಇನ್ನು ವೈಯಕ್ತಿಕವಾಗಿ ವಿದ್ಯಾಭ್ಯಾಸವೆಂಬುದೇ ಒಂದು ವಿಶಿಷ್ಟವಾದ ಸಂಸ್ಕಾರವನ್ನು ಉಂಟುಮಾಡುವುದು. ಮತ್ತೂ ಆಂತರಂಗಿಕವಾಗಿ "ನಿಷೇಕಾದಿ-ಶ್ಮಶಾನಾಂತ"ವಾಗಿ - ಎಂದರೆ ಗರ್ಭಾಧಾನಸಮಯದಿಂದಾರಂಭಿಸಿ ಉತ್ತರಕ್ರಿಯೆಗಳ ಪರ್ಯಂತ - ನಡೆಯುವ ನಾನಾಸಂಸ್ಕಾರಗಳೂ ತಮ್ಮ ತಮ್ಮ ಪಾತ್ರವನ್ನು ಬೀರಿಯೇ ತೀರುವುವು.

ಕಾಳಿದಾಸನು ನಿರೂಪಿಸಿರುವ ವಿದ್ಯಾಭ್ಯಾಸವು ಯಾವ ತೆರನಾದದ್ದು? – ಎಂಬುದನ್ನು ಈ ಮುಂದೆ ಪರಿಚಯಿಸಿಕೊಳ್ಳೋಣ. ಕಾಳಿದಾಸನ ರಘುವಂಶದ ಆದಿಯಲ್ಲಿ ಬರುವ ಒಂದು ಮುಖ್ಯವೂ ಪ್ರಸಿದ್ಧವೂ ಆದ ಶ್ಲೋಕವಿದೆ:

"ಶೈಶವೇಽಭ್ಯಸ್ತವಿದ್ಯಾನಾಂ ಯೌವನೇ ವಿಷಯೈಷಿಣಾಮ್| ವಾರ್ಧಕೇ ಮುನಿವೃತ್ತೀನಾಂ ಯೋಗೇನಾಂತೇ ತನುತ್ಯಜಾಮ್||" (ರಘುವಂಶ ೧.೮). ಇದರ ಅಭಿಪ್ರಾಯವು ಹೀಗಿದೆ: [ರಘುವಂಶದ ಅರಸರು] ಬಾಲ್ಯದಲ್ಲಿ ವಿದ್ಯೆಯನ್ನು ಅಭ್ಯಸಿಸುತ್ತಿದ್ದರು; ಯೌವನದಲ್ಲಿ ವಿಷಯಸುಖಗಳತ್ತ ಮನಸ್ಸು ಹರಿಸುತ್ತಿದ್ದರು; ಮುಪ್ಪು ಆವರಿಸಿದಾಗ ಮುನಿಗಳಂತೆ ಜೀವಿಸುತ್ತಿದ್ದರು. ಕೊನೆಯಲ್ಲಿ ಯೋಗಮಾರ್ಗದಿಂದ ದೇಹತ್ಯಾಗವನ್ನು ಮಾಡುತ್ತಿದ್ದರು.

ಈ ಶ್ಲೋಕವನ್ನು ಕುರಿತು ಶ್ರೀರಂಗಮಹಾಗುರುಗಳು ಹಲವು ಬಾರಿ ಉಲ್ಲೇಖಿಸಿ ಅದನ್ನು ಕೊಂಡಾಡಿದ್ದಾರೆ: "ಜ್ಞಾನಿಗಳು ಹಾಕಿಕೊಟ್ಟ ಜೀವನದ ಯೋಜನೆಯ ಸಂವಿಧಾನವನ್ನು ಮಹಾಕವಿಯಾದ ಕಾಳಿದಾಸನ ಈ ಮಾತು ಬಹುಸ್ಫುಟವಾಗಿ, ಸಾರವತ್ತಾಗಿ ಪ್ರತಿಬಿಂಬಿಸುತ್ತದೆ." ಎಂಬುದು ಅವರ ಮಾತು.  


ಶೈಶವದಲ್ಲಿಯೇ ವಿದ್ಯೆ

ಆಧುನಿಕಮನೋವಿಜ್ಞಾನಿಗಳು ಹೇಳುವ ಒಂದು ವಿಷಯವನ್ನು ನಮ್ಮ ಪೂರ್ವಿಕರು ಬಹು ಹಿಂದೆಯೇ ಬಹು ಚೆನ್ನಾಗಿಯೇ ಮನಗಂಡಿದ್ದರು. ಅದೆಂದರೆ, ಬಾಲ್ಯದಲ್ಲಿ ನಮಗೊದಗುವ ಸಂಸ್ಕಾರಗಳು ಜೀವನದುದ್ದಕ್ಕೂ ನಮ್ಮ ಮೇಲೆ ಪ್ರಭಾವ ಬೀರುತ್ತಲೇ ಇರುತ್ತವೆ - ಎಂಬುದು.

"ಚಿಕ್ಕಂದಿನ ವಿದ್ಯೆ ಪೊರೆಗು ಚೂಡಾರತ್ನಾ" – ಎನ್ನುವ ಪ್ರಸಿದ್ಧ ಕನ್ನಡ ಕವಿಯ ಮಾತು ರತ್ನಸದೃಶವೇ ಸರಿ. ಬಾಲ್ಯದಲ್ಲೇ ಸಂಪಾದಿಸಿದ ವಿದ್ಯೆಯೇ ನಮ್ಮನ್ನು ರಕ್ಷಿಸುವುದು.

ಇದುವೇ ಏತಕ್ಕೆ ಮೊದಲೆಂದರೆ, ಮುಂದೆ ಇಡೀ ಜೀವನಕ್ಕೆ ಬೇಕಾದ ಮಾರ್ಗದರ್ಶಕವಾದ ಅಂಶಗಳು ಮೊದಲೇ ಕಿವಿಗೊಮ್ಮೆ ಬಿದ್ದಿರಬೇಕು – ಕಿರಿತನದಲ್ಲೇ ಪೂರ್ಣವಾಗಿ ಅರ್ಥವಾಗದಿದ್ದರೂ. ಜೀವನಕ್ಕೆ ಬೇಕಾದ ಅಡಿಪಾಯವನ್ನು ಇಲ್ಲಿಯೇ ಹಾಕಿಕೊಟ್ಟು, ಇಹ-ಪರಗಳಲ್ಲಿ ನೆಮ್ಮದಿಯಿಂದಿರಲು, ಇಲ್ಲಿ ಮಾಡಬೇಕಾದುದರ ಬಗೆಗಿನ ಅರಿವಿಗಾಗಿ ಎಳೆಯ ವಯಸ್ಸಿನಿಂದಲೇ ಸನ್ನಾಹವು ನಡೆಯುತ್ತಿರಬೇಕು.

ಸುಖಗಳನ್ನು ಅನುಭವಿಸುವಾಗ, ಹಾಗೂ ಸುಖಸಾಧನಗಳನ್ನು ಸಂಪಾದಿಸುವಾಗ, ಯಾವುದು ಧರ್ಮಸಂಮತವಾದುದು, ಯಾವುದಲ್ಲ? - ಎಂಬ ವಿಭಾಗವನ್ನು ಅರಿಯುವುದು ಆವಶ್ಯಕವಾದದ್ದು. ಅಧರ್ಮ್ಯವಾದ (ಎಂದರೆ ಧರ್ಮಕ್ಕೆ ಸಲ್ಲದ) ಸುಖವು ಮನುಷ್ಯನನ್ನು ಮುಂದೆ ಕಷ್ಟಕ್ಕೇ ತಳ್ಳುವುದು. ಧರ್ಮ್ಯವಾದ ಸುಖವು ಇದಕ್ಕೆ ವಿರುದ್ಧವಾಗಿದ್ದು, ಆಗಾಮಿಕಾಲದಲ್ಲಿ ಸುಖಕಾರಿಯಾಗಿದ್ದು, ಆತ್ಮೋನ್ನತಿಗೂ ಕಾರಣವಾಗುವುದು.


ಎಷ್ಟು ವಿದ್ಯೆಗಳು, ಯಾವ ವಿದ್ಯೆಗಳು?

ಆನ್ವೀಕ್ಷಿಕೀ, ತ್ರಯೀ, ವಾರ್ತಾ, ದಂಡನೀತಿ - ಎಂಬಿವು ನಾಲ್ಕು ವಿದ್ಯೆಗಳು; ಈ ನಾಲ್ಕೂ ಲೋಕವು ಚೆನ್ನಾಗಿರಲು ಕಾರಣಭೂತವಾದವು - ಎಂಬುದಾಗಿ ಕಾಮಂದಕನು ಹೇಳುತ್ತಾನೆ "ಏತಾಃ ವಿದ್ಯಾಃ ಚತಸ್ರಸ್ತು ಲೋಕ-ಸಂಸ್ಥಿತಿ-ಹೇತವಃ".

ಸಾಂಖ್ಯ-ಯೋಗ-ಲೋಕಾಯತಗಳು ಸೇರಿ "ಆನ್ವೀಕ್ಷಿಕೀ" ಎಂಬ ವಿದ್ಯೆ. "ತ್ರಯೀ" ಎಂದರೆ ವೇದಗಳು. ಕೃಷಿ, ಪಶುಪಾಲನ ಹಾಗೂ ವಾಣಿಜ್ಯಗಳು "ವಾರ್ತಾ". ಧರ್ಮ-ಅಧರ್ಮಗಳನ್ನು ಅರಿಯಲು ವೇದವಿದ್ಯೆಯು ಆಕರ. ಅರ್ಥ-ಅನರ್ಥಗಳನ್ನು ಅರಿಯಲು ವಾರ್ತಾವಿದ್ಯೆಯು ಆಕರ. ಯುಕ್ತವಾದ ನೀತಿಯನ್ನೂ ಅನೀತಿಯನ್ನೂ ಅರಿಯಲು ದಂಡವಿದ್ಯೆಯು ಆಕರ. ಆನ್ವೀಕ್ಷಿಕಿಯೆಂಬ ವಿದ್ಯೆಯು ಉಳಿದ ಮೂರು ವಿದ್ಯೆಗಳ ಬಲಾಬಲಗಳನ್ನು ತಾರ್ಕಿಕಬುದ್ಧಿಯಿಂದ ಅಳೆಯುವಂತಹುದು. ಈ ವಿಷಯಗಳನ್ನು ಕೌಟಲ್ಯನ ಅರ್ಥಶಾಸ್ತ್ರದಲ್ಲಿ ಹೇಳಿದೆ. ನಾಲ್ಕು ವಿದ್ಯೆಗಳ ಒಂದು ಅತಿಸ್ಥೂಲವಾದ ಪರಿಚಯವನ್ನಿಲ್ಲಿತ್ತಿದೆ. ಇವುಗಳ ಬಗ್ಗೆ ಹೇಳಬೇಕಾದುದು ಬಹಳಷ್ಟಿದೆಯಾದರೂ, ಸದ್ಯಕ್ಕೆ ಇಷ್ಟು ಸಾಕೆಂದುಕೊಳ್ಳಬಹುದು.

ಭೂಮಿಯ ಸುತ್ತ ನಾಲ್ಕು ಸಮುದ್ರಗಳಿವೆ. (ಸಪ್ತಸಮುದ್ರಗಳೆಂದು ಹೇಳುವ ಲೆಕ್ಕವೂ ಉಂಟು). ಮೇಲೆ ಹೇಳಿದ ವಿದ್ಯೆಗಳು ನಾಲ್ಕೇ ಎನಿಸಿದರೂ ನಾಲ್ಕೂ ಸಮುದ್ರ-ಸದೃಶಗಳೇ ಸರಿ! (ಚತುರರ್ಣವೋಪಮಾಃ ಚತಸ್ರಃ ವಿದ್ಯಾಃ): ಸಮುದ್ರಗಳನ್ನು ದಾಟಿ ಹೋಗುವುದು ಎಷ್ಟು ಕಷ್ಟವೋ ಇವುಗಳನ್ನು ದಾಟುವುದೂ ಅಷ್ಟೇ ಕಷ್ಟವೇ. ಎಂದೇ "ಚತುಸ್ಸಮುದ್ರಗಳನ್ನು ಹೇಗೋ ಹಾಗೆ ಚತುರ್ವಿದ್ಯೆಗಳನ್ನು ರಘುವು ತನ್ನ ಬುದ್ಧಿಗುಣಗಳಿಂದ ಕ್ರಮೇಣ ದಾಟಿದನು" - ಎನ್ನುತ್ತಾನೆ ಕಾಳಿದಾಸ (ಧಿಯಃ ಸಮಗ್ರೈಃ ಗುಣೈಃ ಕ್ರಮಾತ್ ತತಾರ). ರಾಜಕುಮಾರರಿಗಂತೂ ಈ ನಾಲ್ಕೂ ವಿದ್ಯೆಗಳು ಅತ್ಯವಶ್ಯ.


ವಿದ್ಯೆಯು ಪ್ರಸನ್ನವಾಗುವಿಕೆ

ವಿದ್ಯೆಯನ್ನು ಕಲಿಯುವುದರಲ್ಲಿ ಎರಡು ಘಟ್ಟಗಳಿವೆ. ಗ್ರಹಿಸುವುದು ಒಂದು, ಧರಿಸುವುದು ಮತ್ತೊಂದು. ಮೊದಲನೆಯದು ಗ್ರಹಣ, ಎರಡನೆಯದು ಧಾರಣ.  ವಿದ್ಯಾಭ್ಯಾಸದ ಆರಂಭದಶೆಯಲ್ಲಿರುವವನು ಬಾಲಕ. ಬಾಲಕನೆಂದರೆ ಯಾರು? "ಬಾಲಃ ಗ್ರಹಣ-ಧಾರಣಪಟುಃ, ನ ತು ಸ್ತನಂಧಯಃ". ಎಂದರೆ ಬಾಲನೆಂದರೆ ಹಸುಗೂಸಲ್ಲ. ಗ್ರಹಣವೆಂದರೆ ಗ್ರಹಿಸುವುದು (ಹಿಡಿಯುವುದು); ಧಾರಣವೆಂದರೆ ಗ್ರಹಿಸಿದ್ದನ್ನು ಸ್ಮೃತಿಯಲ್ಲಿ ಉಳಿಸಿಕೊಳ್ಳುವುದು – ಇವೆರಡರಲ್ಲಿ ಪಾಟವವಿರುವವನೇ ಬಾಲಕ. ಪಾಟವವೆಂದರೆ ಪಟುತ್ವ, ಸಾಮರ್ಥ್ಯ.

ಕಲಿಯುವಾಗ ಶ್ರವಣ-ಮನನಗಳೆರಡೂ ಮುಖ್ಯ. ಶ್ರವಣವೆಂದರೆ ಕೇಳುವುದು. ಒಮ್ಮೆ ಶ್ರವಣ ಮಾಡಿದಾಗ ತಿಳಿಯಿತೆನಿಸಿದರೂ ಆಮೇಲೆ ಮರೆತುಬಿಡುತ್ತೇವೆ! ಅದಕ್ಕಾಗಿಯೇ ಮತ್ತೆ ಮತ್ತೆ ಮನನ ಮಾಡುವುದು ಮುಖ್ಯವಾದದ್ದೇ. ಬೃಹದಾರಣ್ಯಕೋಪನಿಷತ್ತಿನಲ್ಲಿ "ಶ್ರೋತವ್ಯಃ ಮಂತವ್ಯಃ" ಎಂಬುದನ್ನು ಎರಡು ಬಾರಿ (ಎರಡು ಕಡೆಗಳಲ್ಲಿ) ಹೇಳಿದೆ.

'ವಿದ್ಯೆಯನ್ನು ಸಾಧಿಸಬೇಕು' ಎಂದನ್ನುವುದಾದರೂ, ಕೊನೆಗೆ 'ವಿದ್ಯೆಯು ಒಲಿಯಬೇಕು' - ಎನ್ನುವುದೇ ಬಹುಮುಖ್ಯವಾದದ್ದು. ವಿದ್ಯೆಯೊಲಿದರೆ "ವಿದ್ಯೆಯು ಪ್ರಸನ್ನಳಾದಳು" ಎನ್ನುತ್ತೇವೆ. ಪ್ರಸನ್ನತೆಯೇ ಪ್ರಸಾದ. ಪ್ರಸಾದವೆಂದರೆ ತಿಳಿ. ವಿದ್ಯಾಪ್ರಸಾದವನ್ನು ಸಂಪಾದಿಸುವುದು ಹೇಗೆಂಬುದನ್ನೂ ಕಾಳಿದಾಸನು ನಿರೂಪಿಸಿದ್ದಾನೆ.

ಸೂಚನೆ : 10/04/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.