Saturday, March 15, 2025

ಕೃಷ್ಣಕರ್ಣಾಮೃತ 55 ಎಳೆಗೂಸಿನ ವಾಕ್ಚಾತುರಿ (Krishakarnamrta 55)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



೩.೫೪ ಜಯತಿ ಗುಹ-ಶಿಖೀಂದ್ರ

ಕುಮಾರನಾದ ಕೃಷ್ಣನ ವಿಶಿಷ್ಟಸುಂದರ-ಸಂನಿವೇಶವೊಂದನ್ನು ಕವಿ ಇಲ್ಲಿ ಕಲ್ಪಿಸಿಕೊಟ್ಟಿದ್ದಾನೆ.

ಕುಮಾರಕೃಷ್ಣನಿಗೆ ಕುಮಾರಸ್ವಾಮಿಯ ಸನಿಹಸ್ನೇಹಗಳಿವೆ. ಷಣ್ಮುಖ ಅಥವಾ ಕುಮಾರಸ್ವಾಮಿಯ ವಾಹನವು ನವಿಲಷ್ಟೆ. ಅದಾದರೂ ನವಿಲುಗಳ ರಾಜ. ಶಿಖೀಂದ್ರ ಎಂದರೆ ಶ್ರೇಷ್ಠವಾದ ನವಿಲು - ಎಂದು ತಾತ್ಪರ್ಯ. ಶಿಖೆಯೆಂದರೆ ಜುಟ್ಟಲ್ಲವೇ? ಎಂದೇ ಶಿಖಿಯೆಂದರೆ ಜುಟ್ಟುಳ್ಳದ್ದು. ನವಿಲಿಗೆ ಜುಟ್ಟಿರುವುದಲ್ಲವೇ? ಆದ್ದರಿಂದ ಶಿಖಿಯೆಂದರೆ ನವಿಲು.

ಅಂತೂ ಆ ನವಿಲಿನ ಗರಿಯನ್ನು ತನ್ನ ಮೌಲಿಗೆ, ಎಂದರೆ ತಲೆಗೆ, ಸಿಕ್ಕಿಸಿಕೊಂಡಿರುವವನು, ನಮ್ಮ ಕೃಷ್ಣ.

ಎರಡನೆಯದಾಗಿ ಆತನು ಮೈಗೆ ಅಂಗ-ರಾಗವನ್ನು ಲೇಪಿಸಿಕೊಂಡಿದ್ದಾನೆ. ಅಂಗಗಳಿಗೆ ತಂಪಾಗಲೆಂದೋ ಅಲಂಕೃತಿಯೆಂದೋ ಲೇಪಿಸಿಕೊಳ್ಳುವ ದ್ರವ್ಯವೇ ಅಂಗ-ರಾಗ. ಇದಕ್ಕಾಗಿ ಯಾವ ದ್ರವ್ಯವನ್ನು ಬಳಸಿದ್ದಾನೆ ನಮ್ಮ ಕೃಷ್ಣ? ಸುರಗಿರಿ-ಗೈರಿಕವನ್ನು. ಸುರ-ಗಿರಿಯೆಂದರೆ ದೇವತೆಗಳ ಪರ್ವತ, ಅರ್ಥಾತ್ ಮೇರು ಅಥವಾ ಸುಮೇರು ಪರ್ವತ. ಅಲ್ಲಿ ಅನೇಕ ಧಾತುಗಳುಂಟು. ಧಾತುವೆಂದರೆ ಖನಿಜಗಳಂತಿಹ ವಸ್ತು, ಹೊಳೆಯುವ ಪದಾರ್ಥ. ಅದನ್ನೇ ಗೈರಿಕವೆನ್ನುವುದು. ಗಿರಿಯಲ್ಲಿ ಯಾವುದು ಲಭ್ಯವಾಗುವುದೋ ಅದೇ ಗೈರಿಕ.

ಹೀಗಾಗಿ, ಕೃಷ್ಣನು ಯಾವುದೋ ಸಾಧಾರಣ ಬೆಟ್ಟಗುಡ್ಡಗಳಲ್ಲಿ ಲಭ್ಯವಾಗುವ ಗೈರಿಕಗಳನ್ನು ಬಳಸುತ್ತಿಲ್ಲ. ಎಲ್ಲದರಲ್ಲೂ ಅಚ್ಚುಕಟ್ಟು, ನಮ್ಮ ಶ್ರೀಕೃಷ್ಣ. ಎಂದೇ ಹೇಮಾದ್ರಿ, ಚಿನ್ನದ ಬೆಟ್ಟ, ಎಂದು ಕರೆಸಿಕೊಳ್ಳಲ್ಪಡುವ ಸುಮೇರುವಿನಲ್ಲಿ ದೊರಕುವ ಗೈರಿಕವನ್ನೇ ಆತ ಬಯಸುವುದು, ಧರಿಸುವುದು.

ಮೂರನೆಯದಾಗಿ ಆತನ ಮೇಲೆ ಹೂಗಳ ಮಳೆಯನ್ನೂ ಕರೆಯಲಾಗಿದೆಯಂತೆ. ಸೂನ ಅಥವಾ ಪ್ರಸೂನವೆಂದರೆ ಹೂವು. ಸೂನ-ವರ್ಷವೆಂದರೆ ಪುಷ್ಪ-ವೃಷ್ಟಿ. ಅದೆಲ್ಲಿಂದ ಬಂದಿತು? ಸುರ-ಯುವತಿಯರು ಚೆಲ್ಲಿದ ಹೂಮಳೆಯದು.

ಇದೆಲ್ಲಾ ಆಗಿರಲು, ಕುಮಾರನಾದ ಕೃಷ್ಣನು ಹೇಗೆ ಕಾಣುತ್ತಾನೆ? ಹೂಮಳೆಯೆಂದರೆ ಮಳೆಯ ತುಂತುರು ಅಲ್ಲವೇ? ಅದರಿಂದಾಗಿ ಕೊಂಚ ಕೊಂಚ ನೆನೆದಿದೆ, ಆ ಕುಮಾರನ ಕೇಶ. ಒಂದು ತರಹ ಸ್ನಾನವಾದಂತೆ ಅಗಿದೆ. ಆ ತೆರನ ತುಂತುರಿನ ನೆನೆತವು ಪುಟ್ಟಮಕ್ಕಳಿಗೆ ದೊಡ್ಡ ಖುಷಿಯನ್ನೇ ಕೊಡುತ್ತದೆ. ದೊಡ್ಡವರಿಗೆ ಕೆಲವೊಮ್ಮೆ ಈ ಬಗೆಯ ಚೇಷ್ಟೆಗಳಿಂದ ಕಿರಿಕಿರಿಯಾಗಬಹುದು. ಆದರೆ ಮಕ್ಕಳು ಕಿಲಕಿಲನೆ ನಗುತ್ತಾ ನಲಿಯುವುವೇ ಸರಿ.


ಕೃಷ್ಣನ ಕುಂತಲಗಳು, ಎಂದರೆ ಕೇಶ-ರಾಶಿಯು, ಹೇಗಿದೆ? ವಿಭೂಷಿತವಾಗಿದೆ, ಅಲಂಕೃತವಾಗಿದೆ. ಮಕ್ಕಳು ಸ್ವಲ್ಪ ಬೆಳೆದು ದೊಡ್ಡವರಾಗುವವರೆಗೂ, ಅವು ಗಂಡುಮಕ್ಕಳೇ ಆಗಿದ್ದರೂ, ಹೆಣ್ಣು ಮಕ್ಕಳಿಗೆ ಸಲ್ಲುವ ಕೇಶವೇಷರಚನೆಯನ್ನು ಮಾಡಿ, ಕಣ್ತುಂಬ ನೋಡಿ, ಮನೆತಯ ಮಂದಿಯೆಲ್ಲಾ  ಸಂತೋಷಪಡುವುದುಂಟು, ಅಲ್ಲವೇ? ಹಾಗೆ ಸಾಲಂಕಾರ-ಕೇಶನಾಗಿದ್ದಾನೆ, ಕೃಷ್ಣ, ನಮ್ಮ ಪುಟ್ಟಕೃಷ್ಣ.

ಚಿತ್ರವನ್ನು ಒಟ್ಟಾರೆ ಮತ್ತೊಮ್ಮೆ ಕಣ್ಣ ಮುಂದೆ ತಂದುಕೊಳ್ಳಬಹುದಲ್ಲವೇ?: ಬಾಲಸುಬ್ರಹ್ಮಣ್ಯನ ಉತ್ತಮವಾದ ನವಿಲಿನ ಗರಿಯನ್ನು ತಲೆಯಲ್ಲಿ ಸಿಕ್ಕಿಸಿಕೊಂಡಿದ್ದಾನೆ, ಕುಮಾರಕೃಷ್ಣ. ಮೇರು-ಗೈರಿಕದಿಂದ ಲೇಪಿತವಾದ ಅಂಗಗಳಾತನವು. ಆಪ್ಸರೆಯರು ಆತನ ಮೇಲೆ ಹೂಮಳೆಗರೆದಿದ್ದಾರೆ. ಅಲಂಕೃತಕೇಶದ ಮೇಲೆ ಜಲಕಣಗಳು ಮೂಡಿವೆ.

ಇಂತಹ ಕೃಷ್ಣನ ಸೊಬಗು ಉತ್ಕೃಷ್ಟ ಎಂದು ಬೇರೆಯಾಗಿ ಹೇಳಬೇಕೇನು? ಆಹಾ, ಲೀಲಾಶುಕನ ಕಣ್ಣೇ ಕಣ್ಣು! ಶ್ಲೋಕವಿದು:

ಜಯತಿ ಗುಹ-ಶಿಖೀಂದ್ರ-ಪಿಂಛ-ಮೌಲಿಃ /

ಸುರಗಿರಿ-ಗೈರಿಕ-ಕಲ್ಪಿತಾಂಗರಾಗಃ |

ಸುರ-ಯುವತಿ-ವಿಕೀರ್ಣ-ಸೂನ-ವರ್ಷ-/

-ಸ್ನಪಿತ-ವಿಭೂಷಿತ-ಕುಂತಲಃ ಕುಮಾರಃ ||


ಶ್ರೀಕೃಷ್ಣನ ಬಾಲಲೀಲೆಯೊಂದನ್ನು  ಶ್ಲೋಕವೊಂದರಲ್ಲಿ ಸ್ಮರಿಸಿಕೊಂಡಿದ್ದಾನೆ, ಲೀಲಾಶುಕ. ಈ ಶ್ಲೋಕದಲ್ಲಿ ತಾಯಿ ಯಶೋದೆಯೊಂದಿಗೆ ಶಿಶುಕೃಷ್ಣನ ಸಂಭಾಷಣೆ ನಡೆದಿದೆ. ಹಾಲು ಕುಡಿಯಲು  ಬಟ್ಟಲು ಕೇಳಿದ ಕೃಷ್ಣನಿಗೆ, ಅದನ್ನು ಕೊಡುವುದು ರಾತ್ರಿಯಾದಾಗ ಎಂದಳಾಕೆ. ಅದಕ್ಕೆ, ಕತ್ತಲೆಯೆಂದರೇನೆಂದು ತಿಳಿದು, ಕಣ್ಣುಮುಚ್ಚಿ, ಈಗ ಹಾಲು ಕೊಡೆಂದನಂತೆ, ಕೃಷ್ಣ! ಇದನ್ನು ಅಲ್ಲಿನ ಸಂಭಾಷಣಾ-ರೂಪವಾಗಿಯೇ ನೋಡಬಹುದು:

ಅಮ್ಮಾ / ಏನು ಯದುನಾಥ? / ಬಟ್ಟಲು ಕೊಡು / ಈಗೇಕದು? / ಹಾಲು ಕುಡಿಯಬೇಕಲ್ಲ? / ಅದೀಗಿಲ್ಲ / ಮತ್ತೆ ಯಾವಾಗ? / ರಾತ್ರಿಯಾದಾಗ / ರಾತ್ರಿಯೆಂದರೇನು?/ ಕತ್ತಲಾವರಿಸಿದಾಗ ಆಗುವುದು / [ಕಣ್ಣುಗಳೆರಡನ್ನೂ ಮುಚ್ಚಿಕೊಂಡು] ಕತ್ತಲಾಯಿತು, ಕೊಡೀಗ / - ಹೀಗೆಂಬುದಾಗಿ ಹೇಳುತ್ತಾ ಮತ್ತೆ ಮತ್ತೆ ತಾಯಿಯ ಎದೆಸೆರಗನ್ನು ಎಳೆಯಲು ತೊಡಗಿದ ಕೃಷ್ಣನು ನಮ್ಮನ್ನು ಪೋಷಿಸಲಿ - ಎನ್ನುತ್ತದೆ, ಪದ್ಯ.

ಕೃಷ್ಣನನ್ನು ಯಶೋದೆಯು "ಯದುನಾಥ" ಎನ್ನುವುದರಲ್ಲೇ ಸೊಗಸಿದೆ. ನಾವೂ ನಮ್ಮ ಮಕ್ಕಳನ್ನು 'ರಾಜಾ' ಎಂದು ಕರೆಯುವೆವಲ್ಲವೆ? ಹಾಗೆಯೇ ಯದುವಂಶದ ಒಡೆಯನಿವನೆಂಬುದಾಗಿ - ಮುಂದಾಗಬೇಕಿರುವುದನ್ನು ಎಳಸಿನಲ್ಲೇ ಭಾವಿಸಿ - ಕರೆಯುತ್ತಾಳೆ, ಯಶೋದೆ. ಅವಳ ಸಂಬೋಧನೆಯ ಸಹಜತೆಯನ್ನು ನಾವು ಆಸ್ವಾದಿಸಬಹುದು.

ಹತ್ತು ಹೆಜ್ಜೆಗಳಲ್ಲಿ ಸಾಗುವ ಈ ಸಂಭಾಷಣೆಯಲ್ಲಿ, ತಾಯಿಯ ಮಾತುಗಳನ್ನೇ ಹಿಡಿದು, ಅವುಗಳಿಂದಲೇ ಅವಳನ್ನು ಕಟ್ಟಿಹಾಕುವ ಎಳಸಿನ ಬಾಲಕನ ಚೂಟಿತನ, ಪೈಪೋಟಿಯ ಬಿಗಿ-ಬಿರುಸುಗಳು, ಅವಿದಿತವಾಗಿ ಮೂಡುತ್ತಿರುವ ತುಂಟತನ, - ಇವುಗಳೆಲ್ಲ ಗೋಚರವಾಗುವುವು. 

ಎದೆಹಾಲು ಕುಡಿಯುವ ವಯಸ್ಸನ್ನು ಮೀರಿ, ಈಗ ಬಟ್ಟಲಿನಲ್ಲಿ ಕುಡಿಯುವುದಾರಂಭವಾಗಿದ್ದರೂ, ಹಳೆಯ ಅಭ್ಯಾಸವಿನ್ನೂ ಮಾಸಿಲ್ಲವಾಗಿ, ತಾಯಿಯ ಎದೆಸೆರಗನ್ನೇ ಎಳೆದೆಳೆದು, ಹಾಲು ಕೇಳುತ್ತಿರುವ ಮುಗ್ಧ-ಕೃಷ್ಣನ ಮಧುರ-ಚಿತ್ರಣವನ್ನು ಕವಿಯು ಮುದ್ದಾಗಿ ಮೂಡಿಸಿಕೊಟ್ಟಿದ್ದಾನೆ. ರಾತ್ರಿಯೆಂದರೆ ಕತ್ತಲೆನ್ನುವುದಾದರೆ, ಕಣ್ಮುಚ್ಚಿಕೊಂಡೊಡನೆಯೇ ಕತ್ತಲು ತೋರುವುದರಿಂದ, "ನಿನ್ನ ಲೆಕ್ಕದಂತೆಯೇ ಈಗ ರಾತ್ರಿಯೇ ತಾನೇ? ಮತ್ತೀಗ ಹಾಲು ಕೊಡುವುದು ತಾನೆ? ವಿಳಂಬವೇಕೆ ಮತ್ತೆ?" - ಎಂದು ಮಾತು ಹಿಡಿದೇ ಕೇಳುತ್ತಾನೆ, ಈ ಪೋರ. ಹಾಲಿನ ಸವಿಯ ಚಪಲ, ಕಳ್ಳಹಸಿವಿನ ಹೊಂಚು, ಅನಿರೀಕ್ಷಿತವಲ್ಲದ ಹಠಮಾರಿತನ - ಇವುಗಳು ಸೇರಿರುವುದೂ ಸುಮಧುರವೇ ಸರಿ.  

ಸಣ್ಣವಯಸ್ಸಿನಲ್ಲೇ ವಾಕ್ಪಟುತ್ವ ತೋರುವ ಮಕ್ಕಳು ಯಾವ ತಾಯಿಗೆ ಹೆಮ್ಮೆಯಲ್ಲ? ಆ ಸಂನಿವೇಶವನ್ನು ಕಂಡ ಇತರರು ಕೂಡ, ಚೂಟಿಯಾದ ಕೂಸಿನ ಬಾಯ್ಚಪಲ ನೀಗಿಸಿಕೊಳ್ಳುವಲ್ಲಿನ  ಚುರುಕುತನವನ್ನು ಆಸ್ವಾದಿಸುವರೇ ಸರಿ. ಒಡನೆಯೇ ಮಗುವನ್ನು ಮುದ್ದಿಸುವರೇ ಸರಿ.

ಇಂತಹ ಸುಭಗ-ಚಿತ್ರಣಗಳನ್ನೆಲ್ಲ ನೋಡಿದಾಗ, ಕೃಷ್ಣನು ಎಳೆಗೂಸಾಗಿದ್ದಾಗಿನಿಂದಲೂ ಆತನ ಹಿಂದೆಮುಂದೆಯಲ್ಲೇ ಸುತ್ತಾಡುತ್ತಿದ್ದನೇ, ಈ ಲೀಲಾಶುಕನೇನಾದರೂ? - ಎಂಬ ಸಂದೇಹ ಬರುವುದಲ್ಲವೇ?

ಚಿಕ್ಕಸಂನಿವೇಶವನ್ನೂ ಚೊಕ್ಕವಾಗಿ ಕಟ್ಟಿಕೊಡುವುದರಲ್ಲಿ ನಿಡಿದಾದ ನೈಪುಣ್ಯ, ಲೀಲೆಯಿಂದಲೇ ವಾಕ್ಚಿತ್ರಗಳನ್ನು ನೇಯಬಲ್ಲ ಕಲಾಚಾತುರ್ಯ - ಇವುಗಳ ನಲೆಮನೆ,  ನಮ್ಮ ಲೀಲಾಶುಕ! 

ಪದ್ಯ ಹೀಗಿದೆ:

೧. ಮಾತಃ!

೨. ಕಿಂ ಯದುನಾಥ?

೩. ದೇಹಿ ಚಷಕಂ

೪. ಕಿಂ ತೇನ?

೫. ಪಾತುಂ ಪಯಃ /

೬. ತನ್ನಾಸ್ತ್ಯದ್ಯ

೭. ಕದಾಸ್ತಿ ವಾ?

೮. ನಿಶಿ

೯. ನಿಶಾ ಕಿಂ ವಾ?

೧೦. ಅಂಧಕಾರೋದಯೇ |

[ಆಮೀಲ್ಯಾಕ್ಷಿಯುಗಂ]

೧೧. ನಿಶಾಪ್ಯುಪಗತಾ, ದೇಹೀ

  • ಇತಿ ಮಾತುರ್ಮುಹುಃ /

ವಕ್ಷೋಜಾಂಬರ-ಕರ್ಷಣೋದ್ಯತ-ಕರಃ

ಕೃಷ್ಣಃ ಸ ಪುಷ್ಣಾತು ನಃ ||

ಇಲ್ಲಿ ೧, ೩, ೫, ೭, ೯, ೧೧ ಸಂಖ್ಯೆಯ ಮಾತುಗಳು ಕೃಷ್ಣನವು.

೨, ೪, ೬, ೮, ೧೦ಗಳು ಯಶೋದೆಯವು.

ಉಳಿದವು ಕೃಷ್ಣನ ಚೇಷ್ಟಿತದ ವರ್ಣನೆ.

ಸೂಚನೆ : 15/03/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.