ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ ೭. ಅತ್ಯಂತ ಶುದ್ಧನು ಯಾರು ?
ಉತ್ತರ - ಯಾರು ಮನಸ್ಸಿನಿಂದ ಶುದ್ಧನೋ ಅವನೇ ನಿಜವಾಗಿ ಶುದ್ಧ.
ಪ್ರಸ್ತುತವಾದ ಪ್ರಶ್ನೆ "ಅತ್ಯಂತ ಶುದ್ಧನಾದವನು ಯಾರು?" ಎಂಬುದಾಗಿ. ಅದಕ್ಕೆ ಉತ್ತರ ಹೇಗಿದೆ - "ಯಾರು ಮನಸ್ಸಿನಿಂದ ಶುದ್ಧನಾಗಿರುತ್ತಾನೋ ಅವನು ಅತ್ಯಂತ ಶುದ್ಧ" ಎಂಬುದಾಗಿ. ಇಲ್ಲಿ ನಾವು ಒಂದು ವಿಷಯವನ್ನು ಗಮನಿಸುವಂಥದ್ದು ಅತ್ಯಂತ ಅನಿವಾರ್ಯ. ಶುದ್ಧವಾಗಬೇಕಾದುದು ಮನಸ್ಸು. ಉಳಿದವು ಅಶುದ್ಧವಾಗಿದ್ದರೂ ಪರವಾಗಿಲ್ಲ ಎಂಬ ವಿಷಯವಲ್ಲ. ಮನಸ್ಸು ಶುದ್ಧವಾಗಬೇಕಾದರೆ ಉಳಿದೆಲ್ಲ ಅಂಗಗಳ ಶುದ್ಧಿಯು ಕೂಡ ಅತ್ಯಂತ ಅವಶ್ಯ ಎಂಬುದನ್ನು ಕೂಡ ಇದರ ಜೊತೆಯಲ್ಲಿ ಮನಗಾಣಬೇಕಾಗಿದೆ. ಇಲ್ಲಿ ಉಳಿದವುಗಳು ಹೇಗಿದ್ದರೂ ಆಗುತ್ತದೆ ಎಂಬ ವಿಷಯವಿಲ್ಲ. ಕೊನೆಯಲ್ಲಿ ಆಗಬೇಕಾದದ್ದು ಮಾನಸಿಕ ಸುದ್ದಿ ಮಾತ್ರ ಎಂಬುದು ತಾತ್ಪರ್ಯವಷ್ಟೆ. ಏಕೆಂದರೆ ನಮ್ಮ ಜೀವನದ ಉನ್ನತಿ ಮನಸ್ಸಿನಿಂದ ಮಾತ್ರ. ಮನಸ್ಸು ಶುದ್ಧವಾಗಿದ್ದರೆ ನಾವು ತಿಳಿಯಬೇಕಾದದ್ದನ್ನು ತಿಳಿಯಬಹುದು; ತಿಳಿಯಬೇಕಾದದ್ದನ್ನು ಅಂತಯೇ ತಿಳಿಯಬಹುದು; ವ್ಯತಿರಿಕ್ತವಾಗಿ ತಿಳಿಯದೆ ಯಥಾವತ್ತಾಗಿ ತಿಳಿಯಲು ಸಾಧ್ಯ. ಹಾಗಾಗಿ ತಿಳುವಳಿಕೆಯಲ್ಲಿ ಮನಸ್ಸಿನ ಪಾತ್ರ ಉಳಿದೆಲ್ಲವುಗಳಿಗಿಂತ ಮಿಗಿಲಾದುದು ಎಂಬುದು ಇದರ ಅರ್ಥ.
ಮನಸ್ಸನ್ನು ಇಂದ್ರಿಯ ಎಂದು ಕರೆಯಲಾಗಿದೆ. ವಿಷಯದ ಅರಿವನ್ನು ಉಂಟುಮಾಡುವ ಸಾಧನವದು. ಇದನ್ನು ಅಂತರಿಂದ್ರಿಯ ಎಂಬುದಾಗಿ ಕರೆದು, ಕಣ್ಣು ಕಿವಿ ಮೂಗು ನಾಲಗೆ ಚರ್ಮ ಈ ಐದು ಇಂದ್ರಿಯಗಳನ್ನು ಬಹಿರಿಂದ್ರಿಯ ಎಂಬುದಾಗಿ ಕರೆಯಲಾಗಿದೆ. ಈ ಇಂದ್ರಿಯಗಳಿಂದ ನಮಗೆ ಹೊರಗಡೆ ಇರುವ ವಿಷಯದ ಅರಿವು ಬರುತ್ತದೆ. ಕಣ್ಣಿನಿಂದ ರೂಪ, ಕಿವಿಯಿಂದ ಶಬ್ದ, ಮೂಗಿನಿಂದ ಗಂಧ, ಚರ್ಮದಿಂದ ಸ್ಪರ್ಶ ಮತ್ತು ನಾಲಗೆಯಿಂದ ರಸ. ಆದರೆ ಈ ಎಲ್ಲ ಜ್ಞಾನಗಳಿಗೂ ಮನಸ್ಸು ಬೇಕು. ಬಹಿರಿಂದ್ರಿಗಳಿಗೂ ಮೀರಿದಂತಹ ಅನೇಕ ವಿಷಯಗಳ ಅರಿವು ನಮಗೆ ಬೇಕಾಗುತ್ತದೆ. ಅದಕ್ಕೆ ಮನಸ್ಸಿನಿಂದ ಮಾತ್ರ ಸಾಧ್ಯ. ಹಾಗಾಗಿ ಯಾವ ಅರಿವನ್ನು ಹೊರ ಇಂದ್ರಿಯಗಳಿಂದ ಪಡೆಯಲು ಸಾಧ್ಯವಿಲ್ಲವೋ ಅವುಗಳನ್ನು ಮನಸ್ಸಿನಿಂದ ಪಡೆಯಬೇಕಾಗುತ್ತದೆ. ಹಾಗಾಗಿ ಮನಸ್ಸು ಶುದ್ಧವಾಗಿರಬೇಕು. ಕಣ್ಣು ಶುದ್ಧವಾಗಿದ್ದರೆ ರೂಪ ಶುದ್ಧವಾಗಿ ಕಾಣುತ್ತದೆ. ಹಾಗೆ ಇಂದ್ರಿಯ ಶುದ್ಧವಾದಾಗ ಇಂದ್ರಿಯರಿಂದ ಬರುವ ಅರಿವು ಶುದ್ಧವಾಗಿ ಕಾಣುತ್ತದೆ ಎಂಬುದು ಇದರ ಅರ್ಥ. ಆದ್ದರಿಂದ ಮನಸ್ಸು ಅತ್ಯಂತ ಪರಿಶುದ್ಧವಾಗಿರಬೇಕು ಎಂಬುದು.
ಚಿಂತೆಯಿಂದ ಮನಸ್ಸು ಅಶುದ್ಧಗೊಳ್ಳುತ್ತದೆ. ಚಿಂತನದಿಂದ ಮನಸ್ಸು ಶುದ್ಧಗೊಳ್ಳುತ್ತದೆ. ಅಂದರೆ ಮನಸ್ಸು ತಿಳಿಯಾದಾಗ ಮನಸ್ಸಿನಿಂದ ಮನಸಸ್ಪತಿಯನ್ನು - ಭಗವಂತನನ್ನು ತಿಳಿಯಲು ಸಾಧ್ಯ. ಅದರದರ ಸ್ವಭಾವವನ್ನೆ ಶುದ್ಧಿ ಎನ್ನುತ್ತಾರೆ ಎಂಬುದಾಗಿ ಶ್ರೀರಂಗಮಹಾಗುರುಗಳು ಶುದ್ಧಿಯ ವಿವರಣೆಯನ್ನು ಈ ಭಾವದಿಂದ ನೀಡುತ್ತಿದ್ದರು. 'ಶುದ್ಧಾ ಹಿ ಬುದ್ಧಿಃ ಕಿಲ ಕಾಮಧೇನುಃ' ಮನಸ್ಸು ಶುದ್ವಾಗಿರಗಬೇಕು. ಅದರಿಂದ ಎಂತಹ ಕಾರ್ಯವನ್ನು ಸಾಧ್ಯವಾಗಿಸಬಹುದು. ಈ ಸ್ವಭಾವವಿರುವುದರಿಂದಲೇ ಮನುಷ್ಯ, ಮಾನವ, ಮನುಜ ಮೊದಲಾದ ಹೆಸರುಗಳು ನರರಿಗೆ ಬಂದಿವೆ. ಅದೇ ನಿಜವಾದ ಪರಿಶುದ್ಧಿ. ಉಳಿದೆಲ್ಲ ಶುದ್ಧಿಗಳು ಇದರಲ್ಲೇ ಪರ್ಯವಸಾನವಾಗುವಂತೆ ಇರಬೇಕಾಗುತ್ತದೆ ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.