ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಒಂದೇ ಬಾಣದಿಂದಲೇ ಆತನು ನೂರಾರು ಪ್ರಾಣಿಗಳನ್ನು ಕೊಲ್ಲುತ್ತಿದ್ದನು. ಹಾಗೆಯೇ ನೂರು ಬಾಣಗಳನ್ನು ಹೊಡೆದು ಪಕ್ಷಿಯೊಂದನ್ನು ಕೊಲ್ಲುತ್ತಿದ್ದನು.
ಪ್ರಾಣಗಳನ್ನು ಕಳೆದುಕೊಂಡ ಅವು ಅಗ್ನಿಯೊಳಗೆ ಬಿದ್ದವು - ಸಾಕ್ಷಾದ್ ಯಮನಿಂದಲೇ ಕೊಲ್ಲಲ್ಪಟ್ಟವೋ, ಎಂಬಂತೆ. ಜಲಸ್ಥಾನಗಳ ದಡಗಳಲ್ಲಾಗಲಿ, ಹಳ್ಳದಿಣ್ಣೆಗಳಲ್ಲಾಗಲಿ, ನೆಮ್ಮದಿಯನ್ನು ಅವು ಕಾಣದಾದವು. ಪಿತೃಲೋಕ-ದೇವಲೋಕಗಳಿಗೆ ಖಾಂಡವದ ಮಹಾತಾಪವು ಮುಟ್ಟಿತು. ಅನೇಕ ಪ್ರಾಣಿಸಮೂಹಗಳು ದೀನಸ್ಥಿತಿ ಹೊಂದಿ ದೊಡ್ಡ ಸದ್ದನ್ನೇ ಮಾಡಿದವು: ಆನೆಗಳೂ, ಜಿಂಕೆ-ಚಿರತೆಗಳೂ ಗೋಳಿಟ್ಟವು. ಮತ್ತು ಆ ಗೋಳಾಟದ ಸದ್ದಿಗೆ ಗಂಗೆಯೊಳಗಣ ಹಾಗೂ ಸಮುದ್ರದೊಳಗಣ ಮತ್ಸ್ಯಗಳೂ ಬೆದರಿ ಬೆಚ್ಚಿದವು.
ಆ ವನದಲ್ಲಿ ವಾಸಮಾಡುತ್ತಿದ್ದ ವಿದ್ಯಾಧರರ ಸಮೂಹಗಳೂ ಸಹ ಅರ್ಜುನನನ್ನು ದಿಟ್ಟಿಸಿ ನೋಡಲು ಸಹ ಸಮರ್ಥರಾಗಲಿಲ್ಲ. ಇನ್ನು ಆತನೊಡನೆ ಯುದ್ಧ ಮಾಡುವುದೆಲ್ಲಿ ಬಂತು?
ಹಾಗೂ ಯಾವ ರಾಕ್ಷಸರಾಗಲಿ ದಾನವರಾಗಲಿ ನಾಗರಾಗಲಿ ಒಗ್ಗಟ್ಟಾಗಿ ಬಂದು ಎರಗಿದರೋ ಅವರೆಲ್ಲರನ್ನೂ ತನ್ನ ಚಕ್ರಾಯುಧದಿಂದ ಕೃಷ್ಣನು ಸಂಹರಿಸಿದನು. ಅವರ ಶಿರಸ್ಸುಗಳೂ ದೇಹಗಳೂ ತುಂಡರಿಸಿ ಹೋದವು, ಅವರ ಪ್ರಾಣಗಳೂ ಹಾರಿಹೋದವು. ಮತ್ತಿನ್ನುಳಿದ ಮಹಾಕಾಯದ ಪ್ರಾಣಿಗಳು ಜ್ವಲಿಸುವ ಅಗ್ನಿಯೊಳಗೆ ತಾವೇ ಬಿದ್ದುಹೋದವು.
ಹೀಗಾಗಿ ಅಗ್ನಿ ಮಾಂಸ-ರಕ್ತಗಳ ಧಾರೆಗಳಿಂದ ಹಾಗೂ ಮೇದಸ್ಸುಗಳಿಂದ ತೃಪ್ತಿಯಾಯಿತು, ಅಗ್ನಿದೇವನಿಗೆ.
ಅಗ್ನಿಯು ಮೇಲೆಮೇಲಕ್ಕೆ ಆಕಾಶಕ್ಕೆ ಹೋಯಿತು. ಹೊಗೆಯಿಲ್ಲದಾಯಿತು. ಅಗ್ನಿಯ ಕಣ್ಣು-ನಾಲಿಗೆಗಳೂ ದೊಡ್ಡ ಬಾಯಿಯೂ ಬೆಳಗಿದವು. ಅಗ್ನಿಯ ಕೇಶರಾಶಿಯೂ ಬೆಳಗುತ್ತ ಮೇಲಕ್ಕೆ ಚಾಚಿತು. ಪಿಂಗವರ್ಣದ ಕಣ್ಣುಗಳುಳ್ಳವನಾಗಿ ಪ್ರಾಣಿಗಳ ಮೇದೋರಸವನ್ನು ಕುಡಿಯುತ್ತಿದ್ದನು. ಪಿಂಗವರ್ಣವೆಂದರೆ ಕಂದು ಹಳದಿ. ಕೃಷ್ಣನೂ ಅರ್ಜುನನೂ ತನಗೆ ಒದಗಿಸಿದ ಅಮೃತದಂತಹ ಆಹಾರದಿಂದಾಗಿ ಮೋದಗೊಂಡ ಅಗ್ನಿ, ತೃಪ್ತನಾದನು, ಬಹುಶಾಂತಿಯನ್ನು ಹೊಂದಿದನು.
ಅಷ್ಟರಲ್ಲಿ ತಕ್ಷಕನ ಮನೆಯಿಂದ ಮಯನೆಂಬ ಅಸುರನು ಓಡಿಹೋಗುತ್ತಿರುವುದನ್ನು ಥಟ್ಟನೆ ಕೃಷ್ಣನು ಕಂಡನು. ವಾಯುವನ್ನೇ ಸಾರಥಿಯನ್ನಾಗಿ ಹೊಂದಿರುವ ಅಗ್ನಿಯು, ಶರೀರಧಾರಿಯಾಗಿ ಜಟಾಧರನಾಗಿ, ಮೋಡದಂತೆ ಗರ್ಜಿಸುತ್ತಾ ಆತನನ್ನು ಸುಟ್ಟುಹಾಕುವ ಅಪೇಕ್ಷೆ ಹೊಂದಿದ್ದನು.
ಆ ಮಯನು ದಾನವ ಶ್ರೇಷ್ಠರಿಗೆ ಉತ್ತಮನೆನಿಸುವ ಶಿಲ್ಪಿ - ಎಂಬುದನ್ನು ಅರಿತ ಕೃಷ್ಣನು, ಆತನನ್ನು ಕೊಲಲ್ಲೆಂದು ನಿಂತನು. ಕೃಷ್ಣನು ಚಕ್ರವನ್ನೆತ್ತಿ ಹಿಡಿದಿರುವುದನ್ನೂ ಅಗ್ನಿಯು ಸುಡಹೊರಟಿರುವುದನ್ನೂ ಕಂಡ ಮಯನು ಅರ್ಜುನನಲ್ಲಿಗೆ ಓಡಿದನು. ನನ್ನನ್ನು ಕಾಪಾಡು - ಎಂದು ಬೇಡಿಕೊಂಡನು.
ಆತನ ಭಯಧ್ವನಿಯನ್ನು ಕೇಳಿದ ಅರ್ಜುನನು ಹೆದರಬೇಡ - ಎಂದು ಹೇಳಿದನು. ಅದು ಆತನಿಗೆ ಜೀವದಾನವನ್ನೇ ಮಾಡಿದಂತಿತ್ತು. ದಯೆಯಿಂದ ಅರ್ಜುನನು ಹಾಗೆ ಹೇಳಿ ಅಭಯಪ್ರದಾನ ಮಾಡಲು, ನಮುಚಿಯ ಭ್ರಾತೃವಾದ ಮಯನನ್ನು ಕೊಲ್ಲುವ ಸಂಕಲ್ಪವನ್ನು ಕೃಷ್ಣನು ತೊರೆದನು. ಅಗ್ನಿಯೂ ಆತನನ್ನು ಸುಡಲಿಲ್ಲ.
ಅಂತೂ ಕೃಷ್ಣಾರ್ಜುನರು ಇಂದ್ರನ ದೆಸೆಯಿಂದ ಹೀಗೆ ರಕ್ಷಣೆಯೊದಗಿಸಿರಲು, ಹದಿನೈದು ದಿನಗಳ ಕಾಲ ಆ ಕಾಡನ್ನು ಅಗ್ನಿಯು ಸುಟ್ಟನು. ಹೀಗೆ ಆ ಕಾಡು ಸುಡಲ್ಪಡುತ್ತಿರಲು, ಆರು ಮಂದಿಯನ್ನು ಅಗ್ನಿಯು ಸುಡಲಿಲ್ಲ - ಅಶ್ವಸೇನನೆಂಬ ನಾಗ, ಮಯಾಸುರ, ಹಾಗೂ ನಾಲ್ಕು ಪಕ್ಷಿಗಳು. ಅವು ಶಾರ್ಙ್ಗಕಗಳೆಂಬ ಪಕ್ಷಿಗಳು.