Sunday, March 2, 2025

ವ್ಯಾಸ ವೀಕ್ಷಿತ 126 ಕೃಷ್ಣಾರ್ಜುನರನ್ನು ಹತ್ತಿಕ್ಕಲು ಹೊರಟ ದೇವತೆಗಳ ದಂಡು (Vyaasa Vikshita 126)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಜೋರಾಗಿ ಧ್ವನಿಗೈಯುತ್ತಾ ಬಾಣಗಳ ಮಳೆಯನ್ನೇ ಸುರಿಸುತ್ತಿದ್ದರು, ಯಕ್ಷ-ರಾಕ್ಷಸಾದಿಗಳು. ಅವರ ಶಿರಸ್ಸುಗಳನ್ನು ತನ್ನ ಚೂಪಾದ ಬಾಣಗಳಿಂದ ಅರ್ಜುನನು ತುಂಡರಿಸಿದನು. ಮಹಾತೇಜಸ್ವಿಯಾದ ಕೃಷ್ಣನೂ ಸಹ ಚಕ್ರಾಯುಧದಿಂದ ಶತ್ರುಗಳನ್ನು ಸಂಹರಿಸುತ್ತಿದ್ದನು; ದೈತ್ಯ-ದಾನವರ ಸಂಘಗಳೊಂದಿಗೆ ಮಹತ್ತಾದ ಕದನವನ್ನೇ ನಡೆಸಿದನು. ಆತನ ಬಾಣಗಳಿಂದ ಘಾಸಿಗೊಂಡರು, ಆ ದೈತ್ಯ-ದಾನವರು. ಚಕ್ರಾಯುಧದ ವೇಗದಿಂದ ಅವರು ತತ್ತರಿಸಿಹೋದರು. ಅಮಿತವಾದ ಓಜಸ್ಸಿನಿಂದ ಕೂಡಿದ್ದವರಾಗಿದ್ದರೂ ಸಹ ಅವರು ಸೀಮೆಯೊಂದನ್ನು ದಾಟಿಬರಲಾರದಾದರು. ಇದು ಹೇಗೆಂದರೆ  ಸಮುದ್ರದ ಅಲೆಗಳು ದಡವನ್ನು ದಾಟಿಬರಲೇ ಆರವು, ಅಲ್ಲವೇ? ಹಾಗೆ. 

 

ದೇವತೆಗಳಿಗೆ ಒಡೆಯನಾದ ಇಂದ್ರನು ಆಗ ಅತ್ಯಂತ-ಸಂಕ್ರುದ್ಧನಾದನು, ಎಂದರೆ ಅತಿಕ್ರೋಧಗೊಂಡನು. ತನ್ನ ಶ್ವೇತ-ಗಜವನ್ನು, ಅರ್ಥಾತ್ ಐರಾವತವನ್ನು, ಹತ್ತಿಬಂದನು. ಹಾಗೂ ಅವರಿಬ್ಬರ ಮೇಲೂ ದಾಳಿಮಾಡಿದನು. ಸಿಡಿಲಿನಂತಿರುವ ತನ್ನ ವಜ್ರಾಯುಧವನ್ನೂ ಅಸ್ತ್ರವನ್ನೂ ಅವರ ಮೇಲೆ ಪ್ರಯೋಗಿಸುತ್ತಾ, "ಇವರಿಬ್ಬರೂ ಹತರಾದರು" ಎಂಬುದಾಗಿ ಸುರರಿಗೆ ಧೈರ್ಯತುಂಬುವಂತೆ ಉದ್ಗರಿಸಿದನು. 

ದೇವರಾಜನಾದ ಇಂದ್ರನು ತನ್ನ ಮಹಾವಜ್ರವನ್ನೇ ಕೈಗೆತ್ತಿಕೊಂಡದ್ದೇ ತಡ: ಮಿಕ್ಕ ಸುರರೂ ತಮ್ಮ ತಮ್ಮ ಶಸ್ತ್ರಗಳನ್ನು  ಕೈಗೆತ್ತಿಕೊಂಡರು. ಯಾರು ಯಾರು ಏನೇನನ್ನು ಎತ್ತಿಕೊಂಡರು?: ಜವರಾಯನು, ಎಂದರೆ ಯಮನು, ತನ್ನ ಕಾಲದಂಡವನ್ನು ಕೈಗೆ ತೆಗೆದುಕೊಂಡನು. ಕುಬೇರನು ತನ್ನ ಗದೆಯನ್ನು ಹಿಡಿದನು. ವರುಣನು ಪಾಶಗಳನ್ನೂ ಹಾಗೂ ತನ್ನ ವಿಚಿತ್ರವಾದ ವಜ್ರವನ್ನೂ ತೆಗೆದುಕೊಂಡನು. ಸ್ಕಂದನು, ಎಂದರೆ ಸುಬ್ರಹ್ಮಣ್ಯನು, ಶಕ್ತ್ಯಾಯುಧವನ್ನು ಎತ್ತಿಕೊಂಡನು, ಹಾಗೂ ಮೇರು ಪರ್ವತವು ಹೇಗೋ ಹಾಗೆ ನಿಶ್ಚಲನಾಗಿ ನಿಂತನು. ಅಂತೆಯೇ ಬೆಳಗುವ ಓಷಧಗಳನ್ನೇ ಅಶ್ವಿನೀ-ದೇವತೆಗಳಿಬ್ಬರೂ ಹಿಡಿದುನಿಂತರು. ಧಾತೃವು ಧನುಸ್ಸನ್ನು ಹಿಡಿದನು. ಜಯನು ಮುಸಲವನ್ನೆತ್ತಿಕೊಂಡನು. ಕ್ರೋಧಗೊಂಡ ಮಹಾಬಲಶಾಲಿಯಾದ ತ್ವಷ್ಟೃದೇವನು ಪರ್ವತವನ್ನೇ ಕೈಗೆತ್ತಿಕೊಂಡನು. ಅಂಶನು ಶಕ್ತ್ಯಾಯುಧವನ್ನು ಹಿಡಿದನು. ಮೃತ್ಯುದೇವತೆಯು ಪರಶುವನ್ನು ಹಿಡಿದನು. ಮತ್ತು ಅರ್ಯಮನೆಂಬ ದೇವತೆಯು ಘೋರವಾದ ಪರಿಘವನ್ನು ಹಿಡಿದು ನಡೆದಾಡಿದನು. ಮಿತ್ರದೇವನು ಚೂಪಾದ ಪರಿಧಿಯುಳ್ಳ ಚಕ್ರಾಯುಧವನ್ನು ಹಿಡಿದು ನಿಂತನು. ಇನ್ನು ಪೂಷಾ ಎಂಬ ದೇವನು, ಭಗ ಹಾಗೂ ಸವಿತಾಎಂಬಿವರುಗಳುಇವರೆಲ್ಲರೂ ಕತ್ತಿ-ಬಿಲ್ಲುಗಳನ್ನು ಕೈಗೆತ್ತಿಕೊಂಡು ಕೃಷ್ಣ-ಪಾರ್ಥರ ಮೇಲೆರಗಿದರು. ರುದ್ರರು, ವಸುಗಳು, ಮಹಾಬಲಶಾಲಿಗಳಾದ ಮರುತ್ತುಗಳು, ವಿಶ್ವೇದೇವರುಗಳು, ಹಾಗೂ ಸ್ವತೇಜಸ್ಸಿನಿಂದ ಬೆಳಗುತ್ತಿದ್ದಂತಹ ಸಾಧ್ಯರು  - ಇವರೂ, ಹಾಗೂ ಇನ್ನೂ ಬೇರೆ ಬಹುವಾದ ದೇವತೆಗಳೂ, ಪುರುಷೋತ್ತಮರಾದ ಕೃಷ್ಣಾರ್ಜುನರನ್ನು ಕೊಲ್ಲಲೆಳಸಿ, ನಾನಾಯುಧವಂತರಾಗಿ ಅವರತ್ತ ನುಗ್ಗಿಬಂದರು. 

 

ಮಹಾಯುದ್ಧದಲ್ಲಿ ಅದ್ಭುತವಾದ ನಿಮಿತ್ತಗಳು, ಎಂದರೆ ಶಕುನಗಳು, ತೋರಿಬಂದವು. ಯುಗವು ಕೊನೆಗೊಳ್ಳುವ ಕಾಲದಲ್ಲಿ ತೋರತಕ್ಕಂತಹವು, ಅವು. ಪ್ರಾಣಿಗಳನ್ನು ಅವು ಸಂಮೋಹನಗೊಳಿಸತಕ್ಕಂತಹವು. 

 

ಬಗೆಯಲ್ಲಿ ದೇವತೆಗಳೊಂದಿಗೆ ಸಂನದ್ಧನಾಗಿದ್ದ ಇಂದ್ರನನ್ನು ಕಂಡರು, ಕೃಷ್ಣ-ಪಾರ್ಥರು. ಎಂತಹವರು ಅವರಿಬ್ಬರು? ಎಂದೂ ಚ್ಯುತಿಗಾಣದವರು. ಘಾತಕ್ಕೆ ಸಿಕ್ಕಿಕೊಳ್ಳದವರು. ಎಂದೇ, ಎದೆಗುಂದದೆ ಧನುಸ್ಸನ್ನು ಸಜ್ಜುಗೊಳಿಸಿಕೊಂಡು ಸೆಟೆದು ನಿಂತರು. ಯುದ್ಧವಿಶಾರದರಾದ ಅವರಿಬ್ಬರೂ ತಮ್ಮ ವಜ್ರ-ಸದೃಶವಾದ ಬಾಣಗಳ ಪ್ರಯೋಗದಿಂದ ಬಡಿದುಹಾಕಿದರು, ತಮ್ಮ ಮೇಲೆ ಬಿದ್ದ ದೇವತೆಗಳನ್ನು. ಮತ್ತೆ ಮತ್ತೆ ಯತ್ನಿಸಿಯೂದೇವತೆಗಳು ವಿಫಲರಾದರು; ಹೆದರಿಹೋದ ಅವರು, ರಣವನ್ನು ತೊರೆದರು: ಇಂದ್ರನನ್ನೇ ಶರಣುಹೊಂದಿದರು. 

 

ಸೂಚನೆ : 23/2/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.