Monday, May 5, 2025

ಪ್ರಶ್ನೋತ್ತರ ರತ್ನಮಾಲಿಕೆ 14 (Prasnottara Ratnamalike 14)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೧೪. ಭಯ ಯಾರಿಂದ ?

ಉತ್ತರ - ಮರಣದಿಂದ, ಈಶ್ವರದಿಂದ

ಈ ಮುಂದಿನ ಪ್ರಶ್ನೆ - ಭಯ ಯಾರಿಂದ? ಎಂಬುದಾಗಿ. ಅದಕ್ಕೆ ಉತ್ತರ 'ಮರಣದಿಂದ' ಅಥವಾ 'ಈಶ್ವರನಿಂದ' ಎಂಬುದು ಕೇವಲ ಮಾನವನಿಗೆ ಮಾತ್ರವಲ್ಲ; ಸಕಲ ಜಂತುಗಳಿಗೂ ಭಯ ಎಂಬುದು ಬಿಟ್ಟಿದ್ದಲ್ಲ. ಭಯದಿಂದಲೇ ಅವನು ಜೀವನವನ್ನು ಮಾಡುತ್ತಿರುತ್ತಾನೆ. ಭಯದ ರಕ್ಷಣೆಯನ್ನು ಮಾಡಿಕೊಳ್ಳುವುದಕ್ಕೋಸ್ಕರವೇ ಜೀವನವನ್ನು ಮಾಡಿಕೊಳ್ಳುತ್ತಿರುತ್ತಾರೆ. ಭಯದಿಂದ ನಿವೃತ್ತಿ ಹೇಗೆ ಸಾಧ್ಯ? ಎಂಬುದು ಪ್ರತಿಯೊಬ್ಬರ ಚಿಂತನೆಯಾಗಿರುತ್ತದೆ. ಹಾಗಾಗಿ ಈ ಭಯ ಎಂಬುದು ನಮ್ಮನ್ನು ಯಾವಾಗಲೂ ಕಾಡುವಂತಹದ್ದು. ಹಾಗಾದರೆ ಮರಣವೆಂಬುದು ಅದೇಕೆ ನಮಗೆ ಇಷ್ಟು ಭಯ? ಎಂಬುದು ಬಹಳ ವಿಚಾರಣೀಯ.


ಭಾರತೀಯ ಸಂಸ್ಕೃತಿ ಇಷ್ಟು ಗಟ್ಟಿಯಾಗಿ ನಿಂತಿದೆ ಎನ್ನುವುದಾದರೆ ಅದಕ್ಕೆ ಕಾರಣವೇ ಈ ಮರಣಭಯ. ಅದೊಂದು ಇಲ್ಲವಾದರೆ ಈ ಸಂಸ್ಕೃತಿಗೆ ಅಸ್ತಿತ್ವವೇ ಇಲ್ಲ ಎನ್ನಬಹುದು; ಅಷ್ಟರಮಟ್ಟಿಗೆ ಈ ಮರಣಭಯಕ್ಕೆ ವಿಶೇಷತೆ ಇದೆ. ಮರಣ ಎಂಬುದು ನಮಗೆ ಯಾವಾಗ ಅನುಭವಕ್ಕೆ ಬಂದಿರುವುದು? ಎಂಬುದು ಇಲ್ಲಿನ ವಿಷಯವಾಗಿದೆ.  ಯಾವುದಾದರೂ ಜೀವದಿಂದಲೋ ತೊಂದರೆಯಾದರೆ ಅಥವಾ ನಮ್ಮ ಜೀವಕ್ಕೆ ಕುತ್ತುಬರುವಂತಾದರೆ ಆಗ ನಮಗೆ ಭಯವಾಗುವುದುಂಟು. ಏಕೆಂದರೆ ಅಲ್ಲಿ ಮರಣಭೀತಿ. ನಾವು ಹಿಂದೆ ಅನುಭವಿಸಿದ್ದರೆ ಮಾತ್ರ ಅದನ್ನು ಕಂಡರೆ ಭಯವೆಂಬುದು ಬರುತ್ತದೆ. ಅದರ ಬಗ್ಗೆ ಅರಿವು ಅಷ್ಟು ಬಂದಾಗ ಮಾತ್ರ ಮರಣದ ಬಗ್ಗೆ ನಮಗೆ ಭಯವಿರುವಿರಲು ಸಾಧ್ಯ. ಹಾಗಾದರೆ ಈ ಮರಣವು ಹೇಗೆ ನಮಗೆ ಭಯವಾಗಿ ಪರಿಣಾಮ ಪರಿಣಾಮವಾಗುತ್ತದೆ?


ಭಾರತೀಯ ಸಂಸ್ಕೃತಿಯಲ್ಲಿ ಅನೇಕ ಹುಟ್ಟು ಸಾವುಗಳನ್ನು ಹೇಳಲಾಗಿದೆ. ಒಂದು ಜೀವಕ್ಕೆ ಒಂದೇ ಜನನ ಒಂದೇ ಮರಣವೆಂದರ್ಥವಲ್ಲ. ಅನೇಕ ಜನನ ಮರಣಗಳನ್ನು ಅನುಭವಿಸುತ್ತದೆ. ಅವನ ಪುಣ್ಯ ಪಾಪಕರ್ಮಗಳ ಮಿಶ್ರಣದಿಂದ ಜನ್ಮ ಎಂಬುದು ಪ್ರಾಪ್ತವಾಗುತ್ತದೆ. ಕಾಲ ಪಕ್ವವಾದಂತೆ ಆ ವ್ಯಕ್ತಿ ತನ್ನ ಜೀವಿತವನ್ನು ಮುಗಿಸುವುದು ಅಂದರೆ ಮರಣವನ್ನು ಪಡೆಯುತ್ತಾನೆ. ಇಂತಹ ಮರಣಗಳು ಅನೇಕ ಸಂಭವಿಸಿರುವುದರಿಂದ ಮರಣವೆಂದರೆ ಅವನಿಗೆ ಭಯ ಎಂಬುದಾಗಿ ಹೇಳಲಾಗಿದೆ. ಯೋಗಶಾಸ್ತ್ರದಲ್ಲಿ ಇದಕ್ಕೆ 'ಅಭಿನಿವೇಶ' ಎಂಬುದಾಗಿ ಹೇಳಲಾಗಿದೆ. ಐದು ವಿಧವಾದ ಜೀವ ಅನುಭವಿಸುವ ಕ್ಲೇಶಗಳಲ್ಲಿ ಇದು ಒಂದು ಕ್ಲೇಶ ಎಂಬುದಾಗಿ ಅಲ್ಲಿ ಹೇಳಲ್ಪಟ್ಟಿದೆ. ಅಂದರೆ ಜನ್ಮಜನ್ಮಾಂತರಗಳಲ್ಲಿ ಅನುಭವಿಸಿದ ಯಾವ ಮರಣ ಅನುಭವ ಉಂಟೋ ಅದೇ ಇಂದೂ ಕೂಡ ನಮ್ಮನ್ನು ಕಾಡುತ್ತಿರುತ್ತದೆ. ಸಂಸಾರ, ಜನನ. ಮರಣ ಇವುಗಳ ಆಳವಾದ ಅರಿವನ್ನು ಪಡೆದ ವಿದ್ವಾಂಸನಿಗೂ ಈ ಭಯ ಬಿಡುವುದಿಲ್ಲವಂತೆ. ಹಾಗಾಗಿ ಬದುಕಬೇಕು; ನಮ್ಮನ್ನು ಉಳಿಸಿಕೊಳ್ಳಬೇಕು; ಮರಣದಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕು ಎಂಬ ಪ್ರಯತ್ನ ನಿರಂತರವಾಗಿ ಸಾಗುತ್ತಿರುತ್ತದೆ. ಇದರ ಜೊತೆಯಲ್ಲಿ ಇನ್ನೊಂದು ವಿಷಯ - ನಾವು ಈ ಮರಣಭಯದಿಂದ ರಕ್ಷಿಸಿಕೊಳ್ಳಬೇಕಾದರೆ ಈಶ್ವರನ ಮೊರೆ ಹೋಗುವುದು ಅತ್ಯಂತ ಸೂಕ್ತ. ಅವನ ಅಭಯವಿಲ್ಲದಿದ್ದರೆ ಭಯ ನಿಶ್ಚಿತ. ಹಾಗಾಗಿ ಅವನಿಂದಲೂ ಭಯವಿರದ ರೀತಿಯಲ್ಲಿ ಅವನ ಅಭಯವನ್ನು ಪಡೆಯುವ ರೀತಿಯಲ್ಲಿ ನಮ್ಮ ಜೀವನ ಸಾಗಬೇಕು ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.


ಸೂಚನೆ : 04/05/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.