Sunday, May 11, 2025

ಅಷ್ಟಾಕ್ಷರೀ 81 ತದಗ್ರೇ ಸರ್ವತಃ ಶಿವಮ್ (Astaksari 81)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)

ಆ ಅಗ್ರದಲಿ ಎತ್ತಲಿಂದಲೂ ಶುಭವದು


ಮಹಾವಿಷ್ಣುವಿನ ದಶಾವತಾರಗಳನ್ನು ಯಾರು ಕೇಳಿಲ್ಲ? ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ಕೋದಂಡರಾಮ, ಬಲರಾಮ, ಕೃಷ್ಣ, ಕಲ್ಕಿ - ಎಂಬುದಾಗಿ. ಕೆಲವೊಮ್ಮೆ (ಕೃಷ್ಣನಿಗೆ ಮೊದಲಿನ) ಬಲರಾಮನ ಬದಲಾಗಿ (ಕೃಷ್ಣನ ನಂತರದ) ಬುದ್ಧನನ್ನು ಪರಿಗಣಿಸುವುದೂ ಉಂಟು.

ಈ ಎಲ್ಲ ಅವತಾರಗಳ ಮೂರು ಸಮಾನೋದ್ದೇಶಗಳೆಂದರೆ ಸಜ್ಜನರ ರಕ್ಷಣ; ಇದಕ್ಕಾಗಿ ದುಷ್ಟ-ವಿನಾಶ; ಇವೆರಡರಿಂದಾಗಿ ಧರ್ಮಸಂಸ್ಥಾಪನ.

ಈ ಹತ್ತವತಾರಗಳಲ್ಲಿ ಮತ್ಸ್ಯ-ಕೂರ್ಮ-ವರಾಹಗಳೆಂಬ ಮೂರು ಪ್ರಾಣಿಶರೀರಾವತಾರಗಳು. ನರಸಿಂಹಾವತಾರವು ಅರ್ಧ-ಪ್ರಾಣಿ, ಅರ್ಧ-ನರ. ಮುಂದಿನ ಅವತಾರಗಳು ಮಾನುಷರೂಪದವು. ಮಾನವರು ಹೇಗೆ ಜೀವನ ನಡೆಸಬೇಕೆಂದು ತೋರಿಸುವ ನಾಲ್ಕನೆಯ ಉದ್ದೇಶವೂ ಮಾನವರೂಪಾವತಾರಗಳಿಗೆ ಇರುತ್ತದೆ: ಮರ್ತ್ಯಾವತಾರವು ಮರ್ತ್ಯಶಿಕ್ಷಣಕ್ಕಾಗಿ.

ನರಸಿಂಹಜಯಂತಿಯು ಸಂನಿಹಿತವಾಗಿರುವುದರಿಂದ ಈ ಕುರಿತಾಗಿ ಎರಡು ಮಾತುಗಳು.

ಕಂಠದವರೆಗೂ ನರಸಿಂಹನು ಆದಿಪುರುಷನೇ ಸರಿ. ಅಲ್ಲಿಂದ ಮೇಲಕ್ಕೆ ಕಂಠೀರವ, ಎಂದರೆ ಸಿಂಹ, ಮೃಗಗಳಲ್ಲಿ ಶ್ರೇಷ್ಠವೆನಿಸುವುದೆಂದರೆ ಮೃಗೇಂದ್ರ - ಎಂದು ಕರೆಸಿಕೊಳ್ಳುವ ಸಿಂಹವೇ ಸರಿ. ಹಾಗೆಯೇ ಪ್ರಾಣಿವರ್ಗದಲ್ಲೆಲ್ಲಾ ಶ್ರೇಷ್ಠವೆಂದರೆ ಮನುಷ್ಯನೇ ಬುದ್ಧಿಶಾಲಿಗಳಲ್ಲಿ ನರರೇ ಶ್ರೇಷ್ಠರು ಎನ್ನುತ್ತಾನೆ, ಮನು. ಹೀಗೆ ಎರಡು ಶ್ರೇಷ್ಠಾಂಶಗಳ ಸೇರ್ಪಡೆಯಿಂದ ಆಗಿರುವ ರೂಪವಿದು.

ಮೇಲ್ನೋಟಕ್ಕೆ ಎರಡು ಶರೀರಗಳ ಸೇರ್ಪಡೆಯಾದರೂ, ತಾತ್ತ್ವಿಕವಾಗಿ ರೂಪತ್ರಯದ ಸೇರ್ಪಡೆ. ತ್ರಿಮೂರ್ತಿಗಳ ರೂಪಗಳಿಲ್ಲಿವೆ.

ಶರೀರದಲ್ಲಿ ಸಹಜವಾಗಿ ಮೂರು ಭಾಗಗಳಿವೆ. ಹೊಕ್ಕಳು-ಕಂಠಗಳೆಂಬ ಸ್ಥಾನಗಳಿಂದಾಗಿ ಶರೀರವು ತ್ರಿಭಾಗಾತ್ಮಕ. ಪಾದದಿಂದ ನಾಭಿಪರ್ಯಂತವಾಗಿ ನರಸಿಂಹನು ಬ್ರಹ್ಮರೂಪ, ನಾಭಿಯಿಂದಾರಂಭಿಸಿ ಕಂಠಪರ್ಯಂತ ವಿಷ್ಣುರೂಪ, ಕಂಠದಿಂದ ಶಿರಸ್ಸಿನವರೆಗೆ ರುದ್ರರೂಪ.

ಜಗತ್ತಿನ ಮೂಲಶಕ್ತಿಗಳು ಮೂರು: ಸೃಷ್ಟಿಶಕ್ತಿ, ಸ್ಥಿತಿಶಕ್ತಿ, ಲಯಶಕ್ತಿಗಳು. ಅವುಗಳಲ್ಲಿ ಸೃಷ್ಟಿಶಕ್ತಿಯೆಂಬುದು ಕೆಳಗೆ ಕೆಲಸಮಾಡುವಂತಹುದು. ಜನನಾಂಗವೆಂಬುದು ನಾಭಿಯಿಂದ ಕೆಳಕ್ಕೇ ಇರುವುದಷ್ಟೆ. ಹೀಗಾಗಿ ಬ್ರಹ್ಮರೂಪವೆಂಬುದು ನಾಭಿಯವರೆಗಿನದು.

ನಾಭಿಯಿಂದ ಕಂಠದವರೆಗೆ ನರಸಿಂಹನು ವೈಷ್ಣವವಪು. ವಪುವೆಂದರೆ ಶರೀರ. ಹಾಗೆಯೇ ಕಂಠದಿಂದ ಮೇಲಕ್ಕೆ ರುದ್ರಸ್ವರೂಪ. ರುದ್ರನು ಉಗ್ರಸ್ವಭಾವ. ಎಷ್ಟಾದರೂ ಸಂಹಾರಕಾರಕನಲ್ಲವೇ? ಪ್ರಾಣಿಗಳೆಲ್ಲ ಸಿಂಹಕ್ಕೆ ಹೆದರತಕ್ಕವೇ. ರೋಷಾವಿಷ್ಟಸಿಂಹವೆಂದರೆ ಬೇರೆ ಪ್ರಾಣಿಗಳ ಕಥೆ ಮುಗಿಯಿತೆಂದೇ.

ಅಧರ್ಮ-ವಿಧ್ವಂಸನದಲ್ಲಿ, ಅರ್ಥಾತ್ ಅಧರ್ಮಿಷ್ಠರ ಸಂಹಾರಕಾರ್ಯದಲ್ಲಿ, ರೌದ್ರಾವತಾರವು ಸಹಜವಾಗಿಯೇ ಅವಶ್ಯ; ಆ ಸಂಹಾರಕಾರ್ಯವು ಮುಗಿದ ಬಳಿಕ, ಸ್ತುತಿಗಳಿಂದಲೇ ಶ್ರೀಲಕ್ಷ್ಮೀನೃಸಿಂಹನನ್ನು ಒಲಿಸಿಕೊಂಡು ಆತನ ಅನುಗ್ರಹವನ್ನು ಪಡೆದವರುಂಟು. ಆರ್ತತೆಯಿಂದಲೂ ಭಕ್ತಿಯಿಂದಲೂ ಭಕ್ತರು ಮೊರೆಯಿಡುವುದಕ್ಕನುಗುಣವಾಗಿ ಪ್ರೀತಿಯಿಂದಲೂ ವಾತ್ಸಲ್ಯದಿಂದಲೂ ಭಗವಂತನು ತನ್ನ ಹಸ್ತಾವಲಂಬನವನ್ನು ನೀಡುವನು.

ಭಗವಂತನೇ, ನಾನು ಕುರುಡ. ವಿವೇಕವೆಂಬುದೇ ನನ್ನ ದೊಡ್ಡಹಣದ ಗಂಟು. ಇಂದ್ರಿಯಗಳೆಂಬ ಬಲಿಷ್ಠ-ಚೋರರು ಅದನ್ನು ಕದ್ದುಬಿಟ್ಟಿದ್ದಾರೆ. ಸಾಲದೆಂದು, ಮೋಹಾಂಧಕಾರವೆಂಬ ಕಗ್ಗತ್ತಲಿನ ಕೂಪದೊಳಗೆ ನನ್ನನು ಬೀಳಿಸಿ ಹೋಗಿದ್ದಾರೆ. ಆಸರೆಯ ಕೈನೀಡು – ಎಂಬ ಪ್ರಾರ್ಥನೆ.

ಜೀವವು ತನ್ನ ವಾಸ್ತವಾವಸ್ಥೆಯ ತತ್ತ್ವಾವಲೋಕನವನ್ನು ಮಾಡಿಕೊಂಡಾಗ ಗೊತ್ತಾಗುವುದೆಂದರೆ ಸಂಸಾರವೆಂಬುದೊಂದು ವೃಕ್ಷ. ಪಾಪವೇ ಅದರ ಬೀಜ. ಆ ಮರಕ್ಕೆ ಕರ್ಮಗಳೆಂಬ ಕೊಂಬೆಗಳು ಅನಂತ. ಇಂದ್ರಿಯಗಳೇ ಅದರ ಪತ್ರಗಳು, ಎಂದರೆ ಎಲೆಗಳು. ಕಾಮವು ಪುಷ್ಪ, ದುಃಖವೇ ಫಲ. ಆ ಮರದ ಮೇಲಿಂದ ಬಿದ್ದಿದ್ದೇನೆ. ಪತಿತನಾದ ನನ್ನನ್ನು ದಯಾಲುವಾದ ನೀನು ಕೈನೀಡಿ ಕಾಪಾಡು – ಎಂದೂ  ಬೇಡುವುದುಂಟು.

ಆ ದಯಾಮಯವಾದ ಹೃದಯ ವಿಷ್ಣುವಿನದು. ದಯೆಯೇ ಮೈತಾಳಿದಂತಹ ಲಕ್ಷ್ಮಿಯೇ ಜೊತೆಗಿರುವ ನೃಸಿಂಹನೇ ಕಾಪಾಡತಕ್ಕವನು. ಆ ದಯಾಮಯನ ಸ್ಥಾನವೇ ಹೃದಯ. ನಾಭಿ-ಕಂಠಗಳ ನಡುಭಾಗವಲ್ಲವೇ ಹೃದಯವೆಂಬುದು?

ಈವರೆಗೆ ಹೇಳಿದ ಮೂರುಭಾಗಗಳಲ್ಲದೆ ನಾಲ್ಕನೆಯ ಭಾಗವೂ ಒಂದುಂಟು. ಅದು ಶೀರ್ಷಾಗ್ರಸ್ಥಾನ. ಅದನ್ನೇ "ತದಗ್ರೇ ಸರ್ವತಃ ಶಿವಮ್" ಎನ್ನುವುದು. (ಅದರ ತುದಿಯಲ್ಲಿ ಎತ್ತಲಿಂದಲೂ ಅದು ಮಂಗಳಕರವಾದುದು). ಯೋಗದ ಪರಾಕಾಷ್ಠೆಯ ಸ್ಥಾನವದು.ಯೋಗದಲ್ಲಿ ನೆಲೆಗೊಂಡ ಪರತತ್ತ್ವವದು, ಪರಬ್ರಹ್ಮಸ್ಥಾನವದು. ಸಭಾಸ್ತಂಭವೆಂಬುದು ಮೇರುಸ್ಥಾನ. ಅದರಿಂದ ಆವಿರ್ಭವಿಸಿದ ಯೋಗಮೂರ್ತಿಯೇ ಮೋಕ್ಷಲಕ್ಷ್ಮೀ-ಸಮೇತನಾದ ನರಸಿಂಹ – ಎಂಬ ತಾತ್ತ್ವಿಕವಾದ ವಿವರಣೆಯನ್ನು ಶ್ರೀರಂಗಮಹಾಗುರುಗಳು ಕೊಟ್ಟಿರುವರು.

ಮರುದ್ಗಣಗಳನ್ನು - ಎಂದರೆ ದೇವತೆಗಳನ್ನು, ಅಥವಾ ತನ್ನ ಪ್ರಾಣಶಕ್ತಿಗಳನ್ನು - ಸ್ವ-ಸ್ವ-ಸ್ಥಾನಗಳಲ್ಲಿ ನಿಯಮನ ಮಾಡಿರುವ, ಎಂದರೆ ವಶದಲ್ಲಿಟ್ಟುಕೊಂಡಿರುವ, ಯೋಗಾನರಸಿಂಹನ ಮೂರ್ತಿಯದು.

ಹೀಗೆ ಹಗಲು-ರಾತ್ರಿಗಳ ಸಂಗಮ-ಸ್ಥಾನದಲ್ಲಿ, ಒಳ-ಹೊರಗುಗಳ ಸಂಗಮ-ಸ್ಥಾನವಾದ ಹೊಸ್ತಿಲಿನಲ್ಲಿ, ಹಾಗೂ ಯೋಗ-ಭೋಗಗಳ, ರೌದ್ರ-ಕಾರುಣ್ಯಗಳ, ತ್ರಿಮೂರ್ತಿಶಕ್ತಿಗಳ ಸಂಗಮಸ್ಥಾನವಾಗಿ ಯೋಗಿದೃಶ್ಯನಾದ ನರಸಿಂಹನಿಗೆ ನಮ್ಮ ಪ್ರಾಣಪ್ರಣಾಮಗಳು. 

ಸೂಚನೆ: 10/5//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.