ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಈ ರೀತಿಯಲ್ಲಿ ಕಾಡಿನಲ್ಲಿ ವಿಲಪಿಸುತ್ತಿದ್ದ ಆ ಮಂದಪಾಲ ಋಷಿಗೆ ಲಪಿತೆಯು ಈರ್ಷ್ಯೆಯೊಂದಿಗೆ ಹೀಗೆ ಹೇಳಿದಳು:
"ನಿನಗೆ ಮಕ್ಕಳನ್ನು ನೋಡುವ ಚಿಂತೆಯೇನಿಲ್ಲ. ನೀನು ಹೇಳಿದೆಯೆಲ್ಲಾ ಋಷಿಗಳ ಹೆಸರುಗಳನ್ನು, ಅವರೆಲ್ಲರೂ ತೇಜಸ್ವಿಗಳು, ವೀರ್ಯವಂತರು. ಅವರಿಗೆ ಅಗ್ನಿಭಯವೆಂಬುದಿಲ್ಲ. ನನ್ನೆದುರಿಗೇ ನೀನು ಅಗ್ನಿಯನ್ನು ಪ್ರಾರ್ಥಿಸಿಕೊಂಡಿದ್ದೆ. ಹಾಗೂ ಅಗ್ನಿಯೂ ಸಹ ಹಾಗೇ ಆಗಲೆಂದು ಒಪ್ಪಿದನು. ಲೋಕಪಾಲನಾದ ಆತನೂ ಒಮ್ಮೆ ವಚನವಿತ್ತು ಅದನ್ನು ಸುಳ್ಳು ಮಾಡನು.
ನನ್ನ ಶತ್ರುವಾದ ಜರಿತೆಯ ವಿಷಯದಲ್ಲೇ ನಿನಗೆ ಯೋಚನೆಯಿರುವುದು. ಅವಳೊಂದಿಗೆ ಹಿಂದೆ ನಿನಗೆಂತಹ ಸ್ನೇಹವಿತ್ತೋ ಅಂತಹ ಸ್ನೇಹ ನನ್ನ ಬಗ್ಗೆಯಿಲ್ಲ. ಯಾವಳಿಗಾಗಿ ನೀನು ಪರಿತಪಿಸುತ್ತಿರುವೆಯೋ ಅವಳಲ್ಲಿಗೇ ಹೋಗು. ಯಾರೋ ದುಷ್ಟಪುರುಷನನ್ನು ಆಶ್ರಯಿಸಿದವಳು ಹೇಗೋ ಹಾಗೆ ನಾನೂ ಒಂಟಿಯಾಗಿ ಹೊರಟುಹೋಗುತ್ತೇನೆ."
ಅದಕ್ಕೆ ಮಂದಪಾಲನು ಹೇಳಿದನು:
"ನೀನೆಂತು ಭಾವಿಸುವೆಯೋ ಅಂತಹ ನಡತೆಯವನಲ್ಲ ನಾನು. ನನ್ನ ಓಡಾಟವು ಸಂತಾನಹಿತಕ್ಕಾಗಿ. ನನ್ನ ಸಂತಾನವೀಗ ಕಷ್ಟದಲ್ಲಿದೆಯಷ್ಟೆ.
ಹಿಂದಿನದ್ದನ್ನೆಲ್ಲಾ ತೊರೆದು ಕೇವಲ ಮುಂಬರುವ ವಿಷಯಕ್ಕೇ ಯಾವನು ಜೋತುಬೀಳುವನೋ ಅವನು ಮಂದಮತಿಯೇ ಸರಿ (ಭೂತಂ ಹಿತ್ವಾ ಚ ಭಾವ್ಯರ್ಥೇ ಯೋಽವಲಂಬೇತ್ ಸ ಮಂದಧೀಃ). ಅಂತಹವನನ್ನು ಲೋಕವು ತಿರಸ್ಕರಿಸುತ್ತದೆ. ಸರಿ, ನಿನಗೇನಿಷ್ಟವೋ ಅದರಂತೆ ಮಾಡು. ಇದೋ ಈ ಅಗ್ನಿಯು ಪ್ರಜ್ವಲಿಸುತ್ತಿದೆ. ಮರಗಳನ್ನು ಸುಟ್ಟುಹಾಕುತ್ತಿದೆ. ಮೊದಲೇ ಆವೇಗಕ್ಕೆ ಒಳಗಾಗಿರುವ ನನ್ನ ಹೃದಯದಲ್ಲಿ ಅಮಂಗಳಕರವಾದ ಸಂತಾಪವನ್ನುಂಟುಮಾಡುತ್ತಿದೆ" - ಎಂದನು.
ಅಂತೂ ಅಗ್ನಿಯು ಆ ಎಡೆಯನ್ನು ತೊರೆದು ದೂರಹೋದನು. ಆಗ ಪುತ್ರಲಾಲಸೆಯಿಂದ ಕೂಡಿದ ಜರಿತೆಯು ಮತ್ತೆ ತನ್ನ ಮರಿಗಳತ್ತ ಬೇಗನೇ ಸಾಗಿದಳು. ಆಗವಳು ಕಂಡದ್ದೇನು? ಮರಿಗಳೆಲ್ಲ ಕ್ಷೇಮವಾಗಿದ್ದಾರೆ; ಅಗ್ನಿ ದೂರ ಹೋಗಿದ್ದಾನೆ; ಯಾವುದೇ ತೊಂದರೆಯಿಲ್ಲದೆ ಮಕ್ಕಳು ಗದ್ದಲಮಾಡುತ್ತಿವೆ!
ಅವುಗಳನ್ನು ಕಂಡು ಅವಳಿಗೆ ಮತ್ತೆ ಮತ್ತೆ ಕಣ್ಣೀರುಕ್ಕಿತು. ಅಳುತ್ತಲೇ ಅವಳು ಒಬ್ಬೊಬ್ಬರನ್ನಾಗಿ ಎಲ್ಲರನ್ನೂ ಸಮೀಪಿಸಿದಳು. ಅಷ್ಟರಲ್ಲಿ ಅಲ್ಲಿಗೆ ಮಂದಪಾಲನೂ ಸಹ ಆಗಮಿಸಿದನು. ಆದರೆ ಆತನ ಮಕ್ಕಳಲ್ಲಿ ಯಾರೊಬ್ಬರೂ ಆತನನ್ನು ಅಭಿನಂದಿಸಲಿಲ್ಲ. ಅವರನ್ನೊಬ್ಬೊಬ್ಬರನ್ನೂ ಆತನು ಮಾತನಾಡಿಸಿದನು, ಆ ಜರಿತೆಯನ್ನೂ ಮಾತನಾಡಿಸಿದನು. ಆದರೆ ಅವರಾರೂ ಆ ಋಷಿಯನ್ನು ಕುರಿತಾಗಿ ಒಳ್ಳೆಯ ಮಾತನ್ನಾಗಲಿ ಕೆಟ್ಟಮಾತನ್ನಾಗಲಿ ಆಡಲಿಲ್ಲ.
ಆಗ ಜರಿತೆಯನ್ನು ಕುರಿತು ಮಂದಪಾಲನು ಕೇಳಿದನು:
"ಇವರಲ್ಲಿ ಜ್ಯೇಷ್ಠಪುತ್ರನು ಯಾರು? ಆತನ ತಮ್ಮನಾರು? ಮಧ್ಯಮನಾರು? ಕನಿಷ್ಠನಾರು? ದುಃಖಾರ್ತನಾಗಿ ನಾನು ಮಾತನಾಡುತ್ತಿದ್ದರೂ ನೀನೇಕೆ ಪ್ರತಿಯಾಗಿ ಮಾತನಾಡುತ್ತಿಲ್ಲ? ತ್ಯಾಗವನ್ನು ಮಾಡಿರುವೆನಾದರೂ ಇಲ್ಲಿಗೆ ಬಂದರೆ ನನಗೆ ಶಾಂತಿಯು ದೊರೆಯುತ್ತಿಲ್ಲ" - ಎಂದು.
ಜರಿತೆಯು ಹೇಳಿದಳು:
"ಜ್ಯೇಷ್ಠನಿಂದ ನಿನಗಾಗಬೇಕಾದುದೇನಿದೆ? ಅನಂತರ ಜನಿಸಿದವನಿಂದ ಆಗಬೇಕಾದುದ್ದೇನು? ಮಧ್ಯಮನಿಂದೇನು? ಕನಿಷ್ಠನಿಂದಲಾದರೂ ಆಗಬೇಕಾದುದೇನು? ನನ್ನನ್ನು ಎಲ್ಲರಿಗಿಂತ ಹೀನಳೆಂದು ಭಾವಿಸಿ ತೊರೆದು ಹೋದೆಯೆಲ್ಲಾ, ಈಗಲೂ ಹೋಗು ಅವಳಲ್ಲಿಗೇ, ಆ ಚಾರುಹಾಸಿನಿಯಾದ, ಎಂದರೆ ಮುಗುಳ್ನಗೆಯ ತರುಣಿಯಾದ, ಆ ಲಪಿತೆಯ ಬಳಿಗೇ ಹೋಗು" ಎಂದು.
ಅದಕ್ಕೆ ಮಂದಪಾಲನು ಹೇಳಿದನು: "ಪರಪುರುಷನೊಂದಿಗೆ ಸಂಬಂಧ ಹಾಗೂ ಸವತೀದ್ವೇಷ - ಇವೆರಡಕ್ಕಿಂತ ಪುರುಷಾರ್ಥನಾಶಕವಾದದ್ದು ನಾರಿಗೆ ಪರಲೋಕದಲ್ಲಿ ಇರಲಾರದು. ಅದು ವೈರಾಗ್ನಿಯನ್ನು ಉದ್ದೀಪನಗೊಳಿಸುವಂತಹುದು. ಬಹಳವೇ ಉದ್ವೇಗವನ್ನು ಉಂಟುಮಾಡತಕ್ಕದ್ದು.
ಸೂಚನೆ : 11/5/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.